ಬಹುತ್ವದ ವಿರೋಧಿಗಳು ಮತ್ತು ಮುಸ್ಲಿಮರ ಜವಾಬ್ದಾರಿಗಳು

0
305

✍️ ಏ.ಕೆ. ಕುಕ್ಕಿಲ

1. ದೆಹಲಿಯ ಮಾಳವಿಯ ಪ್ರದೇಶದ ಫ್ಲೋರಿಶ್ ಸ್ಟೇ ಬ್ರೆಡ್ ಆಂಡ್ ಬ್ರೇಕ್ ಫಾಸ್ಟ್ ಕಟ್ಟಡದಲ್ಲಿ ಜೂನ್ 3ರಂದು ಭೀಕರ ಬೆಂಕಿ ಅವಘಡ ಸಂಭವಿಸಿತು. ಎಲ್ಲೆಡೆ ದಟ್ಟ ಹೊಗೆ. ಧಗಧಗ ಬೆಂಕಿ. ಹೊಟೇಲ್ ಒಳಗೆ ವಿದೇಶಿಯರು ಮತ್ತು ಭಾರತೀಯರು ಸಾಕಷ್ಟು ಸಂಖ್ಯೆಯಲ್ಲಿದ್ದರು. ಮೇಲಂತಸ್ತಿನಲ್ಲಿದ್ದವರಿಗೆ ಏನು ಮಾಡ ಬೇಕೆಂದೇ ತೋಚಲಿಲ್ಲ. ಕಿಟಕಿ, ಬಾಲ್ಕನಿಗಳಿಂದ ಜಿಗಿಯುವುದೊಂದೇ ದಾರಿ ಎಂದವರು ಅಂದುಕೊಂಡರು. ಈ ಹೊಟೇಲಿನ ಪಕ್ಕದಲ್ಲಿಯೇ ಬೆಡ್ ಅಂಗಡಿಯಿತ್ತು. ರಿಯಾಝುದ್ದೀನ್ ಅನ್ಸಾರಿ ಮತ್ತು ಅವರ ಮಗ ಅರ್ಮಾನ್ ಇದನ್ನು ನಡೆಸುತ್ತಿದ್ದರು. ತಮ್ಮ ಕಣ್ಣೆದುರೇ ಒಂದಿಬ್ಬರು ಹೊಟೇಲಿನ ಮೇಲಂತಸ್ತಿನಿಂದ ಜಿಗಿದುದನ್ನು ಕಂಡು ಅವರು ಹೌಹಾರಿದರು. ಆ ಬಳಿಕ ಅವರು ಬೇರೇನೂ ಯೋಚಿಸಲಿಲ್ಲ. ಸಾವಿರಾರು ರೂಪಾಯಿ ಬೆಲೆಬಾಳುವ ತಮ್ಮ ಬೆಡ್‌ಗಳನ್ನು ರಸ್ತೆಗೆಸೆಯತೊಡಗಿದರು. ಜೀವಭಯದಿಂದ ಜಿಗಿಯುವವರನ್ನು ರಕ್ಷಿಸುವುದು ಅವರ ಉದ್ದೇಶವಾಗಿತ್ತು. ಹೀಗೆ ಹಲವರು ಈ ಬೆಡ್ ಮೇಲೆ ಜಿಗಿದು ಸಣ್ಣ-ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾದರು.

2. ಜೂನ್ 5ರಂದು ಕೇರಳದ ಜಿಮ್ ಸೆಂಟರ್ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಿತು. ಹಿಂದಿ ಮತ್ತು ಇಂಗ್ಲಿಷ್ ಟಿವಿ ಚಾನೆಲ್‌ಗಳು ಇದನ್ನು ಪ್ರೈಮ್‌ ಟೈಮ್ ಚರ್ಚೆಯಾಗಿ ಎತ್ತಿಕೊಂಡವು. ಈ ಜಿಮ್ ಸೆಂಟರ್ ಮಾಲಕನ ಹೆಸರು ನವಾಝ್‌. ತಾನು ಮಹಿಳೆಯರಿಂದ ಮಹಿಳೆಯರಿಗಾಗಿ ಇರುವ ಜಿಮ್ ಸೆಂಟರ್ ತೆರೆಯುವುದಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿ ಕೊಂಡರು. ಇಲ್ಲಿ ಮಹಿಳೆಯರಿಗೆ ಮಹಿಳೆಯರೇ ತರಬೇತಿ ಕೊಡುತ್ತಾರೆ, ಲೌಡ್ ಮ್ಯೂಸಿಕ್ ಇರುವುದಿಲ್ಲ, ಹಿಜಾಬ್‌ಗೆ ಅನುಮತಿ ಇರುತ್ತದೆ, ಪ್ರಾರ್ಥನೆಗೆ ಅವ ಕಾಶ ಇರುತ್ತದೆ’ ಎಂದು ಅವರು ಹೇಳಿದರು. ಇದನ್ನು ಇಸ್ಲಾಮ್ ಫ್ರೆಂಡ್ಲಿ ಜಿಮ್ ಸೆಂಟರ್ ಎಂದೂ ಪರಿಚಯಿಸಿದರು. ಕಳೆದ 15 ವರ್ಷಗಳಿಂದ ತಾನು ಜಿಮ್ ಸೆಂಟರ್ ನಡೆಸುತ್ತಿದ್ದು, ಪುರುಷರಿಗೆ ಪುರುಷರೇ ಟ್ರೈನರ್‌ ಇರುತ್ತಾರೆ ಎಂದೂ ಹೇಳಿದರು. ಅಂದಹಾಗೆ,

ರಿಯಾಝುದ್ದೀನ್ ಎಂಬ ಅಪ್ಪ ಹಾಗೂ ಅರ್ಮಾನ್ ಎಂಬ ಮಗ, ತಮ್ಮ ಅಂಗಡಿಯ ಬೆಡ್‌ಗಳನ್ನು ರಸ್ತೆಗೆ ಹಾಸದೇ ತಮ್ಮ ಪಾಡಿಗೆ ತಾವಿರುತ್ತಿದ್ದರೆ ಯಾರೂ ಅವರನ್ನು ಪ್ರಶ್ನಿಸುತ್ತಿರಲಿಲ್ಲ. ಅವರನ್ನು ಅಪರಾಧಿ ಅನ್ನುತ್ತಿರಲಿಲ್ಲ. ಜನರು ಜೀವಭಯದಿಂದಾಗಿ ಕಟ್ಟಡದಿಂದ ಜಿಗಿದು ಪ್ರಾಣ ಕಳಕೊಳ್ಳುತ್ತಿದ್ದರೂ ರಕ್ಷಣೆಗೆ ಬರದವರು ಎಂದು ಯಾರೂ ದೂಷಿಸುತ್ತಿರಲಿಲ್ಲ. ಯಾಕೆಂದರೆ,

ಆ ಬೆಂಕಿ ಅನಾಹುತ ನಡೆಯುವಾಗ, ಅದನ್ನು ನೋಡುತ್ತಾ ಇದ್ದವರ ಸಂಖ್ಯೆ ದೊಡ್ಡದಿತ್ತು. ಏನೂ ಮಾಡಲಾಗದೇ ಸಂಕಟಪಡುತ್ತಿದ್ದವರು ಸಾಕಷ್ಟಿದ್ದರು. ಅವರಲ್ಲಿ ಇವರೂ ಒಬ್ಬರಾಗಿ ಕಳೆದು ಹೋಗಬಹುದಿತ್ತು. ಆದರೆ, ಈ ಅಪ್ಪ ಮತ್ತು ಮಗ ಲಕ್ಷಾಂತರ ರೂಪಾಯಿ ಕಳಕೊಳ್ಳುವುದಕ್ಕೆ ಸಿದ್ಧವಾದರು. ತಾನು ಬೆಡ್ಡನ್ನು ರಸ್ತೆಗೆ ಹಾಸಿದರೆ ಆ ಬಳಿಕ ಮಾರಾಟ ಮಾಡಲು ಸಾಧ್ಯವಾಗಬಹುದಾ ಎಂದವರು ಆಲೋಚಿಸಲಿಲ್ಲ. ಎತ್ತರದಿಂದ ಬೀಳುವ ಜನರಿಂದಾಗಿ ಬೆಡ್‌ಗೆ ಹಾನಿಯಾಗಬಹುದಾ ಎಂದೂ ಅವರು ಆಲೋಚಿಸಲಿಲ್ಲ. ಆ ಕ್ಷಣದಲ್ಲಿ ‘ತಾನು, ತನ್ನದು’ ಎಂಬ ಆಲೋಚನೆಯನ್ನೇ ಅವರು ಮರೆತರು. ‘ನಾವು, ನಮ್ಮವರು’ ಎಂಬ ಸಮುಷ್ಟಿ ಭಾವವನ್ನು ತುಂಬಿಕೊಂಡರು. ತನಗೆ ಪರಿಚಯವೇ ಇಲ್ಲದ ಜನರ ಪ್ರಾಣ ಉಳಿಸುವುದನ್ನಷ್ಟೇ ಆಲೋಚಿಸಿದರು. ಇದಕ್ಕೆ ಹೋಲಿಸಿದರೆ,

ನವಾಝ್‌ನ ‘ಇಸ್ಲಾಮ್ ಫ್ರೆಂಡ್ಲಿ ಜಿಮ್ ಸೆಂಟರ್’ ತೀರಾ ವೈಯಕ್ತಿಕವಾದುದು. ತನ್ನ ಜಿಮ್ ಸೆಂಟರ್‌ಗೆ ಗ್ರಾಹಕರನ್ನು ಆಕರ್ಷಿಸುವುದಕ್ಕೆ ಪೂರಕ ನಿಯಮಗಳನ್ನು ಅವರು ಮಾಡಿದ್ದಾರೆ. ಮುಸ್ಲಿಮ್ ಮಹಿಳೆಯರಲ್ಲಿ ಕೆಲವರು ಮೈಗಂಟಿದ ಉಡುಪು ಧರಿಸಲು, ಲೌಡ್ ಮ್ಯೂಸಿಕ್ ಆಲಿಸಲು ಮತ್ತು ಪುರುಷ ಟ್ರೈನರ್‌ನಿಂದ ತರಬೇತಿ ಪಡೆಯಲು ಇಚ್ಛಿಸುವುದಿಲ್ಲ ಎಂಬುದನ್ನು ಅರಿತು ಅವರನ್ನು ತನ್ನ ಜಿಮ್ ಸೆಂಟರ್‌ಗೆ ಸೆಳೆಯುವ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದ್ದಾರೆ. ‘ಶುದ್ಧ ಸಸ್ಯಾಹಾರಿ ಹೊಟೇಲ್’ ಎಂಬ ಬೋರ್ಡ್ ತೂಗು ಹಾಕಿರುವ ಅಥವಾ ಹವ್ಯಕ ಖಾನಾವಳಿ, ಲಿಂಗಾಯತ ಖಾನಾವಳಿ ಎಂಬೆಲ್ಲಾ ಬೋರ್ಡುಗಳಿರುವ ಹೊಟೇಲ್‌ಗಳಂತೆ ಇದನ್ನೂ ಪರಿಗಣಿಸಬಹುದು. ಈ ಎರಡರ ಉದ್ದೇಶವೂ ನಿರ್ದಿಷ್ಟ ವ್ಯಕ್ತಿಗಳನ್ನು ಆಕರ್ಷಿಸುವುದು. ಆದರೆ, ಟಿವಿ ಮೀಡಿಯಾಗಳು ಮತ್ತು ಸೋಶಿಯಲ್ ಮೀಡಿಯಾಗಳಿಗೆ ರಿಯಾಝುದ್ದೀನ್ ಗಿಂತ ‘ಇಸ್ಲಾಮ್ ಫ್ರೆಂಡ್ಲಿ ಜಿಮ್ ಸೆಂಟರ್’ ಮುಖ್ಯವಾಯಿತು. ಕಾರ್ಯಕ್ರಮಗಳ ಮೇಲೆ ಕಾರ್ಯಕ್ರಮಗಳನ್ನು ಟಿವಿ ಚಾನೆಲ್‌ಗಳು ಪ್ರಸಾರ ಮಾಡಿದುವು.

ಯಾಕೆಂದರೆ, ಜಿಮ್ ಸೆಂಟರ್‌ನಲ್ಲಿ ಇಸ್ಲಾಮ್ ಇತ್ತು. ನಿಜವಾಗಿ,

ವರ್ತಮಾನ ಜಗತ್ತಿನ ಅತಿದೊಡ್ಡ ಸಮಸ್ಯೆ ಯುದ್ಧ ಅಲ್ಲ, ಗಾಝಾ ಅಲ್ಲ, ಎಬೋಲಾ ಅಲ್ಲ, ಆಫ್ರಿಕನ್ ರಾಷ್ಟ್ರಗಳ ಹಸಿವೂ ಅಲ್ಲ. ಇವೆಲ್ಲ ಚರ್ಚೆಯ ಮಧ್ಯೆ ಆಗಾಗ ಬಂದು ಹೋಗುವ

ಸಂಗತಿಗಳೇ ಹೊರತು ಟಿವಿ ಚಾನೆಲ್‌ಗಳು ಮತ್ತು ಸೋಶಿಯಲ್ ಮೀಡಿಯಾಗಳು ಇವುಗಳ ಬಗ್ಗೆ ಅಷ್ಟು ಗಂಭೀರವಾಗಿಲ್ಲ. ಅವುಗಳು ಗಮನ ಹರಿಸಿರುವುದು ಇಸ್ಲಾಮ್‌ನ ಬಗ್ಗೆ ಮಾತ್ರ. ಆರೋಪಿಯ ಹೆಸರು ಅಬ್ದುಲ್ಲಾ ಎಂದಾದರೆ, ಆತನ ಕೃತ್ಯದ ಹೊಣೆಯನ್ನು ಆತನ ಧರ್ಮವೂ ಹೊರಬೇಕಾಗುತ್ತದೆ. ಕುರ್‌ಆನ್‌ನಲ್ಲಿರುವ ‘ಜಿಹಾದ್’ ಎಂಬ ಪರಿಕಲ್ಪನೆಯೇ ಇದಕ್ಕೆ ಕಾರಣ ಎಂದು ಸಮರ್ಥಿಸಲಾಗುತ್ತದೆ. ಅಬ್ದುಲ್ಲಾನಿಂದ ಕಿರುಕುಳಕ್ಕೆ ಒಳಗಾದವನ ಹೆಸರು ಅಭಿಷೇಕ್ ಎಂದಾಗಿದ್ದರೆ, ಕುರ್‌ಆನ್‌ನಲ್ಲಿರುವ ‘ಕಾಫಿರ್’ ಪದದ ಪ್ರೇರಣೆಯಿಂದಲೇ ಹೀಗೆ ಮಾಡಲಾಗಿದೆ ಎನ್ನಲಾಗುತ್ತದೆ. ಕುರ್ಬಾನಿ, ಉಪವಾಸ, ನಮಾಝ್‌, ಹಿಜಾಬ್, ಬುರ್ಖಾ, ಟೋಪಿ, ಪೈಜಾಮ, ಕುರ್ತಾ, ಗಡ್ಡ, ಮಸೀದಿ.. ಇತ್ಯಾದಿ ಪ್ರತಿಯೊಂದರಲ್ಲೂ ದ್ವೇಷವನ್ನು ಹುಡುಕುವುದು ಮತ್ತು ಭಯ ಬಿತ್ತುವುದನ್ನು ಈ ದೇಶದಲ್ಲಿ ಪೂರ್ಣಕಾಲಿಕ ಉದ್ಯೋಗವನ್ನಾಗಿ ಪರಿವರ್ತಿಸಲಾಗಿದೆ. ನಿರಂತರ ಭಯ ಬಿತ್ತುವ ಈ ಪ್ರಕ್ರಿಯೆಯು ನಿಧಾನವಾಗಿ ಜನಸಾಮಾನ್ಯರನ್ನು ಪ್ರಭಾವಿತಗೊಳಿಸತೊಡಗುತ್ತದೆ.

ಇಸ್ಲಾಮ್ ಅಂದರೆ ಜಿಹಾದ್, ಇಸ್ಲಾಮ್ ಅಂದರೆ ಬುರ್ಖಾ, ಇಸ್ಲಾಮ್ ಅಂದರೆ ಹಿಜಾಬ್, ಇಸ್ಲಾಮ್ ಅಂದರೆ ಗಡ್ಡ, ಟೋಪಿ, ಮಸೀದಿ, ಪ್ರಾಣಿಬಲಿ.. ಎಂದೆಲ್ಲಾ ಜನರು ಭಾವಿಸತೊಡಗುತ್ತಾರೆ. ಅಸ್ತಿತ್ವದ ಭಯ ಅವರಲ್ಲಿ ಆವರಿಸತೊಡಗುತ್ತದೆ. ‘ಮುಸ್ಲಿಮರ ಜೊತೆ ಬದುಕು ಸಾಧ್ಯವಿಲ್ಲ ಎಂಬ ಪ್ರಚಾರಕ್ಕೆ ಅವರೂ ಮೌನವಾಗಿ ಶರಣಾಗತೊಡಗುತ್ತಾರೆ. ಇದಕ್ಕೆ ಪೂರಕವಾಗಿ ಎಲ್ಲೆಲ್ಲಿಯದೋ ಒಂಟಿ ಘಟನೆಗಳ ವೀಡಿಯೋ ಮತ್ತು ಸುದ್ದಿಗಳು ಇವರ ವಾಟ್ಸಾಪ್ ಗ್ರೂಪಿಗೆ ಬಂದು ಬೀಳುತ್ತಲೂ ಇರುತ್ತದೆ. ನಡುನಡುವೆ ದುರಂಧರ್ ಬರುತ್ತದೆ. ಕೇರಳ ಸ್ಟೋರಿ ಬರುತ್ತದೆ. ಕಾಶ್ಮೀರ್ ಫೈಲ್ಸ್ ಬರುತ್ತದೆ. ಹೀಗೆ,

ಮುಸ್ಲಿಮ್ ದ್ವೇಷವನ್ನು ನಿರಂತರ ಕಾಪಿಡುವ ಪ್ರಕ್ರಿಯೆಯೊಂದು ನಡೆಯುತ್ತಲೇ ಇರುತ್ತದೆ. ಇದನ್ನು ಕಂಡೂ ಕಂಡೂ ಜನಸಾಮಾನ್ಯರ ಮನಸೂ ನಿಧಾನಕ್ಕೆ ಕಲ್ಲಾಗತೊಡಗುತ್ತದೆ. ಇವರು ಮುಸ್ಲಿಮ್ ದ್ವೇಷದ ಪ್ರಕ್ರಿಯೆಯಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳದಿದ್ದರೂ ಆಂತರಿಕವಾಗಿ ದ್ವೇಷವನ್ನು ಹೊತ್ತುಕೊಂಡು ತಿರುಗುತ್ತಿರುತ್ತಾರೆ. ‘ಎನ್‌ಆರ್‌ಸಿ ನಡೆಯುವುದೇ ಮುಸ್ಲಿಮರನ್ನು ಹೊರಹಾಕುವುದಕ್ಕಾಗಿ’ ಎಂಬ ರಾಜಕೀಯ ಪ್ರಣೀತ ಪ್ರಚಾರದಿಂದ ಒಳಗೊಳಗೇ ಪುಳಕಿತಗೊಳ್ಳುತ್ತಾರೆ. ಎಸ್‌ಐಆರ್‌ನಿಂದಾಗಿ ಮತದಾ ನದ ಅವಕಾಶವನ್ನು ಕಳಕೊಂಡವರೆಲ್ಲ ಬಾಂಗ್ಲಾದೇಶಿ ನುಸುಳು ಕೋರರು..’ ಎಂಬ ಸುಳ್ಳನ್ನು ಹೇಗೆ ವ್ಯವಸ್ಥಿತವಾಗಿ ಹರಡಲಾಗಿದೆಯೋ ಅದೇ ರೀತಿಯಲ್ಲಿ ಎನ್‌ಆರ್‌ಸಿಯ ಬಗ್ಗೆಯೂ ವಕ್ಫ್‌ನ ಬಗ್ಗೆಯೂ ಮತ್ತು ತಲಾಕ್‌ನ ಬಗ್ಗೆಯೂ ಹರಡಲಾಗಿದೆ.

‘ವಕ್ಫ್ ಅಂದರೆ ಹಿಂದೂಗಳಿಂದ ಭೂಮಿ ಕಸಿದುಕೊಳ್ಳುವುದರ ಹೆಸರು’ ಎಂದು ನಂಬಿರುವ ಬಹುದೊಡ್ಡ ಗುಂಪು ಈಗಲೂ ಈ ದೇಶದಲ್ಲಿದೆ. ಡೈವೋರ್ಸ್ ಎಂದು ಇಂಗ್ಲಿಷ್‌ನಲ್ಲಿ ಹೇಳು ವುದನ್ನೇ ತಲಾಕ್ ಎಂದು ಅರಬಿಯಲ್ಲಿ ಹೇಳುತ್ತಾರೆ ಎಂದು ವಿವರಿಸಿದರೆ, ಸಾರಾಸಗಟು ತಿರಸ್ಕರಿಸುವವರ ಸಂಖ್ಯೆಯೂ ದೊಡ್ಡದಿದೆ. ಹಿಜಾಬ್ ಎಂದರೆ ಕಣ್ಣು, ತಲೆ, ದೇಹವನ್ನು ಮುಚ್ಚುವ ಉಡುಪಿನ ಹೆಸರು ಎಂದು ವಾದಿಸುವವರೂ ಈ ದೇಶದಲ್ಲಿ ಧಾರಾಳ ಇದ್ದಾರೆ. ತಲೆ ಮುಚ್ಚುವ ವಸ್ತ್ರದ ಹೆಸರು ಹಿಜಾಬ್, ಮುಖವನ್ನು ಮುಚ್ಚುವ ವಸ್ತ್ರದ ಹೆಸರು ನಕಾಬ್ ಮತ್ತು ಒಂದೇ ಬಟ್ಟೆಯಿಂದ ಮೈಮುಚ್ಚುವ ವಸ್ತ್ರಕ್ಕೆ ಬುರ್ಖಾ ಎನ್ನುತ್ತಾರೆ ಎಂದು ಗೊತ್ತಿಲ್ಲದವರ ಸಂಖ್ಯೆ ಸಣ್ಣದೇನಲ್ಲ. ಗೊತ್ತಿದ್ದೇ ಅಪಪ್ರಚಾರ ಮಾಡುವವರ ಸಂಖ್ಯೆಯೂ ಸಣ್ಣದಲ್ಲ. ಹಾಗಂತ,

ಈ ಇಸ್ಲಾಮೋಫೋಬಿಯಾ ಅಥವಾ ಇಸ್ಲಾಮನ್ನು ಭೀತಿಕಾರಕವಾಗಿ ಚಿತ್ರಿಸುವುದಕ್ಕೆ ಪರಿಹಾರ ಏನು ಎಂಬ ಪ್ರಶ್ನೆ ಇದೆ. ಈ ಪ್ರಶ್ನೆಯನ್ನು ಮುಸ್ಲಿಮರು ಸ್ವಯಂ ಕೇಳಿಕೊಳ್ಳಬೇಕಾಗಿದೆ. ವ್ಯಕ್ತಿಯಿಂದ ಹಿಡಿದು ಸಂಘಟನೆಗಳ ವರೆಗೆ, ಮೌಲಾನಾರಿಂದ ಹಿಡಿದು ಕಾರ್ಮಿಕರ ವರೆಗೆ ಈ ಅಪಪ್ರಚಾರಕ್ಕೆ ಕಾನೂನಿನ ಚೌಕಟ್ಟಿನೊಳಗೆ ಕೊಡಬಹುದಾದ ಉತ್ತರವನ್ನು ಕಂಡುಕೊಳ್ಳ ಬೇಕಾಗಿದೆ. ವ್ಯಕ್ತಿಯಾಗಲಿ, ಸಂಘಟನೆಗಳಾಗಲಿ, ಇಸ್ಲಾಮೋ ಫೋಬಿಯಾವನ್ನು ತಡೆಯುವುದಕ್ಕೆ ನಿರಂತರ ಪ್ರಯತ್ನಿಸಿದರೆ ಬಹುವಂಶ ಯಶಸ್ಸು ಸಾಧಿಸಬಹುದು.

ಸೋಶಿಯಲ್ ಮೀಡಿಯಾಗಳಲ್ಲಿ ಪ್ರಕಟವಾಗುವ ಇಸ್ಲಾಮೋಫೋಬಿಯಾದ ಕಂಟೆಂಟ್‌ಗಳನ್ನು ಪರಿಶೀಲಿಸಿ ಸಾವಧಾನವಾಗಿ ಮತ್ತು ಪರಿಣಾಮಕಾರಿಯಾಗಿ ಉತ್ತರಿಸುವ ಪ್ರಯತ್ನ ನಡೆಯಬೇಕು. ಉತ್ತರ ಮಾತ್ರ ಸರಿಯಾಗಿದ್ದರೆ ಸಾಲದು, ಹೇಳುವ ಭಾಷೆಯೂ ಅಷ್ಟೇ ಸರಿಯಾಗಿರಬೇಕು. ಹಾಗೆಯೇ, ಧರ್ಮದ್ವೇಷದ ಬರಹಗಳ ಸ್ಕ್ರೀನ್‌ ಶಾಟ್‌ಗಳನ್ನು ತೆಗೆದಿಟ್ಟು ಪೊಲೀಸರಿಗೆ ತಲುಪಿಸುವ ವ್ಯವಸ್ಥೆ ಮಾಡಬಹುದು. ಪೊಲೀಸ್ ಇಲಾಖೆಯು ತನ್ನದೇ ಆದ ಸೋಶಿಯಲ್ ಮೀಡಿಯಾ ಅಕೌಂಟ್‌ಗಳನ್ನು ಹೊಂದಿದ್ದು, ಅಲ್ಲಿ ಈ ಎಲ್ಲವನ್ನೂ ಹಂಚಿ ಕೊಳ್ಳಬಹುದು. ಇದರ ಜೊತೆಗೆ, ಪ್ರತಿಯೋರ್ವ ಮುಸ್ಲಿಮ್ ವ್ಯಕ್ತಿಯೂ ತನ್ನ ಮನೆಯಲ್ಲಿ ಇಂಥ ವಿಷಯಗಳ ಬಗ್ಗೆ ಜಾಗೃತಿಯನ್ನು ಮೂಡಿಸಬಹುದು. ಮಕ್ಕಳನ್ನು ಬಹುಸಂಸ್ಕೃತಿಯ ಭಾಗವಾಗಿ ಬದುಕುವಂತೆ ಮತ್ತು ಇಂಥ ಸಂದರ್ಭಗಳಲ್ಲಿ ಎದುರಾಗುವ ಸಮಸ್ಯೆಗಳೇನು ಎಂಬುದನ್ನು ಅರ್ಥವಾಗುವಂತೆ ತಿಳಿಸಬಹುದು. ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಇಸ್ಲಾಮ್ ಮತ್ತು ಮುಸ್ಲಿಮರ ವಿರುದ್ಧ ನಡೆಯುವ ಅಪಪ್ರಚಾರಗಳು, ಅದನ್ನು ನಿರ್ವಹಿಸಬೇಕಾದ ವಿಧಾನಗಳು ಮತ್ತು ಈ ಎಲ್ಲ ಸಂದರ್ಭಗಳಲ್ಲಿ ನಮ್ಮಲ್ಲಿರಬೇಕಾದ ಎಚ್ಚರಿಕೆಗಳ ಸುತ್ತ ಮನೆಯವರಲ್ಲಿ ಜಾಗೃತಿ ಮೂಡಿಸಬಹುದು.

ಇದು ವ್ಯಕ್ತಿಗತ ಪ್ರಯತ್ನ

ಇನ್ನು, ಸಂಘಟಿತವಾಗಿ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು. ಸಂಘಟನೆ ಎಂಬುದು ಹಲವು ಜನರ ಗುಂಪಾಗಿರುವುದರಿಂದ, ಹತ್ತು-ಹಲವು ಹೊಣೆಗಾರಿಕೆಗಳನ್ನು ಹಂಚಿಕೊಂಡು ಕೆಲಸ ಮಾಡಬಹುದು. ಆನ್‌ಲೈನ್ ದ್ವೇಷ ಮತ್ತು ಅಪಪ್ರಚಾರಗಳ ಮೇಲೆ ನಿಗಾ ವಹಿಸುವುದಕ್ಕೆ ಮತ್ತು ಅವುಗಳಿಗೆ ಸೂಕ್ತ ಉತ್ತರ ಕೊಡುವುದಕ್ಕೆ ಸಂಘಟನೆಗಳು ತಜ್ಞರ ತಂಡವೊಂದನ್ನು ರಚಿಸಬಹುದು. ದೇಶದಲ್ಲಿ ಮುಸ್ಲಿಮ್ ಸಂಘಟನೆಗಳಿಗೇನೂ ಕೊರತೆಯಿಲ್ಲ. ಗಲ್ಲಿಗಲ್ಲಿಗೆ ಒಂದಕ್ಕಿಂತ ಹೆಚ್ಚು ಸಂಘಟನೆಗಳಿವೆ. ಈ ಎಲ್ಲವುಗಳ ಉದ್ದೇಶ ಮತ್ತು ಗುರಿ ಬೇರೆ ಬೇರೆ ಆಗಿದ್ದರೂ ಇಸ್ಲಾಮ್ ಮತ್ತು ಮುಸ್ಲಿಮರ ಕುರಿತಾದ ಅಪಪ್ರಚಾರವನ್ನು ತಡೆಗಟ್ಟುವುದಕ್ಕಾಗಿ ಈ ಎಲ್ಲವೂ ಸಮಾನ ಬದ್ಧತೆಯನ್ನು ತೋರಿದರೆ ಬಹುದೊಡ್ಡ ಯಶಸ್ಸು ಸಾಧಿಸಬಹುದು.

ಪ್ರತಿ ಜಿಲ್ಲೆಯ ಪ್ರಮುಖ ಮತ್ತು ಪ್ರಬಲ ಸಂಘಟನೆಗಳು ಒಂದೆಡೆ ಸೇರಿ ಇಂಥ ಅಪಪ್ರಚಾರಗಳಿಗೆ ಮತ್ತು ಆನ್‌ಲೈನ್ ದ್ವೇಷಕ್ಕೆ ಸಮರ್ಪಕ ಉತ್ತರ ಕೊಡುವುದಕ್ಕೆ ಮತ್ತು ಸತ್ಯವನ್ನು ಹಂಚುವುದಕ್ಕೆ ಏಕತಂಡವನ್ನು ರಚಿಸುವ ಬುದ್ಧಿ ವಂತಿಕೆಯನ್ನು ಪ್ರದರ್ಶಿಸಬೇಕು. ಇದೇನೂ ಹಿಮಾಲಯ ಏರುವಂಥ ಕಷ್ಟದ ಕೆಲಸವಲ್ಲ. ಪ್ರತಿ ಜಿಲ್ಲೆಯಲ್ಲೂ ಇಂಥ ಪ್ರಬಲ ಐಟಿ ತಂಡವನ್ನು ರಚಿಸುವುದು ಮತ್ತು ಆ ತಂಡದಲ್ಲಿರುವವರಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ನೀಡುವುದು ಹಾಗೂ ಪ್ರತಿದಿನ ಈ ತಂಡದ ಕೆಲಸಗಳ ಬಗ್ಗೆ ಪರಾ ಮರ್ಶೆ ನಡೆಸುವುದನ್ನು ಮಾಡಿದರೆ, ಸುಳ್ಳು ಪಲಾಯನ ಮಾಡುವುದು ಖಚಿತ. ಈ ಸುಳ್ಳು ಮತ್ತು ಸತ್ಯದ ಸಂಘರ್ಷದಲ್ಲಿ ಎಲ್ಲಿಯವರೆಗೆ ಸತ್ಯದಲ್ಲಿರುವವರು ತಾಳ್ಮೆ ಮತ್ತು ವಿವೇಕ ದೊಂದಿಗೆ ಪ್ರತಿಕ್ರಿಯಿಸುತ್ತಾರೋ ಅಲ್ಲಿಯವರೆಗೆ ಸತ್ಯವೇ ಗೆಲ್ಲುತ್ತಲಿರುತ್ತದೆ. ಯಾಕೆಂದರೆ,

ಸುಳ್ಳು ಅಲ್ಪಾಯು, ಸತ್ಯ ದೀರ್ಘಾಯು.