ಮಂಗಳೂರು: ಬಂದರ್ ನ ನವಜೀವನ ಟ್ರೇಡರ್ಸ್ ಟಯರ್ ಅಂಗಡಿಗೆ ಬೆಂಕಿ; ಸ್ಥಳೀಯ ಮುಸ್ಲಿಂ ಯುವಕರಿಂದಾಗಿ ತಪ್ಪಿದ ಭಾರೀ ಅನಾಹುತ- ವೀಡಿಯೊ

0
1216

ಸನ್ಮಾರ್ಗ ವಾರ್ತೆ-

ಮಂಗಳೂರು: ಸೆ. 17- ಇಲ್ಲಿನ ಬಂದರ್ ನ ಬೀಬಿ ಅಲಾಬಿ ರಸ್ತೆಯಲ್ಲಿರುವ ನವಜೀವನ ಟ್ರೇಡರ್ಸ್ ಟಯರ್ ಅಂಗಡಿಗೆ ಬುಧವಾರ ರಾತ್ರಿ 10ರ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹತ್ತಿಕೊಂಡಿದ್ದು, ಸ್ಥಳೀಯ ಮುಸ್ಲಿಂ ಯುವಕರು ತಕ್ಷಣ ಧಾವಿಸಿ ಬಂದು ಕಾರ್ಯಪ್ರವೃತ್ತರಾದುದರಿಂದ ಭಾರೀ ಜೀವ ಹಾನಿಯಾಗುವುದು ಸ್ವಲ್ಪದರಲ್ಲೇ ತಪ್ಪಿದೆ. ಸನ್ಮಾರ್ಗ ಪತ್ರಿಕೆ ಕಛೇರಿಯಿರುವ ಹಿದಾಯತ್ ಸೆಂಟರ್ ನ ಪಕ್ಕದ ಕಟ್ಟಡವಾದ M.M. ಕಾಂಪ್ಲೆಕ್ಸ್ ನಲ್ಲಿ ಕೆ ಸಿ ಸುರೇಶ್ ಅವರು ನವಜೀವನ ಟ್ರೇಡರ್ಸ್ ಟಯರ್ ಅಂಗಡಿಯನ್ನು ಒಂದು ವರ್ಷದಿಂದ ನಡೆಸಿಕೊಂಡು ಬರುತ್ತಿದ್ದಾರೆ. 12ರಷ್ಟು ಫ್ಲ್ಯಾಟ್ ಗಳನ್ನೂ ಹೊಂದಿರುವ ಈ ಕಟ್ಟಡದಲ್ಲಿ ಶಾಂತಿ ಪ್ರಕಾಶನದ ಕಚೇರಿಯೂ ಇದ್ದು, ಒಂದು ವೇಳೆ ತಡರಾತ್ರಿ ಈ ಘಟನೆ ನಡೆದಿದ್ದರೆ ಭಾರೀ ಸಾವು ನೋವು ಸಂಭವಿಸುವ ಸಾಧ್ಯತೆ ಇತ್ತು. ಆದರೂ ಅಂದಾಜು ಸುಮಾರು 10- 15 ಲಕ್ಷ ರೂಪಾಯಿ ಮೌಲ್ಯದ ಸೊತ್ತಿಗೆ ಹಾನಿ ಸಂಭವಿಸಿದೆ ಎಂದು ಮಾಲಕರು ಹೇಳಿದ್ದಾರೆ.

ಸನ್ಮಾರ್ಗ ಪತ್ರಿಕೆಯ ಮ್ಯಾನೇಜರ್ ಆಗಿರುವ ಇರ್ಷಾದ್ ವೇಣೂರು ಅವರು ಘಟನೆಯ ಪ್ರತ್ಯಕ್ಷದರ್ಶಿಯಾಗಿದ್ದು, ಅವರ ಹೇಳಿಕೆಯಂತೆ ಈ ಘಟನೆಯ ವಿವರ ಹೀಗಿದೆ:

ನಾನು ಸನ್ಮಾರ್ಗ ಕಚೇರಿ ಇರುವ ಹಿದಾಯತ್ ಸೆಂಟರ್ ನಲ್ಲಿ ನನ್ನ ವೈಯಕ್ತಿಕ ಕೆಲಸದಲ್ಲಿ ತಲ್ಲೀನನಾಗಿದ್ದೆ. ತಡವಾಯಿತೆಂದು ಮನೆಗೆ ಹೋಗಲು ಅಣಿಯಾಗುತ್ತಿದ್ದಾಗ ಕಚೇರಿಯ ಹೊರಗೆ ಬೊಬ್ಬೆ ಕೇಳಿಸಿತು. ಸ್ಥಳೀಯರೋರ್ವರು ನವಜೀವನ ಟ್ರೇಡರ್ಸ್ ಟಯರ್ ಅಂಗಡಿಯಿಂದ ಹೊಗೆ ಬರುವುದನ್ನು ಗಮನಿಸಿ, ಬೊಬ್ಬೆ ಹಾಕಿದ್ದರು. ಬೊಬ್ಬೆ ಗಮನಿಸಿ, ನಾನೂ ಹೊರಗೆ ಬಂದು ನೋಡಿದೆ. ಗಡಿಬಿಡಿಯಲ್ಲಿ ಅಗ್ನಿಶಾಮಕ ಸೇವೆಯ ತುರ್ತು ಸಂಖ್ಯೆಗೆ ಕರೆ ಮಾಡಿದಾಗ ಸಂಪರ್ಕ ಸಿಗಲಿಲ್ಲ. ಕೂಡಲೇ Google ನ ಸಹಾಯ ಪಡೆದು ಪಾಂಡೇಶ್ವರ ಅಗ್ನಿಶಾಮಕ ಠಾಣೆಗೆ ಕರೆ ಮಾಡಿದೆ. 10 ನಿಮಿಷದಲ್ಲಿ ಅಗ್ನಿಶಾಮಕ ವಾಹನ ತಲುಪಿತು. ಅಲ್ಲದೇ, ಅದಾಗಲೇ ಮೆಸ್ಕಾಂನವರಿಗೂ ಸುದ್ದಿ ತಿಳಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮನವಿ ಮಾಡಿದೆ.

ಸ್ಥಳೀಯ ಮುಸ್ಲಿಂ ಯುವಕರು ಸುದ್ದಿ ತಿಳಿದು ಕಬ್ಬಿಣದ ಸಲಾಕೆಗಳಿಂದ ಬೀಗ ಒಡೆದು, ಅಂಗಡಿ ತೆರೆದು ಬೆಂಕಿ ಹೆಚ್ಚಾಗದಂತೆ ನೋಡಿಕೊಂಡರು. ಅಂಗಡಿಯಲ್ಲಿ ಮಸಿ ತುಂಬಿಕೊಂಡಿದ್ದರೂ ಯುವಕರು ಮಸಿಯನ್ನು ಪರಿಗಣಿಸದೆ ಬೆಂಕಿಯ ನಡುವೆಯೂ ಟಯರುಗಳನ್ನು ಅಂಗಡಿಯಿಂದ ಹೊರತರುವಲ್ಲಿ ಶಕ್ತಿ ಮೀರಿ ಪ್ರಯತ್ನಿಸಿದರು. ಇದರಿಂದಾಗಿ ಲಕ್ಷಾಂತರ ರೂಪಾಯಿಯ ಟಯರುಗಳು ಬೆಂಕಿಗೆ ಆಹುತಿಯಾಗದಂತೆ ತಡೆದರು.

ಅಂಗಡಿಯ ಬೋರ್ಡ್ ನಲ್ಲಿದ್ದ ಮಾಲಕನ ಮೊಬೈಲ್ ಗೆ ಸ್ಥಳೀಯರು ಕರೆ ಮಾಡಿ, ಮಾಹಿತಿ ನೀಡಿದರಲ್ಲದೆ ಘಟನಾ ಸ್ಥಳಕ್ಕೆ ಬಂದ ಮಾಲಕನ ಪತ್ನಿಯವರು ಅಂಗಡಿಯನ್ನು ಕಂಡು ಕಣ್ಣೀರಿಟ್ಟಾಗ, ಸ್ಥಳೀಯರು ಸಾಂತ್ವನದ ಮಾತು ಹೇಳಿ, ಸಮಾಧಾನ ಪಡಿಸಿದರು. ಆರ್ಥಿಕ ಹಿಂಜರಿತದ ಅಡ್ಡ ಪರಿಣಾಮವು ಈಗಾಗಲೇ ಎಲ್ಲ ವ್ಯಾಪಾರಿಗಳ ಮೇಲೂ ಆಗಿದ್ದು, ಈ ಘಟನೆ ಕೆ ಸಿ ಸುರೇಶ್ ಮೇಲೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದವರು ಹೇಳಿದ್ದಾರೆ.

ವಿಶೇಷವಾಗಿ ಸ್ಥಳೀಯ ಮುಸ್ಲಿಂ ಯುವಕರ ಸೇವೆಗೆ ನಾಗರಿಕರಿಂದ ಭಾರೀ ಶ್ಲಾಘನೆ ವ್ಯಕ್ತವಾಗಿದೆ. ಸ್ಥಳೀಯ ಯುವಕರಾದ ಆಸೀಫ್, ಹನೀಫ್, ಫಯಾಜ್, ನವಾಜ್, ಅಶ್ರಫ್, ಮುನೀರ್, HRS ನ ಅಮೀರ್ ಕುದ್ರೋಳಿ, ಮುನವ್ವರ್ ಕಂದಕ್, ಖಾಸಿಮ್, ಶೌಕತ್ ಅಲಿ, ತೌಫೀಕ್ ಕುದ್ರೋಳಿ, ಮಕ್ಬೂಲ್ ಕುದ್ರೋಳಿ ಮತ್ತಿತರ ಯುವಕರು ಅಂಗಡಿಯನ್ನು ಬೆಂಕಿಯಿಂದ ಪಾರು ಮಾಡುವಲ್ಲಿ ಮತ್ತು ಟಯರುಗಳನ್ನು ಸುರಕ್ಷಿತವಾಗಿ ಅಂಗಡಿಯಿಂದ ತೆರವುಗೊಳಿಸುವಲ್ಲಿ ತೀವ್ರ ಶ್ರಮಪಟ್ಟರು. ಕೊನೆಗೆ ಟಯರ್ ಗಳನ್ನು ಸ್ಥಳೀಯ ಟಯರ್ ವ್ಯಾಪಾರಸ್ಥ ಹಿಶಾಮ್ ಎಂಬವರ ಗೋಡಾನ್ ಗೆ ಸ್ಥಳಾಂತರಿಸಲಾಯಿತು



Posted by Irshad Venur on Wednesday, October 16, 2019