ಝಾರ್ಖಂಡ್ ನಲ್ಲಿ ಮುಸ್ಲಿಂ ಯುವಕನ ಕೊಲೆ: ಗಾಢ ಮೌನದಲ್ಲಿ ಪ್ರತಿಪಕ್ಷಗಳು; ವ್ಯಾಪಕ ಆಕ್ರೋಶ

0
2061

ಹೊಸದಿಲ್ಲಿ, ಜೂ. 25: ಝಾರ್ಖಂಡಿನಲ್ಲಿ ಮುಸ್ಲಿಂ ಯುವಕನನ್ನು ಗುಂಪು ಹತ್ಯೆ ನಡೆಸಿದ ಕುರಿತು ಪ್ರತಿಪಕ್ಷಗಳು ಮೌನ ವಹಿಸಿವೆ. ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಝಾದ್ ಭಾವನಾತ್ಮಕವಾಗಿ ಮಾತಾಡಿರುವುದನ್ನು ಹೊರತು ಪಡಿಸಿ ವಿವಿಧ ಪ್ರತಿಪಕ್ಷಗಳು ಮೌನವ್ರತವನ್ನು ಆಚರಿಸುತ್ತಿವೆ. ಪ್ರಧಾನಿ ಮತ್ತು ಝಾರ್ಖಂಡ್ ಮುಖ್ಯಮಂತ್ರಿ ಝಾರ್ಖಂಡಿನ ಕೊಲೆಯನ್ನು ಗಮನಿಸದವರಂತೆ ನಟಿಸುತ್ತಿದ್ದಾರೆ. ರಾಷ್ಟ್ರಪತಿಯ ಭಾಷಣಕ್ಕೆ ವಂದನಾ ನಿರ್ಣಯದ ವೇಳೆ ಹಲವು ವಿಷಯಗಳು ಲೋಕಸಭೆಯಲ್ಲಿ ಚರ್ಚಿಸಲ್ಪಟ್ಟರೂ ಝಾರ್ಖಂಡಿನ ಜನರ ಗುಂಪು ಹತ್ಯೆಯ ಕುರಿತು ಸರಕಾರ, ಪ್ರತಿಪಕ್ಷಗಳ ನಾಯಕರು ಮಾತಾಡಿಲ್ಲ. ತೀವ್ರ ಹಿಂದುತ್ವ ಮತ್ತು ಮೃದು ಹಿಂದುತ್ವ ರಾಜಕೀಯ ಪ್ರತಿಪಕ್ಷದ ದೌರ್ಬಲ್ಯವನ್ನು ಈ ಘಟನೆಯಲ್ಲಿಯೂ ಬಹಿರಂಗಪಡಿಸುತ್ತಿದೆ.

ಇತ್ತೀಚೆಗೆ ಮದುವೆಯಾಗಿದ್ದ ತಬ್ರೀಸ್ ಜಮ್ಸೆಡ್‍ಪುರದಿಂದ ತನ್ನ ಊರಾದ ಸಾರಾಯ್‍ಖೇಲಕ್ಕೆ ಗೆಳೆಯರೊಂದಿಗೆ ಹೋಗುವಾಗ ಜನರ ಗುಂಪು ದಾಳಿ ಮಾಡಿ ಕೊಲೆ ಮಾಡಿದೆ. ಬೈಕ್ ಕಳ್ಳ ಎಂದು ಆರೋಪಿಸಿ ಕಂಭಕ್ಕೆ ಕಟ್ಟಿಹಾಕಿ ಗಂಟೆಗಳ ಕಾಲ ಭಯಾನಕವಾಗಿ ಹೊಡೆದು ಜೈಶ್ರೀರಾಂ, ಜೈಹನುಮಾನ್ ಕೂಗುವಂತೆ ಹೇಳಿ ಹೊಡೆದು ಕೊಂದು ಹಾಕಲಾಗಿದೆ. ಮುಸ್ಲಿಂ ಆಗಿರುವುದರಿಂದ ನನ್ನ ಪತಿಯನ್ನು ಈ ರೀತಿ ಕೊಲೆ ನಡೆಸಲಾಗಿದೆ. ಸಂಬಂಧಿಕರಿಲ್ಲದ ನನಗೆ ಅವರು ಮಾತ್ರ ಇದ್ದರು. ನನಗೆ ನ್ಯಾಯ ಸಿಗಬೇಕೆಂದು ಶಾಹಿಸ್ತಾ ಪರ್ವೀನ್ ಕಣ್ಣೀರುಗೆರೆದು ಹೇಳಿದರು.
ಕಾಂಗ್ರೆಸ್, ಬಿಎಸ್ಪಿ, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಾರ್ಟಿ ನಾಯಕರು ಲೋಕಸಭೆಯಲ್ಲಾಗಲಿ, ಲೋಕಸಭೆಯಿಂದ ಹೊರಗಾಗಲಿ ಈ ವಿಷಯವನ್ನು ಎತ್ತಿಲ್ಲ. ಆದರೆ ದೇಶಾದ್ಯಂತ ಘಟನೆ ಬಹಳ ಆತಂಕದಿಂದ ಚರ್ಚೆಗೊಳಗಾಗುತ್ತಿದೆ. ಝಾರ್ಖಂಡ್ ಗುಂಪು ಹತ್ಯೆಯಲ್ಲಿ ಪೊಲೀಸರ ಲೋಪವನ್ನು ಅಧಿಕಾರಿಗಳು ಸಮ್ಮತಿಸಿದ್ದಾರೆ. ತನಿಖೆಗೆ ವಿಶೇಷ ಪೊಲೀಸರ ತಂಡವನ್ನು ನೇಮಿಸಿದ್ದು ಇಬ್ಬರು ಪೊಲೀಸರನ್ನು ಅಮಾನತುಗೊಳಿಸಿದ್ದಾರೆ. ಇಷ್ಟು ಭೀಕರ ಘಟನೆ ನಡೆದಿದ್ದರೂ ಉನ್ನತ ಸ್ಥರಕ್ಕೆ ಪೊಲೀಸರು ವರದಿ ಸಲ್ಲಿಸಿರಲಿಲ್ಲ.