ಖಾನ್ ಯೂನಿಸ್‌ ನಲ್ಲಿರುವ 5.15 ಲಕ್ಷ ಜನರು ತಕ್ಷಣವೇ ನಿರ್ಗಮಿಸಲಿ; ಆಸ್ಪತ್ರೆಗಳನ್ನು ಸುತ್ತುವರಿದ ಇಸ್ರೇಲ್ ಸೇನೆ

0
149

ಸನ್ಮಾರ್ಗ ವಾರ್ತೆ

ಗಾಜಾ: ನಿರಾಶ್ರಿತರು ಕಿಕ್ಕಿರಿದಿರುವ ಗಾಝಾದ ಖಾನ್ ಯೂನಿಸ್‌ನಲ್ಲಿ ಇಸ್ರೇಲ್ ಸಾಮೂಹಿಕ ಸ್ಥಳಾಂತರಿಸುವಿಕೆಯನ್ನು ಪ್ರಾರಂಭಿಸಿದೆ. ಆಕ್ರಮಿತ ಪಡೆಗಳು 5.15 ಲಕ್ಷ ಜನರನ್ನು ತಕ್ಷಣವೇ ಸ್ಥಳಾಂತರಿಸುವಂತೆ ಕೇಳಿಕೊಂಡಿವೆ. ನಗರದ ಆಸ್ಪತ್ರೆಗಳನ್ನು ಸೇನೆ ಸುತ್ತುವರಿದು ದಾಳಿ ಮುಂದುವರಿಸಿದ್ದು, ಭಯಂಕರ ವಾತಾವರಣ ನಿರ್ಮಾಣವಾಗಿದೆ.

ಖಾನ್ ಯೂನಿಸ್‌ನಲ್ಲಿರುವ ನಾಸ್ರ್, ಅಲ್ ಅಮಲ್ ಮತ್ತು ಅಲ್ ಅಕ್ಸಾ ಆಸ್ಪತ್ರೆಗಳ ಬಳಿ ಇಸ್ರೇಲ್ ಭಾರೀ ಬಾಂಬ್ ದಾಳಿ ನಡೆಸುತ್ತಿದೆ. ಖಾನ್ ಯೂನಿಸ್‌ನಲ್ಲಿ 4 ಚದರ ಕಿಲೋಮೀಟರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ವಾಸಿಸುವ ಸುಮಾರು 90,000 ಸ್ಥಳೀಯ ನಿವಾಸಿಗಳು ಮತ್ತು 425,000 ನಿರಾಶ್ರಿತರನ್ನು ತಕ್ಷಣವೇ ನಿರ್ಗಮಿಸಲು ಇಸ್ರೇಲಿ ಸೇನೆಯು ಆದೇಶಿಸಿದೆ. ಈ ನಡೆ ಇಲ್ಲಿ ವ್ಯಾಪಕ ವಿನಾಶಕ್ಕೆ ನಾಂದಿಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಯುದ್ಧದಿಂದ ಸ್ಥಳಾಂತರಗೊಂಡ ಜನರಿಗಾಗಿ ವಿಶ್ವಸಂಸ್ಥೆಯು ನಡೆಸುತ್ತಿರುವ 24 ನಿರಾಶ್ರಿತರ ಶಿಬಿರಗಳು, 15 ಆಸ್ಪತ್ರೆಗಳಲ್ಲಿ ಮೂರು ಮತ್ತು ಗಾಜಾದಲ್ಲಿ ಇನ್ನೂ ಭಾಗಶಃ ಕಾರ್ಯನಿರ್ವಹಿಸುತ್ತಿರುವ ಮೂರು ಕ್ಲಿನಿಕ್‌ಗಳನ್ನು ಸ್ಥಳಾಂತರಿಸಲು ಸೂಚಿಸಲಾಗಿದೆ.

ಇಸ್ರೇಲಿ ಪಡೆಗಳು ಸೋಮವಾರ ಖಾನ್ ಯೂನಿಸ್‌ನ ಪಶ್ಚಿಮಕ್ಕೆ ಅಲ್-ಖೀರ್ ಆಸ್ಪತ್ರೆಗೆ ನುಗ್ಗಿ, ಸಿಬ್ಬಂದಿಯನ್ನು ಅಪಹರಿಸಿ, ಆಸ್ಪತ್ರೆಯಲ್ಲಿ ಆಶ್ರಯ ಪಡೆದವರನ್ನು ದಕ್ಷಿಣ ಗಾಝಾಕ್ಕೆ ಓಡಿಸಿದವು.

ಅದೇ ಸಮಯದಲ್ಲಿ, ಕಳೆದ 24 ಗಂಟೆಗಳಲ್ಲಿ ಇಸ್ರೇಲಿ ದಾಳಿಯಲ್ಲಿ 200 ಹೆಚ್ಚು ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಯುಎನ್ ವರದಿ ಮಾಡಿದೆ. 354 ಜನರು ಗಾಯಗೊಂಡಿದ್ದಾರೆ. ಹಿಂದಿನ ದಿನ ಹಮಾಸ್ ದಾಳಿಯಲ್ಲಿ 24 ಇಸ್ರೇಲಿ ಸೈನಿಕರು ಸಾವನ್ನಪ್ಪಿದ್ದರು. ಈ ಮೂಲಕ ಮೃತಪಟ್ಟ ಇಸ್ರೇಲಿ ಸೈನಿಕರ ಸಂಖ್ಯೆ 219ಕ್ಕೆ ಏರಿಕೆಯಾಗಿದೆ.