ಸನ್ಮಾರ್ಗ ವಾರ್ತೆ
ಲಕ್ನೊ,ಅ.22: ಇತ್ತೀಚೆಗೆ ಹತ್ಯೆಯಾದ ಹಿಂದೂ ಸಮಾಜ ಪಾರ್ಟಿ ನಾಯಕ ಕಮಲೇಶ್ ತಿವಾರಿಯ ಅಸ್ಥಿಕಲಶದೊಂದಿಗೆ ಗಂಗಾ ನದಿಯಲ್ಲಿ ವಿಸರ್ಜನೆಗೆ ಬಂದಾಗ ಉತ್ತರ ಪ್ರದೇಶದ ಯೋಗಿ ಸರಕಾರವನ್ನು ಮಾತ್ರವಲ್ಲ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ರಕರ್ತರು ಪ್ರಧಾನಿಯ ಸಂಸದೀಯ ಕ್ಷೇತ್ರದ ಬಗ್ಗೆ ಏನು ಹೇಳ ಬಯಸುತ್ತೀರಿ ಎಂದು ಪ್ರಶ್ನಿಸಿದಾಗ ಕಮಲೇಶ್ ತಿವಾರಿಯ ತಾಯಿ ಕುಸುಮ್ ತಿವಾರಿ ಆಕ್ರೋಶ ಗೊಂಡರು.
“ಮೋದಿಜಿ ಅವರು ಎಲ್ಲಿಯೇ ಇರಲಿ. ಮೋದಿ ನಮ್ಮ ದೇವರಲ್ಲ. ನಾವು ಮೋದಿಜಿಯಿಂದ ಸಂತೃಪ್ತರಲ್ಲ. ಇಪ್ಪತ್ತನಾಲ್ಕು ಗಂಟೆಯೊಳಗೆ ಕೊಲೆಗಡುಕರನ್ನು ಬಂಧಿಸುವೆವು ಎನ್ನಲಾಯಿತು. ಆದರೆ ನಾಲ್ಕು ದಿವಸ ಆಗಿದೆ. ಇನ್ನೂ ಬಂಧನವಾಗಿಲ್ಲ” ಎಂದು ಕುಸುಮ್ ತಿವಾರಿ ಹೇಳಿದರು.
ತಾನು ಪೊಲೀಸರ ರಕ್ಷಣೆಯಲ್ಲಿ ವಾರಣಾಸಿಗೆ ಬಂದೆ. ತನ್ನ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿದೆ. “ನನ್ನ ಹಿಂದೆ ಎಷ್ಟು ಪೊಲೀಸರಿದ್ದಾರೆ ಅಷ್ಟು ದುಷ್ಕರ್ಮಿಗಳ ಹಿಂದಿರುತ್ತಿದ್ದರೆ ಕಮಲೇಶ್ ಕೊಲೆ ಆರೋಪಿಗಳನ್ನು ಬಂಧಿಸಬಹುದಾಗಿತ್ತು” ಎಂದು ಹೇಳಿದರು.
ಇಬ್ಬರು ಪೊಲೀಸರು ತನ್ನ ಮಗನೊಂದಿಗಿರುತ್ತಿದ್ದರೆ ಇಂದು ತನ್ನೊಂದಿಗೆ ಪುತ್ರ ಇರುತ್ತಿದ್ದ. ಆದರೆ ನಮ್ಮ ಮೇಲೆಯೇ ನಿಗಾ ಇರಿಸಲಾಗಿದೆ ಎಂದು ಕಮಲೇಶ್ ತಾಯಿ ರೋಷ ವ್ಯಕ್ತಪಡಿಸಿದರು. “ಒಂದು ವೇಳೆ ನಾನು ಏನಾದರೂ ಹೇಳಿದರೆ, ನನ್ನ ಮಗನಿಗಾಗಿದ್ದು ನನಗೂ ಸಂಭವಿಸಬಹುದು. ನೀವು ಸ್ವಲ್ಪ ಇರಿ, ನಾಲ್ಕು ದಿವಸ ಕಳೆಯಲಿ ಎಲ್ಲ ಹೇಳುವೆ” ಎಂದು ಕುಸುಮ್ ತಿವಾರಿ ಮಾಧ್ಯಮಗಳಿಗೆ ಹೇಳಿದರು.
ಇದೇ ವೇಳೆ, ಹಿಂದೂ ಸಮಾಜ ಪಾರ್ಟಿ ತನ್ನ ನಾಯಕ ರಾಜೇಶ್ ಮಣಿ ತ್ರಿಪಾಠಿ ಹತ್ಯೆ ಆರೋಪಿಗಳನ್ನು ಎರಡು ದಿವಸಗಳೊಳಗೆ ಬಂಧಿಸದಿದ್ದರೆ ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ಉತ್ತರಪ್ರದೇಶ ಸರಕಾರಕ್ಕೆ ಎಚ್ಚರಿಕೆ ನೀಡಿದೆ.












