ಸನ್ಮಾರ್ಗ ವಾರ್ತೆ
ಮಂಗಳೂರು, ಮಾರ್ಚ್ 31- ಮೂರು ದಿನಗಳ ಸಂಪೂರ್ಣ ಬಂದ್ ನಿಂದ ಇವತ್ತು ಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲೆ ಹೊರಬಂದಿದ್ದು, ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಇವತ್ತು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಬಂದ್ ಸಡಿಲಿಕೆ ಮಾಡಲಾಗಿದ್ದು, ಬೆಳಿಗ್ಗೆ 7 ಗಂಟೆಯ ಹೊತ್ತಿಗೆ ಭಾರಿ ಸಂಖ್ಯೆಯಲ್ಲಿ ಜನರು ಅಗತ್ಯ ವಸ್ತುಗಳ ಖರೀದಿಗಾಗಿ ಅಂಗಡಿಯ ಮುಂಭಾಗದಲ್ಲಿ ನಿಂತಿದ್ದಾರೆ. ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ಕಿಲೋಮೀಟರುಗಟ್ಟಲೆ ಜನರು ಸರತಿ ಸಾಲಲ್ಲಿ ನಿಂತಿದ್ದು, ಸೆಂಟ್ರಲ್ ಮಾರುಕಟ್ಟೆ ಯಲ್ಲೂ ಖರೀದಿ ಜೋರಾಗಿದೆ.
ಅದೇವೇ, ಗ್ರಾಹಕರ ಅನುಕೂಲಕ್ಕಾಗಿ ಮಲ್ಲಿಕಟ್ಟೆ ಮಾರುಕಟ್ಟೆಯಲ್ಲಿ ಕುರ್ಚಿಗಳನ್ನು ಇಡಲಾಗಿದೆ.ಎಲ್ಲರಿಗೂ ಚೀಟಿಯನ್ನು ಕೊಟ್ಟು ನೂಕುನುಗ್ಗಲು ಆಗದಂತೆ ತಡೆಯುವ ಪ್ರಯತ್ನವನ್ನು ಕೂಡ ಮಾಡಲಾಗಿದೆ. ನಗರ ಪಾಲಿಕೆಯ ಅಧಿಕಾರಿಗಳು ಖುದ್ದು ಸ್ಥಳದಲ್ಲಿ ನಿಂತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಮತ್ತು ಸುಸೂತ್ರವಾಗಿ ಖರೀದಿ ವ್ಯವಹಾರಗಳು ನಡೆಯುವಂತೆ ನೋಡಿಕೊಳ್ಳುತ್ತಿದ್ದಾರೆ. ಮಂಗಳೂರಲ್ಲಿ ನಾಲ್ಕೈದು ಮಾರುಕಟ್ಟೆಗಳು ತೆರೆದಿದ್ದು ಇದೇ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ. ಒಂದು ಮನೆಯಿಂದ ಒಬ್ಬರು ಮಾತ್ರ ಹೊರಗೆ ಬಂದು ಖರೀದಿಸಬೇಕು ಎನ್ನುವ ನಿಯಮವನ್ನು ಮಾಡಲಾಗಿದ್ದು ಇತರ ಕಡೆ ಕೂಡ ಈ ವ್ಯವಸ್ಥೆಯೊಂದಿಗೆ ಖರೀದಿ ವ್ಯವಹಾರಗಳು ನಡೆಯುತ್ತಿರುವುದಾಗಿ ತಿಳಿದು ಬಂದಿದೆ.
ಮೂರು ದಿನದ ಬಂದ್ ನ ಸಮಯದಲ್ಲಿ ಯಾವುದೇ ದಿನಸಿ ಅಂಗಡಿ ಮತ್ತು ತರಕಾರಿಗಳು ಅಂಗಡಿಗಳು ತೆರೆದಿರಲಿಲ್ಲ. ಹಾಲು ಇತ್ಯಾದಿ ಅಗತ್ಯ ವಸ್ತುಗಳು ಮಾತ್ರ ಸಿಗುತ್ತಿತ್ತು. ಆದ್ದರಿಂದ ಇವತ್ತು ಮಾರುಕಟ್ಟೆ ತೆರೆದ ಕೂಡಲೇ ಜನರು ಧಾವಿಸಿ ಬಂದು ಖರೀದಿಯಲ್ಲಿ ನಿರತರಾಗಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪುಟವನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












