ಮುಹಮ್ಮದ್(ಸ)ರು ಪರಿಚಯಿಸಿದ ಧರ್ಮ ಹೊಸತೇ?

0
289

ಸನ್ಮಾರ್ಗ ವಾರ್ತೆ

✍️ಎಂ. ಅಶೀರುದ್ದೀನ್ ಮಾಸ್ಟರ್, ಸಾರ್ತಬೈಲ್

ಪ್ರವಾದಿ ಇಬ್ರಾಹೀಮ್, ಈಸಾ, ಮೂಸಾ(ಅ)ರು ಅನುಭವಿಸಿದಂತಹ ಅತ್ಯಂತ ಸಂದಿಗ್ಧ ಪರಿಸ್ಥಿತಿಯನ್ನು ಪ್ರವಾದಿ ಮುಹಮ್ಮದ್(ಸ)ರೂ ಎದುರಿಸಿದ್ದರು. ಹಲವು ವರ್ಷಗಳಿಂದಾಗಿ ಧರ್ಮದಲ್ಲಿ ಸೇರಿಕೊಂಡಿದ್ದ ಮೂಢ ನಂಬಿಕೆ, ಗೊಡ್ಡು ಸಂಪ್ರದಾಯ ಮತ್ತು ಅನಾಚಾರದಿಂದ ಜನರನ್ನು ಒಮ್ಮೆಗೆ ಮುಕ್ತಗೊಳಿಸುವುದು ಅಷ್ಟು ಸುಲಭದ ಕಾರ್ಯವಾಗಿರಲಿಲ್ಲ.

ಪುರೋಹಿತಶಾಹಿ ಬೆಳವಣಿಗೆಯಿಂದಾಗಿ ಜನರು ಕಂದಾಚಾರಗಳನ್ನು ಧರ್ಮದ ಭಾಗವಾಗಿಯೇ ನಂಬಿದ್ದರು. ಅವುಗಳನ್ನು ತೊರೆಯುವುದರಿಂದ ದೊಡ್ಡ ಅನಾಹುತ ಅಥವಾ ತೊಂದರೆ ಸಂಭವಿಸಲಿದೆಯೆಂದು ಭಾವಿಸಿದ್ದರು.
ಈ ಕಾರಣದಿಂದ “ಏಕ ಕುಲ ಏಕ ದೇವ” ಎಂಬ ಪ್ರವಾದಿಯ ಬೋಧನೆ ಜನರಿಗೆ ಮನವರಿಕೆಯಾಗಿದ್ದರೂ ಪೂರ್ವಾಚಾರವನ್ನು ತೊರೆಯಲು ತಯಾರಿರಲಿಲ್ಲ.
ಹ. ಇಬ್ರಾಹೀಮ್‌ರ(ಅ) ಆದರ್ಶಗಳು ಸಂಪೂರ್ಣ ಅಳಿಸಿಹೋಗಿತ್ತು. ಮಕ್ಕಾದ ಜನರು ತಮ್ಮ ಪೂರ್ವಜರು ನಡೆಸಿಕೊಂಡು ಬಂದದ್ದನ್ನು ಅಚಲವಾಗಿ ನಂಬಿದ್ದರಿಂದ ಮುಹಮ್ಮದರ(ಸ) ವಿಚಾರಗಳು ನೂತನವಾಗಿ ತೋರಿತು.
ಪ್ರವಾದಿಯವರ ಸಂದೇಶಗಳ ಬಗ್ಗೆ ಸ್ಪಷ್ಟ ಅರಿವಿದ್ದ ಮಕ್ಕಾದ ಪುರೋಹಿತ ಶಾಹಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಕುತಂತ್ರ ಮತ್ತು ಬೆದರಿಕೆಗಳನ್ನು ಒಡ್ಡಿ ಜನರು ಪ್ರವಾದಿ ಮುಹಮ್ಮದ್(ಸ)ರಲ್ಲಿ ನಂಬಿಕೆಯಿರಿಸುವುದನ್ನು ತಡೆಯಲು ಪ್ರಯತ್ನಿಸುತ್ತಿದ್ದರು. ಎಲ್ಲಾ ಕುತಂತ್ರ ಮತ್ತು ಬೆದರಿಕೆಗಳನ್ನು ಎದುರಿಸಿ ಪ್ರವಾದಿ ಮುಹಮ್ಮದ್(ಸ) ತಮ್ಮ ಸಂದೇಶ ಪ್ರಚಾರದ ಜವಾಬ್ದಾರಿಯನ್ನು ಮುಂದುವರಿಸುತ್ತಿದ್ದರು.

ಸಂದೇಶ ಪ್ರಚಾರದ ಮೊದಲ ಹಂತವು ರಹಸ್ಯವಾಗಿತ್ತು. ಅಲ್ಲಾಹನು ನೀಡಿದ ಹೊಣೆಗಾರಿಕೆಯನ್ನು ನಿರ್ವಹಿಸಲು ಪ್ರವಾದಿ ಮುಹಮದ್(ಸ)ರು ಕುಟುಂಬದವರು, ಗೆಳಯರನ್ನು ಭೇಟಿಯಾಗಿ ಮನವರಿಕೆ ಮಾಡುತ್ತಿದ್ದರು. ಹ. ಅಬೂಬಕ್ಕರ್ ಸಿದ್ದೀಕ್, ಉಸ್ಮಾನ್, ಹ. ಝುಬೈರ್, ಹ. ಅಲೀ, ಅರ್ಕಮ್, ಅಮ್ಮಾರ್, ಯಾಸಿರ್, ಸುಮಯ್ಯ ಮತ್ತು ಪತ್ನಿ ಖದೀಜ ಪ್ರವಾದಿಯ(ಸ) ಸಹಚರರಾಗಿ ಮೊದಲ ಪಂಕ್ತಿಯಲ್ಲಿ ಸೇರಿದರು. ಪ್ರಾರಂಭದಲ್ಲಿ ಪ್ರವಾದಿ ತನ್ನ ಸಹಚರರೊಂದಿಗೆ ಅಡಗಿಕೂತು, ಗುಪ್ತವಾಗಿ, ಅರ್ಧ ರಾತ್ರಿಯಲ್ಲಿ, ಕಣಿವೆಯ ಬಳಿ, ನಗರದ ಹೊರವಲಯದಲ್ಲಿ ನಮಾಝ್ (ಪ್ರಾರ್ಥನೆ) ಮಾಡುತ್ತಿದ್ದರು ಹಾಗೂ ಸಂದೇಶ ಪ್ರಚಾರಕ್ಕಾಗಿ ಕಾರ್ಯಕ್ರಮಗಳನ್ನು ಸಿದ್ಧಗೊಳಿಸುತ್ತಿದ್ದರು. ಜನರನ್ನು ರಹಸ್ಯವಾಗಿ ಭೇಟಿ ಮಾಡಿ ಸತ್ಯವನ್ನು ತಿಳಿಸುತ್ತಿದ್ದರು.

“ನಿಮಗೆ ನೀಡಲಾಗಿರುವುದನ್ನು ಘಂಟಾಘೋಷವಾಗಿ ಸಾರಿ ಹೇಳಿರಿ” ಎಂಬ ಅಲ್ಲಾಹನ ಆಜ್ಞೆಯಿಂದ ಅಂದರೆ ಪ್ರವಾದಿತ್ವದ ಮೂರು ವರ್ಷಗಳ ಬಳಿಕ ಅವರು ಬಹಿರಂಗವಾಗಿ ಸಂದೇಶ ಪ್ರಚಾರವನ್ನು ಆರಂಭಿಸಿದರು.

“ಮನುಷ್ಯರೆಲ್ಲರೂ ಒಬ್ಬ ಸೃಷ್ಟಿಕರ್ತನ ದಾಸರು, ಅವನನ್ನು ಮಾತ್ರ ಆರಾ ಧಿಸಬೇಕು. ಅವನನ್ನು ಮಾತ್ರ ಭಯಪಡಬೇಕು” ಎಂಬ ಪ್ರವಾದಿಯ ಬೋಧನೆಯು ಸಮಾಜದ ಅತ್ಯಂತ ಕೆಳಮಟ್ಟದ ಶೋಷಿತರ, ನೊಂದವರ ಭರವಸೆಯ ದ್ವನಿಯಾಗಿ ರೂಪಗೊಂಡಿತು. ಅಷ್ಟರವರೆಗೆ ಶ್ರೀಮಂತರ ದಬ್ಬಾಳಿಕೆಯಲ್ಲಿ ಬೆಂದಿದ್ದ ಜನತೆಯು ತಮ್ಮ ಮೇಲೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎಬ್ಬಿಸಲಾರಂಭಿಸಿದರು. ನಮ್ಮ ಒಡೆಯನಾದ ಸೃಷ್ಟಿಕರ್ತ ಮಾತ್ರ ನಮ್ಮ ಮೇಲೆ ಸಂಪೂರ್ಣ ಹಕ್ಕು ಹೊಂದಿದ್ದಾನೆ ಅವನೆದುರು ಸಕಲ ಮಾನವರು ಸರಿ ಸಮಾನರೆಂದು ಅರಿತರು. ನಮ್ಮನ್ನು ನಿಯಂತ್ರಿಸುವವನು ಮನುಷ್ಯನಲ್ಲ, ವಿಗ್ರಹಗಳು, ಪ್ರಾಣಿ ಪಕ್ಷಿಗಳಲ್ಲ, ನಿರ್ಜೀವ ವಸ್ತುಗಳಲ್ಲ. ಬದಲಾಗಿ ನಮ್ಮ ನಿಯಂತ್ರಕ ಸೃಷ್ಟಿಕರ್ತನು ಏಕೈಕನಾದ ದೇವನು ಮಾತ್ರವಾಗಿದ್ದಾನೆ, ಅವನಿಗೆ ಮಾತ್ರ ಶಿರ ಬಾಗಿಸಬೇಕು ಎಂದು ಅರಿತರು.

ಸೃಷ್ಟಿಕರ್ತನ ಆಜ್ಞೆಗಳನ್ನು ಮಾತ್ರ ಪಾಲಿಸಲಾರಂಭಿಸಿದರು. ಮನುಷ್ಯನಿಗೆ ಮನುಷ್ಯನಲ್ಲಿದ್ದ ಭಯ ಸಂಪೂರ್ಣವಾಗಿ ಅಳಿದು ಅಲ್ಲಾಹನಲ್ಲಿ ಭಯಭಕ್ತಿ ಹುಟ್ಟಲಾರಂಭಿಸಿತು.
ತಮ್ಮ ಅಧೀನದಲ್ಲಿದ್ದ ಇಥಿಯೋಪಿಯಾದ ನೀಗ್ರೋ ಗುಲಾಮರು, ಅರೇಬಿಯನ್ ಬದವಿಗಳು, ಬಡವರು ನಮ್ಮ ವಿರುದ್ಧ ಮಾತನಾಡುವುದೇ? ನಮಗೆ ವಂದಿಸದಿರುವುದೇ?

ಈ ಬೆಳವಣಿಗೆ ಅರೇಬಿಯನ್ ಶ್ರೀಮಂತರಿಗೆ ಸಹಿಸಲಸಾಧ್ಯವಾಯಿತು. ಒಬ್ಬ ನೀಗ್ರೋ ಗುಲಾಮ ಶ್ರೀಮಂತನ ಜೊತೆ ಭುಜಕ್ಕೆ ಭುಜ ತಾಗಿಸಿ ಯಾವ ಬೇದವೂ ಇಲ್ಲದೇ ನಮಾಝ್ ಮಾಡಲು ಸಾಧ್ಯವಾಗುವುದೆಂದರೆ ಅದಕ್ಕಿಂತ ದೊಡ್ಡ ಮಾನವೀಯತೆಯ ಧರ್ಮ ಯಾವುದಿದೆ?

ಶೋಷಿತರು ಕನಸು ಕಾಣಲು ಸಾಧ್ಯವಿಲ್ಲದ ಸಮಾನತೆ ಸ್ವಾತಂತ್ರ‍್ಯ ಅವರಿಗೆ ಪ್ರವಾದಿಯವರ ಮೂಲಕ ಲಭಿಸುವ ಭರವಸೆ ಮೂಡಿತು. ಅವರ ಹೃದಯದಲ್ಲಿ ಪ್ರವಾದಿಯ ಬೋಧನೆ ಆಳವಾಗಿ ನೆಲೆಯೂರಿತು.

ಇದೇವೇಳೆ ಪ್ರವಾದಿಯ(ಸ) ಸಂದೇಶವನ್ನು ಕುತಂತ್ರದಿಂದ ಸೋಲಿಸಲು ವಿರೋಧಿಗಳು ಪ್ರಯತ್ನಪಟ್ಟರು. ಮುಹಮ್ಮದನ ಹೊಸ ಧರ್ಮ ನಮ್ಮ ಪೂರ್ವಜರನ್ನು ನಿಂದಿಸುತ್ತದೆ, ನಮ್ಮ ಸಂಸ್ಕೃತಿಯನ್ನು ನಾಶಗೊಳಿಸುತ್ತದೆ ಎಂದೆಲ್ಲಾ ಅಪಪ್ರಚಾರ ಮಾಡಲಾರಂಭಿಸಿದರು.

“ನಮ್ಮ ಬಳಿಗೆ ದೇವಚರರೇಕೆ ಕಳುಹಿಸಲ್ಪಡಲಿಲ್ಲ? ಅಥವಾ ನಾವು ನಮ್ಮ ಪ್ರಭುವನ್ನು ನೋಡುವಂತೆ ಯಾಕಾಗಲಿಲ್ಲ (ಅಲ್ ಫುರ್ಕಾನ್ 21) ಎಂದು ಕುರ್‌ಆನ್ ಅವರ ವಾದವನ್ನು ಉಲ್ಲೇಖಿಸಿದೆ. ಪ್ರವಾದಿತ್ವವನ್ನು ಒಪ್ಪದೇ ಮೊಂಡು ವಾದ ಮಂಡಿಸ ತೊಡಗಿದರು.

ಕುರ್‌ಆನ್ ಅದಕ್ಕೆ ತಕ್ಕ ಉತ್ತರವನ್ನು ನೀಡಿತು-
“ಒಂದು ವೇಳೆ ನಾವು ದೇವಚರನನ್ನು ಇಳಿಸುತ್ತಿದ್ದರೂ ಅವನನ್ನು ಮಾನವ ರೂಪದಲ್ಲೇ ಇಳಿಸುತ್ತಿದ್ದೆವು. ಹೀಗೆ ಇವರನ್ನು ಈಗ ಇವರು ಸಿಲುಕಿರುವ ಸಂಶಯದಲ್ಲೇ ಸಿಲುಕಿಸುತ್ತಿದ್ದೆವು” (ಅಧ್ಯಾಯ 6: ಅಲ್ ಅನ್‌ಆಮ್; ಸೂಕ್ತ: 9)

ಮಿಥ್ಯಾರೋಪಗಳು ವಿಫಲವಾದಾಗ ವಿರೋಧಿಗಳು ಗೂಂಡಾರೂಪವನ್ನು ತಾಳಿದರು. ಪ್ರವಾದಿ ಮತ್ತು ಸಹಚರರಿಗೆ ಸಾಮೂಹಿಕ ಬಹಿಷ್ಕಾರ ಹಾಕಿದರು. ಅವಹೇಳನ ಮಾಡಿದರು. ಮಕ್ಕಾದಿಂದ ಹೊರಹಾಕಿದರು. ಕೆಲವರು ಹುತಾತ್ಮರಾದರು. ಆದರೆ ವಿಶ್ವಾಸಿಗಳ ದೃಢ ನಿಶ್ಚಯದ ಮುಂದೆ ವಿರೋಧಿಗಳ ಯಾವ ಕುತಂತ್ರವೂ ಫಲಿಸಲಿಲ್ಲ.

ಕುರ್‌ಆನ್ ಹೇಳುತ್ತದೆ- “ಅಲ್ಲಾಹನು ಅನುಗ್ರಹದ ಯಾವ ದ್ವಾರವನ್ನು ಜನರಿಗಾಗಿ ತೆರೆದನೋ ಅವನನ್ನು ಯಾರೂ ತಡೆಯುವವರಿಲ್ಲ (ಫಾತಿರ್: 2). ಏಕ ದೇವನ ಮೇಲಿರುವ ಅಚಲವಾದ ವಿಶ್ವಾಸದಿಂದಾಗಿ ವಿಶ್ವಾಸಿಗಳು ಯಾವ ತ್ಯಾಗಕ್ಕೂ ಸಿದ್ಧರಾಗಿ ನಿಂತರು ಮತ್ತು ಕ್ರೂರ ಹಿಂಸೆಗೂ ಒಳಪಟ್ಟರು.

ವಾಸ್ತವದಲ್ಲಿ ಪ್ರವಾದಿ ಮುಹಮ್ಮದ್(ಸ)ರು ಅರೇಬಿಯಾದಲ್ಲಿ ಯಾವ ಹೊಸ ಧರ್ಮವನ್ನೂ ಹುಟ್ಟು ಹಾಕಿದವರಲ್ಲ ಅಪಾರ್ಥಕ್ಕೊಳಗಾದ ಸನಾತನ ಧರ್ಮವನ್ನು ಸರಿಪಡಿಸಿದರು. ಈ ಹಿಂದಿನ ಪ್ರವಾದಿಗಳು ನಿರ್ವಹಿಸಿದ್ದ ಜವಾಬ್ದಾರಿಯನ್ನೇ ಅವರು ಮುಂದುವರಿಸಿದರು.

ಕುರ್‌ಆನ್ ಹೇಳುತ್ತದೆ: “(ಓ ಪೈಗಂಬರರೇ,) ನಿಮಗಿಂತ ಮುಂಚೆಯೂ ಅನೇಕ ಮಂದಿ ಸಂದೇಶವಾಹಕರು ಅಪಹಾಸ್ಯಕ್ಕೊಳಗಾಗಿದ್ದಾರೆ. ಆದರೆ, ಕೊನೆಗೆ ಅವರು ಅಪಹಾಸ್ಯ ಮಾಡುತ್ತಿದ್ದ ವಾಸ್ತವಿಕತೆಯೇ ಅವರ ಮೇಲೆ ಬಂದೆರಗಿತು.” (ಅಧ್ಯಾಯ 6: ಅಲ್ ಅನ್‌ಆಮ್ ಸೂಕ್ತ: 10)

ಮುಹಮ್ಮದರಿಗೆ(ಸ) ದಿವ್ಯಸ್ಥಾನ ಲಭಿಸುವುದಕ್ಕಿಂತ ಮುಂಚೆ ಅವರೊಬ್ಬ ಮಾದರಿ ಪುರುಷರಾಗಿದ್ದರು. ಮುಹಮ್ಮದ್ ಸುಳ್ಳು ಹೇಳುವ ವ್ಯಕ್ತಿ ಅಲ್ಲ ಎಂಬ ಅರಿವು ಅರಬರಿಗಿತ್ತಾದರೂ ಪ್ರವಾದಿಯ(ಸ) ಬೋಧನೆ ಅವರಿಗೆ ಅರಗಿಸಿಕೊಳ್ಳಲಾಗಲಿಲ್ಲ. ತಾಳ್ಮೆ ಮತ್ತು ಪ್ರೀತಿಯಿಂದ ಪ್ರವಾದಿ ಮುಹಮ್ಮದ್(ಸ)ರು ಅರಬ್ ಮಾತ್ರವಲ್ಲ ಇಡೀ ಜಗತ್ತನ್ನು ಗೆದ್ದರು- “ಓ ಪೈಗಂಬರರೇ! ಕ್ಷಮಾಶೀಲರಾಗಿರಿ, ಸರ್ವಸಮ್ಮತ ಒಳಿತುಗಳನ್ನು ಬೋಧಿಸಿರಿ ಮತ್ತು ತಿಳಿಗೇಡಿಗಳೊಡನೆ ಜಗಳಕ್ಕಿಳಿಯಬೇಡಿರಿ.
(ಅಲ್ ಅರಾಫ್: 119)

ಪ್ರವಾದಿ ಮುಹಮ್ಮದ್(ಸ) ದುರಹಂಕಾರ ಅಥವಾ ಧ್ವೇಷವನ್ನು ಬೆಳೆಸಿದವರಲ್ಲ. ಅತ್ಯಂತ ಕ್ಷಮಾಪಣಾ ಗುಣವನ್ನು ಹೊಂದಿದ್ದರು. ಅನಾಥರ ಹಕ್ಕುಗಳನ್ನು ಸಂರಕ್ಷಿಸುತ್ತಿದ್ದರು ಮತ್ತು ಅವರ ಧ್ವನಿಯಾಗಿದ್ದರು. ಹಸಿದವರಿಗೆ ಉಣಿಸುತ್ತಿದ್ದರು. ಧ್ವೇಷಿಸುತ್ತಿದ್ದವರನ್ನು ಪ್ರೀತಿಸುತ್ತಿದ್ದರು. ಜನರು ಕಷ್ಟದಲ್ಲಿರುವ ಸಂದರ್ಭದಲ್ಲಿ ಸ್ಪಂದಿಸುತ್ತಿದ್ದರು. ರೋಗಿಗಳನ್ನು ಸುಶ್ರೂಶಿಸುತ್ತಿದ್ದರು. ಅಸಹಾಯಕರಿಗೆ ನೆರವಾಗುತ್ತಿದ್ದರು.

ಅಂದಹಾಗೆ, ಪ್ರವಾದಿ(ಸ) ನಮಾಝ್, ಉಪವಾಸ ಮತ್ತು ಐಚ್ಛಿಕ ಕರ್ಮಗಳನ್ನು ಮಾಡುವ ಆಧ್ಯಾತ್ಮಿಕ ವ್ಯಕ್ತಿಯಾಗಿದ್ದಿದ್ದರೆ ಅರೇಬಿಯನ್ ಮೇಲ್ವರ್ಗದವರಿಗೆ ಮುಹಮ್ಮದ್ ದೊಡ್ಡ ಸಮಸ್ಯೆಯಾಗುತ್ತಿರಲಿಲ್ಲ. ಅವುಗಳಿಂದಾಗಿ ಅರಬ್ ನೇತಾರರಿಗೆ ಯಾವ ನಷ್ಟವೂ ಉಂಟಾಗುತ್ತಿರಲಿಲ್ಲ. ಬದಲಾಗಿ ಮುಹಮ್ಮದ್(ಸ) ದಮನಿತರನ್ನು, ಕಾರ್ಮಿಕರು, ದುರ್ಬಲರನ್ನು ಸಮಾಜದ ಮುಂಚೂಣಿಗೆ ತರಲು ಪ್ರಯತ್ನಿಸಿದರು. ತಾನು ಮಾಡುವುದನ್ನು ಮಾತ್ರ ಭೋದಿಸಿದರು. ಅವರ ಬೋಧನೆ ಮತ್ತು ವರ್ತನೆಗಳಲ್ಲಿ ಭಿನ್ನತೆಗಳಿರಲಿಲ್ಲ. ಈ ಗುಣವೊಂದೇ ಪ್ರವಾದಿ ಮುಹಮದ್(ಸ)ರನ್ನು ಸರ್ವ ಕಾಲದಲ್ಲೂ ಶ್ರೇಷ್ಠ ವ್ಯಕ್ತಿಯನ್ನಾಗಿಸಿದೆ. ಒಬ್ಬ ನಾಯಕನಿಗಿರಬೇಕಾದ ಅದಮ್ಯ ಗುಣ ಇದುವೇ ಆಗಿದೆ. ಈ ಕಾರಣಕ್ಕಾಗಿಯೇ ಪ್ರವಾದಿಯವರ ಸಂದೇಶ ಕಡಿಮೆ ಅವಧಿಯಲ್ಲಿ ಯಶಸ್ಸು ಕಂಡಿತು.