ಮಂಗಳೂರಿನ ಪ್ರಸಿದ್ಧ ಶಾರದಾ ಕ್ಯಾಲೆಂಡರ್ ನ ಫೆಬ್ರವರಿ ತಿಂಗಳನ್ನು ತಿರುಚಿದ ವಿಘ್ನ ಸಂತೋಷಿಗಳು…!

0
2948
ಶಾರದಾ ಕ್ಯಾಲೆಂಡರ್ ನ ನಿಜರೂಪ

ಸನ್ಮಾರ್ಗ ವಾರ್ತೆ

ಮಂಗಳೂರು: ಮಂಗಳೂರಿನ ಪ್ರಸಿದ್ಧ ಹಾಗೂ ತುಂಬಾ ಹಳೆಯ ಕ್ಯಾಲೆಂಡರ್ ಎಂದೇ ಪ್ರಸಿದ್ಧಿ ಪಡೆದಿರುವ ಶಾರದಾ ಕ್ಯಾಲೆಂಡರನ್ನು ಫೆಬ್ರವರಿ ತಿಂಗಳ ನಂತರದ ದಿನಾಂಕಗಳಿಗೆ ಮೂರು ದಿನಗಳನ್ನು ಸೇರಿಸಿ ಒಕ್ಕಣೆಯೊಂದಿಗೆ ವಾಟ್ಸಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಕೆಲವು ವಿಘ್ನ ಸಂತೋಷಿಗಳು ವೈರಲ್ ಆಗುವಂತೆ ಮಾಡಿದ್ದು, ಈ ಸಂಬಂಧ ಮಂಗಳೂರಿನ ಸೈಬರ್ ಸೆಲ್ ನವರಿಗೆ ದೂರು ನೀಡುವುದಾಗಿ ಶಾರದಾ ಪ್ರೆಸ್ ಸಂಸ್ಥೆಯವರು ತಿಳಿಸಿದ್ದಾರೆ.

ನಿನ್ನೆಯಿಂದ ವಾಟ್ಸಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಶಾರದಾ ಕ್ಯಾಲೆಂಡರ್ ನ ಫೆಬ್ರವರಿ ತಿಂಗಳಲ್ಲಿ 29 30 31 ದಿನಾಂಕ ಗಳನ್ನು ಸೇರಿಸಿದ್ದಲ್ಲದೆ ಒಕ್ಕಣೆಯೊಂದಿಗೆ ವಾಟ್ಸ್ಅಪ್ ಗಳಲ್ಲಿ ಹರಿಯಬಿಡಲಾಗಿದೆ. ಆದರೆ ಇದು ನಿಜವಲ್ಲ ಎಂದು ಹರಿಯದ ಹಲವರು ಶೇರ್ ಮಾಡುತ್ತಿದ್ದರು. ಅಲ್ಲದೆ ”ಲಾಕ್ ಡೌನ್ ನಲ್ಲಿ ಕೆಲಸವಿಲ್ಲದೆ ಕಳೆದುಹೋದ ದಿನಗಳನ್ನು ತುಂಬಿಸಲು ಶಾರದಾ ಕ್ಯಾಲೆಂಡರ್ ನವರು ಫೆಬ್ರವರಿ ತಿಂಗಳಲ್ಲಿ 28 ದಿನಗಳ ಬದಲು ಮೂರು ದಿನ ಜಾಸ್ತಿ ಮಾಡಿ 31 ದಿನವನ್ನಾಗಿ ಪರಿವರ್ತನೆ ಮಾಡಿ ಮಾನವೀಯತೆ ಮೆರೆದಿದ್ದಾರೆ” ಎಂಬ ಒಕ್ಕಣೆಯೊಂದಿಗೆ ಶೇರ್ ಮಾಡುತ್ತಿದ್ದರು

ಇದು ಅದಾಗಲೇ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಶಾರದಾ ಪ್ರೆಸ್ ನೊಂದಿಗೆ ಮಾತನಾಡಿದ ಸನ್ಮಾರ್ಗ ತಂಡ, ಯಾರೋ ವಿಘ್ನ ಸಂತೋಷಿಗಳು ನಮ್ಮ ಕ್ಯಾಲೆಂಡರ್ ಹೆಸರನ್ನು ಹಾಳು ಮಾಡಲು ಇಂತಹ ಕೃತ್ಯ ಎಸಗಿದ್ದಾರೆ. ಈ ಸಂಬಂಧ ನಮ್ಮ ಸಂಸ್ಥೆಯ ಮಾಲಕರು ಸೈಬರ್ ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

ನಮ್ಮ ಕ್ಯಾಲೆಂಡರ್ ರಾಜ್ಯದಲ್ಲಿ ಜನರ ನಡುವೆ ಹೆಚ್ಚು ಪ್ರಚಲಿತದಲ್ಲಿದೆ. ಶಾರದಾ ಕ್ಯಾಲೆಂಡರ್ ಎಂಬುದು ಒಂದು ಉತ್ತಮ ಹೆಸರು ಇರುವಂತಹ ಕ್ಯಾಲೆಂಡರ್. ಇದರ ಹೆಸರನ್ನು ಹಾಳು ಮಾಡಲು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಕ್ಯಾಲೆಂಡರ್ ನ ಫೆಬ್ರವರಿ ತಿಂಗಳನ್ನು ವಿರುದ್ಧ ಎಡಿಟ್ ಮಾಡಿ, ಅದಕ್ಕ ಮೂರು ದಿನವನ್ನು ಸೇರಿಸಿ ಶೇರ್ ಮಾಡಿದ್ದಾರೆ. ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡುವುದಾಗಿ ಶಾರದಾ ಪ್ರೆಸ್ ದೂರವಾಣಿ ಸಂಭಾಷಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರಿನ ಶಾರದಾ ಕ್ಯಾಲೆಂಡರ್ ಕಳೆದ 120 ವರ್ಷಗಳಿಂದ ಶಾರದಾ ಪ್ರೆಸ್ ನಿಂದ ಮುದ್ರಣಗೊಳ್ಳುತ್ತಿದ್ದು, ರಾಜ್ಯದಲ್ಲಿ ಹೆಚ್ಚು ಪ್ರಚಾರದಲ್ಲಿದೆ. ಸರಕಾರಿ ರಜೆ ಸೇರಿದಂತೆ ಎಲ್ಲ ಧರ್ಮೀಯರ ಹಬ್ಬ-ಹರಿದಿನಗಳ ದಿನಾಂಕಗಳನ್ನು ಸರಿಯಾದ ಮಾಹಿತಿಯೊಂದಿಗೆ ಇದು ಪ್ರಕಟ ಮಾಡುತ್ತಿರುವುದರಿಂದ ಶಾರದಾ ಕ್ಯಾಲೆಂಡರ್ ಜನಮನ್ನಣೆಯನ್ನು ಗಳಿಸಿದೆ.

ಈ ಮಧ್ಯೆ ಶಾರದಾ ಕ್ಯಾಲೆಂಡರ್ ನ ಫೆಬ್ರವರಿ ತಿಂಗಳಿಗೆ ಮೂರು ದಿನಗಳನ್ನು ಸೇರಿಸಿ ಇಂತಹ ಕೃತ್ಯವೆಸಗಿದ್ದು, ಶಾರದಾ ಕ್ಯಾಲೆಂಡರ್ ಪ್ರಿಯ ಗ್ರಾಹಕರ ಮನಸ್ಸು ನೋಯಿಸಿದೆ. ಮಂಗಳೂರಿನ ಪೊಲೀಸ್ ಆಯುಕ್ತರು ಈ ಸಂಬಂಧ ಪ್ರಕರಣ ದಾಖಲಿಸಿ, ಇಂತಹ ಕೃತ್ಯಕ್ಕೆ ಕೈ ಹಾಕುವವರನ್ನು ಪತ್ತೆ ಹಚ್ಚುವಂತೆ ಆಗ್ರಹಿಸಿದ್ದಾರೆ.