ಮೇಘಾಲಯಕ್ಕೆ ವರ್ಗಾವಣೆ: ಮದ್ರಾಸ್ ಹೈಕೋರ್ಟು ಮುಖ್ಯ ನ್ಯಾಯಾಧೀಶೆ ವಿ.ಕೆ.ತಹಿಲ್‍ರಮಣಿ ರಾಜೀನಾಮೆ

0
1273

ಸನ್ಮಾರ್ಗ ವಾರ್ತೆ

ಚೆನ್ನೈ,ಸೆ. 7: ವರ್ಗಾವಣೆ ಪ್ರಕ್ರಿಯೆಯನ್ನು ಪ್ರತಿಭಟಿಸಿ ಮದ್ರಾಸ್ ಹೈಕೋರ್ಟಿನ ಚೀಫ್ ಜಸ್ಟಿಸ್ ವಿಜಯ ಕಮಲೇಶ್ ತಹಿಲ್‌ರಮಣಿ ರಾಜೀನಾಮೆ ನೀಡಿದರು. ಸುಪ್ರೀಂಕೋರ್ಟಿನ ಕೊಲಿಜಿಯಂ ತಹಿಲ್ ರಮಣಿಯವರನ್ನು ಮೇಘಾಲಯ ಹೈಕೋರ್ಟಿಗೆ ವರ್ಗಾಯಿಸಿತ್ತು. ನಂತರ ಜಸ್ಟಿಸ್ ವಿ.ಕೆ. ತಹಿಲ್‍ರಮಣಿ ರಾಜೀನಾಮೆಯನ್ನು ರಾಷ್ಟ್ರಪತಿಗೆ ಕಳುಹಿಸಿದ್ದಾರೆ. ರಾಷ್ಟ್ರಪತಿ ಕಾರ್ಯಾಲಯ ರಾಜೀನಾಮೆಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿದೆ.

ಮದ್ರಾಸ್ ಹೈಕೋರ್ಟು ಜಸ್ಟಿಸ್‍ಗಳ ಔತಣಕೂಟದಲ್ಲಿ ಭಾಗವಹಿಸಿದ್ದಾಗ ತಾನು ಕೆಲಸಕ್ಕೆ ರಾಜೀನಾಮೆ ನೀಡಲಿದ್ದೇನೆ ಎಂದು ತಹಲ್‍ರಮಣಿ ತಿಳಿಸಿದ್ದರು. ವಿ.ಕೆ.ತಹಿಲ್‌ರಮಣಿಯವರನ್ನು ಮೇಘಾಲಯ ಹೈಕೋರ್ಟಿಗೆ ವರ್ಗಾಯಿಸಿ ಮೇಘಾಲಯದ ಚೀಫ್ ಜಸ್ಟಿಸ್ ಎ.ಕೆ. ಮಿತ್ತಲ್‍ರನ್ನು ಮದ್ರಾಸ್ ಹೈಕೋರ್ಟಿನ ಚೀಫ್ ಜಸ್ಟಿಸ್ ಆಗಿ ಕೊಲಿಜಿಯಂ ನೇಮಕಗೊಳಿಸಿತ್ತು. ಇದು ಹೆಚ್ಚು ವಿವಾದವನ್ನು ಸೃಷ್ಟಿಸಿತ್ತು. ಸುಪ್ರೀಂಕೋರ್ಟು ಚೀಫ್ ಜಸ್ಟಿಸ್ ರಂಜನ್ ಗೊಗೊಯಿ ನೇತೃತ್ವದ ಕೊಲಿಜಿಯಂ ಆಗಸ್ಟ್ 28ಕ್ಕೆ ಇಬ್ಬರು ಚೀಫ್ ಜಸ್ಟಿಸ್‍ಗಳನ್ನು ಪರಸ್ಪರ ವರ್ಗಾಯಿಸಿ ಆದೇಶ ಹೊರಡಿಸಿತ್ತು. ನಿರ್ಧಾರ ಮರು ಪರಿಶೀಲಿಸಬೇಕೆಂದು ಜಸ್ಟಿಸ್ ತಹಿಲ್‍ರಮಣಿ ಆಗ್ರಹಿಸಿದರೂ ಕೊಲಿಜಿಯಂ ಒಪ್ಪಿರಲಿಲ್ಲ.

ದೇಶದ ನಾಲ್ಕನೆ ಅತಿದೊಡ್ಡ ಹೈಕೋರ್ಟು ಮದ್ರಾಸ್ ಹೈಕೋರ್ಟು ಆಗಿದ್ದು ಮದ್ರಾಸ್ ಹೈಕೋರ್ಟಿನಲ್ಲಿ 75 ಜಡ್ಜ್‌ಗಳವರೆಗೂ ಇದ್ದರು. ಆದರೆ ಚೀಫ್ ಜಸ್ಟಿಸ್ ಸಹಿತ ಮೂವರು ಜಡ್ಜ್‌ಗಳಿರುವ ಮೇಘಾಲಯಕ್ಕೆ ಜಸ್ಟಿಸ್ ತಹಿಲ್‍ರಮಣಿಯವರನ್ನು ನೇಮಕಗೊಳಿಸಲಾಗಿದೆ. ಇದು ಹಿಂಬಡ್ತಿಗೆ ಸಮಾನ ಕ್ರಮವೆಂದು ಹೇಳಲಾಗುತ್ತಿತ್ತು. ಬಾಂಬೆ ಹೈಕೋರ್ಟಿನಲ್ಲಿ ಮೂರು ಬಾರಿ ಆಕ್ಟಿಂಗ್ ಚೀಫ್ ಜಸ್ಟಿಸ್ ಆಗಿ ತಹಿಲ್‍ರಮಣಿ ಕೆಲಸ ಮಾಡಿದ್ದಾರೆ.

2018 ಆಗಸ್ಟ್ 12ಕ್ಕೆ ಮದ್ರಾಸ್ ಹೈಕೋರ್ಟು ಮುಖ್ಯ ನ್ಯಾಯಾಧೀಶೆಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಮುಂಬೈ ಹೈಕೋರ್ಟು ಚೀಫ್ ಜಸ್ಟಿಸ್ ಆಗಿದ್ದಾಗ ಜಸ್ಟಿಸ್ ತಹಿಲ್‍ರಮಣಿ ಬಿಲ್ಕೀಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮತ್ತು ಗುಜರಾತ್ ಗಲಭೆಯ ವೇಳೆ ಬಿಲ್ಕಿಸ್ ಬಾನುವಿನ ಕುಟುಂಬ ಹತ್ಯೆ ನಡೆಸಿದ ಪ್ರಕರಣದಲ್ಲಿ ಹನ್ನೊಂದು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ದೃಢೀಕರಿಸಿ ತೀರ್ಪು ನೀಡಿದ್ದರು. ಮಾತ್ರವಲ್ಲ, ಪ್ರಕರಣದ ಐದು ಮಂದಿ ಪೊಲೀಸಧಿಕಾರಿಗಳು ಇಬ್ಬರು ವೈದ್ಯರು ಸಹಿತ ಆರೋಪಿಗಳನ್ನು ಖುಲಾಸೆಗೊಳಿಸಿದ ಕೆಳಕೋರ್ಟಿನ ತೀರ್ಪನ್ನು ರದ್ದುಪಡಿಸಿ ಶಿಕ್ಷೆ ವಿಧಿಸಿದ್ದರು.