ಸನ್ಮಾರ್ಗ ವಾರ್ತೆ
ಬಿಹಾರ,ಜೂ.28: ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿರುವುದರ ನಡುವೆ ಮೊದಲ ಬಾರಿಗೆ ಬಿಹಾರ ಗಡಿಯಲ್ಲಿ ನೇಪಾಳ ತನ್ನ ಸೈನ್ಯವನ್ನು ನಿಯೋಜಿಸಿದೆ. ಕೊರೋನಾ ಕ್ವಾರಂಟೈನ್ ಕೇಂದ್ರದ ಹೆಸರಿನಲ್ಲಿರುವ ಈ ಶಿಬಿರಗಳು ಮಿಲಿಟರಿ ನೆಲೆಗಳಾಗಿವೆ. ಸೈನ್ಯದ ಚಲನೆಯನ್ನು ನೇಪಾಳದ ರಾಜ್ ಬಿರಾಜ್ ಭನ್ಸಾರ್ ಕಚೇರಿ ಬಳಿ ಸುಪಾಲ್‌ನ ಕುನೌಲಿ ಗಡಿಯ ಮುಂದೆ ಹಲವಾರು ಬಾರಿ ನೋಡಲಾಗಿದೆ. ಮಧುಬಾನಿಯ ಮಧುಬಾಪುರದ ಪಕ್ಕದ ಮತಿಹಾನಿಯ ಕಡೆಗಳಲ್ಲಿ ನೇಪಾಳಿ ಸೈನ್ಯದ ಚಟುವಟಿಕೆಗಳು ಸಹ ಕಂಡು ಬರುತ್ತಿವೆ. ಆದರೆ, ರಕ್ಸೌಲ್ ಪಕ್ಕದ ಮಹಾದೇವ ಗ್ರಾಮದ ಬಳಿ ಬೀಡು ಬಿಟ್ಟಿದ್ದ ನೇಪಾಳಿ ಜವಾನ್ ಇದು ಕೆಲವೇ ದಿನಗಳ ವಿಷಯವಾಗಿದ್ದು, ಶೀಘ್ರದಲ್ಲೇ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಲಿದೆ ಎನ್ನುತ್ತಾರೆ.
ಗಡಿಯಲ್ಲಿ ಚೀನಾದಂತಹ ಚಟುವಟಿಕೆಗಳನ್ನು ನೇಪಾಳ ಕೂಡ ಪ್ರಾರಂಭಿಸಿದೆ. ನೇಪಾಳ ಬಿಹಾರದ ವಾಲ್ಮೀಕಿನಗರದಲ್ಲಿನ ಸುಸ್ತಾ ಪ್ರದೇಶವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿದೆ. ಭಾರತೀಯರು ಸಹ ಇಲ್ಲಿಗೆ ಹೋಗುವುದನ್ನು ನಿಷೇಧಿಸಲಾಗಿದೆ. ಈ ಪ್ರದೇಶದಲ್ಲಿನ 7,100 ಎಕರೆ ಭೂಮಿಯ ಕುರಿತು ನೇಪಾಳದೊಂದಿಗೆ ಹಳೆಯ ವಿವಾದವಿದೆ. ಈಗ ಅವರು ಸುಸ್ತಾ ಪಕ್ಕದಲ್ಲಿರುವ ನರ್ಸಾಹಿ ಅರಣ್ಯಕ್ಕೂ ಹಕ್ಕು ಸಾಧಿಸಿದ್ದಾರೆ. ನೇಪಾಳ ಸಶಸ್ತ್ರ ಪಡೆ ಇಲ್ಲಿ ಶಿಬಿರವನ್ನು ಹೂಡಿದೆ. ತ್ರಿವೇಣಿ ಘಾಟ್ ಬಳಿಯ ನದಿಯ ಪಕ್ಕದಲ್ಲಿರುವ ಕಾಡಿನಲ್ಲಿ ನೇಪಾಳ ಕೂಡ ತನ್ನ ಧ್ವಜವನ್ನು ಹಾರಿಸಿದೆ.
ಅದೇ ಸಮಯದಲ್ಲಿ, ಭಾರತದ ಎಸ್‌ಎಸ್‌ಬಿಯ ಮೃದು ನೀತಿಯ ಲಾಭವನ್ನು ನೇಪಾಳ ಪಡೆದುಕೊಳ್ಳುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ. ನರಸಹಿ ಕಾಡು ಗಂಡಕ್ ನದಿಗೆ ಅಡ್ಡಲಾಗಿ ಸುಸ್ತಾಗೆ ಸಮಾನಾಂತರವಾಗಿದೆ ಎಂದು ಹೇಳಲಾಗುತ್ತಿದ್ದು, 14,500 ಎಕರೆ ಅರಣ್ಯ ಭೂಮಿ ಮೊದಲಿನಿಂದಲೂ ಭಾರತದ ವಶದಲ್ಲಿತ್ತು ಆದರೆ, ಈಗ ನೇಪಾಳ ಇಲ್ಲಿ ಕಬ್ಬನ್ನು ಬೆಳೆಸಿದೆ ಎನ್ನುತ್ತಾರೆ.
ಬಿಹಾರದಲ್ಲಿ ನೇಪಾಳವನ್ನು ಎಂದಿಗೂ ಕೂಡ ಪ್ರತ್ಯೇಕ ದೇಶವೆಂದು ಪರಿಗಣಿಸಲಾಗಿರಲಿಲ್ಲ. ಗಡಿಯುದ್ದಕ್ಕೂ ಅನಿಯಂತ್ರಿತ ಬರು-ಹೋಗುವಿಕೆಗಳು ನಡೆಯುತ್ತಲೇ ಇದ್ದವು. ಆದರೆ, ಈಗ ಗಡಿಯಲ್ಲಿ ಪ್ರತಿ 100 ಮೀಟರ್ ದೂರದಲ್ಲಿ ನೇಪಾಳ ಸಶಸ್ತ್ರ ಪಡೆಗಳ ಸಿಬ್ಬಂದಿಗಳಿದ್ದಾರೆ. ಗಡಿ ದಾಟುವವರನ್ನು ಅವರು ತಡೆಯುತ್ತಿದ್ದಾರೆ. ಗಂಡಕ್ ಭೈರಾಜ್‌ಗೂ ಸಹ ಮೊಹರು ಹಾಕಲಾಗಿದೆ. ವಾಲ್ಮೀಕಿನಗರದ ಆಶ್ರಮ ಮತ್ತು ಸುಸ್ತಾಗೂ ಸಹ ಭೇಟಿ ನೀಡಲಾಗುತ್ತಿಲ್ಲ. ಭಾರತದೊಂದೊಗೆ ಹಂಚಿಕೊಂಡಿರವ 1751 ಕಿ.ಮೀ ಗಡಿಯುದ್ದಕ್ಕೂ 220 ಸಶಸ್ತ್ರ ಪಡೆಗಳ ಪೋಸ್ಟ್ ನಿರ್ಮಿಸಲು ನೇಪಾಳ ಸಿದ್ಧತೆ ನಡೆಸಿದೆ. ಪಕ್ಕದ ಬಿಹಾರದೊಂದಿಗೆ ಹಂಚಿಕೊಂಡಿರುವ 729ಕಿ.ಮೀಟರ್‌ನಲ್ಲಿ 631ಕಿ.ಮೀ ಗಡಿಯಲ್ಲಿ 94 ಪೋಸ್ಟ್‌ಗಳನ್ನು ಸಹ ಮಾಡಲಾಗುವುದೆಂದು ಹೇಳಲಾಗುತ್ತಿದೆ.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












