ನಮಾಝಿಗಳ ಮುಂದಿನಿಂದ ಹಾದು ಹೋಗಬಹುದೇ? ಪ್ರಶ್ನೋತ್ತರ

0
7601

ಪ್ರಶ್ನೋತ್ತರ

ಮೊೈದಿನ್ ಮುಹಮ್ಮದ್, ಮಂಗಳೂರು

ಪ್ರಶ್ನೆ: ನಮಾಝಿಗಳ ಮುಂದಿನಿಂದ ಹಾದು ಹೋಗುವುದರ ವಿಧಿಯೇನು ತಿಳಿಸಿ.

ಉತ್ತರ: ನಮಾಝ್ ಮಾಡುವವ ತನ್ನ ಮುಂದೆ ಒಂದು ಸುತ್ರಃ ಇಡಬೇಕು. ಸುತ್ರಃ ಅಂದರೆ ಸುಜೂದ್ ಮಾಡುವ ಸ್ಥಳದ ಬಳಿ ಎದುರು ಭಾಗದಲ್ಲಿ ಏನಾದರೂ ಒಂದು ವಸ್ತುವನ್ನು ಇರಿಸುವುದು. ಅದರಾಚೆ ಬದಿಯಿಂದ ಯಾರಾದರೂ ಹಾದು ಹೋದರೆ ಅಡ್ಡಿಯಿಲ್ಲ. ಅದರ ಒಳಗಿನಿಂದ ಹಾದು ಹೋಗುವುದು ದೊಡ್ಡ ಪಾಪವಾಗಿದೆ. ಪ್ರವಾದಿ(ಸ) ಹೇಳಿದರು, “ನಮಾಝ್ ಮಾಡುವವನ ಮುಂದಿನಿಂದ ಹಾದುಹೋಗುವುದು ಎಷ್ಟು ದೊಡ್ಡ ಪಾಪವೆಂದು ಯಾರಿಗಾದರೂ ತಿಳಿದಿರುತ್ತಿದ್ದರೆ, ಅವನು ಅದರ ಬದಲು ನಲ್ವತ್ತು ವರ್ಷ, ನಲ್ವತ್ತು ತಿಂಗಳು ಅಥವಾ ನಲ್ವತ್ತು ದಿವಸಗಳ ತನಕ (ಅನಂತರದ ವರದಿಗಾರನಿಗೆ ಸಂಶಯವಿದೆ) ನಿಂತುಕೊಂಡೇ ಇರುವುದು ಉತ್ತಮವಾಗಿತ್ತು.” (ಬುಖಾರಿ, ಮುಸ್ಲಿಮ್, ಅಬೂ ದಾವೂದ್, ತಿರ್ಮಿದಿ, ನಸಾಈ, ಇಬ್ನುಮಾಜ)

ಆದರೆ ಮಕ್ಕಾದಲ್ಲಿರುವ ಮಸ್ಜಿದುಲ್ ಹರಾಮ್‍ನಲ್ಲಿ ಈ ನಿರ್ಬಂಧವಿಲ್ಲ.

ಇನ್ನು ನಮಾಝ್ ಮಾಡುವವನ ಮುಂದಿನಿಂದ ಯಾರಾದರೂ ಹಾದು ಹೋಗುವುದಾದರೆ ಅವನನ್ನು ತಡೆಯುವುದು ಕಡ್ಡಾಯ. ಅಬೂಸಈದ್ ಖುದ್ರೀಯವರ(ರ) ವರದಿಯ ಪ್ರಕಾರ, ಪ್ರವಾದಿ(ಸ) ಹೇಳಿದರು, “ನಿಮ್ಮಲ್ಲಿ ಯಾರಾದರೂ ತನ್ನ ಮುಂದೆ ಸುತ್ರಃ ಮಾಡಿಕೊಂಡು ನಮಾಝ್ ಮಾಡುತ್ತಿರುವಾಗ ಅವನ ಮುಂದಿನಿಂದ ಯಾರಾದರೂ ಹಾದು ಹೋಗಬಯಸಿದರೆ ಅವನನ್ನು ತಡೆಯಬೇಕು. ಅವನು ಕೇಳದಿದ್ದರೆ ಅವನೊಂದಿಗೆ ಜಗಳಾಡಬೇಕು. (ಅಂದರೆ ಕೈಚಾಚಿ ಅವನನ್ನು ತಡೆಯಬೇಕು)” (ಬುಖಾರಿ, ಮುಸ್ಲಿಮ್)

ಇಮಾಮ್ ನವವಿಯವರು ನೈಲುಲ್ ಔತಾರ್‍ನಲ್ಲಿ ಬರೆಯುತ್ತಾರೆ, “ತನ್ನ ಮುಂದೆ ಸುತ್ರಃ ಇಟ್ಟು ನಮಾಝ್ ಮಾಡುವವನು ಅಥವಾ ಜನ ಸಂಚಾರದಿಂದ ಸುರಕ್ಷಿತವಾಗಿರುವ ಸ್ಥಳದಲ್ಲಿ ನಮಾಝ್ ಮಾಡುವವನು ಮಾತ್ರ ತನ್ನ ಮುಂದಿನಿಂದ ಹಾದು ಹೋಗುವವನನ್ನು ತಡೆಯಬಹುದು. ಈ ವಿಷಯದಲ್ಲಿ ಎಲ್ಲರ ಒಮ್ಮತವಿದೆ.”

ಇಂದು ಸಾಮಾನ್ಯವಾಗಿ ಮಸೀದಿಗಳಲ್ಲಿ ನಮಾಝ್ ಮಾಡುವವರ ಮುಂದಿನಿಂದ, ಬಹಳ ದೂರದಿಂದ, ಹಾದು ಹೋಗುವಾಗಲೂ ಕೆಲವರು ತಡೆಯುತ್ತಾರೆ. ಇದು ಸರಿಯಲ್ಲ. ಸುತ್ರಃ ಇರಿಸಿದರಂತೂ ಅದರ ಮಧ್ಯದಿಂದ ಯಾರೂ ಹೋಗಲಾರರು. ಆದರೂ ಯಾರಾದರೂ ಹಾದು ಹೋಗ ಬಯಸಿದರೆ ಅವರನ್ನು ತಡೆಯಬೇಕು. ಇನ್ನು ಸುತ್ರಃ ಇರಿಸದಿದ್ದರೆ ಸುಜೂದ್‍ನ ಸ್ಥಳ ಬಿಟ್ಟು ಅದರ ಮುಂದಿನಿಂದ ಹಾದು ಹೋದರೆ ಅದೇನೂ ತಪ್ಪಲ್ಲ.

ಮಸೀದಿಯಲ್ಲಿ ನಮಾಝಿಗಳ ಮುಂದಿನ ಎಷ್ಟು ಅಂತರದಲ್ಲಿ ಹಾದು ಹೋಗಬಹುದು ಎಂಬ ಪ್ರಶ್ನೆಯೊಂದಕ್ಕೆ ಸೈಯದ್ ಮೌದೂದಿಯವರು ಹೀಗೆ ಉತ್ತರಿಸಿದರು, “ಅದರಲ್ಲಿ ಭಿನ್ನಾಭಿಪ್ರಾ ಯವಿದೆ. ಕೆಲವರ ಅಭಿಪ್ರಾಯ ಪ್ರಕಾರ, ನಲ್ವತ್ತು ಹೆಜ್ಜೆಗಳಷ್ಟು ಅಂತರವಿರಲೇ ಬೇಕು. ಇನ್ನು ಕೆಲವರ ಪ್ರಕಾರ, ಸುಜೂದ್‍ನ ಸ್ಥಳದ ಮುಂದಿನಿಂದ ಹಾದು ಹೋಗುವುದರಲ್ಲಿ ಅಭ್ಯಂತರವಿಲ್ಲ. ಅದಕ್ಕಿಂತ ಹತ್ತಿರದಿಂದ ಹೋಗಬಾರದು.” (ಇಸ್ತಿಫ್ಸಾರಾತ್: ಪುಟ-57)