ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮಾ. 6: ದಿಲ್ಲಿಯಲ್ಲಿ ಗಲಭೆಯ ವೇಳೆ ಯಮುನಾ ವಿಹಾರದಲ್ಲಿ ಗಲಭೆಕೋರರು ಆಸ್ಪತ್ರೆಯ ಕಟ್ಟಡದ ಟೆರೆಸ್ನಲ್ಲಿ ನಿಂತು ಗುಂಡು ಹಾರಿಸುವ ದೃಶ್ಯಗಳು ಬಹಿರಂಗವಾಗಿದೆ. ಮೋಹನ್ ನರ್ಸಿಂಗ್ ಹೋ ಆಂಡ್ ಹಾಸ್ಪಿಟಲ್ ಕಟ್ಟಡದಿಂದ ರಸ್ತೆಯಲ್ಲಿದ್ದವರಿಗೆ ಗುಂಡು ಹಾರಿಸುವ ದೃಶ್ಯಗಳು ಕಂಡು ಬಂದಿವೆ.
ಫೆಬ್ರವರಿ 24ಕ್ಕೆ ನಡೆದ ಗುಂಡು ಹಾರಾಟದ ದೃಶ್ಯಗಳು ಎನ್ಡಿಟಿವಿ ಹೊರಬಿಟ್ಟಿದೆ. ಹೆಲ್ಮೆಟ್, ಕಪ್ಪು ಜಾಕೆಟ್ ಧರಿಸಿದ್ದ ದುಷ್ಕರ್ಮಿಗಳು ರಸ್ತೆಯಲ್ಲಿದ್ದ ಜನರ ಗುಂಪಿಗೆ ಗುಂಡು ಹಾರಿಸುತ್ತಿದ್ದಾರೆ. ದುಷ್ಕರ್ಮಿಯನ್ನು ಗುರುತಿಸಲು ಸಾಧ್ಯವಾಗಿಲ್ಲ. ಇನ್ನೊಂದು ದೃಶ್ಯದಲ್ಲಿ ಆಸ್ಪತ್ರೆಯ ಸಮೀಪದಲ್ಲಿರುವ ರಸ್ತೆಯಲ್ಲಿ ಹೊಟ್ಟೆಗೆ ಗುಂಡು ತಗಲಿ ರಕ್ತದ ಮಡುವಿನಲ್ಲಿ ಬಿದ್ದ ಯುವಕನ ದೃಶ್ಯವೂ ಇದೆ. ಇದು ಉತ್ತರ ಪ್ರದೇಶದ ಬುಲಂದ್ ಶಹರ್ ನ ಆಟೋಚಾಲಕ ಶಾಹಿದ್ ಖಾನ್ ಅಲವಿ (22) ಎಂದು ಗುರುತಿಸಲಾಗಿದೆ. ಈತ ಆಸ್ಪತ್ರೆಯಲ್ಲಿ ನಂತರ ಮೃತಪಟ್ಟಿದ್ದನು.
ಮುಸ್ಲಿಂ ಬಹುಸಂಖ್ಯಾತ ಪ್ರದೇಶವಾದ ಚಾಂದ್ ಬಾಗಿನಲ್ಲಿ ಮತ್ತು ಹಿಂದೂ ಪ್ರದೇಶವಾದ ಯಮುನಾ ವಿಹಾರದಲ್ಲಿ ನಡೆದ ದೃಶ್ಯಗಳು ಗಲಭೆಯು ಪೂರ್ವನಿಯೋಜಿತವಾಗಿತ್ತೆಂಬುದನ್ನು ಸ್ಪಷ್ಟಪಡಿಸುತ್ತದೆ. ಚಾಂದ್ ಬಾಗಿನಲ್ಲಿ ಮತ್ತು ಯಮುನಾ ವಿಹಾರದಲ್ಲಿ ಗುಂಡು ಹಾರಿಸಿದವರನ್ನು ಗುರುತಿಸಲು ಪೊಲೀಸರಿಗೆ ಆಗಿಲ್ಲ. ಜಾಫರಾ ಬಾದಿನಲ್ಲಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ ಶಾರೂಕ್ ಎಂಬವನನ್ನು ಮಾತ್ರ ಗುಂಡು ಹಾರಿಸಿದ ವ್ಯಕ್ತಿ ಎಂದು ಪೊಲೀಸರು ಬಂಧಿಸಿದ್ದಾರೆ. ದಿಲ್ಲಿಯಲ್ಲಿ ಮೂರು ದಿವಸ ಗಲಭೆ ನಡೆದಿತ್ತು. 53 ಮಂದಿ ಮೃತಪಟ್ಟಿದ್ದರು. ಇವರಲ್ಲಿ 12 ಮಂದಿ ಗುಂಡೇಟಿನಿಂದ ಮೃತಪಟ್ಟಿದ್ದಾರೆ. 97 ಮಂದಿಗೆ ಗುಂಡೇಟಿನಿಂದ ಗಾಯಗಳಾಗಿವೆ.












