ಪಾಕಿಸ್ತಾನ್ ಕಾ ಚರ್ಚಾ ಪಾಕಿಸ್ತಾನ್ ಕರೇ, ಹಮ್ ಹಿಂದೂಸ್ತಾನ್ ಕಾ ಚರ್ಚಾ ಕರೇಗಾ, ಏ ಹಮಾರಿ ಜನ್ಮಭೂಮಿ ಹೈ- ಪ್ರಧಾನಿಯನ್ನು ಕುಟುಕಿದ ಮಮತಾ

0
2009

ಸನ್ಮಾರ್ಗ ವಾರ್ತೆ-
ಪ್ರಧಾನಿ ನರೇಂದ್ರ ಮೋದಿಯವರನ್ನು ಪಾಕಿಸ್ತಾನದ ರಾಯಭಾರಿ ಎಂದು ಲೇವಡಿ ಮಾಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪ್ರಧಾನಿಯವರು ಭಾರತದ ಬಗ್ಗೆ ಮಾತನಾಡುವ ಬದಲು ಇಡೀ ದಿನ ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದ್ದಾರೆ.

ಉತ್ತರ ಬಂಗಾಳದಲ್ಲಿ ನಡೆದ ಸಿಎಎ ವಿರೋಧಿ ರಾಲಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, “ನೀವು ಯಾವಾಗಲೂ ನಮ್ಮ ರಾಷ್ಟ್ರವನ್ನು ಪಾಕಿಸ್ತಾನದೊಂದಿಗೆ ಏಕೆ ಹೋಲಿಸುತ್ತೀರಿ? ನೀವು ಹಿಂದೂಸ್ತಾನ್ ಬಗ್ಗೆ ಮಾತನಾಡಬೇಕು. ನಾವು ಪಾಕಿಸ್ತಾನವಾಗಲು ಬಯಸುವುದಿಲ್ಲ. ನಾವು ಹಿಂದೂಸ್ತಾನವನ್ನು ಪ್ರೀತಿಸುತ್ತೇವೆ. ಪಿ ಎಂ ಮೋದಿ ಪಾಕಿಸ್ತಾನದ ರಾಯಭಾರಿಯಂತೆ ಇಡೀ ದಿನ ಪಾಕಿಸ್ತಾನದ ಬಗ್ಗೆ ಮಾತಾಡುತ್ತಾರೆ” ಎಂದಿದ್ದಾರೆ.

“ನನಗೆ ಕೆಲಸ ಕೊಡಿ ಮತ್ತು ನನಗೆ ಕೆಲಸವಿಲ್ಲ ಎಂದು ಯಾರಾದರೂ ಹೇಳಿದರೆ, ಪಾಕಿಸ್ತಾನಕ್ಕೆ ಹೋಗು ಎಂದು ಪ್ರಧಾನಿ ಹೇಳುತ್ತಾರೆ. ನಮಗೆ ಯಾವುದೇ ಕೈಗಾರಿಕೆಗಳಿಲ್ಲ ಎಂದು ಯಾರಾದರೂ ಹೇಳಿದರೆ ಅವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಅವರು ಹೇಳುತ್ತಾರೆ. ಪಾಕಿಸ್ತಾನ್ ಕಾ ಚರ್ಚಾ ಪಾಕಿಸ್ತಾನ್ ಕರೇ, ಹಮ್ ಹಿಂದೂಸ್ತಾನ್ ಕಾ ಚರ್ಚಾ ಕರೇಗಾ, ಏ ಹಮಾರಿ ಜನ್ಮಭೂಮಿ ಹೈ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಭಾರತವು ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿರುವ ದೊಡ್ಡ ದೇಶ; ನಮ್ಮ ರಾಷ್ಟ್ರವನ್ನು ಪಾಕಿಸ್ತಾನದೊಂದಿಗೆ ಏಕೆ ಹೋಲಿಸುತ್ತೀರಿ ಎಂದು ಸಿಲಿಗುರಿಯಲ್ಲಿ ನಡೆದ ರಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ ಮಮತಾ ಬ್ಯಾನರ್ಜಿ ಪ್ರಶ್ನಿಸಿದರಲ್ಲದೆ, ಪೌರತ್ವ ಕಾಯ್ದೆಯ ವಿರುದ್ಧದ ಪ್ರತಿಭಟನೆಗಳನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದರು ಮತ್ತು ವಿವಾದಾತ್ಮಕ ಕಾನೂನು ರದ್ದುಗೊಳ್ಳುವವರೆಗೂ ಆಂದೋಲನ ಮುಂದುವರಿಯುತ್ತದೆ ಎಂದು ಹೇಳಿದರು.

“ಧರ್ಮದ ಆಧಾರದ ಮೇಲೆ ರಾಷ್ಟ್ರವನ್ನು ಹೇಗೆ ವಿಭಜಿಸಬೇಕು ಎಂಬುದು ಅವರಿಗೆ ಮಾತ್ರ ತಿಳಿದಿದೆ. ಆದರೆ ನನ್ನ ಧರ್ಮವು ಜನರ ಸ್ವಾತಂತ್ರ್ಯವನ್ನು ಕಾಪಾಡುವುದು. ಇದು ನಮ್ಮ ಎರಡನೇ ಸ್ವಾತಂತ್ರ್ಯ ಹೋರಾಟ, ದೇಶವನ್ನು ಧಾರ್ಮಿಕ ಧರ್ಮಾಂಧತೆಯಿಂದ ರಕ್ಷಿಸಲು ಈ ಹೋರಾಟ. ಸ್ವಾತಂತ್ರ್ಯದ 70 ವರ್ಷಗಳ ನಂತರವೂ ನಾವು ನಮ್ಮ ಪೌರತ್ವವನ್ನು ಸಾಬೀತುಪಡಿಸಬೇಕಾಗಿರುವುದು ನಾಚಿಕೆಗೇಡಿನ ಸಂಗತಿ” ಎಂದು ಅವರು ಹೇಳಿದರು.