ಅಬ್ಬ ನಿಮ್ಮ ನೆನಪಿನಲಿ

1
1757

ಸನ್ಮಾರ್ಗ ವಾರ್ತೆ

ಲುಬ್ನಾ ಝಕಿಯ್ಯ

ಈ ಜೀವನವೇ ಹೀಗೆ, ಹಲವರು ಪ್ರತಿಷ್ಠೆ, ಅಂತಸ್ತು, ಹಿರಿತನಗಳನ್ನು ತಮ್ಮದಾಗಿಸುವ ಧಾವಂತದಲ್ಲಿ ಬದುಕನ್ನು ಸವೆಸುವುದಾದರೆ, ಬೆರಳೆಣಿಕೆಯಷ್ಟು ಮಂದಿ ಜೀವನದ ನೈಜ ಮರ್ಮವನ್ನರಿತು ಜೀವಿಸುವವರು. ಬದುಕು ಎಸೆಯುವ ಸವಾಲುಗಳನ್ನು ನಿರ್ವಿಕಾರವಾಗಿ ಸ್ವೀಕರಿಸುತ್ತಾ ತನ್ನ ಬಳಿ ಸುಖ, ಸವಲತ್ತು, ಅಂತಸ್ತು ಗಳಿಸಲು ಸುಲಭ ದಾರಿ ಇದ್ದರೂ ಅವೆಲ್ಲವನ್ನು ತ್ಯಜಿಸಿ ತಾನು ನೆಚ್ಚಿದ ನೈಜ ಆದರ್ಶದಂತೆ ಸ್ವತಃ ಜೀವಿಸಿ ಇತರರಿಗೂ ಮಾದರಿಯಾಗುವವರು ತೀರಾ ಕಡಿಮೆ ಎಂಬುದು ವಾಸ್ತವ. ಅಂತಹ ಅತಿ ವಿರಳ ದಾರ್ಶನಿಕ ವ್ಯಕ್ತಿತ್ವ ದಲ್ಲಿ ನನ್ನ ತಂದೆಯವರು ಒಬ್ಬರು ಎಂದರೆ ಅತಿಶಯೋಕ್ತಿಯಾಗಲಾರದು.

ತನ್ನಲ್ಲಿರುವ ಪ್ರತಿಭೆ, ಪದವಿ, ಚಾಣಾಕ್ಷತನದಿಂದ ಈ ಭೌತಿಕ ಲೋಕದಲ್ಲಿ ತಾನಿಚ್ಚಿಸಿದರೆ ಐಷಾರಾಮಿ ಜೀವನವನ್ನು ನಡೆಸುವ ಎಲ್ಲ ಸಾಧನಾನುಕೂಲತೆಗಳಿದ್ದರೂ, ನನ್ನಲ್ಲೊಂದು ಆದರ್ಶವಿದೆ, ಅದನ್ನು ಬದಿಗೊತ್ತಿ ತನ್ನ ಸ್ವ ಇಚ್ಛೆಗೆ ಆದ್ಯತೆ ನೀಡಲಾರೆ ಎಂದು ಕೆಚ್ಚೆದೆಯಿಂದ ಬದುಕಿದರು. ಆ ದಿನಗಳಲ್ಲಿ ಜನರು ಪ್ರತಿಷ್ಠೆಯ, ಹಣಗಳಿಕೆಯ, ಭದ್ರ ಭವಿಷ್ಯದ ಸೋಪಾನ ಎಂದು ಭಾವಿಸುತ್ತಿದ್ದ, ಬ್ಯಾಂಕಿನ ಉದ್ಯೋಗವನ್ನು ಸಾರಾಸಗಟಾಗಿ ತಿರಸ್ಕರಿಸಿ, ಅಲ್ಲಾಹನ ಇಚ್ಛೆಗೆ ವಿರುದ್ಧವಾದ ತನ್ನ ಅಭಿಲಾಷೆ ಗಳಿಗೆ ಕಡಿವಾಣ ಹಾಕಿದ ಮೇರು ವ್ಯಕ್ತಿತ್ವ ಅವರದು.

ಪರೋಪಕಾರ ಕರುಣೆ, ದಯೆ, ತ್ಯಾಗ ಇತ್ಯಾದಿ ಗುಣ ವಿಶೇಷಗಳಿಗೆ ಪದಗಳಲ್ಲಿರುವ ಸೌಂದರ್ಯಕ್ಕಿಂತ ಅದರ ಪ್ರಕಟಣೆಯಲ್ಲಿನ ಮೆರಗು ಅನನ್ಯ ಎಂಬುದನ್ನು ತನ್ನ ಜೀವನದಲ್ಲಿ ಸಾಧಿಸಿ ತೋರಿಸಿದ ಕೆಲವೇ ಕೆಲವು ಮಂದಿಯಲ್ಲಿ ನನ್ನ ತಂದೆಯವರು ಒಬ್ಬರು ಎಂಬುದು ತಡವಾಗಿಯಾದರೂ ನನ್ನ ಅರಿವಿಗೆ ಬಂದಿದೆ.

ಕುಟುಂಬ ಸಂಬಂಧವನ್ನು ಬಲಪಡಿಸುವ ಬಗ್ಗೆ ಅವರು ವಿಶೇಷ ಕಾಳಜಿ ವಹಿಸುತ್ತಿದ್ದರು.ತುಂಬು ಕುಟುಂಬ ವಿದ್ದರೂ ಅನುಕೂಲಸ್ಥರಲ್ಲದ ಬಡ ಸಂಬಂಧಿಕರಿಗೆ ತನ್ನಿಂದಾದ ನೆರವಿನ ಹಸ್ತವನ್ನು ಚಾಚುತ್ತಿದ್ದುದು ಅವರ ವ್ಯಕ್ತಿತ್ವದ ವಿಶೇಷ. ಅವರಲ್ಲಿ ಕೆಲವರನ್ನು ತಮ್ಮ ಮನೆಯಲ್ಲಿಯೇ ಇರಿಸಿ ಉಪಚರಿಸಿದ್ದೂ ಇದೆ. ಇದ್ದ ಅಲ್ಪಸ್ವಲ್ಪ ಸಂಪಾದನೆಯಲ್ಲಿ ಎಂದಿಗೂ ಮಕ್ಕಳ ವಿದ್ಯಾಭ್ಯಾಸ ಮತ್ತು ಹೊಟ್ಟೆಬಟ್ಟೆಗೆ ಕೊರತೆಯಾಗದಂತೆ ನೋಡಿಕೊಂಡುದು ವಿಶೇಷ. ಅಂತಸ್ತಿನಲ್ಲಿ ನಮಗಿಂತ ಎಷ್ಟೋ ಮೇಲ್ಪಟ್ಟವರ ಮನೆಗಳಲ್ಲೂ ಇರದ ಬಗೆ ಬಗೆಯ ಖಾದ್ಯ ವೈಶಿಷ್ಟ್ಯಗಳು ನಮ್ಮ ಮನೆಯಲ್ಲಿ ಇರುತ್ತಿದ್ದುದು ತಾಯಿಯವರ ಪಾಕಪ್ರಾವೀಣ್ಯತೆ ಯೊಂದಿಗೆ ತಂದೆಯವರ ಉತ್ತಮ ಆಹಾರವನ್ನು ಸೇವಿಸಿ ನಮ್ಮ ಬದುಕನ್ನು ಸಂತೃಪ್ತ ಗೊಳಿಸಬೇಕು ಎಂಬ ಆಶಯದ ದ್ಯೋತಕವಾಗಿತ್ತು.

ಕೇವಲ ತಾನೋರ್ವ ನಲ್ಲ ಅಲ್ಲಾಹನ ಆಜ್ಞೆಗೆ ಬದ್ಧವಾದ, ತಾನು ನೆಚ್ಚಿದ ಆದರ್ಶವನ್ನು ನನ್ನ ಕುಟುಂಬಿಕರು, ನೆರೆಯವರು, ಸಮುದಾಯದವರು, ರಾಜ್ಯ-ರಾಷ್ಟ್ರ ವಿಶ್ವದಾದ್ಯಂತವಿರುವ ಜನರು ಪಾಲಿಸಬೇಕೆಂದು ಅದಕ್ಕಾಗಿ ಪಣತೊಟ್ಟು ರಂಗಕ್ಕಿಳಿದು ದುಡಿದ ಅವರ ಕಾರ್ಯವೈಖರಿ ನಿಜಕ್ಕೂ ಶ್ಲಾಘನಾರ್ಹ. ತಮ್ಮ ಈ ಹಾದಿಯಲ್ಲಿ ಅವರು ಎದುರಿಸಿದ ವಿಘ್ನಗಳು, ಕಂಟಕಗಳು ಲೆಕ್ಕವಿಲ್ಲದಷ್ಟು. ಯಾವ ಸಂದರ್ಭದಲ್ಲೂ ತನ್ನನ್ನು ಜನರು ಗುರುತಿಸಬೇಕು ಸನ್ಮಾನ ಪುರಸ್ಕಾರಗಳು ದೊರೆಯಬೇಕು ಎಂಬ ಸಣ್ಣ ಭಾವನೆಯು ಅವರ ಮನಸ್ಸಿನಲ್ಲಿ ಇದ್ದಂತೆ ತೋರಿ ಬಂದಿಲ್ಲ.ಅತಿ ಸಣ್ಣ ವಯಸ್ಸಿನವರಿಂದ ಹಿಡಿದು, ಅತಿ ಹಿರಿಯ ವ್ಯಕ್ತಿತ್ವಗಳು ಅವರ ಸ್ನೇಹಿತರ ಬಳಗದಲ್ಲಿದ್ದುದುವಿಶೇಷ. ಯಾವ ವ್ಯಕ್ತಿಯನ ಬಗ್ಗೆ ಯೂ ಅವರು ನನಗೆ ಇಷ್ಟವಿಲ್ಲ ಎಂದು ನನ್ನ ತಂದೆಯವರು ಹೇಳಿದುದಾಗಲಿ ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿದುದಾಗಲಿ ನನಗೆ ನೆನಪಿಲ್ಲ. ಸಮಾಜದ ಅತಿ ಕೆಳಸ್ತರದ ವ್ಯಕ್ತಿಯಿಂದ ಹಿಡಿದು ಅತ್ಯುನ್ನತ ಹುದ್ದೆಯಲ್ಲಿರುವವರು ಅವರ ಸ್ನೇಹಿತರಾಗಿ, ಪ್ರೀತಿ ಪಾತ್ರರಾಗಿ ಮಾರ್ಪಟ್ಟಿದ್ದು ಇದಕ್ಕೆ ಉತ್ತಮ ಉದಾಹರಣೆ.

ಇಲ್ಲಿ ಒಂದು ಘಟನೆಯನ್ನು ಉದಾಹರಿಸಲು ಇಚ್ಚಿಸುತ್ತೇನೆ. ನನಗಾಗ ಹದಿನೇಳು- ಹದಿನೆಂಟು ವಯಸ್ಸು ನಮ್ಮ ಮನೆ ಬೀದಿಬದಿಯಲ್ಲಿ ಇದ್ದುದರಿಂದ ಕಿಟಕಿಯಿಂದ ರಸ್ತೆಗೆ ಕಣ್ಣಾಯಿಸಿದರೆ ಎಲ್ಲಾ ರೀತಿಯ ವ್ಯಕ್ತಿಗಳು, ವ್ಯಕ್ತಿತ್ವಗಳು ಹಾದು ಹೋಗುತ್ತಿರದ್ದುದು ಕಂಡು ಬರುತ್ತಿತ್ತು. ಆ ದಿನಗಳಲ್ಲಿ ನಿರಂತರವಾಗಿ ಕೆಲವು ದಿನಗಳ ಕಾಲ ಓರ್ವ ಮಾನಸಿಕ ರೋಗಿ ಭಿಕ್ಷುಕಿ ಮನೆಯ ಎದುರಿನ ರಸ್ತೆಯಲ್ಲಿ ಹಾದು ಹೋಗುತ್ತಾ ವಿಚಿತ್ರ ವರ್ತನೆಯನ್ನು ತೋರುತ್ತಾ ಇದ್ದಳು. ಆಕೆ ತುಂಬಾ ಅಸಹ್ಯವಾದ ಗಲೀಜು ಬಟ್ಟೆಯನ್ನು ಧರಿಸಿದ್ದಳು.ಒಂದೆರಡು ದಿನ ಇವಳನ್ನು ನೋಡಿದ ನನ್ನ ತಂದೆ ಮೂರನೆಯದಿನ ಅವಳನ್ನು ಮಾತನಾಡಿಸಿ ಒಂದು ಆಟೋರಿಕ್ಷಾದಲ್ಲಿ ಆಕೆಯನ್ನು ಕುಳ್ಳಿರಿಸಿ ನನ್ನನ್ನು ಆಕೆಯ ಜೊತೆ ಕರೆದುಕೊಂಡು ಹೋಗಿ ಕಂಕನಾಡಿಯ ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಆಕೆಯನ್ನು ದಾಖಲಿಸಲು ಒಂದಿಡೀ ದಿನವನ್ನು ವ್ಯಯಿಸಿದ ನೆನಪು ನನ್ನ ಮನಸ್ಸಿನಿಂದೆಂದೂ ಮಾಸುವುದಿಲ್ಲ. ಈ ಅಸಹಾಯಕ ನಿರ್ಗತಿಕ ಮಹಿಳೆಗೆ ಸಹಾಯಮಾಡಿ ನನ್ನಪ್ಪನಿಗೆ ದೊರೆಯುವುದಾದರೂ ಏನು ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಮೂಡಿದ್ದು ನಿಜ. ತಮ್ಮ ಬಿಡುವಿಲ್ಲದ ಚಟುವಟಿಕೆಯ ಮಧ್ಯೆ ಒಂದಿಡೀ ದಿನವನ್ನು ಈಕೆಯ ಹಿಂದೆ ಏಕೆ ವ್ಯಯಿಸಬೇಕು ಎಂದು ಎಲ್ಲರೂ ಭಾವಿಸಿದರೆ, ಖಂಡಿತವಾಗಿಯೂ ಲೋಕದಲ್ಲಿ ಕರುಣೆ, ಮಾನವೀಯತೆ ಎಂಬ ಗುಣ ಸತ್ತಂತೆಯೇ ಅಲ್ಲವೆ ಎಂದು ನನ್ನ ಇನ್ನೊಂದು ಮನಸ್ಸು ಎಚ್ಚರಿಸಿತು.

ಜೀವನ ಅವರಿಗೆ ಎಸೆದ ಸವಾಲುಗಳಲ್ಲಿ ನಿರಂತರವಾಗಿ ಅವರನ್ನು ಬಾಧಿಸುತ್ತಿದ್ದ ಅನಾರೋಗ್ಯವು ಒಂದು. ಉಳಿದ ದಿನಗಳನ್ನು ತುಂಬಾ ಲವಲವಿಕೆಯಿಂದ ಕೂಡಿ, ಉತ್ಸಾಹದ ಬುಗ್ಗೆಯಂತೆ ಚಟುವಟಿಕೆ ಯುಕ್ತವಾಗಿ ಕಳೆಯುತಿದ್ದ ಅವರು ಖಿನ್ನತೆಯ ಆ ದಿನಗಳನ್ನು ತೀರಾ ಅಶಕ್ತರಾಗಿ, ಹೆಚ್ಚಿನ ಸಮಯವನ್ನು ನಿದ್ರಿಸುತ್ತ ಕಳೆಯುತ್ತಿದ್ದುದು ನಮಗೆ ತುಂಬಾ ಬೇಸರವನ್ನುಂಟು ಮಾಡುತ್ತಿತ್ತು. ಕೊನೆತನಕವೂ ನನಗೆ ನನ್ನ ತಂದೆಯವರಿಗೆ ಆ ದಿನಗಳಲ್ಲಿ ಏನಾಗುತ್ತಿತ್ತು ಎಂಬುದು ಒಂದು ವಿಚಿತ್ರ ಪ್ರಶ್ನೆಯಾಗಿ ಕಾಡುತ್ತಿತ್ತು. ಇತರ ದಿನಗಳಲ್ಲಿ ನಿಗದಿಪಡಿಸಿದ ವೇಳಾಪಟ್ಟಿಯಂತೆ ಬಿಡುವಿಲ್ಲದೆ ಕಾರ್ಯಪ್ರವೃತ್ತರಾಗಿದ್ದು ವ್ಯಯಿಸುತಿದ್ದ ನನ್ನ ತಂದೆಯವರಿಗೆ ವಿಶ್ರಮಿಸಲು ಸಿಗುತ್ತಿದ್ದ ದಿನಗಳವೇನೋ ಎಂದು ನನ್ನ ಮನಸ್ಸಿಗೆ ಸಮಾಧಾನಪಡಿಸುತ್ತಿದ್ದೆ . ಯಾಕೆಂದರೆ ತನಗೆ ಬಾಧಿಸಿದ ಖಿನ್ನ ತೆಯ ಬಗ್ಗೆ ಅವರಿಗೆ ಯಾವತ್ತೂ ಆಕ್ಷೇಪವಿರಲಿಲ್ಲ. ಇತರ ದಿನಗಳಲ್ಲಿ ತಹಜ್ಜುದ್ ನಮಾಝ್ ನೊಂದಿಗೆ ಆರಂಭವಾದ ತನ್ನ ಕಾರ್ಯಚಟುವಟಿಕೆ ಮಧ್ಯಾಹ್ನದ ಕಿರು ನಿದ್ರೆಯನ್ನು ಹೊರತುಪಡಿಸಿ ರಾತ್ರಿ ಮಲಗುವವರೆಗೂ ಲವಲವಿಕೆಯಿಂದ ಕೂಡಿರುತ್ತಿತ್ತು. ಕುರ್ ಆನ್ ಪಾರಾಯಣ, ಗ್ರಂಥಗಳ ಅಧ್ಯಯನ, ಕೃತಿರಚನೆ, ತರ್ಜುಮೆಯ ತುಡಿತ ಅವರನ್ನು ಬಿಡುವಿಲ್ಲದ ಸಿಪಾಯಿಯಂತೆ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸುತ್ತಿತ್ತು . ತಿಂಗಳ ಹೆಚ್ಚಿನ ದಿನಗಳನ್ನು ಧಾರ್ಮಿಕ ಚಟುವಟಿಕೆಗಳ ಪ್ರವಾಸ ಕಾರ್ಯಕ್ರಮಗಳಲ್ಲಿ ಕಳೆಯುತ್ತಿದ್ದರು. ಮನೆಗೆ ಹಿಂದಿರುಗಿ ಬರುವಾಗ ಅವರಲ್ಲಿದ್ದ ಖುಷಿ ಕೆಲವೊಮ್ಮೆ ಅವರಿಗೆ ಸನ್ಮಾನ ವಾಗಿ ದೊರೆಯುತ್ತಿದ್ದ ಫಲಪುಷ್ಪಗಳು, ಗಂಧದ ಹಾರ, ನೆನಪಿನ ಕಾಣಿಕೆಗಳು ಮನೆಯಲ್ಲಿ ಸಂಭ್ರಮದ ವಾತಾವರಣವನ್ನು ಮೂಡಿಸುತ್ತಿತ್ತು.

ಅವರ ಈ ಕಾರ್ಯ ಚಟುವಟಿಕೆಗಳು, ಆಂದೋಲನದೊಂದಿಗಿದ್ದ ಅವರ ನಿಕಟ ಸಂಬಂಧ ನಮ್ಮ ಕುಟುಂಬವನ್ನು ವಿಸ್ತ್ರತ ಕುಟುಂಬವನ್ನಾಗಿಸಿತ್ತು ಎಂದರೆ ತಪ್ಪಾಗಲಾರದು.ಆಂದೋಲನದ ಹಿರಿಯ, ಕಿರಿಯ ವ್ಯಕ್ತಿಗಳೆಲ್ಲರನ್ನು ಮನೆಗೆ ಕರೆಸಿ ಉಪಚರಿಸುತ್ತಿದ್ದರು. ಅದೆಷ್ಟೋ ಹುಡುಗಿಯರು ಧಾರ್ಮಿಕ ಕಲಿಕೆಯ ಉದ್ದೇಶದಿಂದ ಅಥವಾ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ತಮ್ಮ ತಂದೆಯವರ ಬಳಿ ಬಂದಾಗ ತಂದೆಯವರು ಅವರಿಗೆ ಸ್ವಲ್ಪವೂ ಮುಜುಗರ, ಅನಾನುಕೂಲವಾಗದಂತೆ ಅವರನ್ನು ನಮ್ಮ ಕುಟುಂಬದ ಸದಸ್ಯರಂತೆ ಕಾಣುತ್ತಿದ್ದರು. ಅವರಿಗೆ ಕಲಿಸುವ, ಅವರನ್ನು ನಮ್ಮವರೇ ಎಂದು ಭಾವಿಸುವಂತಹ ತರಬೇತಿಯನ್ನು ನಮಗೆ ನೀಡುತ್ತಿದ್ದರು. ಲವ್ಕಿಕ ಮತ್ತು ದೀನೀ ಜ್ಞಾನವು ನಮ್ಮ ತಂದೆಯವರಲ್ಲಿ ಧಾರಾಳವಾಗಿ ಇದ್ದುದರಿಂದ ನಮ್ಮ ಯಾವುದೇ ಪಠ್ಯ -ಪಠ್ಯೇತರ ಚಟುವಟಿಕೆಗಳಿಗೆ ಅವರೊಂದು ಸುಲಭದಲ್ಲಿ ದಕ್ಕುವ ಸಂಪನ್ಮೂಲವಾಗಿದ್ದರು. ಮದರಸಾ ಶಾಲೆಗಳಿಂದ ದೊರೆಯದ ಅದೆಷ್ಟೋ ವಿದ್ಯೆಯನ್ನು ನಮ್ಮ ತಂದೆಯವರಿಂದ ಕಲಿಯುವ ಸೌಭಾಗ್ಯ ನಮಗೆ ಲಭಿಸಿತ್ತು. ರಮಜಾನಿನ ಆ ಸಂಜೆ ಮುಂಜಾನೆಗಳಲ್ಲಿ ನಮ್ಮನ್ನು ಕುಳ್ಳಿರಿಸಿ ಏರುದನಿಯಲ್ಲಿ ಕುರ್ ಆನ್ ಓದುತ್ತಾ ನಾವು ಅವರು ಓದುವುದನ್ನು ಬೆರಳಿಟ್ಟು ನೋಡುತ್ತಾ ಅವರು ಮಾಡಿದ ತಪ್ಪನ್ನು ತಿದ್ದಲು ನಮಗೆ ಹೇಳುತ್ತಿದ್ದುದು ನಮಗೆ ಸರಾಗವಾಗಿ ಕುರಾನ್ ಓದಲು ಬರುವಂತೆ ಕಲಿಸುವ ಅವರ ಜಾಣ ವಿಧಾನ ಎಂದು ತಡವಾಗಿ ನನ್ನರಿವಿಗೆ ಬಂತು.

ಈಸಲ ರಮಜಾನಿನಲ್ಲೆಕೋ ಅಬ್ಬಾ, ನೀವು ತುಂಬಾ ನೆನಪಾದಿರಿ……ನೀವು ಸವೆಸಿದ ಹಾದಿ ಸಸಿನವೂ ಅಲ್ಲ, ಸರಾಗವು ಅಲ್ಲ. ಖಂಡಿತವಾಗಿಯೂ ನೀವು ದುರ್ಗಮ ಏರನ್ನು ಏರಿದಿರಿ. ನುಡಿದಂತೆ ನಡೆದ ಬೆರಳೆಣಿಕೆಯ ವ್ಯಕ್ತಿಗಳಲ್ಲಿ ನೀವೂ ಒಬ್ಬರು ಎಂಬುದು ನಮ್ಮ ಹೆಮ್ಮೆ. ನಿಮ್ಮ ಆದರ್ಶವನ್ನು ಪಾಲಿಸಬೇಕು ಅದರಂತೆ ಜೀವನ ಸವೆಸಿ, ಅಲ್ಲಾಹನ ಸಂಪ್ರೀತಿ ಗಳಿಸಿ ಜೀವನವನ್ನು ಸಾರ್ಥಕಗೊಳಿಸಬೇಕು ಎಂಬ ಮಹದಾಸೆಯಿದ್ದರರೂ, ಈ ಲೋಕಪ್ರಿಯ ಲೋಕದ ಲೋಕವಾಸಿಗಳಂತೆ ಬದುಕುತ್ತಿರುವುದು ನಮ್ಮ ದುರದೃಷ್ಟ. ಇನ್ಶಾ ಅಲ್ಲಾಹ್ ನಿಮ್ಮ ಆದರ್ಶಗಳನ್ನು ಪುನಃ ಇಲ್ಲಿ ನೆನಪಿಸಿರುವುದು ನನ್ನ ಮುಂದಿನ ಜೀವನಕ್ಕೆ ಪ್ರೇರಕವಾಗಲಿ.

ಹದಿಮೂರು ವರ್ಷಗಳ ಹಿಂದೆ ಮೇ 27 ರಂದು ನನ್ನ ತಂದೆಯವರು ಈ ನಶ್ವರ ಲೋಕಕ್ಕೆ ವಿದಾಯ ಹೇಳಿದರು. ಅವರು ಬಿಟ್ಟು ಹೋದ ಸಂಪತ್ತು ಅಪಾರ. ಅವರು ಹಂಚಿದ ಜ್ಞಾನಭಂಡಾರ, ಮಾಡಿದ ಸಮಾಜ ಸೇವಾ ಕಾರ್ಯಗಳು, ಬಿಟ್ಟುಹೋದ ಅಭಿಮಾನಿ ಬಳಗವೇ ಆ ಸಂಪತ್ತಿನ ನೈಜ ವ್ಯಾಖ್ಯಾನ. ಅವರ ನೆನಪು ಆದರ್ಶ ಎಂದೂ ಮಾಸದoತದ್ದು. ಕೇವಲ ಅವರ ಕುಟುಂಬ, ಸಂಬಂಧಿಕರು ಮಾತ್ರ ಅವರನ್ನು ನೆನಪಿಸುತ್ತಿರುವುದಲ್ಲ, ಬದಲಾಗಿ ವಿಶ್ವದಾದ್ಯಂತ ಅವರ ಅಭಿಮಾನಿಗಳಿದ್ದಾರೆ ಅವರ ಕಾರ್ಯವನ್ನು ಅಭಿನಂದಿಸುವವರಿದ್ದಾರೆ. ಈ ಸೌಭಾಗ್ಯ ನಿಜಕ್ಕೂ ಅವರ ಪಾಲಿಗೆ ಅಲ್ಲಾಹನ ಅನುಗ್ರಹ. ಅಲ್ಲಾಹನು ಸ್ವರ್ಗದಲ್ಲಿ ಅವರ ಸ್ಥಾನವನ್ನು ಉನ್ನತ ಗೊಳಿಸಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ.

(ಲೇಖಕರು, ಇಬ್ರಾಹೀಮ್ ಸಯೀದ್ ಅವರ ಪುತ್ರಿಯಾಗಿದ್ದು, ಶಿಕ್ಷಕಿಯೂ ಆಗಿದ್ದಾರೆ.)

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.

1 COMMENT

  1. May Allah Accept all his efforts towards Islam, Muslims and the country. There is no doubt He was one of the best Muslim leader at his time. His service to JIH is tremendous and his life was good example for present generation. May Allah accept his all good deeds and reward him highest place in Jannat al firdouse. Aameen.

Comments are closed.