ಜಪಾನ್,ಮೇ 11: ಸಾರಿಗೆ ಕ್ಷೇತ್ರಗಳಲ್ಲಿ ಹಲವು ಕ್ರಾಂತಿಗಳನ್ನು ಸೃಷ್ಟಿಸುವ ತಂತ್ರಜ್ಞಾನವನ್ನು ಜಪಾನ್ ಅಭಿವೃದ್ಧಿಪಡಿಸಿದೆ. ಈಗ ಗಂಟೆಗೆ 400 ಕಿಲೋ ಮೀಟರ್ ವೇಗದ ಬುಲೆಟ್ ಟ್ರೈನ್ ಸಂಚರಿಸುವ ಪರೀಕ್ಷಾರ್ಥ ಓಡಾಟ ಅಂತಿಮ ಘಟ್ಟಕ್ಕೆ ತಲುಪಿದೆ. ಮೂರು ವರ್ಷಗಳ ಹಿಂದೆ ಶಿನ್ಕಾನ್ಸೆನ್ ರೈಲಿನ ಅಲ್ಪೊ-ಎಕ್ಸ್ ಪ್ರತಿಯಾದ ಈ ಬುಲೆಟ್ ಟ್ರೈನ್ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಇದೀಗ ಇದು ಅಂತಿಮ ಹಂತದಲ್ಲಿದ್ದು ಶುಕ್ರವಾರ ಪರೀಕ್ಷಾರ್ಥ ಓಡಾಟಕ್ಕಾಗಿ ಟ್ಯ್ರಾಕ್ಗೆ ತರಲಾಗಿದೆ. 2030ರಲ್ಲಿ ಬುಲೆಟ್ ರೈಲು ಸಾರ್ವಜನಿಕ ಸಾರಿಗೆಗೆ ಸೂಕ್ತ ಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ಹಂತದಲ್ಲಿ 360ಕಿಮೀ ವೇಗದಲ್ಲಿ ಓಡಲಿದೆ. ಜಗತ್ತಿನ ಅತೀ ವೇಗದ ಟ್ರೈನ್ ಇದಾಗಲಿದೆ. 360ಕಿಲೊಮೀಟರ್ ವೇಗದಲ್ಲಿ ಓಡಿದರೂ ಚೀನದ ಅತಿ ವೇಗದ ರೈಲು ಪುಕ್ಸಿಂಗ್ನಿಗಿಂತ ಹತ್ತು ಕಿಲೋಮೀಟರ್ ಹೆಚ್ಚು ವೇಗ ಜಪಾನ್ನ ಅಲ್ಫಾ- ಎಕ್ಸ್ನದ್ದಾಗಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ರೈಲಿನಲ್ಲಿ ಒಟ್ಟು ಹತ್ತು ಬೋಗಿಗಳಿವೆ. ಜಪಾನ್ನ ಸೆಂದಾಯಿ-ಅವ್ಮೊರಿ ಟ್ರಾಕ್ನಲ್ಲಿ ಈ ರೈಲು ಪರೀಕ್ಷಾರ್ಥ ಓಡಾಟ ನಡೆಸಿತು. 280 ಕಿಲೋಮೀಟರ್ ದೂರದ ಈ ಮಾರ್ಗದಲ್ಲಿ ವಾರದಲ್ಲಿ ಎರಡು ಬಾರಿಯಂತೆ ಎರಡು ವಾರಗಳ ಪರೀಕ್ಷಾರ್ಥ ಓಡಾಟ ನಡೆಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.












