ಸನ್ಮಾರ್ಗ ವಾರ್ತೆ
ತಿರುವನಂತಪುರಂ, ಎ. 23: ಮೀನುಗಾರ ನಾಯಕ, ಮತ್ಸ್ಯಫೆಡ್ ಇದರ ನಿರ್ದೇಶಕ ಮಂಡಳಿಯ ಸದಸ್ಯ ಸಿ ಕೆ ಮಜೀದ್ (54) ಅವರು ಇನ್ನು ಮುಂದೆ ಇನ್ನುಆರು ಮಂದಿಯಲ್ಲಿ ಜೀವಂತವಿರಲಿದ್ದಾರೆ. ರಸ್ತೆ ಅಪಘಾತಕ್ಕೊಳಗಾಗಿ ತಿರುವನಂತಪುರಂ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಮಜೀದ್ ಮಸ್ತಿಷ್ಕ ಮರಣಕ್ಕೊಳಗಾಗಿದ್ದಾರೆ. ನಂತರ ಅವರ ಸಂಬಂಧಿಕರು ಅವಯವ ದಾನಕ್ಕೆ ಮುಂದೆ ಬಂದರು.
ಕರುಳು, ಕಿಡ್ನಿ, ಕಣ್ಣುಗಳು, ಎರಡು ಹೃದಯ ಕವಾಟಗಳನ್ನು ದಾನ ಮಾಡಲಾಗಿದೆ. ಕಿಡ್ನಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುವ ರೋಗಿಗೆ, ಕರುಳು ಎರ್ನಾಕುಳಂ ಲಕ್ಷೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ರೋಗಿಗೆ, ಹೃದಯದ ವಾಲ್ವ್ಗಳು ಶ್ರೀಚಿತ್ರ ಆಸ್ಪತ್ರೆಯಲ್ಲಿರುವ ರೋಗಿಗೆ, ಕಾರ್ನಿಯ ತಿರುವನಂತಪುರಂ ಸರಕಾರಿ ಕಣ್ಣು ಆಸ್ಪತ್ರೆಗೆ ನೀಡಲಾಯಿತು. ಅವಯವ ದಾನಕ್ಕೆ ಮುಂದೆ ಬಂದ ಕುಟುಂಬವನ್ನು ಕೇರಳ ಆರೋಗ್ಯ ಸಚಿವೆ ಕೆ ಕೆ ಶೈಲಜಾ ಅಭಿನಂದಿಸಿದರು. ಎಲ್ಲ ಕಾಲದಲ್ಲಿಯೂ ಮಜೀದ್ರನ್ನು ಕೇರಳ ನೆನಪಿಡಲಿದೆ ಎಂದು ಸಚಿವರು ಹೇಳಿದರು.
ತೃಶೂರ್ ಕೊಡುಗಂಲ್ಲೂರ್ ಪೇ ಬಝಾರ್ ಎರಿಯಾಡ್ ಗ್ರಾಮದ ಚೆರೊಡಿಯ ಕುಂಞುಮೊಯ್ದಿನ್ರ ಪುತ್ರನಾಗಿರುವ ಸಿ ಕೆ ಮಜೀದ್ ಸಿಪಿಎಂ ಸ್ಥಳೀಯ ಸಮಿತಿ ಸದಸ್ಯ. ಮೀನುಗಾರರ ಯೂನಿಯನ್ ಸಿಐಟಿಯು ಜಿಲ್ಲಾ ಕಾರ್ಯದರ್ಶಿ. ಸಚಿವೆ ಜೆ. ಮರ್ಸಿಕುಟ್ಟಿಯಮ್ಮರೊಂದಿಗೆ ಅಧಿಕೃತ ಸಮಾಲೋಚನೆಗಾಗಿ ಎಪ್ರಿಲ್ ಹದಿನಾರರಂದು ಮಜೀದ್ ತಿರುವನಂತಪುರಂಗೆ ಬಂದಿದ್ದರು. ಲಾಕ್ ಡೌನ್ ಸಮಯಲ್ಲಿ ಮೀನುಗಾರರು ಅನುಭವಿಸುತ್ತಿರುವ ಕಷ್ಟಗಳನ್ನು ತಿಳಿಸಿ ವಿನಾಯಿತಿ ಪಡೆಯುವುದು ಅವರ ಉದ್ದೇಶವಾಗಿತ್ತು. ಅಲ್ಲಿಂದ ಮರಳಿ ಬರುವಾಗ ಅಪಘಾತ ಸಂಭವಿಸಿತ್ತು. ಮಜೀದ್ ಇದ್ದ ಕಾರು ಮತ್ತು ಪಿಕಪ್ ವ್ಯಾನ್ ಢಿಕ್ಕಿಯಾಗಿತ್ತು. ಗಂಭೀರ ಗಾಯಗೊಂಡಿದ್ದ ಮಜೀದ್ ಮುಂತಾದವರನ್ನು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












