‘ಮೋದಿ ಇಂಡಿಯಾಸ್ ಡಿವೈಡರ್ ಇನ್ ಚೀಫ್’- ಅಮೆರಿಕದ ಟೈಮ್ ಮ್ಯಾಗಝಿನ್

0
1083

ಅಮೆರಿಕ,ಮೇ 10: ಪ್ರಧಾನಿ ನರೇಂದ್ರ ಮೋದಿಯನ್ನು ಇಂಡಿಯಾಸ್ ಡಿವೈಡರ್ ಇನ್ ಚೀಫ್(ಭಾರತದ ಒಡಕಿನ ಮುಖ್ಯಸ್ಥ) ಎಂದು ಅಮೆರಿಕದ ನ್ಯೂಸ್ ಮ್ಯಾಗಝಿನ್ ಟೈಮ್ ಮ್ಯಾಗಝಿನ್ ಎಂದು ಬಿಂಬಿಸುವ ಮೂಲಕ ವಿವಾದ ಸೃಷ್ಟಿಸಿದೆ. ಮುಖಪುಟ ಲೇಖನದಲ್ಲಿ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತವು ಮೋದಿಯನ್ನು ಮುಂದಿನ ಐದು ವರ್ಷ ಕೂಡ ಸಹಿಸಿಕೊಂಡೀತೇ?” ಎಂದು ಪ್ರಶ್ನಿಸಿದೆ.

ಇದೇ ಮ್ಯಾಗಝಿನ್ ಜಗತ್ತಿನಲ್ಲಿ ಗಮನಿಸಲ್ಪಡುವ ನಾಯಕ ಎಂದು ಮೋದಿಯ ಫೋಟೊವನ್ನು ಮುಖಪುಟದಲ್ಲಿ ಈ ಹಿಂದೆ ಪ್ರಕಟಿಸಿತ್ತು. ಈಗ ಭಾರತದ ಜನರಲ್ಲಿ ಒಡಕು ಸೃಷ್ಟಿಸುವ ಆಚಾರ್ಯ ಪುರುಷನಂತೆ ಮೋದಿಯನ್ನು ವಿಶ್ಲೇಷಿಸಿ ರಂಗ ಪ್ರವೇಶಿಸಿದ್ದು ವಿವಾದವಾಗಿದೆ. ಮುಖಫುಟದಲ್ಲಿ ಮೋದಿಯ ಕ್ಯಾರಿಕೇಚರ್‍‌ನೊಂದಿಗೆ ಅತೀಶ್ ತಸೀರ್ ಎಂಬವರು ಬರೆದ ಲೇಖನವನ್ನು ಟೈಮ್ ಮ್ಯಾಗಝಿನ್ ಪ್ರಕಟಿಸಿದೆ.

ದೇಶದ ಜನರಲ್ಲಿ ಒಡಕು ಸೃಷ್ಟಿಸುವ ಘಟನೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮೌನವಹಿಸಿದರೆಂದು ಲೇಖನ ಬಹಳ ನಿಷ್ಠುರವಾಗಿ ವಿಮರ್ಶಿಸಿದೆ. ದನದ ಹೆಸರಿನಲ್ಲಿ ನಡೆಯುವ ಗುಂಪು ಕೊಲೆಗಳು ಮತ್ತು ಆಡಳಿತ ವ್ಯವಸ್ಥೆಯಲ್ಲಿ ನಡೆಯುವ ನಿಗೂಢ ಸಂಚುಗಳಿಗೆ ಮೋದಿ ಮೌನಾನುಮಿತ ನೀಡಿದ್ದಾರೆ ಎಂದು ಲೇಖನದಲ್ಲಿ ಆರೋಪಿಸಿದ್ದಾರೆ. ಸ್ವಾತಂತ್ರ್ಯದ ಬಳಿಕ ದೇಶ ಮಾಡಿದ ಮಹತ್ತರ ಸಾಧನೆಗಳನ್ನು ಮೋದಿ ಅಧಿಕಾರಕ್ಕೆ ಬಂದ ಬಳಿಕ ಬುಡಮೇಲುಗೊಳಿಸಲಾಯಿತು. ಜಾತ್ಯತೀತ, ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ನಿರ್ಭೀತ ಪತ್ರಿಕಾ ಚಟುವಟಿಕೆಗಳು ಅಪಾಯದ ಸುಳಿಗೆ ಸಿಲುಕಿದೆ. 2002ರಲ್ಲಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ನಡೆದ ಸಾಮೂಹಿಕ ಹತ್ಯೆಗೆ ಈವರೆಗೂ ವಿಷಾದವನ್ನು ಮೋದಿ ಸೂಚಿಸಿಲ್ಲ ಎಂದು ಮ್ಯಾಗಝಿನ್ ಬಲವಾಗಿ ಟೀಕಿಸಿದೆ.

ಟೈಮ್ ಮ್ಯಾಗಝಿನ್ ತಯಾರಿಸಿದ, ಜಗತ್ತಿನ ಪ್ರಭಾವಿ 100 ನಾಯಕರ ಪಟ್ಟಿಯಲ್ಲಿ 2014,2015,2017ರಲ್ಲಿ ಮೋದಿಗೆ ಸ್ಥಾನ ಲಭಿಸಿತ್ತು. ಆದರೆ ನಂತರದ ವರ್ಷಗಳಲ್ಲಿ ಮೋದಿಯ ಕುರಿತ ನಿಲುವಿನಲ್ಲಿ ಬದಲಾವಣೆಯಾಗಿದೆ. ಮೋದಿಯ ವಿರುದ್ಧ ಈಗ ತೀವ್ರವಾದ ಟೀಕೆಯನ್ನು ಮಾಡಿದೆ. ದೇಶ ಚುನಾವಣೆಯ ಕಾವಿನಲ್ಲಿರುವಾಗಲೇ “ಮುಂದಿನ ಐದು ವರ್ಷಗಳ ಕಾಲ ಭಾರತ ಮೋದಿಯನ್ನು ಸಹಿಸಿಕೊಳ್ಳಬಹುದೇ” ಎಂದು ಪ್ರಶ್ನಿಸಿದ್ದು ತೀರಾ ರಾಜಕೀಯ ಅರ್ಥವನ್ನು ಹೊಂದಿದೆ ಎಂದು ವರದಿಗಳು ತಿಳಿಸಿವೆ.