ಸನ್ಮಾರ್ಗ ವಾರ್ತೆ
ವಾಷಿಂಗ್ಟನ್, ಫೆ. 29: ಅಫ್ಘಾನಿಸ್ತಾನದಲ್ಲಿ ಸೇನೆಯನ್ನು ನಿಯೋಜಿಸಿದ 19 ವರ್ಷಗಳ ಬಳಿಕ ತಾಲಿಬಾನ್ನೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳಲು ಅಮೆರಿಕ ಸಿದ್ಧವಾಗಿದೆ. ಇಂದು ಕತರ್ ರಾಜಧಾನಿ ದೋಹದಲ್ಲಿ ನಡೆಯುವ ಅಮೆರಿಕ-ತಾಲಿಬಾನ್ ಶಾಂತಿ ಒಪ್ಪಂದ ಚರ್ಚೆಯಲ್ಲಿ ಭಾರತವೂ ಭಾಗವಹಿಸಲಿದೆ. ಕತರ್ ಸರಕಾರ ಭಾರತಕ್ಕೆ ಆಹ್ವಾನ ನೀಡಿದೆ. ಒಪ್ಪಂದದಲ್ಲಿ ಸಹಿ ಹಾಕುವಾಗ ಸಾಕ್ಷಿಯಾಗಲು ಭಾರತ ಸಹಿತ 30 ದೇಶಗಳಿಗೆ ಆಮಂತ್ರಣ ನೀಡಲಾಗಿದೆ. ಇದೇ ಮೊದಲ ಬಾರಿಗೆ ಭಾರತ ಅಮೆರಿಕ ತಾಲಿಬಾನ್ ಚರ್ಚೆಯಲ್ಲಿ ಅಧಿಕೃತವಾಗಿ ಭಾಗವಹಿಸುತ್ತಿದೆ. ಭಾರತದ ಹೈಕಮಿಶನರ್ ಪಿ.ಕುಮಾರ್ ಭಾಗವಹಿಸುವರು. ಶಾಂತಿ ಒಪ್ಪಂದಕ್ಕೆ ಅಮೆರಿಕದ ಸ್ಟೇಟ್ ಕಾರ್ಯದರ್ಶಿ ಮೈಕ್ ಪೊಂಪಿಯೊ ಅಮೆರಿಕವನ್ನು ಪ್ರತಿನಿಧಿಸಿ ಒಪ್ಪಂದಕ್ಕೆ ಸಹಿ ಹಾಕುವರು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದರು.
ಅಫ್ಘಾನಿಸ್ತಾನದಿಂದ ಅಮೆರಿಕ ಸೈನಿಕರನ್ನು ಸಂಪೂರ್ಣ ವಾಪಸು ಕರೆಸುವುದಕ್ಕೆ ಮೊದಲ ಹಂತ ಇದು. ತಾಲಿಬಾನ್ ಭಯೋತ್ಪಾದಕರಿಗೆ ಸಹಾಯ ಮಾಡುವುದಿಲ್ಲ ಎಂಬ ನಿಯಮ ಒಪ್ಪಂದದಲ್ಲಿದ್ದು ಅಮೆರಿಕ ಸೇನೆಯನ್ನು ಹಂತಹಂತವಾಗಿ ಹಿಂದೆಗೆಯಲಿದೆ. ತಾಲಿಬಾನ್ ಅಫ್ಘಾನ್ ಸರಕಾರ ಒಪ್ಪಂದದಲ್ಲಿ ಪ್ರತಿಜ್ಞಾಬದ್ಧರಾಗಿ ಮುಂದೆ ಸಾಗಬೇಕಿದ್ದರೆ ಅಫ್ಘಾನ್ ಯುದ್ಧ ಕೊನೆಗೊಳ್ಳುತ್ತದೆ ಮತ್ತು ತನ್ನ ಸೇನೆಯನ್ನು ಹಿಂದಕ್ಕೆ ಕರೆಸಲು ಇದು ಅಮೆರಿಕಕ್ಕೆ ದಾರಿಯಾಗಲಿದೆ ವೈಟ್ ಹೌಸ್ ತಿಳಿಸಿದೆ. ಒಪ್ಪಂದದ ಬಳಿಕ ಅಮೆರಿಕ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಮತ್ತು ಅಫ್ಘಾನ್ ಸರಕಾರ ಜಂಟಿಯಾಗಿ ಒಪ್ಪಂದವನ್ನು ಘೋಷಿಸುವರು ಎಂದು ಟ್ರಂಪ್ ಹೇಳಿದರು. ದೇಶದ ಶಾಂತಿ ಮತ್ತು ಹೊಸ ಭವಿಷ್ಯಕ್ಕೆ ಈ ಸಂದರ್ಭವನ್ನು ಉಪಯೋಗಿಸಬೇಕೆಂದು ಟ್ರಂಪ್ ಅಫ್ಘಾನ್ ಜನತೆಗೆ ಮನವಿ ಮಾಡಿದ್ದಾರೆ. 9/11ರ ಭಯೋತ್ಪಾದಕ ದಾಳಿಯ ಬಳಿಕ ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆಯನ್ನು ನಿಯೋಜಿಸಿತ್ತು. ಈಗ ಅಲ್ಲಿ 13,000 ಅಮೆರಿಕನ್ ಸೈನಿಕರಿದ್ದಾರೆ.












