ಮಾಧ್ಯಮಗಳು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆ: ಅನುಪಮ 2೦ರ ಸಂಭ್ರಮದಲ್ಲಿ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು

0
1070

ಸನ್ಮಾರ್ಗ ವಾರ್ತೆ

ಮಂಗಳೂರು: ಇಂದು ಕೆಲವು ಮಾಧ್ಯಮಗಳನ್ನು ಬಿಟ್ಟು ಹೆಚ್ಚಿನ ಎಲ್ಲ ಮಾಧ್ಯಮಗಳು ಬಂಡವಾಳಶಾಹಿಗಳ ಕೈಯಲ್ಲಿದ್ದು ಅವರಿಗೆ ಬೇಕಾದಂತೆ ಕೆಲಸ ನಿರ್ವಹಿಸುತ್ತಿದೆ.ಒಂದು ಕಾಲದಲ್ಲಿ ಜನರ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದ ಮಾಧ್ಯಮಗಳು ಯಾರ್ಯಾರದೋ ಕೈಗೊಂಬೆಗಳಾಗಿವೆ. ಈ ಹಿನ್ನೆಲೆಯಲ್ಲಿ ಪತ್ರಿಕೆ, ಟಿವಿ ಸೇರಿದಂತೆ ಎಲ್ಲ ಮಾಧ್ಯಮಗಳು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದು, ಜನರು ಸಾಮಾಜಿಕ ಜಾಲತಾಣಗಳ ಮೊರೆಹೋಗಿದ್ದಾರೆ ಎಂದು ವಿಜಯ ಟೈಮ್ಸ್ ಪ್ರಧಾನ ಸಂಪಾದಕಿ ವಿಜಯಲಕ್ಷ್ಮಿ ಶಿಬರೂರು ಅಭಿಪ್ರಾಯ ಪಟ್ಟಿದ್ದಾರೆ.

ಅನುಪಮ ಮಹಿಳಾ ಮಾಸಿಕದ 20 ನೇ ವರ್ಷಾಚಣೆಯ ಪ್ರಯುಕ್ತ ಮಂಗಳೂರಿನ ಶಾಂತಿ ಪ್ರಕಾಶನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷಾಂಕ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು‌.

ಇಪ್ಪತ್ತು ವರ್ಷಗಳಿಂದ ಜತನದಿಂದ ಕಾಪಾಡಿ ಬೆಳೆಸಿದ ಅನುಪಮಳಿಗೆ ಈಗ ಹಲವು ಸವಾಲುಗಳಿವೆ. ಪತ್ರಿಕೋದ್ಯಮದಲ್ಲಿ ಸ್ಥಿತ್ಯಂತರ ಆಗುತ್ತಿರುವ ಈ ಕಾಲಘಟ್ಟ ದಲ್ಲಿ ನೀವು ಬೆಳೆಸಿದ ಅನುಪಮಳನ್ನು ಇನ್ನೂ ಚೆನ್ನಾಗಿ ಪೋಷಿಸಬೇಕಾದ ಜವಾಬ್ದಾರಿ ಹೆಚ್ಚಿದೆ. ಪತ್ರಿಕೆಗಳೆಂದರೆ ಸವಾಲುಗಳು ಎಂಬುದು ಎಲ್ಲಾ ಪತ್ರಕರ್ತರಿಗೂ ತಿಳಿದ ವಿಷಯವೇ. ಅನುಪಮ ಆದಷ್ಟು ಬೇಗ ಡಿಜಿಟಲೀಕರಣ ಗೊಂಡು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಆ ರೀತಿಯಲ್ಲಿ ಇದನ್ನು ಉಳಿಸಲು ಸಾಧ್ಯ ಎಂದು ಅವರು ನುಡಿದರು.

ಪುರುಷ ಪ್ರಧಾನ ಕ್ಷೇತ್ರ ವಾದ ಪತ್ರಿಕಾರಂಗದಲ್ಲಿ ಸ್ತ್ರೀಯರ ಉಪಸ್ಥಿತಿಯನ್ನು ಸಹಿಸದ ಹಲವು ಪುರುಷರಿದ್ದರೂ ಬೆನ್ನು ತಟ್ಟಿ ಹುರಿದುಂಬಿಸುವ ಪುರುಷ ಸಮೂಹದಿಂದ ಸ್ತ್ರೀಯು ಮುನ್ನಡೆಯಲು ಖಂಡಿತಾ ಸಾಧ್ಯ. ಸತ್ಯ ಹಾಗೂ ನೇರ ದಾರಿಯಲ್ಲಿ ಹಲವು ತೊಡಕುಗಳಿದ್ದರೂ ದಿಟ್ಟವಾಗಿ ಎದುರಿಸಿ ಮುನ್ನುಗ್ಗಿದ್ದಲ್ಲಿ ಸಫಲತೆ ಖಂಡಿತ ಸಾಧ್ಯ. ತೊಡಕುಗಳನ್ನು ನಿವಾರಿಸಿ ನಿಖರವಾಗಿ ಮುಂದಡಿ ಇಡಲು ಅನುಪಮಕ್ಕೆ ಕರೆ ನೀಡಿದರು.

ತಮ್ಮ ವೃತ್ತಿಜೀವನದಲ್ಲಿ ಎದುರಾದ ಸವಾಲುಗಳನ್ನು ಎದುರಿಸಿದ ರೀತಿಗಳನ್ನು ಸಭಿಕರೊಂದಿಗೆ ಹಂಚಿಕೊಂಡರು.
ವಿಶೇಷಾಂಕ ಬಿಡುಗಡೆ ಕಾರ್ಯಕ್ರಮದಲ್ಲಿ ಸನ್ಮಾನ ಕಾರ್ಯಕ್ರಮ ವನ್ನೂ ಹಮ್ಮಿಕೊಳ್ಳಲಾಗಿತ್ತು. ಶಿಕ್ಷಣ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಜೂಲಿಯೆಟ್ ಬಿ.ಪಿಂಟೋ, ಆರೋಗ್ಯ ಕ್ಷೇತ್ರದಲ್ಲಿ ಅದರಲ್ಲೂ ಕೊರೋನ ಸಂದರ್ಭದಲ್ಲಿ ಮುಂಚೂಣಿಯಲ್ಲಿದ್ದು ರೋಗಿಗಳ ಸೇವೆಗೈದ ದಾದಿ ಭವ್ಯ, ಹಾಗೂ ಸಮಾಜ ಸೇವೆ ಯಲ್ಲಿ ಸದಾ ಮುಂಚೂಣಿಯಲ್ಲಿರುವ ಮುಮ್ತಾಝ್ ವಾಮಂಜೂರು ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಕರಾವಳಿ ವಾಚಕಿ ಲೇಖಕಿಯರ ಸಂಘದ ಕಾರ್ಯದರ್ಶಿ ಸುಖಲಾಕ್ಷಿ ವೈ. ಸುವರ್ಣ ಹಾಗೂ ಮುಸ್ಲಿಮ್ ಮಹಿಳಾ ಸಾಹಿತ್ಯ ಸಂಘದ ಅಧ್ಯಕ್ಷೆ ಸಮೀನಾ ಅಫ್ಶಾನ್ ಅತಿಥಿ ಭಾಷಣ ಮಾಡಿ ಅನುಪಮದ ಏಳಿಗೆಗೆ ಹಾರೈಸಿದರು.

ಅನುಪಮದ ಪ್ರಧಾನ ಸಂಪಾದಕಿ ಶಹನಾಝ್ ಎಂ. ಅಧ್ಯಕ್ಷತೆ ವಹಿಸಿದ್ದರು. ಸಬೀಹಾ ಫಾತಿಮಾ ಪ್ರಸ್ತಾವನೆ ಮಾಡಿ ಎಲ್ಲರನ್ನೂ ಸ್ವಾಗತಿಸಿದರು. ಕುಲ್ಸೂಮ್ ಅಬೂಬಕ್ಕರ್ ಸನ್ಮಾನಿತರ ವಿವರ ನೀಡಿದರು. ಸಮೀನಾ ನೂರ್ ಧನ್ಯವಾದ ಅರ್ಪಿಸಿದರು.‌ಶಾಹೀದಾ ಉಮರ್ ನಿರೂಪಿಸಿದರು.