ಮಂಗಳೂರಿನ ಆಸ್ಪತ್ರೆಗೆ ಹೋಗಲಾಗದೆ ಕಾಸರಗೋಡಿನ ಇಬ್ಬರು ಮೃತ್ಯು

0
619

ಸನ್ಮಾರ್ಗ ವಾರ್ತೆ

ಕಾಸರಗೋಡು, ಎ.1: ಚಿಕಿತ್ಸೆಗಾಗಿ ಮಂಗಳೂರನ್ನು ಆಶ್ರಯಿಸಿದ್ದ ಇಬ್ಬರು ರೋಗಿಗಳು ಕಾಸರಗೋಡು ಜಿಲ್ಲೆಯಲ್ಲಿ ಮೃತರಾಗಿದ್ದಾರೆ. ಮಂಜೇಶ್ವರ ತೂಮಿನಾಡು ಮಹಾಬಲಶೆಟ್ಟಿಯ ಪತ್ನಿ ಬೇಬಿ (59), ಹೊಸಬೆಟ್ಟು ಗುಡ್‍ಕೆರಿಯ ಶೇಖರ್ (50) ಅವರು ಸೂಕ್ತ ಚಿಕಿತ್ಸೆಯ ಅಲಭ್ಯತೆಯಿಂದಾಗಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬೇಬಿಯವರು ರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಇವರನ್ನು ಮಂಗಳೂರಿಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ ಎಂದು ಸಂಬಂಧಿಕರು ತಿಳಿಸಿದ್ದಾರೆ. ನಂತರ ಕುಂಬಳೆಯ ಸಹಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅವರು ಬದುಕಿ ಉಳಿಯಲಿಲ್ಲ.

ಶೇಖರ್ ಗೆ ರಾತ್ರೆ ಅಸೌಖ್ಯ ಕಾಣಿಸಿಕೊಂಡಿತ್ತು. ಮಂಗಳೂರಿಗೆ ಕರೆದುಕೊಂಡು ಹೋಗಲು ಪ್ರಯತ್ನಿಸಲಾಯಿತು. ಗಡಿಯಲ್ಲಿ ಹೋಗಲು ಬಿಡುವುದಿಲ್ಲ ಎಂದು ಆಂಬುಲೆನ್ಸ್ ಚಾಲಕರು ತಿಳಿಸಿದರು. ನಂತರ ಆಟೋದಲ್ಲಿ ಉಪ್ಪಳದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ರೋಗ ಉಲ್ಬಣಿಸಿದ್ದರಿಂದ ಮಂಗಳೂರಿಗೆ ಕೊಂಡು ಹೋಗಲು ವೈದ್ಯರು ಸೂಚಿಸಿದರು. ಬೆಳಗ್ಗೆ ಕರೆದುಕೊಂಡು ಹೋಗುವುದಕ್ಕೆ ನಿರ್ಧರಿಸಲಾಗಿತ್ತು. ಆದರೆ ಅಷ್ಟರಲ್ಲಿಯೇ ಶೇಖರ್ ಮೃತಪಟ್ಟಿದಾರೆ.

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.