ಇಸ್ರೇಲಿನ ಬಲಪಂಥೀಯ ನಾಯಕ ಇತಿಮಾರ್ ಬೆನ್-ಗ್ವಿರ್ ಅಲ್ ಅಕ್ಸಾ ಮಸೀದಿಯ ಕಂಪೌಂಡ್ ಪ್ರವೇಶಕ್ಕೆ ತೀವ್ರ ಆಕ್ರೋಶ

0
148

ಸನ್ಮಾರ್ಗ ವಾರ್ತೆ

ಜೆರುಸಲೇಮ್:ಇಸ್ರೇಲಿನ ಭದ್ರತಾ ಸಚಿವ ಮತ್ತು ತೀವ್ರ ಬಲಪಂಥೀಯ ನಾಯಕ ಇತಮಾರ್ ಬೆನ್-ಗ್ವಿರ್ ಅವರು ಅಲ್ ಅಕ್ಸಾ ಮಸೀದಿಯ ಕಂಪೌಂಡ್ ಪ್ರವೇಶಿಸಿದ್ದು ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ತೀವ್ರ ಬಲಪಂಥೀಯವಾದಕ್ಕೆ ಕುಖ್ಯಾತರಾಗಿರುವ ಇತಮಾರ್, ಈ ಹಿಂದೆ ಕೂಡ ಅಲ್ ಅಕ್ಸಾ ಮಸೀದಿಯ ಕಾಂಪೌಂಡ್ ಪ್ರವೇಶಿಸಿ ಸಾಕಷ್ಟು ಘರ್ಷಣೆಗೆ ಕಾರಣವಾಗಿದ್ದರು.

ಅಲ್ ಅಕ್ಸಾ ಮಸೀದಿಯು ಇಸ್ರೇಲ್ ಆಕ್ರಮಿತ ಪಶ್ಚಿಮ ಜೆರುಸಲೆಂನಲ್ಲಿದೆ. ಮಸ್ಜಿದುಲ್ ಅಕ್ಸಾದ ಕಾಂಪೌಂಡ್‌ನಲ್ಲಿ ಭದ್ರತಾ ಅಧಿಕಾರಿಗಳ ನಡುವೆ ಇತಮಾರ್ ನಿಂತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿತ್ತು. ಹಮಾಸ್‌ಗೆ ನಮ್ಮ ಸರ್ಕಾರ ಶರಣಾಗುವುದಿಲ್ಲ ಎಂದವರು ಹೇಳಿಕೆ ನೀಡಿರುವುದು ಕೂಡ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇತಮಾರ್ ಅಖಂಡ ಇಸ್ರೇಲ್‌ನ ಪ್ರತಿಪಾದಕರಾಗಿದ್ದು ಈಗಾಗಲೇ ತೀವ್ರ ಬಲಪಂಥೀಯ ವಾದಕ್ಕೆ ಕುಖ್ಯಾತರಾಗಿದ್ದಾರೆ.

ತಾನು ಅಲ್ ಅಕ್ಸಾ ಮಸೀದಿಯ ಕಾಂಪೌಂಡ್‌ಗೆ ಹೋಗಿರುವ ಫೋಟೋವನ್ನು ಕೂಡ ಟ್ವಿಟ್ಟರ್‌ನಲ್ಲಿ ಅವರು ಹಂಚಿಕೊಂಡಿದ್ದಾರೆ.

ಫೆಲೆಸ್ತೀನ್‌ನ ವಿದೇಶಾಂಗ ಸಚಿವರು ಈ ಭೇಟಿಯನ್ನು ತೀವ್ರವಾಗಿ ಖಂಡಿಸಿದ್ದು ಇದು ಘರ್ಷಣೆಗೆ ಆಹ್ವಾನ ಎಂದು ಹೇಳಿದ್ದಾರೆ. ಇದೇ ವೇಳೆ ಇಸ್ರೇಲ್‌ನ ಮಾಜಿ ಪ್ರಧಾನಿ ಯೈರ್ ಲ್ಯಾಪಿಡ್ ಕೂಡ ಇತಮಾರ್‌ರ ಮಸೀದಿ ಕಾಂಪೌಂಡ್ ಪ್ರದೇಶದ ಭೇಟಿಯನ್ನು ಟೀಕಿಸಿದ್ದು ಇದು ಘರ್ಷಣೆಗೆ ಆಹ್ವಾನ ನೀಡಿದಂತಾಗಿದೆ ಮತ್ತು ಪ್ರಚೋದಕವಾಗಿದೆ ಎಂದು ಹೇಳಿದ್ದಾರೆ.