ಜಪಾನ್ ಮಾಜಿ‌ ಪ್ರಧಾನಿ ಶಿಂಜೊ ಅಬೆ, ಎಸ್.ಪಿ.ಬಿ, ಡಾ. ಬಿ.ಎಂ.‌ಹೆಗ್ಡೆ ಸೇರಿ ಏಳು ಮಂದಿಗೆ ಪದ್ಮ ವಿಭೂಷಣ ಪ್ರಶಸ್ತಿ

0
450

ಸನ್ಮಾರ್ಗ ವಾರ್ತೆ

ನವದೆಹಲಿ: ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಮತ್ತು ಸಂಗೀತ ದಂತಕಥೆ ಎಸ್‌ಪಿ ಬಾಲಸುಬ್ರಹ್ಮಣ್ಯಂ, ಖ್ಯಾತ ವೈದ್ಯ ಡಾ. ಬಿ.ಎಂ. ಹೆಗ್ಡೆ ಸೇರಿದಂತೆ ಏಳು ಮಂದಿ ಸಾಧಕರಿಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣ ನೀಡಿ ಗೌರವಿಸಲಾಗಿದೆ ಎಂದು ಸರ್ಕಾರ ಇಂದು ಪ್ರಕಟಿಸಿದೆ.

ಖ್ಯಾತ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಮರಣೋತ್ತರವಾಗಿ ಗೌರವ ನೀಡಲಾಯಿತು. ಸುಮಾರು ಎರಡು ತಿಂಗಳ ಚಿಕಿತ್ಸೆಯ ನಂತರ ಅವರು ಕಳೆದ ವರ್ಷ ಚೆನ್ನೈ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.

ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಮತ್ತು ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ಮರಣೋತ್ತರವಾಗಿ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ. ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರನ್ನು ಪದ್ಮಭೂಷಣಕ್ಕೆ ಆಯ್ಕೆ ಮಾಡಲಾಗಿದೆ.

ಕ್ರೀಡೆ, ವೈದ್ಯಕೀಯ, ಕಲೆ, ಸಾಹಿತ್ಯ ಮತ್ತು ಇತರ ಕ್ಷೇತ್ರಗಳ 119 ಪ್ರಮುಖ ವ್ಯಕ್ತಿಗಳನ್ನು ಅವರ ವಿಶಿಷ್ಟ ಕಾರ್ಯಗಳಿಗಾಗಿ ಸರ್ಕಾರ ಗೌರವಿಸಿ ಇಂದು ಸಂಜೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪದ್ಮವಿಭೂಷಣ, ಪದ್ಮಭೂಷಣ್ ಮತ್ತು ಪದ್ಮಶ್ರೀ ಎಂಬ ಮೂರು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

ಪದ್ಮವಿಭೂಷಣಕ್ಕೆ 7 ಮಂದಿ, ಪದ್ಮಭೂಷಣಕ್ಕೆ ಈ ವರ್ಷ 10 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಈ ವರ್ಷ 102 ಸಾಧಕರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದರಲ್ಲಿ ಕುಸ್ತಿಪಟು ವೀರೇಂದ್ರ ಸಿಂಗ್ ಮತ್ತು ಖ್ಯಾತ ಸಂಗೀತಗಾರ ಬಾಂಬೆ ಜಯಶ್ರೀ ಕೂಡಾ ಸೇರಿದ್ದಾರೆ.