ಸರ್ಕಾರಿ ಅಧಿಕಾರಿಗಳು ಜಾತ್ಯತೀತ ಮತ್ತು ಸಂವಿಧಾನಕ್ಕೆ ಬದ್ಧರಾಗಿರಬೇಕು, ಇಲ್ಲದಿದ್ದರೆ ಇಲ್ಲಿರಲು ಅವಕಾಶ ಇಲ್ಲ: ಸಿದ್ದರಾಮಯ್ಯ ಎಚ್ಚರಿಕೆ

0
82

ಸನ್ಮಾರ್ಗ ವಾರ್ತೆ

ನಮ್ಮ ಸರ್ಕಾರದಲ್ಲಿ ಅಧಿಕಾರಿಗಳು ಜಾತ್ಯತೀತತೆಗೆ ಮತ್ತು ಸಂವಿಧಾನಕ್ಕೆ ಪೂರ್ತಿ ಬದ್ದರಾಗಿರಬೇಕು. ಇಲ್ಲದಿದ್ದರೆ ಅಂಥವರಿಗೆ ಇಲ್ಲಿ ಮುಂದುವರೆಯಲು ಅವಕಾಶ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರು ರೆವಿನ್ಯೂ ಇಲಾಖೆ, ತಹಶೀಲ್ದಾರ್ ಕಚೇರಿಗಳಿಗೆ ಅಲೆದಾಟ ಕಡಿಮೆ ಆಗಿದೆಯಾ? ಕಚೇರಿಗಳಲ್ಲಿ ಜನರ ಸಮಸ್ಯೆಗೆ ಪರಿಹಾರ ಸಿಗ್ತಾ ಇದೆಯಾ? ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಮೊಟ್ಟ ಮೊದಲ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯ ಆರಂಭದಲ್ಲೇ ಮುಖ್ಯಮಂತ್ರಿ ಈ ಸೂಚನೆ ನೀಡಿದರು.

“ಜಿಲ್ಲಾಧಿಕಾರಿಗಳಿಗೆ ಜಾತ್ಯತೀತತೆ ಬಗ್ಗೆ ಕಮಿಟ್ ಮೆಂಟ್ ಇರಬೇಕು. ಸಂವಿಧಾನದ ಬಗ್ಗೆ ಗೌರವ ಇರಬೇಕು. ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಅಂತಹ ಅಧಿಕಾರಿಗಳಿಗೆ ಇಲ್ಲಿ ಮುಂದುವರೆಯುವ ಹಕ್ಕಿಲ್ಲ. ಅವಕಾಶವೂ ಇಲ್ಲ ಎಂದರು.

“ನಿಮ್ಮ ಅನುಭವಗಳು ಜಿಲ್ಲಾಡಳಿತಕ್ಕೆ ನೆರವಾಗಬೇಕು. ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಜನರಿಗೆ ತಲುಪಲು, ಜಿಲ್ಲಾ ಮಟ್ಟದ ಅಧಿಕಾರಿಗಳು ಕ್ಷಿಪ್ರ ತೀರ್ಮಾನ ತೆಗೆದುಕೊಳ್ಳಲು ನೆರವಾಗಬೇಕು ಎನ್ನುವ ಕಾರಣಕ್ಕೆ ನಿಮ್ಮನ್ನು ನೇಮಿಸಲಾಗಿದೆ” ಎಂದು ಹೇಳಿದರು.

ಕೆಲವರಿಗೆ ಮಾತ್ರ ಗ್ಯಾರಂಟಿ ಅನುಕೂಲ ತಲುಪಿಲ್ಲ. ಈ ಕೆಲವರೇ ಹೆಚ್ಚು ಹೇಳಿಕೊಂಡು ತಿರುಗುತ್ತಿದ್ದಾರೆ. ಗ್ಯಾರಂಟಿ ಯೋಜನೆಯ ಅನುಕೂಲ ಪಡೆಯುತ್ತಿರುವವರು ಮೌನವಾಗಿದ್ದಾರೆ. ಆದ್ದರಿಂದ ತಾಂತ್ರಿಕ ಸಮಸ್ಯೆ ಮೊದಲು ಬಗೆಹರಿಸಿ, ಅನರ್ಹ ಫಲಾನುಭವಿಗಳಿಗೆ ಮಾಹಿತಿ ನೀಡಿ ಅವರ ಅರ್ಜಿ ತಿರಸ್ಕರಿಸಿ” ಎನ್ನುವ ಸೂಚನೆ ನೀಡಿದರು.