ದಿಲ್ಲಿ ಗಲಭೆ: ಕೇಜ್ರಿವಾಲ್ ತಿರುಗಿ ನೋಡಿಲ್ಲ- ಮಾನವಹಕ್ಕು ಕಾರ್ಯಕರ್ತರು; ಕೇವಲ ಶಿವ ವಿಹಾರವೊಂದರಲ್ಲೇ 1000ಕ್ಕೂ ಹೆಚ್ಚು ಗಲಭೆ ಪೀಡಿತರು

0
2215

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ. 3: ಗಲಭೆ ನಡೆಯುವಾಗ ಮಾತ್ರವಲ್ಲ ಅದಾಗಿಯೂ ಬಲಿಪಶುಗಳತ್ತ ಕೇಜ್ರಿವಾಲ್ ಮತ್ತು ಸರಕಾರ ತಿರುಗಿ ನೋಡಿಲ್ಲ. ಬಲಿಪಶುಗಳಿಗೆ ಚಿಕಿತ್ಸೆ, ಆಹಾರ, ವಾಸ್ತವ್ಯ ಮುಂತಾದ ಸೌಕರ್ಯಗಳನ್ನು ಈವರೆಗೆ ಸರಿಯಾಗಿ ನೀಡಲಾಗಿಲ್ಲ ಎಂದು ಗಲಭೆ ಪೀಡಿತ ಪ್ರದೇಶಗಳಿಗೆ ಹೋಗಿ ಬಂದ ಮಾನವಹಕ್ಕು ಕಾರ್ಯಕರ್ತರು ತಯಾರಿಸಿದ ಯಥಾಸ್ಥಿತಿ ವರದಿಯಲ್ಲಿ ವಿವರಿಸಲಾಗಿದೆ. ಸರಕಾರ ಬಲಿಪಶುಗಳೊಂದಿಗೆ ಅನ್ಯಾಯ ಮಾಡುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸೋಮವಾರ ಪ್ರೆಸ್ ಕ್ಲಬ್ ಆಫ್ ಇಂಡಿಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವರದಿಯನ್ನು ಬಿಡುಗಡೆಗೊಳಿಸಲಾಗಿದೆ. ಹರ್ಷ ಮಂದರ್, ಅಂಜಲಿ ಭಾರದ್ವಾಜ್, ಆನಿರಾಜ, ಡಾ. ಹರ್ಜಿತ್ ಸಿಂಗ್ ಭಾಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪುನರ್ವಸತಿ ಕೇಂದ್ರಗಳನ್ನು ತೆರೆದು ಆಹಾರ ವಸ್ತು ವಿತರಿಸಲಾಗುತ್ತಿದೆ ಎಂದು ದಿನಾಲೂ ಕೇಜ್ರಿವಾಲ್ ಪತ್ರಿಕಾಗೋಷ್ಠಿಯಲ್ಲಿ ಹೇಳುತ್ತಿದ್ದಾರೆ. ಆದರೆ ಗಲಭೆ ಪೀಡಿತ ಸ್ಥಳಗಳಲ್ಲಿ ಪುನರ್ವಸತಿ ಕೇಂದ್ರ ಒಂದೂ ಕಂಡು ಬಂದಿಲ್ಲ. ಎಲ್ಲ ಕಡೆ ಸರಕಾರೇತರ ಸ್ವಯಂಸೇವಾ ಸಂಘಗಳು, ಗುರುದ್ವಾರಗಳು, ಮಸೀದಿ ಮೊದಲಾದ ಧಾರ್ಮಿಕ ಕೇಂದ್ರಗಳು ಗಲಭೆ ಪೀಡಿತರಿಗೆ ನೆರುವ ನೀಡುತ್ತಿವೆ. ಸರಕಾರಿ ಸಹಾಯ ನಮಗೆ ಸಿಕ್ಕಿಲ್ಲ ಎಂದು ಗಲಭೆ ಪೀಡಿತರು ತಿಳಿಸಿದ್ದಾಗಿ ವರದಿಯಲ್ಲಿದೆ.

ಖಾಸಗಿ ವ್ಯಕ್ತಿಗಳ ಮನೆಯಲ್ಲಿ ನಿರಾಶ್ರಿತರು ಉಳಿದುಕೊಂಡಿದ್ದಾರೆ. ಕೇವಲ ಶಿವವಿಹಾರದಲ್ಲಿ 1000ಕ್ಕೂ ಹೆಚ್ಚು ಗಲಭೆ ಪೀಡಿತರಿದ್ದಾರೆ. ಒಂದು ಮನೆಯ ಹಾಲ್‍ನಲ್ಲಿ 100 ಮಂದಿ ಉಳಿದುಕೊಂಡಿದ್ದಾರೆ. ಧ್ವಂಸಗೊಂಡ ಮನೆಗಳಲ್ಲಿ ದಾಖಲೆಗಳು ಸಿಗುವುದೋ ಎಂದು ಹೋಗುವವರಿಗೆ ಹೊಡೆಯಲಾಗಿದೆ. ಕೇಜ್ರಿವಾಲ್ ಸರಕಾರದ ಅಡಿಯಲ್ಲಿ ಜಿಟಿಬಿ ಆಸ್ಪತ್ರೆ ಇದೆ. ಇಲ್ಲಿ ಚಿಕಿತ್ಸೆಗೆ ಬಂದವರೊಂದಿಗೆ ತಾರತಮ್ಯ ಎಸಗಲಾಗುತ್ತಿದೆ.

ಅಂಜಲಿ ಭಾರದ್ವಾಜ್, ಅನಿರಾಜ, ಪೂನಂ ಕೌಶಿಕ್, ಗೀತಾಂಜಲಿ ಕೃಣ, ಅಮೃತಾ ಜೊಹ್ನರಿಯವರ ನಿಯೋಗ ಚಮನ್ ಪಾರ್ಕ್, ಶಿವ್ ವಿಹಾರ್, ಬಜನ್‍ಪುಗಳಿಗೆ ಭೇಟಿ ನೀಡಿ ವರದಿ ತಯಾರಿಸಿದೆ. ಈ ನಡುವೆ ಕೇಜ್ರಿವಾಲ್ ವಿರುದ್ಧ ಮಾಜಿ ಎಎಪಿ ನಾಯಕರಾದ ಅಶುತೋಷ್ ರಂಗಪ್ರವೇಶಿಸಿದ್ದಾರೆ. ಸುಮ್ಮನೆ ವೋಟು ರಾಜಕೀಯವನ್ನು ಮಾತ್ರ ಕೇಜ್ರಿವಾಲ್ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.