ಅಸ್ಮತ್ ವಗ್ಗ
ಅಬ್ದುಲ್ ಸಲಾಮ್ ದೇರಳಕಟ್ಟೆ ಯವರ ಮೂರನೆಯ ಕೃತಿ. ಇತ್ತೀಚೆಗೆ ನಡೆದ ಶಾರ್ಜಾ ಪುಸ್ತಕ ಮೇಳದಲ್ಲಿ ಶಾಂತಿ ಪ್ರಕಾಶನದ ಮಳಿಗೆಯಲ್ಲಿ ಕೊಂಡುಕೊಂಡ ಒಂದು ಪುಸ್ತಕ. ಅನಿವಾಸಿಯಾಗಿರುವ ನನಗೆ ಈ ಪುಸ್ತಕದಲ್ಲೇನಿದೆ ಎಂಬ ಕುತೂಹಲ ಬಹುಮಟ್ಟಕ್ಕಿತ್ತು. ಇಪ್ಪತ್ತೊಂದು ಕಿರುಗತೆಗಳನ್ನೊಳಗೊಂಡ ಪುಸ್ತಕ. ಗಲ್ಫ್ ಜೀವನದ ಆಗುಹೋಗುಗಳು, ನೋವು ನಲಿವುಗಳು, ಮಾನಸಿಕ ಚಿಂತೆಗಳ ಬಗ್ಗೆ ಒಂದು ಪಕ್ಷಿನೋಟ ಬೀರುವ ಈ ಪುಸ್ತಕವನ್ನು ಎಲ್ಲರೂ, ಅದರಲ್ಲೂ ಗಲ್ಫ್ ನಲ್ಲಿ ವಾಸಿಸುತ್ತಿರುವವರ ಮನೆಯವರು ಒಮ್ಮೆ ಓದಲೇಬೇಕು.
ಗಲ್ಫ್ ನಲ್ಲಿರುವವರೆಂದರೆ ಹಣದ ಗಿಡ ನೆಟ್ಟವರೆಂಬ ಭಾವವಿರುವವರಿಗೆ ಇಲ್ಲಿರುವ ಸಣ್ಣಪುಟ್ಟ ಕೆಲಸಗಾರರ ಕಷ್ಟ ಬಹುಶಃ ಅರ್ಥವಾಗುವುದು ಕಷ್ಟ. ‘ಸುಹಾನಳ ಫ್ಲ್ಯಾಟ್’ ಎಂಬ ಕಥೆಯಲ್ಲಿ ಎಲ್ಲ ಸುಖಸಂಪತ್ತಿದ್ದೂ ಮಾನಸಿಕವಾಗಿ ಬಳಲುವ ಯುವತಿಯ ನೋವನ್ನು ತಿಳಿಸುವ ಪ್ರಯತ್ನ ಲೇಖಕರದ್ದು. ‘ನಾತೂರ್’ ಕಥೆಯ ಅಹ್ಮದಾಕ ಮನದ ನೋವನ್ನೆಲ್ಲಾ ಬಚ್ಚಿಟ್ಟು ಎಲ್ಲರೊಂದಿಗೂ ಮನಸ್ತಾಪ ಬೆಳೆಸಿಕೊಂಡು ಜೀವನ ಸಾಗಿಸುವ ಒಬ್ಬ ಸಾಮಾನ್ಯ ಮನುಷ್ಯ. ಕೊನೆಗೊಮ್ಮೆ ತನ್ನ ನೋವುಗಳನ್ನು ಲೇಖಕರೊಂದಿಗೆ ತೋಡಿಕೊಳ್ಳುವ ವ್ಯಕ್ತಿ. ಇಲ್ಲಿ ಲೇಖಕರು ಕೆಲವೊಂದು ಬ್ಯಾಚುಲರ್ ಗಳು ಹೇಗೆ ಜೀವಿಸುತ್ತಿದ್ದಾರೆ ಎಂಬುವುದನ್ನು ತೆರೆದಿಟ್ಟಿದ್ದಾರೆ.
‘ಇಷ್ಟು ವರ್ಷ ಏನು ಮಾಡಿದಿರಿ’ ಎಂಬ ಕಥೆಯಲ್ಲಿ ಹಲವಾರು ಗಲ್ಫಿಗರ ಮನದ ಮಾತು ತೆರೆದಿಡುವ ಪ್ರಯತ್ನ ನಡೆದಿದೆ.
ಕೊನೆಯ ಕಥೆ ‘ಈಡನ್ ಗಾರ್ಡನ್’ ನಲ್ಲಿ ಪರಿಸರ ಪ್ರೇಮಿಯೊಬ್ಬ ತನ್ನ ಜೀವಮಾನದ ಗಳಿಕೆಯನ್ನೆಲ್ಲಾ ಹಾಕಿ ಮಾಡುವ ಕಾಡು, ಕೊನೆಗೆ ಅದರಿಂದಲೇ ಬಯಲಾಗುವ ತನ್ನವರ ನೈಜತೆ. ಆತನ ಮನದ ಆಸೆಯನ್ನು ಪರಿಗಣಿಸದೇ ಕಡೆಗಣಿಸುವ ತನ್ನವರು, ಹೀಗೆ ಕಥಾಹಂದರ ಸಾಗುತ್ತದೆ. ಒಟ್ಟಿನಲ್ಲಿ ಓದಿದರೆ ನಷ್ಟವಿಲ್ಲ ಎಂದು ಹೇಳುವ ಬದಲು ಓದಲೇಬೇಕು ಎನ್ನುವಂತಹ ಪುಸ್ತಕ.
ಒಂದಲ್ಲಾ ಒಂದು ದಿನ ಗಲ್ಫಿಗನೊಬ್ಬ ಇಲ್ಲಿಗೆ ಬಂದು ತಪ್ಪುಮಾಡಿದೆ ಊರಲ್ಲೇ ಉಪ್ಪುಗಂಜಿಯೊಂದಿಗಾದರೂ ಬದುಕಬಹುದಿತ್ತು ಎಂಬ ಭಾವನೆ ಬರುವುದು ಸಹಜ. ಅದಕ್ಕೆ ಕಾರಣವೇನು ಎಂಬುವುದನ್ನು ಪ್ರಾಮಾಣಿಕವಾಗಿ ತೋರಿಸುವ ಪ್ರಯತ್ನವನ್ನು ಲೇಖಕರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಆದರೂ ಕೇವಲ ಕಷ್ಟ ನಷ್ಟದ ಕಥೆಗಳನ್ನು ಮಾತ್ರ ಬರೆದಿರುವ ಬದಲು ಕೆಲವರ ಯಶಸ್ವೀ ಜೀವನದ ಬಗ್ಗೆಯೂ ಬೆಳಕು ಚೆಲ್ಲುವ ಪ್ರಯತ್ನ ಮಾಡಬಹುದಿತ್ತು ಎಂಬುವುದು ನನ್ನ ಅಭಿಪ್ರಾಯ.
ಒಟ್ಟಿನಲ್ಲಿ ಒಂದು ಉತ್ತಮ ಪುಸ್ತಕವನ್ನು ಓದುಗರಿಗೆ ಕಟ್ಟಿಕೊಟ್ಟ ಲೇಖಕರಿಗೆ ಧನ್ಯವಾದಗಳು. ಮೊದಲ ಪ್ರಯತ್ನ ಯಶಸ್ವಿಯಾಗಿದೆ. ಮುಂದೊಮ್ಮೆ ಇದರ ಮುಂದುವರಿದ ಭಾಗವನ್ನೂ ಪ್ರಕಟಿಸುವಂತಾಗಲಿ ಎಂಬುವುದು ಆ ಸರ್ವಶಕ್ತನಾದ ಅಲ್ಲಾಹನಲ್ಲಿ ನನ್ನ ಪ್ರಾರ್ಥನೆ.












