ಜಾರ್ಜ್ ಫ್ಲಾಯ್ಡ್ ಹತ್ಯೆ: ತಾರತಮ್ಯ, ಅನ್ಯಾಯದ ವಿರುದ್ಧದ ಹೋರಾಟಕ್ಕೆ ನಮ್ಮ ಬೆಂಬಲ: ಜಮಾಅತೆ ಇಸ್ಲಾಮೀ ಹಿಂದ್

0
887

ಸನ್ಮಾರ್ಗ ವಾರ್ತೆ

ನವದೆಹಲಿ, ಜೂ.4: ಅನ್ಯಾಯ ಮತ್ತು ವ್ಯವಸ್ಥಿತ ಜನಾಂಗೀಯ ತಾರತಮ್ಯದ ವಿರುದ್ಧದ ಹೋರಾಟದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಅಮೆರಿಕಾದ ಕಪ್ಪು ಸಮುದಾಯದೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸುತ್ತದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಅಧ್ಯಕ್ಷ ಸೈಯದ್ ಸಾದತುಲ್ಲಾ ಹುಸೇನಿ ಹೇಳಿದರು.

ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ, ಮಿನ್ನಿಯಾ ಪೋಲಿಸ್‌ನ ಮಿನ್ನೆಸೋಟ ಪೋಲಿಸ್‌ ಅಧಿಕಾರಿಗಳ ಕೈಯಲ್ಲಿ ನಿರಾಯುಧನಾಗಿ ಹತ್ಯೆಗೀಡಾದ ಆಫ್ರೋ ಅಮೆರಿಕನ್ ಜಾರ್ಜ್ ಫ್ಲಾಯ್ಡ್ ಅವರ ನಿರ್ದಯ ಹತ್ಯೆಯನ್ನು ನಾವು ಖಂಡಿಸುತ್ತೇವೆ.

ಹಾಡಹಗಲೇ ಸಾರ್ವಜನಿಕರ ಕಣ್ಣೆದುರೇ ನಡೆದ ಅವರ ಹತ್ಯೆಯಿಂದ ನಾವು ದಿಗಿಲುಗೊಂಡಿದ್ದೇವೆ. ನಾವು ದುಃಖವನ್ನು ಹಂಚಿಕೊಳ್ಳುತ್ತೇವೆ ಮತ್ತು ಮೃತರ ಕುಟುಂಬಕ್ಕೆ ನಮ್ಮ ಆಳವಾದ ಸಂತಾಪವನ್ನು ತಿಳಿಸುತ್ತೇವೆ ಮತ್ತು ಅನ್ಯಾಯ ಮತ್ತು ವ್ಯವಸ್ಥಿತ ಜನಾಂಗೀಯ ತಾರತಮ್ಯದ ವಿರುದ್ಧದ ಹೋರಾಟದಲ್ಲಿ ಅಮೆರಿಕಾದ ಕಪ್ಪು ಸಮುದಾಯದೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇವೆ.

ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು ಮತ್ತು ಫ್ಲಾಯ್ಡ್‌ ಹತ್ಯೆಯಲ್ಲಿ ತಪ್ಪಿತಸ್ಥರೆಂದು ಪರಿಗಣಿಸಲ್ಪಟ್ಟವರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು ಎಂಬ ಬೇಡಿಕೆಯನ್ನು ನಾವು ಬೆಂಬಲಿಸುತ್ತೇವೆ. ತಾರತಮ್ಯ ಮತ್ತು ಅನ್ಯಾಯದ ಸಮಸ್ಯೆಯನ್ನು ಪರಿಹರಿಸಲು ಅಮೆರಿಕಾದ ಕಪ್ಪು ಸಮುದಾಯವು ಮುಂದಿಟ್ಟ ಸುಧಾರಣೆಗಳನ್ನು ನಾವು ಬೆಂಬಲಿಸುತ್ತೇವೆ” ಎಂದು ಅವರು ಹೇಳಿದರು.

“ಆಫ್ರೋ-ಅಮೆರಿಕನ್ನರ ಸಮಾನ ಹಕ್ಕುಗಳ ಹೋರಾಟದಲ್ಲಿ ಮತ್ತು ಜನಾಂಗೀಯ ತಾರತಮ್ಯವನ್ನು ಕೊನೆಗೊಳಿಸುವಲ್ಲಿ ಅಪಾರ ಪ್ರಗತಿಯ ಹೊರತಾಗಿಯೂ, ಜನಾಂಗೀಯ ದ್ವೇಷವು ಇನ್ನೂ ಕೂಡ ಅಸ್ತಿತ್ವದಲ್ಲಿರುವುದು ವಿಷಾದನೀಯ. ಈ ಜನಾಂಗೀಯ ತಾರತಮ್ಯವು ಇಂದು ಪೊಲೀಸರ ಕ್ರೂರತೆ ಮಾತ್ರವಲ್ಲದೇ ಉದ್ಯೋಗ, ವಸತಿ, ಶಿಕ್ಷಣ ಇತ್ಯಾದಿ ರಂಗಗಳಲ್ಲಿಯೂ ತಾರತಮ್ಯದ ರೂಪದಲ್ಲಿ ಉಳಿದುಕೊಂಡಿದೆ.

ಜನಾಂಗೀಯವಾದ, ಧಾರ್ಮಿಕ ಅಸಮಾನತೆಯನ್ನು ಮಟ್ಟಹಾಕಲು ಜಾರಿಗೆ ತರಲು ಉದ್ದೇಶಿಸಿರುವ ಪೊಲೀಸ್ ಸುಧಾರಣೆ ಮತ್ತು ದ್ವೇಷಾಪರಾಧ ಮಸೂದೆಯನ್ನು ಜಮಾಅತ್ ಬೆಂಬಲಿಸುತ್ತದೆ. ಇಸ್ಲಾಂ ನಾವೆಲ್ಲರೂ ಒಂದೇ ಸಂತತಿಯೆಂದು ಘೋಷಿಸುವ ಮೂಲಕ ತಾರತಮ್ಯ ಮತ್ತು ಅಸಮಾನತೆಯನ್ನು ತೊಡೆದುಹಾಕಿದೆ.

ಕಾನೂನು ಸುಧಾರಣೆಯ ಜೊತೆಗೆ, ವರ್ಣಭೇದ ನೀತಿ ಮತ್ತು ಅಸಮಾನತೆಯ ಸವಾಲನ್ನು ಪರಿಹರಿಸಲು ಮನಃಸ್ಥಿತಿಯ ಬದಲಾವಣೆಯ ಅಗತ್ಯವಿದೆ” ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಅಧ್ಯಕ್ಷರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.