ಸನ್ಮಾರ್ಗ ವಾರ್ತೆ-
ಬೆಂಗಳೂರು, ಡಿ.10: ದೇಶದ ಸಂವಿಧಾನ ಕೊಡಮಾಡುವ ಸಮಾನತೆಯ ಹಕ್ಕಿಗೆ ಪೌರತ್ವ ಮಸೂದೆ ಸವಾಲಾಗಿದ್ದು ಇದು ಸಂಪೂರ್ಣ ತಾರತಮ್ಯದಿಂದ ಕೂಡಿದೆ ಮತ್ತು ದೇಶದ ನಾಗರಿಕರನ್ನು ಧರ್ಮದ ನೆಲೆಯಲ್ಲಿ ವಿಭಜಿಸುತ್ತಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ಅದ್ಯಕ್ಷ ಡಾ. ಬೆಳಗಾಮಿ ಮುಹಮ್ಮದ್ ಸಾದ್ ಹೇಳಿದ್ದಾರೆ. ಧರ್ಮ, ಜಾತಿ, ಕುಲಗಳ ಹೆಸರಿನಲ್ಲಿ ಜನರ ನಡುವೆ ಪ್ರತ್ಯೇಕತೆ ಸೃಷ್ಟಿಸಿ ದ್ವೇಷವನ್ನು ಉಂಟುಮಾಡಿ ರಾಕೀಯ ಲಾಭ ಎತ್ತುವ ಶ್ರಮ ಇದು. ಮುಸ್ಲಿಮರನ್ನು ಹೊರಿಗಿನವರೆಂದು ಘೋಷಿಸುವ ಯೋಜನೆಯಿದು. ಪೌರತ್ವ ಮಸೂದೆಯ ವಿರುದ್ಧ ಪ್ರಭಲ ಪ್ರತಿಭಟನೆಯು ಈಶಾನ್ಯ ರಾಜ್ಯಗಳಲ್ಲಿ ನಡೆದದ್ದರಿಂದ ಆ ರಾಜ್ಯಗಳನ್ನು ಈ ಪೌರತ್ವ ಪಟ್ಟಿಯಿಂದ ಹೊರಗಿಡಲಾಗುತ್ತಿದೆ. ನಮ್ಮಲ್ಲೂ ಈ ಬಗೆಯ ಪ್ರತಿರೋಧ ಉಂಟಾದರೆ ಕೇಂದ್ರ ತನ್ನ ನಿಲುವನ್ನು ಬದಲಿಸಿಕೊಳ್ಳಬಹುದು ಎಂದವರು ಹೇಳಿದ್ದಾರೆ.
ಸರಕಾರದ ಖಜಾನೆಯಿಂದ 1600 ಕೋಟಿ ರೂಪಾಯಿ ತೆತ್ತು ಆರು ವರ್ಷಗಳಲ್ಲಿ ಜಾರಿಗೊಳಿಸಲಾದ ಅಸ್ಸಾಂ ಪೌರತ್ವ ಪಟ್ಟಿಯು ಈಗ ನಿರುಪಯೋಗಿ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಆದ್ದರಿಂದ ಈ ಪೌರತ್ವ ಮಸೂದೆಯಂತೆ ಮತ್ತೆ ಏನ್ ಆರ್ ಸಿ ಮಾಡಲಾಗುತ್ತದೆ. ಇದರ ಏಕೈಕ ಉದ್ದೇಶ ಏನೆಂದರೆ, ಮುಸ್ಲಿಮರನ್ನು ಮಾತ್ರ ಅಸ್ಸಾಮ್ ನಿಂದ ಹೊರಹಾಕಿ ಉಳಿದವರನ್ನೆಲ್ಲಾ ಉಳಿಸಿಕೊಳ್ಳುವುದು. ದೇಶ ಎದುರಿಸುತ್ತಿರುವ ಬೆಲೆಯೇರಿಕೆ, ಆರ್ಥಿಕ ಮಾಂದ್ಯ ಇತ್ಯಾದಿ ಗಂಭೀರ ಸಮಸ್ಯೆಗಳನ್ನು ಬದಿಗೆ ಸರಿಸಿ ಕೋಮು ಧ್ರುವೀಕರಣ ನಡೆಸಿ ರಾಜಕೀಯ ಲಾಭವೆತ್ತಲು ಸರಕಾರ ಗುರಿಯನ್ನು ಇರಿಸಿಕೊಂಡಿದೆ. ಬಹುದೊಡ್ಡ ಜನವಿಭಾಗವನ್ನು ಸಂದೇಹದ ಮೊನೆಯಲ್ಲಿರಿಸುವ ಆಡಳಿತಕೂಟದ ವಿರುದ್ಧ ನಾಗರಿಕ ಸಮಾಜ ಜೊತೆಗೂಡಿ ಧ್ವನಿ ಎತ್ತಬೇಕು ಎಂದು ಡಾ. ಸಾದ್ ಬೆಳಗಾಮಿ ಆಗ್ರಹಿಸಿದ್ದಾರೆ.












