ಯುಪಿಯಲ್ಲಿ ಯೋಗಿ ಸರಕಾರದಿಂದ ‘ಮಿಷನ್ ದುರಾಚಾರಿ’ ಯೋಜನೆ: ಲೈಂಗಿಕ ಕಿರುಕುಳ ನೀಡುವವರ ಪೋಸ್ಟರ್ ಇನ್ನು ಗಲ್ಲಿ ಗಲ್ಲಿಗಳಲ್ಲಿ

0
378

ಸನ್ಮಾರ್ಗ ವಾರ್ತೆ

ಲಕ್ನೋ: ಉತ್ತರಪ್ರದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ನಿಯಂತ್ರಿಸಲು ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ಮೇಲಾಗುತ್ತಿರುವ ದೌರ್ಜನ್ಯ, ಚುಡಾಯಿಸುವಿಕೆ ಹಾಗೂ ಲೈಂಗಿಕ ಕಿರುಕುಳ ನೀಡುವ ಅಪರಾಧಿಗಳನ್ನು ಗುರುತಿಸಿ ಅವರ ಪೋಸ್ಟರ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿತ್ತರಿಸುವಂತೆ ಸಿಎಂ ಯೋಗಿ ಆದಿತ್ಯನಾಥ್ ಸರಕಾರ ಪೊಲೀಸರಿಗೆ ನಿರ್ದೇಶನ ನೀಡಿದೆ.

‘ಮಿಷನ್ ದುರಾಚಾರಿ’ ಎಂಬ ಯೋಜನೆಯೊಂದಿಗೆ ಮಹಿಳೆಯರ ವಿರುದ್ಧ ಯಾವುದೇ ರೀತಿಯ ಅಪರಾಧ ಎಸಗಿದ ದುಷ್ಕರ್ಮಿಗಳಿಗೆ ಮಹಿಳಾ ಪೊಲೀಸ್ ಸಿಬ್ಬಂದಿ ಮಾತ್ರ ಶಿಕ್ಷೆ ವಿಧಿಸಬೇಕು ಎಂಬುದಾಗಿ ಸಿಎಂ ಯೋಗಿ ಆದಿತ್ಯನಾಥ್ ಪೊಲೀಸರಿಗೆ ತಿಳಿಸಿದ್ದಾರೆ. ವಿಶೇಷವೆಂದರೆ, ಯುಪಿಯಲ್ಲಿ ಮಹಿಳೆಯರ ವಿರುದ್ಧ ಅಪರಾಧ ಎಸಗುವವರ ವಿರುದ್ಧ ಸಿಎಂ ಯೋಗಿ ಈ ಕ್ರಮ ಕೈಗೊಂಡಿದ್ದಾರೆ ಎಂಬುದಾಗಿ ವರದಿಯಾಗಿದ್ದು,ಈ ಹಿಂದೆ ಜಾರಿಗೆ ಬಂದಿದ್ದ ಆ್ಯಂಟಿ ರೋಮಿಯೋ ಪಡೆಯಿಂದಾಗಿ ಸರಕಾರ ಭಾರೀ ಟೀಕೆಗೆ ಗುರಿಯಾಗಿತ್ತು.

ಅಲ್ಪಸಂಖ್ಯಾತ ಅಭಿವೃದ್ಧಿ ರಾಜ್ಯ ಸಚಿವ ಮೊಹ್ಸಿನ್ ರಝಾ ಗುರುವಾರ ಮಹಿಳೆಯರು ಮತ್ತು ಮಕ್ಕಳಿಗೆ ಲೈಂಗಿಕ ಕಿರುಕುಳ ಮತ್ತು ಅಪರಾಧವೆಸಗುವ ಅಪರಾಧಿಗಳ ಫೋಟೋವನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಲಾಗುವುದು. ಇದರಿಂದ ಸಮಾಜದಲ್ಲಿ ಅಡಗಿರುವ ಇಂತಹವರು ಬಹಿರಂಗಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಯೋಗಿ ಸರಕಾರ ಇಂತಹ ಸಮಾಜ ದ್ರೋಹಿ ಶಕ್ತಿಗಳನ್ನು ನಿಷ್ಠುರವಾಗಿ ನಿಭಾಯಿಸಲಿದೆ. ಎಲ್ಲಿಯಾದರೂ ಯಾವುದೇ ಮಹಿಳೆಯರ ಜೊತೆ ಅಪರಾಧದ ಘಟನೆ ನಡೆದರೆ ಸಂಬಂಧಿಸಿದ ಪೊಲೀಸ್ ಠಾಣೆಯ ಅಧಿಕಾರಿಗಳು ಹೊಣೆಗಾರರಾಗಿರುತ್ತಾರೆ ಎಂದು ಸಚಿವರು ಹೇಳಿದರು.

ಲಾಕ್‌ಡೌನ್‌ ಕಾಲದಲ್ಲಿಯೂ ಮಹಿಳೆಯರು ಹಾಗೂ ಬಾಲಕಿಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ವರಿದಿಯಾಗಿದ್ದು, ಅಪ್ರಾಪ್ತ ಬಾಲಕಿಯರನ್ನು ವಿಕೃತಗೊಳಿಸಿ ಕೊಲೆ ಮಾಡಿದ ಪ್ರಕರಣಗಳು ಕೆಲವು ದಿನಗಳ ಹಿಂದೆಯಷ್ಟೇ ವರದಿಯಾಗಿದ್ದವು.