ಹೂಡೆ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಆರ್ಥಿಕವಾಗಿ ದುರ್ಬಲ ದಲಿತ ಕುಟುಂಬಕ್ಕೆ ನೂತನ ಮನೆ ಹಸ್ತಾಂತರ

0
603

ಸನ್ಮಾರ್ಗ ವಾರ್ತೆ

ಹೂಡೆ: ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಘಟಕದ ವತಿಯಿಂದ ಪಡುತೋನ್ಸೆ-ಗುಜ್ಜರಬೆಟ್ಟಿನಲ್ಲಿ ಆರ್ಥಿಕವಾಗಿ ದುರ್ಬಲರಾದ ದಲಿತ ಕುಟುಂಬಕ್ಕೆ ನೂತನ ಮನೆಯನ್ನು ಶನಿವಾರ ಹಸ್ತಾಂತರಿಸಲಾಯಿತು. ಸರಳ ಕಾರ್ಯಕ್ರಮದಲ್ಲಿ ಮನೆಯ ಕೀಲಿಕೈಯನ್ನು ಡಾ.ಶಹಾನವಾಝ್‌ರವರು ಶುಭಲಕ್ಷ್ಮಿಯವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ‌ ಶಹಾನವಾಝ್‌ರವರು, “ಜಮಾಅತೆ ಇಸ್ಲಾಮಿ ಹಿಂದ್ ದುರ್ಬಲ ಕುಟುಂಬಗಳಿಗೆ ಮನೆಗಳನ್ನು ನಿರ್ಮಾಣ ಮಾಡಿಕೊಡುತ್ತಿರುವುದು ಅತ್ಯಂತ ಪ್ರಶಂಸನೀಯ ಕೆಲಸ. ಜಮಾಅತೆ ಇಸ್ಲಾಮಿ ಹಿಂದ್ ಜನರ ಅಗತ್ಯಕ್ಕಾಗಿ ಮನೆಗಳನ್ನಷ್ಟೇ ನಿರ್ಮಿಸಿ ಕೊಡುವುದಲ್ಲ ಬದಲಾಗಿ ಕೋವಿಡ್’ನ ಸಂದರ್ಭದಲ್ಲಿ ಜನರ ಸಮಸ್ಯೆಗಳನ್ನು ನೀಗಿಸುವಲ್ಲಿ ದೊಡ್ಡ ಪ್ರಮಾಣದಲ್ಲಿ ನೆರವಾಗಿದೆ. ನಿರುದ್ಯೋಗಿಗಳಿಗೆ ಸ್ವದ್ಯೋಗದ ಸಲಕರಣೆಗಳನ್ನು ಒದಗಿಸುವ ಚಟುವಟಿಕೆಗಳನ್ನು ನಡೆಸುತಿದೆ ಹಾಗೂ ವಿವಿಧ ರೀತಿಯಲ್ಲಿ ಸಮಾಜಸೇವೆ ಮಾಡುತ್ತಾ ಬಂದಿದೆ” ಎಂದರು.

ಇನ್ನೊರ್ವ ಅತಿಥಿ ಶ್ರೀ ನಾರಾಯಣ ಮಣೂರು ಅವರು ಮಾತನಾಡಿ ನಾವು ಹೊರಾಟಗಳಲ್ಲಿ ಭಾಗವಹಿಸಿ ಸಮಾಜದ ನೋವುಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಾ ಬಂದಿದ್ದೇವೆ ಆದರೆ ಇಂದು ಇಲ್ಲಿ ಹೊರಾಟದ ಇನ್ನೊಂದು ಮುಖವನ್ನು ನೋಡುತ್ತಿದ್ದೇವೆ. ಜನರ ನೋವುಗಳಿಗೆ ಈ ರೀತಿಯು ಸ್ಪಂದಿಸಬಹುದು ಎಂದು ಜಮಾಅತೆ ಇಸ್ಲಾಮಿ ಹಿಂದ್ ತೋರಿಸಿ ಕೊಟ್ಟಿದೆ. ಜಾತಿಧರ್ಮಗಳ ಮೇರೆಯನ್ನು ಮೀರಿ ಸಮಾಜದ ಕಣ್ಣೀರು ಒರೆಸಿ ಆಸರೆ ಕಲ್ಪಿಸುವುದು ಒಂದು ಹೊರಾಟವೇ ಆಗಿದೆ ಎಂದ ಅವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೋರಾಟದ ಉದ್ದೇಶ ಜನರ ನೋವಿಗೆ ಆಸರೆಯಾಗುವುದೇ ಆಗಿತ್ತು ಎಂದರು.

ಜಮಾಅತೆ ಇಸ್ಲಾಮಿ ಹಿಂದ್ ಹೂಡೆಯಿಂದ ಕಳೆದ ಐದಾರು ವರ್ಷಗಳಲ್ಲಿ ಜಾತಿ-ಧರ್ಮಗಳ ಹಂಗಿಲ್ಲದೆ ನಿರ್ಮಿಸಿ ಕೊಟ್ಟ ಮೂವತ್ತೆರಡು ಮನೆಗಳಲ್ಲಿ ಅಂಚಿಗೆ ತಳ್ಳಲ್ಪಟ್ಟ ದಲಿತ ಸಮುದಾಯದ ಕುಟುಂಬಗಳಿಗೆ ಐದು ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದು ಸಂತೋಷದ ಸಂಗತಿ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ತೋನ್ಸೆ-ಹೂಡೆ ಜಮಾಅತೆ ಇಸ್ಲಾಮಿ ಹಿಂದ್’ನ ಅಧ್ಯಕ್ಷರಾದ ಅಬ್ದುಲ್ ಕಾದರ್ ಅವರು ಮಾತನಾಡಿ ಜನರ ನೋವಿಗೆ ಸ್ಪಂದಿಸುವುದು ನಮ್ಮ ಧಾರ್ಮಿಕ ಬೇಡಿಕೆಯಾಗಿದೆ, ನಮ್ಮ ನೆರೆಯವರು ಆಹಾರ, ಸೂರು ಮತ್ತು ಇತರ ಅಗತ್ಯಗಳಿಗೆ ಪರಿತಪಿಸುತ್ತಿರುವಾಗ ನಿರ್ಲಿಪ್ತರಾಗಿರುವುದು ಧಾರ್ಮಿಕತೆಯಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಇಸ್ಲಾಮಿಕ್ ವೆಲ್ಫೇರ್ ಸೊಸೈಟಿ ಉಡುಪಿ ಇದರ ಜನಾಬ್ ರಿಯಾಝ್ ಅಹಮದ್ ಕುಕ್ಕಿಕಟ್ಟೆ, ತೋನ್ಸೆ ಪಂಚಾಯತ್ ಕಾರ್ಯದರ್ಶಿ ಶ್ರೀ ದಿನಕರ್ ಬೇಂಗ್ರೆ, ಶ್ರೀ ಸತೀಶ್ ಮಲ್ಪೆ, ಪಂಚಾಯತ್ ಸದಸ್ಯರಾದ ಶ್ರೀಮತಿ ಸುಝನಾ ಡಿಸೋಝಾ, ಮಾತನಾಡಿದರು. ಪಂಚಾಯತ್ ಸದಸ್ಯರಾದ ಶ್ರೀ ವಿಜಯ ಪಡುಕುದ್ರು, ಶ್ರೀ ಮಹೇಶ್ ಹೂಡೆ, ಶ್ರೀಮತಿ ಕುಸುಮ ಗುಜ್ಜರಬೆಟ್ಟು, ಕುಮಾರಿ ಆಶಾ ತಿಮ್ಮಣ್ಣಕುದ್ರು, ಶ್ರೀಮತಿ ಯಶೋದ ಕೆಮ್ಮಣ್ಣು, ಎಚ್.ಆರ್.ಎಸ್’ನ ಹಸನ್ ಕೋಡಿಬೇಂಗ್ರೆ, ಝೈನುಲ್ಲಾ ಹೂಡೆ, ಎಸ್.ಐ.ಓ ಜಿಲ್ಲಾಧ್ಯಕ್ಷ ಅಫ್ವಾನ್ ಹೂಡೆ, ಮನೆಯನ್ನು ಪಡೆದ ಶ್ರೀಮತಿ ಶುಭಲಕ್ಷ್ಮಿ ಇನ್ನಿತರರು ಉಪಸ್ಥಿತರಿದ್ದರು. ಮೌಲಾನಾ ತಾರೀಕ್ ಕುರಾನ್ ಪಠಿಸಿದರು. ಸಾಲಿಡಾರಿಟಿ ಯೂತ್ ಮೂಮೆಂಟ್’ನ ಯಾಸೀನ್ ಕೋಡಿಬೇಂಗ್ರೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.