ಕೆಡುಕುಗಳನ್ನು ಅಳಿಸಬೇಕಾದರೆ ಪ್ರವಾದಿವರ್ಯರ ಶಿಕ್ಷಣವನ್ನು ಅನುಸರಿಸಬೇಕಾದ ಅಗತ್ಯತೆ ಹಿಂದೆಂದಿಗಿಂತ ಇಂದು ಹೆಚ್ಚಿದೆ: ಮುಹಮ್ಮದ್ ಕುಂಞಿ

0
207

ಸನ್ಮಾರ್ಗ ವಾರ್ತೆ

ಕಲಬುರಗಿ: “ಇತಿಹಾಸದುದ್ದಕ್ಕೂ ಬಂದ ಪ್ರವಾದಿಗಳು ಆಯಾ ಕಾಲದ ಜನರ ಜೀವನವನ್ನು ಸಂಸ್ಕರಿಸಿ ಅವರಿಗೆ ಯಶಸ್ವಿ ಜೀವನವನ್ನು ನಡೆಸುವ ರಾಜಮಾರ್ಗವನ್ನು ತೋರಿಸಿಕೊಟ್ಟರು. ಇಂದು ಮಾನವ ದೇವನನ್ನು ರಕ್ಷಿಸಲು ಕಚ್ಚಾಡುತ್ತಿದ್ದಾನೆ. ಆದರೆ ದೇವನಿಗೆ ಯಾರದೇ ರಕ್ಷಣೆಯ ಅಗತ್ಯತೆ ಇದೆಯೇ? ಪ್ರವಾದಿಗಳು ದೇವನನ್ನು ಕಂಡುಕೊಳ್ಳುವ ಮಾರ್ಗವನ್ನು ಮಾನವನಿಗೆ ತೋರಿಸಿಕೊಟ್ಟು ಮಾನವನ ಮೇಲಿನ ಅತಿ ದೊಡ್ಡ ಹೊರೆಯನ್ನು ಇಳಿಸಿದ್ದಾರೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿಗಳಾದ ಮುಹಮ್ಮದ್ ಕುಂಞಿ ಅಭಿಪ್ರಾಯ ಪಟ್ಟರು.

ಅವರು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ವತಿಯಿಂದ ನಡೆಸಲಾದ “ಪ್ರವಾದಿ ಮುಹಮ್ಮದ್(ಸ)ರನ್ನು ಅರಿಯೋಣ” ಅಭಿಯಾನದ ಪ್ರಯುಕ್ತ ಕಲಬುರಗಿಯ ಹಿದಾಯತ್ ಸೆಂಟರ್‌ನಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕಲಬುರಗಿ ಆಯೋಜಿಸಿದ್ದ ಅಭಿಯಾನದ ಸಮಾರೋಪ ಸಮಾರಂಭ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

“ಕೊಲೆ, ಸುಲಿಗೆ, ಬಡ್ಡಿ, ಶರಾಬು ಇತ್ಯಾದಿ ಕೆಡುಕುಗಳನ್ನು ಸಮಾಜದಿಂದ ಅಳಿಸಬೇಕಾದರೆ ಪ್ರವಾದಿಗಳ ಶಿಕ್ಷಣವನ್ನು ಅನುಸರಿಸಬೇಕಾದ ಅಗತ್ಯ ಹಿಂದೆಂದಿಗಿಂತ ಇಂದು ಹೆಚ್ಚಿದೆ. ಪ್ರವಾದಿಗಳಲ್ಲಿ ಕೊನೆಯವರಾದ ಪ್ರವಾದಿ ಮುಹಮ್ಮದ್(ಸ) ರವರು ತೋರಿದ ಮಾರ್ಗವು ಯಾವುದೇ ಒಂದು ಜನಾಂಗಕ್ಕೆ ಮಾತ್ರ ಸೀಮಿತವಾಗಿರದೆ ಅಂತಿಮ ದಿನದವರೆ ಬರುವ ಎಲ್ಲ ಮಾನವರಿಗೂ ಬೆಳಕು ನೀಡುವಂತಹದ್ದು” ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅವರು ನುಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಷ.ಬ್ರ. ಸಿದ್ದರಾಮ ಶಿವಾಚಾರ್ಯರು, ಪರ್ವತ ಲಿಂಗೇಶ್ವರವಮಠ, ಹರಸೂರು, ಕಲಬುರಗಿ, ಸರದಾರ್ ಗುರ್ಮಿತ್ ಸಿಂಗ್ ಸಲೂಜ(ಉಪಾಧ್ಯಕ್ಷರು, ಗುರುದ್ವಾರ ಶ್ರೀ ಗುರುನಾನಕ ಮಠ, ಕಲಬುರಗಿ) ಹಾಗೂ ಶ್ರೀ ಸಂಧ್ಯಾ ಸ್ಯಾಮುವೆಲ್, ವಿಜಯ ವಿದ್ಯಾಲಯ ಚರ್ಚ್, ಕಲಬುರಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದ್ (ಸ) ಸಮಗ್ರ ಜೀವನ ಮತ್ತು ಪ್ರವಾದಿ ಮುಹಮ್ಮದ್ (ಸ) ವಿವಾಹಗಳು ಹಾಗೂ ವಿಮರ್ಶೆಗಳು ಎಂಬ ಎರಡು ಪುಸ್ತಕಗಳನ್ನು ಬಿಡುಗಡೆ ಗೊಳಿಸಲಾಯಿತು.

ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಸಲಹಾ ಸಮಿತಿ ಸಮಿತಿ ಸದಸ್ಯರಾದ ಮುಹಮ್ಮದ್ ಝಿಯಾಉಲ್ಲಾಹ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತ ಕೋರಿದರು. ಸ್ಥಾನೀಯ ಅಧ್ಯಕ್ಷರಾದ ತನ್ವೀರ್ ಹಾಷ್ಮಿ, ವಿಭಾಗೀಯ ಸಂಚಾಲಕರಾದ ಮೌಲಾನ ನಜ್ಮುದ್ದೀನ್ ಉಮರಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸೀರತ್ ಪ್ರಯುಕ್ತ ಹಿದಾಯತ್ ಸೆಂಟರ್ ನಲ್ಲಿ, ಕಲಬುರಗಿ ನಗರದಲ್ಲಿ ಕಲಬುರಗಿಯ ಚಿತ್ರಕಲಾ ತಂಡದಿಂದ ದ್ವಿತೀಯ ಬಾರಿಗೆ ಆಯೋಜಿಸಲಾಗಿದ್ದ ಇಸ್ಲಾಮಿಕ್ ಆರ್ಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಮುಹಮ್ಮದ್ ಕುಞಿ ರವರು ” ಇಸ್ಲಾಂ ಕಲೆಗೆ ಅತಿ ಹೆಚ್ಚಿನ ಮಹತ್ವ ನೀಡಿದೆ. ಕಲೆಯ ಮೂಲಕ ಮಾನವ ಅತ್ಯಂತ ಪರಿಣಾಮಕಾರಿಯಾಗಿ ವಿಷಯ ಪ್ರಸ್ತಾಪಿಸಬಲ್ಲದು. ಪ್ರವಾದಿ ಮುಹಮ್ಮದ್(ಸ) ರವರು ತಮ್ಮ ಅನುಯಾಯಿಗಳನ್ನು ಅವರ ಕಲಾ ನೈಪುಣ್ಯಕ್ಕಾಗಿ ಪ್ರೋತ್ಸಾಹಿಸುತ್ತಿದ್ದರು. ಪ್ರವಾದಿಯ ಬಗೆಗಿರುವ ತಪ್ಪು ಕಲ್ಪನೆಗಳನ್ನು ದೂರವಾಗಿಸಲು ಅವರ ಬಗ್ಗೆ ನಮಗೆ ಹೆಚ್ಚಾಗಿ ಅಧ್ಯಯನ ನಡೆಸಬೇಕಿದೆ” ಎಂದು ನುಡಿದರು.

ಎರಡು ದಿನಗಳ ಕಲಾ ಪ್ರದರ್ಶನದಲ್ಲಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ಅಂತಾರಾಷ್ಟ್ರೀಯ ಕಲಾವಿದರು ತಮ್ಮ ಚಿತ್ರಕಲೆ ಪ್ರದರ್ಶಿಸಿದರು. ಕಲಬುರಗಿಯ ಖ್ಯಾತ ಕಲಾವಿದ ಅಯಾಝುದ್ದೀನ್ ಪಟೇಲ್ ರವರ ಚಿತ್ರಕಲಾ ತಂಡದಿಂದ ಕಲಾ ಪ್ರದರ್ಶನ ಏರ್ಪಡಿಸಲಾಗಿತ್ತು.