ಕನ್ಯತ್ವ ಪರೀಕ್ಷೆ ಎಂಬ ಅನಾಚಾರ

0
1780

✒ಎ.ಎಸ್. ದೇರಳಕಟ್ಟೆ

ನಾಲ್ಕು ನೂರು ವರ್ಷಗಳ ಹಿಂದಿನ ಕನ್ಯತ್ವ ಪರೀಕ್ಷೆ ಎಂಬ ಅನಾಚಾರ ಇಂದು ಕೂಡ ಚಾಲ್ತಿಯಲ್ಲಿರುವುದು ಆಧುನಿಕ ಸಮಾಜಕ್ಕೆ  ಅಂಟಿರುವ ಮಾರಕ ರೋಗ ಎಂದು ಹೇಳಬಹುದು. ಇತ್ತೀಚಿಗೆ ಎರಡು ದೇಶಗಳಲ್ಲ್ಲಿ ನಡೆದ ಎರಡು ಘಟನೆಗಳು ಸುಶಿಕ್ಷಿತ ಮತ್ತು ಸುಸಂಸ್ಕೃತ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ. ಘಟನೆ ಒಂದು, ನೆರೆಮನೆಯ ನವ ವಧುವಿನ ಕೂಗು ಕೇಳಿ ಅಂದು ಮುಂಜಾನೆ ಪ್ರಿಯಾಂಕ ತನ್ನ ನಿದ್ರೆಯಿಂದ ಬೆಚ್ಚಿಬಿದ್ದಳು.

ಮಹಾರಾಷ್ಟ್ರದ ಕಂಜಾರ್ ಭಾಟ್ ಸಮುದಾಯದ ಪ್ರತಿಯೊಬ್ಬನಿಗೂ ಆ ವಧುವಿನ ಅಳುವಿನ ಹಿಂದಿನ ಗುಟ್ಟು ತಿಳಿದಿತ್ತು. ದೌರ್ಭಾಗ್ಯವತಿಯಾದ ಆ ಹುಡುಗಿ ತನ್ನ ಕನ್ಯತ್ವ ಪರೀಕ್ಷೆಯಲ್ಲಿ ಪರಾಜಯಗೊಂಡಿದ್ದಾಳೆ. ವಿವಾಹದ ಪ್ರಥಮ ರಾತ್ರಿ ದಂಪತಿಗಳ ಮಿಲನದ ಸಂದರ್ಭದಲ್ಲಿ ವಧುವಿನ ಕನ್ಯತ್ವ ಪರೀಕ್ಷೆ ಎಂಬ ಸುಮಾರು ನಾಲ್ಕು ನೂರು ವರ್ಷಗಳಷ್ಟು ಪ್ರಾಚೀನವಾದ ಆಚಾರವನ್ನು ನಡೆಸಲಾಗುತ್ತದೆ. ಈ  ಆಚಾರದಲ್ಲಿ ದಂಪತಿಗಳು ಲೈಂಗಿಕ ಕ್ರಿಯೆಯಲ್ಲಿ ಏರ್ಪಟ್ಟು ವಧುವಿನ ಕಡೆಯಿಂದ ರಕ್ತ ಚಿಮ್ಮದೇ ಇದ್ದಲ್ಲಿ ವಧು ಕನ್ಯೆಯಲ್ಲ ಎಂಬ ನಿಲುವು  ತಾಳಲಾಗುತ್ತದೆ. ಪ್ರಿಯಾಂಕ ಸೇರಿದಂತೆ ನಲ್ವತ್ತರಷ್ಟು ಮಂದಿ ಈ ಅನಾಚಾರದ ವಿರುದ್ಧ “ಸ್ಟಾಪ್ ದ ವಿ ರಿಚ್ಯುವಲ್” ಎಂಬ ವಾಟ್ಸ್ ಆಪ್  ಗ್ರೂಪನ್ನು ಹುಟ್ಟು ಹಾಕಿ ಈ ಅನಾಚಾರವನ್ನು ನಿರ್ಮೂಲನ ಮಾಡುವಂತೆ ದ್ವನಿಯೆತ್ತಿದ್ದಾರೆ.

ಘಟನೆ ಎರಡು, ಮಹಿಳಾ ಪೊಲೀಸ್ ನೇಮಕಾತಿ ವೇಳೆ ಕನ್ಯತ್ವ ಪರೀಕ್ಷೆ. ಮಹಿಳಾ ಸಬಲೀಕರಣ, ಮಹಿಳಾ ಸಮಾನತೆ, ಮಹಿಳಾ ಹಕ್ಕುಗಳ  ಬಗ್ಗೆ ಹೋರಾಟ ನಡೆಯುತ್ತಿರುವ ಇಂದಿನ ಕಾಲದಲ್ಲೂ ಸಮಾಜದ ಸಂಕುಚಿತ ಮನೋಭಾವಗಳು ಮಾತ್ರ ಹಾಗೇ ಉಳಿದಿವೆ ಎಂಬುದಕ್ಕೆ  ಇಂಡೋನೇಶ್ಯಾದಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿ. ಅಲ್ಲಿ ಮಹಿಳಾ ಪೊಲೀಸ್ ನೇಮಕಾತಿ ಸಂದರ್ಭದಲ್ಲಿ ಅಭ್ಯರ್ಥಿಗಳ ಕನ್ಯತ್ವ  ಪರೀಕ್ಷೆಯನ್ನು ನಡೆಸಲಾಗುತ್ತದೆ. ಅದರಲ್ಲೂ ಅತ್ಯಂತ ಅಮಾನವೀಯ ಎಂದೇ ಪರಿಣಿಸಲ್ಪಟ್ಟಿರುವ ಟೂ ಫಿಂಗರ್ ಟೆಸ್ಟ್ ನಡೆಸಿ ಯುವತಿಯ  ಕನ್ಯಾ ಪೊರೆ ಹರಿದಿದೆಯೋ ಇಲ್ಲವೋ ಎಂಬುದನ್ನೂ ಪರೀಕ್ಷಿಸಲಾಗಿದೆ. ಆಕ್ಟಿವ್ ಸೆಕ್ಸ್ ಲೈಫ್ ಹೊಂದಿರುವ ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಸಮಾಜ ಒಪ್ಪಿಕೊಳ್ಳುವುದಿಲ್ಲ ಎಂಬುದು ಇಂಡೋನೇಶ್ಯನ್ ಪೊಲೀಸ್ ಇಲಾಖೆಯ ಬಲವಾದ ನಂಬಿಕೆ. ಇದಕ್ಕಾಗಿಯೇ ಇಷ್ಟೆಲ್ಲಾ ಕಸರತ್ತುಗಳನ್ನು ನಡೆಸಲಾಗಿದೆ.

ಇದೇ ವೇಳೆ ಪರೀಕ್ಷೆಯಲ್ಲಿ ಪರಾಜಿತಗೊಂಡ ಯುವತಿಯೊಬ್ಬಳು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಸಣ್ಣಂದಿನಿಂದಲೂ ಅಥ್ಲೀಟ್ ಆಗಿರುವ ನಾನು ಮಾರ್ಷಲ್ ಆರ್ಟನ್ನೂ ಕಲಿಯುತ್ತಿದ್ದೇನೆ. ಆದ್ದ ರಿಂದಲೇ ನನ್ನ ಕನ್ಯಾಪೊರೆ ಹರಿದಿರಬಹುದು  ಎಂದು ಹೇಳಿದ್ದಾರೆ. ಆರನೆಯ ಶತಮಾನದಲ್ಲಿ ಚಾಲ್ತಿಯಲ್ಲಿದ್ದಂತಹ ಹತ್ತು ಹಲವು ಅನಾಚಾರಗಳು ಇಪ್ಪತ್ತೊಂದನೆಯ ಶತಮಾನದಲ್ಲೂ ಮುಂದುವರಿಯುತ್ತಿರುವುದು ಆಧುನಿಕ ಸಮಾಜಕ್ಕೆ ಅಂಟಿದ ಕಳಂಕ ಎನ್ನದೆ ವಿಧಿಯಿಲ್ಲ. ಏಕೆಂದರೆ ಅಜ್ಞಾನ ಕಾಲದಲ್ಲಿ ಮನುಷ್ಯರು ಅನಾಗರಿಕರು, ಅಸಂಸ್ಕೃತರು ಮತ್ತು ಅನಕ್ಷರಸ್ಥರಾಗಿದ್ದರು.

ಆದ್ದರಿಂದಲೇ ಅವರನ್ನು ಸಂಸ್ಕರಿಸಲು ಮತ್ತು ಅವರಿಗೆ ಸತ್ಯ ಮತ್ತು ಮಿಥ್ಯದ ಅರಿವು ಮೂಡಿಸಲು ಕಾಲ  ಕಾಲಕ್ಕೆ ಪ್ರವಾದಿಗಳು, ಸಾದು ಸಂತರು ಮತ್ತು ಋಷಿ ಮುನಿಗಳು ಆಗಮಿಸಿದ್ದರು. ಅವರ ಶಿಕ್ಷಣ ಮತ್ತು ಬೋಧನೆ ಮನುಷ್ಯನನ್ನು ಸುಶಿಕ್ಷಿತನನ್ನಾಗಿ ಮಾಡಿದೆ. ಆದರೆ ಇಂದು ಮನುಷ್ಯನಿಗೆ  ಜ್ಞಾನೋದಯವಾಗಿದ್ದರೂ, ಮನುಷ್ಯನು ಸಮಾಜದ ಮುಖ್ಯಧಾರೆಗೆ ಬಂದು  ಆಧುನಿಕ ತಂತ್ರಜ್ಞಾನದ ಸುಳಿಗೆ ಸಿಲುಕಿ ವಿಲ ವಿಲನೆ ಒದ್ದಾಡುತ್ತಿದ್ದರೂ, ಅವನು ಸಬಲನಾಗಿದ್ದರೂ ಕುರುಡನು ಕತ್ತಲಲ್ಲಿ  ತಡಕಾಡುತ್ತಿರುವಂತೆ ಅಂಧಕಾರದಲ್ಲಿ ಒದ್ದಾಡುವುದು ದೊಡ್ಡ ದುರಂತವಾಗಿದೆ.

ಅಂದಿನ ಕಾಲದಲ್ಲಿ ಆರಾಧನಾ ಮಂದಿರಗಳಲ್ಲಿ ಪ್ರತಿಷ್ಠಾ ಪಿಸಿದ ದೇವ ದೇವತೆಗಳ ವಿಗ್ರಹಗಳೆದುರು ನಗ್ನ ಪ್ರದಕ್ಷಿಣೆ ಮಾಡುತ್ತಿದ್ದರೆ ಇಂದು ಕೂಡ ಭಾರತದ ಕೆಲವು ರಾಜ್ಯಗಳಲ್ಲಿ ಈ ಆಚಾರ ಚಾಲ್ತಿಯಲ್ಲಿದೆ. ಬಲಿ ಪೀಠಗಳು, ದಾಳ ಹಾಕುವುದು, ಜ್ಯೋತಿಷ್ಯ, ಮಾಟ, ಮಂತ್ರ ಮುಂತಾದ ಅನಾಚಾರಗಳು ಎಲ್ಲ ಧರ್ಮಗಳಲ್ಲೂ ನಿಷಿ ದ್ಧವೆಂದು ಸಾರಿವೆ ಮಾತ್ರವಲ್ಲ ಅವು ಮನುಷ್ಯನನ್ನು ಅಧೋಗತಿಗೆ ತಳ್ಳುತ್ತವೆಯೆಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಪೂರಕವೆಂಬಂತೆ  ಇತ್ತೀಚಿಗೆ ನಡೆದ ಎರಡು ಘಟನೆಗಳು ಸುಶಿಕ್ಷಿತ ಮತ್ತು ಸುಸಂಸ್ಕೃತ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ. ನಿಜವಾಗಿ ಅತ್ಯಾಚಾರ, ವರದಕ್ಷಿಣಾ ಪೀಡನೆ, ಅಸಿಡ್ ಧಾಳಿ, ಕನ್ಯತ್ವ ಪರೀಕ್ಷೆ ಮುಂತಾದ ಹೆಣ್ಣಿನ ಮೇಲೆ ನಡೆಯುವ ಅನೈತಿಕ  ಚಟುವಟಿಕೆಗಳು ಸಮಾಜದಲ್ಲಿರುವುದಾದರೆ ಆ ಸಮಾಜವು ಅರೋಗ್ಯಪೂರ್ಣ ಸಮಾಜವಾಗಲು ಸಾಧ್ಯವಿಲ್ಲ.

ಹೆಣ್ಣನ್ನು ಗೌರವಿಸಲು  ಧರ್ಮವು ಕಲಿಸಿಕೊಟ್ಟಿತು. ಹೆಣ್ಣು ಸಮಾಜದ ಕಣ್ಣು, ಮನೆಗೆ ಐಶ್ವರ್ಯ ಎಂದೆಲ್ಲ ಇಂದು ಸಮಾಜದಲ್ಲಿ ಪ್ರವಚನ ನೀಡುವವರೂ ಕೂಡ  ಇಂತಹ ಅತಿರೇಕಗಳಿಗೆ ಪೂರ್ಣ ವಿರಾಮ ಹಾಕುವ ಸಮಯವು ಕಳೆದು ಹೋಗಿದೆ. ಸಂವಿಧಾನದ 21 ನೇ ವಿಧಿಯ ವ್ಯಾಖ್ಯಾನವು ದೇಶದ  ಪ್ರತಿಯೊಬ್ಬ ಪ್ರಜೆಯ ಜೀವ ಮತ್ತು ವೈಯಕ್ತಿಯ ಸ್ವಾತಂತ್ರ್ಯವನ್ನು ಖಾತ್ರಿಪಡಿಸುತ್ತದೆ. ಇಂದು ಓರ್ವ ಮಹಿಳೆಯನ್ನು ದೈಹಿಕವಾಗಿ ಕನ್ಯತ್ವ  ಪರೀಕ್ಷೆಯ ನೆಪದಲ್ಲಿ ಪೀಡನೆಗೈಯುವುದಾದರೆ ಅದು ಆಕೆಯ ಘನತೆಯನ್ನು ಮತ್ತು ಗೌರವವನ್ನು ಕುಗ್ಗಿಸುವಂತಹ ಪ್ರಕ್ರಿಯೆಯಾಗಿದೆ.  ಆದುದರಿಂದ ವ್ಯವಸ್ಥೆ ಮತ್ತು ಸಮಾಜ ಎಚ್ಚೆತ್ತುಕೊಳ್ಳಬೇಕಿದೆ.