ಸನ್ಮಾರ್ಗ ಸಂಪಾದಕೀಯ
ಒಂದುಕಡೆ ಪ್ರಧಾನಿ ನರೇಂದ್ರ ಮೋದಿಯನ್ನು ಅವರ ಬೆಂಬಲಿಗರು ವಿಶ್ವಗುರು ಎಂದು ಹೇಳಿ ಹೆಮ್ಮೆಪಡುತ್ತಾ ಇದ್ದರೆ, ಇನ್ನೊಂದು ಕಡೆ ವಿಶ್ವಗುರುವಿಗೆ ಯಾವ ನೆಲೆಯಲ್ಲೂ ಹೊಂದದ ಸಾಲು ಸಾಲು ಶರಣಾಗತಿ ನಿರ್ಧಾರಗಳನ್ನು ಪ್ರಧಾನಿ ಮೋದಿ ಕೈಗೊಳ್ಳುತ್ತಿದ್ದಾರೆ. ಇದಕ್ಕೆ ಹೊಚ್ಚ ಹೊಸ ಉದಾಹರಣೆ, ಇರಾನಿನ ಚಾಬಹಾರ್ ಬಂದರ್ ಯೋಜನೆ. ಇರಾನಿನೊಂದಿಗೆ ಸಂಬಂಧವನ್ನು ಇಟ್ಟುಕೊಂಡರೆ 25% ತೆರಿಗೆ ಹಾಕುತ್ತೇನೆ ಎಂಬ ಟ್ರಂಪ್ ಬೆದರಿಕೆಗೆ ಮಣಿದು ಭಾರತ ಇದೀಗ ಈ ಯೋಜನೆಯಿಂದ ಹಿಂದೆ ಸರಿದಿದೆ. ಈಗಾಗಲೇ ಭಾರತದ ಈ ಯೋಜನೆಗಾಗಿ 10896 ಕೋಟಿ ರೂಪಾಯಿಯನ್ನು (120 ಮಿಲಿಯನ್ ಡಾಲರ್) ಇರಾನ್ಗೆ ಪಾವತಿಸಿರುವುದರಿಂದ ಆ ಹಣ ಬಹುತೇಕ ನಷ್ಟವಾದಂತೆಯೇ ಎಂದು ಹೇಳಲಾಗುತ್ತಿದೆ. ನಿಜವಾಗಿ,
ಚಾಬಹಾರ್ ಬಂದರ್ ಯೋಜನೆಯು ವ್ಯೂಹಾತ್ಮಕ ಮತ್ತು ಆರ್ಥಿಕ ದೃಷ್ಟಿಯಿಂದ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿತ್ತು. ಪಾಕಿಸ್ತಾನದ ಕರಾಚಿ ಬಂದರ್ ಅಥವಾ ಪಾಕ್ ಭೂಮಾರ್ಗವನ್ನು ಬಳಸ ದೆಯೇ ಅಫಘಾನಿಸ್ತಾನ್ ಮತ್ತು ಮಧ್ಯ ಏಶ್ಯಾ ರಾಷ್ಟ್ರಗಳಾದ ತುರ್ಕೆಮೆನಿಸ್ತಾನ್, ಉಜ್ಬೆಕಿಸ್ತಾನ್, ತಜಕಿಸ್ತಾನ್ ಇತ್ಯಾದಿ ರಾಷ್ಟ್ರಗಳಿಗೆ ನೇರವಾಗಿ ಸರಕು ಸಾಗಾಟ ನಡೆಸುವುದಕ್ಕೆ ಇದರಿಂದ ಸಾಧ್ಯವಾಗುತ್ತಿತ್ತು. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಪ್ರಕಾರ ಚೀನಾ ಅಭಿವೃದ್ಧಿಪಡಿಸಿರುವ ಗ್ವಾದರ್ ಬಂದರ್ಗೆ ಪ್ರತಿಯಾಗಿ ಅತ್ಯಂತ ಜಾಣ್ಮೆಯಿಂದ ಹಮ್ಮಿಕೊಳ್ಳಲಾದ ಯೋಜನೆ ಇದು.
ಈ ಚಾಬಹಾರ್ ಬಂದರ್ನ ಮುಖ್ಯ ಕೇಂದ್ರಬಿಂದುವಾಗಿ ಇಂಟರ್ನ್ಯಾಶನಲ್ ನಾರ್ತ್-ಸೌತ್ ಟ್ರಾನ್ಸ್ಪೋರ್ಟ್ ಕಾರಿಡಾರ್ (NSTC) ಗುರುತಿಸಿಕೊಂಡಿದ್ದು, ಸಮುದ್ರ, ರೈಲು ಮತ್ತು ರಸ್ತೆ ಮಾರ್ಗಗಳಲ್ಲಿ ಇರಾನ್ ಮೂಲಕ ರಷ್ಯಾ, ಏಷ್ಯಾ ಮತ್ತು ಯುರೋಪ್ಗೆ ಸಂಪರ್ಕಿಸುತ್ತದೆ. 7200 ಕಿ.ಮೀಟರ್ ಉದ್ದದ ಈ ಬೃಹತ್ ಯೋಜನೆಯಿಂದಾಗಿ ಅರ್ಮೇನಿಯಾ, ಬೆಲಾರೂಸ್, ರಷ್ಯಾ, ಕಿರ್ಗಿಸ್ತಾನ್, ಟರ್ಕಿ, ಒಮಾನ್ ಇತ್ಯಾದಿ 13 ರಾಷ್ಟ್ರಗಳನ್ನು ಬಂಧಿಸುತ್ತದೆ. ಚಾಬಹಾರ್ ಬಂದರ್ ಪೂರ್ವ ಭಾಗದ ಮುಖ್ಯ ಹಬ್ ಆಗಿದ್ದು, ಸೂಯೇಝ್ ಕಾಲುವೆ ಮಾರ್ಗಕ್ಕೆ ಹೋಲಿಸಿದರೆ 45% ಸಮಯ ಕೂಡಾ ಉಳಿತಾಯವಾಗಲಿದೆ. ಈಗ ಈ ಎಲ್ಲ ರಾಷ್ಟ್ರಗಳಿಗೆ ಸರಕು ತಲುಪಿಸುವುದಕ್ಕೆ ಭಾರತ 45ರಿಂದ 60 ದಿನಗಳನ್ನು ತೆಗೆದುಕೊಳ್ಳುತ್ತಿದ್ದು, ಈ ಯೋಜನೆ ಜಾರಿಯಾಗುತ್ತಿದ್ದರೆ 15ರಿಂದ 24 ದಿನಗಳು ಸಾಕಾಗಬಲ್ಲುದು ಎಂದು ಹೇಳಲಾಗಿದೆ.
ಇದರಿಂದಾಗಿ ಪ್ರತಿ 15 ಟನ್ ಸರಕಿಗೆ 2500 ಡಾಲರ್ ಅಥವಾ 30% ಉಳಿತಾಯವಾಗಲಿದೆ ಎಂದು ಹೇಳಲಾಗಿತ್ತು. ಭಾರತದಿಂದ ರಷ್ಯಾ ಮತ್ತು ಯುರೋಪ್ಗೆ ಸರಕು ರವಾನೆ ಸುಲಭವಾಗಲಿದ್ದು, ದಕ್ಷಿಣ ಏಷ್ಯಾ ಮತ್ತು ಯುರೇಷಿಯಾಗಳಲ್ಲಿ ವ್ಯಾಪಾರ ಹೆಚ್ಚಳಕ್ಕೂ ಕಾರಣವಾಗುತ್ತಿತ್ತು. ಈ ಎಲ್ಲ ಕಾರಣಗಳಿಂದಲೇ 2002ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಇರಾನ್ ಅಧ್ಯಕ್ಷ ಖಾತಮಿ ಅವರು ನವದೆಹಲಿಯಲ್ಲಿ ಈ ಯೋಜನೆಗೆ ಸಹಿ ಹಾಕಿದ್ದರು. 2016ರಲ್ಲಿ ಇರಾನ್, ಅಫಘಾನಿಸ್ತಾನ ಮತ್ತು ಭಾರತದ ನಡುವೆ ತ್ರಿಪಕ್ಷೀಯ ಒಪ್ಪಂದ ನಡೆಯುವ ಮೂಲಕ ಈ ಯೋಜನೆಗೆ ಇನ್ನಷ್ಟು ಬಲ ಬಂತು. ಪಾಕಿಸ್ತಾನದ ಹಂಗಿಲ್ಲದೇ 2018ರಲ್ಲಿ ಅಫಘಾನಿಸ್ತಾನಕ್ಕೆ ಭಾರತ ಗೋಧಿ ರಫ್ತು ಮಾಡಿತು. ಆದರೆ ಭಾರತದ ಪಾಲಿಗೆ ಅತೀ ಮಹತ್ವದ್ದಾಗಿದ್ದ ಈ ಯೋಜನೆಯಿಂದ ಅಮೇರಿಕದ ಬೆದರಿಕೆಗೆ ಮಣಿದು ಭಾರತ ಇದೀಗ ಹಿಂದಕ್ಕೆ ಸರಿದಿದೆ. ಹಾಗಂತ,
ಅಮೇರಿಕದ ಅಧ್ಯಕ್ಷ ಟ್ರಂಪ್ ಬೆದರಿಕೆಗೆ ಪ್ರಧಾನಿ ನರೇಂದ್ರ ಮೋದಿ ಮಣಿದಿರುವ ಏಕೈಕ ಸಂದರ್ಭವಲ್ಲ ಇದು. 2019ರಲ್ಲಿ ಅಮೇರಿಕ ನಿರ್ಬಂಧ ಹೇರಿದ ಬೆನ್ನಿಗೇ ವೆನೆಝುವೇಲಾ ಮತ್ತು ಇರಾನ್ನಿಂದ ತೈಲ ಖರೀದಿಯನ್ನು ಭಾರತ ಬಹುತೇಕ ಕಡಿಮೆಗೊಳಿಸಿತು. ಇದಕ್ಕಿಂತ ಮೊದಲು ಈ ಎರಡೂ ರಾಷ್ಟ್ರಗಳನ್ನು ತೈಲಕ್ಕಾಗಿ ಭಾರತ ಬಲವಾಗಿಯೇ ನೆಚ್ಚಿಕೊಂಡಿತ್ತು. ರಷ್ಯಾದಿಂದ ಸಿಗುತ್ತಿದ್ದ ರಿಯಾಯಿತಿ ದರದ ತೈಲದ ಮೇಲೆ 50% ಸುಂಕ ವಿಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದಾಗ ಮೋದಿ ಸರಕಾರ ಅದನ್ನು ಎದುರಿಸುವ ಬದಲು ತಲೆಬಾಗಿತು.
ಇದೇವೇಳೆ, ಚೀನಾ, ಟರ್ಕಿ ಸಹಿತ ವಿವಿಧ ರಾಷ್ಟ್ರಗಳು ಟ್ರಂಪ್ ಸುಂಕಕ್ಕೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡದೇ ರಷ್ಯಾದಿಂದ ತೈಲ ಖರೀದಿಸುವುದನ್ನು ಮುಂದುವರಿಸಿದುವು. ಇದಷ್ಟೇ ಅಲ್ಲ, ಅಮೇರಿಕದ ಕರೆನ್ಸಿಗೆ ಬದಲಿಯಾಗಿ ಹೊಸ ಕರೆನ್ಸಿ ತರುವ ಬ್ರಿಕ್ಸ್ ದೇಶಗಳ ಅತೀ ಮಹತ್ವಾಕಾಂಕ್ಷೆಯ ಯೋಜನೆಗೆ ಭಾರತ ಸಮ್ಮತಿಯನ್ನು ನೀಡಿತ್ತು. ವೆನೆಝುವೇಲಾ ಅಧ್ಯಕ್ಷ ಮಡುರೊ ಅವರು ಬ್ರಿಕ್ಸ್ ದೇಶಗಳಿಗೆ ಡಾಲರ್ ಬದಲಿಗೆ ಆಯಾ ದೇಶಗಳ ಕರೆನ್ಸಿಯೊಂದಿಗೆ ತೈಲ ವ್ಯವಹಾರ ಮಾಡಲು ಒಪ್ಪಿಕೊಂಡೂ ಇದ್ದರು. ಒಂದುವೇಳೆ,
ಬ್ರೆಝಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ, ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ, ಯುಎಇ, ಇಂಡೋನೇಶಿಯಾ ಇತ್ಯಾದಿ ರಾಷ್ಟ್ರಗಳನ್ನು ಒಳಗೊಂಡಿರುವ ಬ್ರಿಕ್ಸ್ ಒಕ್ಕೂಟವು ಹೊಸ ಕರೆನ್ಸಿಯನ್ನು ಜಾರಿಗೆ ತರುತ್ತಿದ್ದರೆ, ಡಾಲರ್ನ ಹಂಗಿಲ್ಲದೇ ವ್ಯವಹಾರ ಮಾಡಬಹುದಿತ್ತು ಮತ್ತು ಇದರಿಂದ ಅಮೇರಿಕದ ಡಾಲರ್ ಪಾತಾಳ ಕುಸಿಯುತ್ತಿತ್ತು. ಆದರೆ, ಇದೀಗ ಟ್ರಂಪ್ ಬೆದರಿಕೆಗೆ ಮಣಿದ ಮೋದಿ ಸರಕಾರ ಈ ಕರೆನ್ಸಿ ನಿರ್ಧಾರದಿಂದ ಹಿಂದಕ್ಕೆ ಸರಿದಿದೆ. ಇದರ ಬೆನ್ನಿಗೇ, ನೆರೆಯ ರಾಷ್ಟ್ರಗಳಾದ ಬಾಂಗ್ಲಾ, ಮಾಲ್ದೀವ್ಸ್ ಮತ್ತು ಶ್ರೀಲಂಕಾಗಳು ಈಗ ರಷ್ಯಾ ಮತ್ತು ಚೀನಾಗಳೊಂದಿಗೆ ಆರ್ಥಿಕ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿವೆ.
ಭಾರತದ ಜೊತೆ ನಿಲ್ಲದ ನೆರೆಯ ರಾಷ್ಟ್ರಗಳು ಚೀನಾ ಮತ್ತು ರಷ್ಯಾಗಳ ತೆಕ್ಕೆಗೆ ಬೀಳುತ್ತಿರುವುದು ಕೂಡಾ ಆತಂಕಕಾರಿ ಸಂಗತಿಯಾಗಿದೆ. ಇದರ ನಡುವೆಯೇ, ನಾವು 4 ಟ್ರಿಲಿಯನ್ ಆರ್ಥಿಕತೆಯ ಬಗ್ಗೆ ಮಾತಾಡುವಾಗ ಚೀನಾದ ಆರ್ಥಿಕತೆ ನಾಗಾಲೋಟದಲ್ಲಿದೆ. ಚೀನಾದ್ದು 20 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿದ್ದು, ಮೇಕ್ ಇನ್ ಇಂಡಿಯಾಗೆ ಬೇಕಾದ ಕಚ್ಚಾ ವಸ್ತುಗಳಿಗೆ ಚೀನಾವನ್ನೇ ಆಶ್ರಯಿಸಬೇಕಾದ ವಿಪರ್ಯಾಸದಲ್ಲೂ ನಾವಿದ್ದೇವೆ. ಚೀನಾದೊಂದಿಗೆ ನಮ್ಮ ವ್ಯಾಪಾರ ಕೊರತೆಯು 9 ಲಕ್ಷ ಕೋಟಿ ರೂಪಾಯಿಯನ್ನು ದಾಟಿದೆ. ಅಂದರೆ, ನಾವು ಚೀನಾದಿಂದ ಹೆಚ್ಚು ಆಮದು ಮಾಡುತ್ತಿದ್ದೇವೆ ಮತ್ತು ಕಡಿಮೆ ರಫ್ತು ಮಾಡುತ್ತಿದ್ದೇವೆ. ಅಲ್ಲದೇ, ಲಡಾಕ್ ಮತ್ತು ಅರುಣಾಚಲ ಪ್ರದೇಶದ ಮೇಲೆ ಚೀನಾ ಹಕ್ಕು ಸ್ಥಾಪಿಸುತ್ತಿದ್ದರೂ ಬಲವಾಗಿ ವಿರೋಧಿಸಲಾಗದ ಸ್ಥಿತಿಯಲ್ಲೂ ನಾವಿದ್ದೇವೆ. ಅಂದಹಾಗೆ,
ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ದೇಶದಲ್ಲಿ ಅವರ ಬೆಂಬಲಿಗರು ಏನೇ ಪ್ರಚಾರ ಮಾಡುತ್ತಿರಲಿ, ಅಂತಾರಾಷ್ಟ್ರೀಯವಾಗಿ ಭಾರತದ ಗುರುತು ಹಾಗಿಲ್ಲ ಎಂಬುದು ಬೆಳವಣಿಗೆಗಳು ಸಾಬೀತುಪಡಿಸುತ್ತಿವೆ. ಅಮೇರಿಕವಂತೂ ತನಗೆ ಬೇಕಾದಂತೆ ಬಗ್ಗಿಸಬಲ್ಲ ರಾಷ್ಟ್ರವಾಗಿ ಭಾರತವನ್ನು ಕಾಣತೊಡಗಿದೆ. ಅಮೇರಿಕದ ಬೆದರಿಕೆಗೆ ನರೇಂದ್ರ ಮೋದಿಯವರು ಎದುರಾಡುತ್ತಲೂ ಇಲ್ಲ. ಪುಟ್ಟ ಟರ್ಕಿಯಂಥ ದೇಶವೇ ರಷ್ಯಾದಿಂದ ತೈಲ ಖರೀದಿಯನ್ನು ಎಗ್ಗಿಲ್ಲದೇ ನಡೆಸುತ್ತಿರುವಾಗಲೂ ಮೋದಿಯ ಭಾರತ ಈ ವಿಷಯದಲ್ಲಿ ಟ್ರಂಪ್ಗೆ ಶರಣಾಗತಿ ನೀತಿಯನ್ನು ಅವಲಂಬಿಸಿದೆ. ವಿದೇಶಾಂಗ ನೀತಿಯೆಂಬುದು ಅತ್ಯಂತ ಕಳಪೆ ಮಟ್ಟವನ್ನು ಮುಟ್ಟಿರುವಂತೆ ಕಾಣಿಸುತ್ತಿದೆ. ಭಾರತ-ಪಾಕ್ ನಡುವಿನ ಯುದ್ಧವನ್ನು ತಾನೇ ನಿಲ್ಲಿಸಿರುವೆ ಎಂದು ಟ್ರಂಪ್ ಹತ್ತಕ್ಕಿಂತಲೂ ಹೆಚ್ಚು ಬಾರಿ ಮಾಧ್ಯಮಗಳ ಮುಂದೆ ಹೇಳಿದ್ದರೂ ಮೋದಿ ಮಾತಾಡುತ್ತಿಲ್ಲ.
ಅಲ್ಲದೇ, ಟ್ರಂಪ್ಗೆ ಶರಣಾಗಿ ನಡಕೊಳ್ಳುತ್ತಿದ್ದರೂ ಅದರ ಲಾಭವನ್ನು ಪಡಕೊಳ್ಳಲೂ ಮೋದಿಗೆ ಸಾಧ್ಯವಾಗುತ್ತಿಲ್ಲ. ಅದರ ಬದಲು ಪಾಕಿಸ್ತಾನವೇ ಅಮೇರಿಕಕ್ಕೆ ಹೆಚ್ಚು ಹತ್ತಿರವಾಗುತ್ತಿದೆ. ಭಾರತಕ್ಕೆ ಬೆದರಿಕೆಯನ್ನೂ ಹಾಕುತ್ತಿದೆ. ಅದರ ಸೇನಾ ಕಮಾಂಡರ್ನನ್ನು ವೈಟ್ಹೌಸ್ಗೆ ಕರೆದು ಟ್ರಂಪ್ ಸನ್ಮಾನಿಸುತ್ತಿದ್ದಾರೆ. ಹಾಗೆಯೇ, ತನ್ನ ಮಿತ್ರ ರಾಷ್ಟ್ರವಾದ ಇರಾನ್ ಮೇಲೆ ದಾಳಿ ಮಾಡುವ ಮಾತಾಡುತ್ತಿದ್ದರೂ ಮೋದಿ ಏನನ್ನೂ ಮಾತಾಡುತ್ತಿಲ್ಲ. ವೆನೆಝುವೇಲಾ ಎಂಬ ಸಾರ್ವಭೌಮ ರಾಷ್ಟ್ರದ ಅಧ್ಯಕ್ಷನನ್ನು ಬಂಧಿಸಿ ಕರೆತಂದು ಜೈಲಿನೊಳಗಿಟ್ಟ ಟ್ರಂಪ್ರನ್ನು ಗಟ್ಟಿಧ್ವನಿಯಲ್ಲಿ ವಿರೋಧಿಸಲೂ ಮೋದಿಯವರಿಗೆ ಸಾಧ್ಯವಾಗುತ್ತಿಲ್ಲ.
ಇಷ್ಟೆಲ್ಲಾ ಇದ್ದೂ ಅವರು ವಿಶ್ವಗುರು ಹೇಗಾಗುತ್ತಾರೆ? ವಿಶ್ವಕ್ಕೆ ದಿಕ್ಕು ಕೊಡಬೇಕಾದವರು ಮತ್ತು ಗಟ್ಟಿ ನಿರ್ಧಾರದ ಮೂಲಕ ವಿಶ್ವದ ಶ್ಲಾಘನೆಗೆ ಒಳಗಾಗಬೇಕಾದವರು ಎಂಬ ಹಿನ್ನೆಲೆಯಲ್ಲಿ ಬಳಸ ಬೇಕಾದ ‘ವಿಶ್ವಗುರು’ ಎಂಬ ಪದವಿಯನ್ನು ಪಡೆಯಲು ನರೇಂದ್ರ ಮೋದಿಯವರಿಗೆ ಯಾವ ಅರ್ಹತೆಯಿದೆ? ದೇಶದ ಸ್ವಾಭಿಮಾನಕ್ಕೆ ಧಕ್ಕೆ ತರುವವರನ್ನು ಮುಲಾಜಿಲ್ಲದೇ ತಿರಸ್ಕರಿಸುವ ಛಾತಿಯನ್ನು ತೋರದ ಮೋದಿ ಹೇಗೆ ವಿಶ್ವಗುರುವಾಗುತ್ತಾರೆ?












