ಸನ್ಮಾರ್ಗ ವಾರ್ತೆ
ಕೊಲ್ಕತಾ,ಜೂ.10:ಏಷ್ಯನ್ ಗೇಮ್ಸ್ ಅಥ್ಲೆಟಿಕ್ಸ್ನಲ್ಲಿ ಚಿನ್ನ ಗೆದ್ದಿದ್ದ ಪಶ್ಚಿಮಬಂಗಾಳದ ಸಿಪಿಎಂನ ಪ್ರಬಲ ನಾಯಕಿ, ಮಾಜಿ ಸಿಪಿಎಂ ಸಂಸದೆ ಜ್ಯೋತಿರ್ಮಯಿ ಸಿಕ್ದರ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮಂಗಳವಾರ ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಉಪಸ್ಥಿತಿಯಲ್ಲಿ ಅವರು ಬಿಜೆಪಿಗೆ ಸೇರಿದರು.
2004ರಲ್ಲಿ ಕೃಷ್ಣನಗರ ಕ್ಷೇತ್ರದಿಂದ ಬಿಜೆಪಿಯ ಮಾಜಿ ಕೇಂದ್ರ ಸಚಿವ ಸತ್ಯಬ್ರತ್ ಮುಖರ್ಜಿಯವರನ್ನು ಸೋಲಿಸಿ ಜ್ಯೋತಿರ್ಮಯಿ ಸಿಕ್ದರ್ ಲೋಕಸಭೆಗೆ ಆಯ್ಕೆಯಾಗಿದ್ದರು. 2009ರ ಚುನಾವಣೆಯಲ್ಲಿ ಅವರು ಸೋತರು. 2016ರ ವಿಧಾನಸಭಾ ಚುನಾವಣೆಯಲ್ಲಿ ಅವರು ಪುನಃ ಸೋಲುಂಡಿದ್ದರು. ತದನಂತರ ಅವರು ಪಕ್ಷ ಸಂಘಟನೆಯ ಕೆಲಸದಲ್ಲಿ ಸಕ್ರಿಯವಾಗಿ ದುಡಿಯುತ್ತಿದ್ದರು. ಭಾರತಕ್ಕಾಗಿ ಅವರು ಹಲವಾರು ಅಂತಾರಾಷ್ಟ್ರೀಯ ಕೂಟಗಳಲ್ಲಿ ಪದಕವನ್ನು ಗೆದಿದ್ದರು.
ಪಶ್ಚಿಮಬಂಗಾಳದ ಹಲವಾರು ಸಿಪಿಎಂ ನಾಯಕರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಮೂರು ಬಾರಿ ಶಾಸಕರಾಗಿದ್ದ ಖಗನ್ ಮುರ್ಮು ಈಗ ಬಿಜೆಪಿ ಸಂಸದರಾಗಿದ್ದಾರೆ. ಇನ್ನೋರ್ವ ಮಾಜಿ ಸಿಪಿಎಂ ಶಾಸಕಿ ಮಹ್ಫೂಝ ಖಾತುನ್ ಪಶ್ಚಿಮಬಂಗಾಳದ ಬಿಜೆಪಿ ಉಪಾಧ್ಯಕ್ಷೆಯಾಗಿದ್ದಾರೆ. ಎರಡು ವರ್ಷದ ಹಿಂದೆ ಇವರು ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












