ಪರಸ್ಪರ ಉಡುಪಾಗಬೇಕಾದವರು ಮತ್ತು ಆಡಂಬರದ ಮದುವೆಗಳು..

0
936

ಆಯಿಷತುಲ್ ಅಫೀಫಾ

2018 ಮದುವೆಗಳ ವರ್ಷ, ವರ್ಷದ ಕೊನೆಯಂತು ತಾರಾ ಜೋಡಿಗಳ ಮದುವೆ, ಅಂಬಾನಿ ಮಗಳ ಮದುವೆಯಂತಹ ಕೆಲವು ಅದ್ದೂರಿ ವಿವಾಹಗಳಿಗೆ ಸಾಕ್ಷಿಯಾದವು. ಇವರ ಮದುವೆ ಸುದ್ದಿಗಳು ಆಡಂಬರ ಅದ್ದೂರಿತನಕ್ಕೆ ಸುದ್ದಿ ಮಾಡಿದರೆ, ಬ್ಯಾಡ್ಮಿಂಟನ್ ಜೋಡಿಗಳಾದ ಸೈನಾ, ಕಶ್ಯಪ್ ವಿವಾಹವು ಸದ್ದಿಲ್ಲದೆಯೂ ಸುದ್ದಿ ಮಾಡಿತು.

ಶೌಚಾಲಯದಂತಹ ಮೂಲ ಸೌಕರ್ಯವೇ ಇಲ್ಲದ, ಮಕ್ಕಳು ಅಪೌಷ್ಟಿಕತೆಯಿಂದ ನರಳುವ, ಆಹಾರಕ್ಕೂ ಪರದಾಡುವ, ಹಸಿವಿನಿಂದ ಸಾಯುವ ಭಾರತದಂತಹ ದೇಶದಲ್ಲಿ ರಾಜ್ಯವೊಂದರ ಬಜೆಟ್ ನಷ್ಟು ವೆಚ್ಚದಲ್ಲಿ ಕೇವಲ ಒಂದುದಿನದ ವಿವಾಹ ಕಾರ್ಯಕ್ರಮ ನಡೆಯುತ್ತದೆಯೆಂದರೆ ನಿಬ್ಬೆರಗಾಗುವ ಮಾತೇ ಸರಿ. ಆದರೆ ನಾವು ಬೆರಗಾಗಿರುವುದು ಬೇರೆಯದೇ ಕಾರಣಕ್ಕೆ. ಕೋಟಿ ಬೆಲೆಬಾಳುವ ವಧುವರರ ಡಿಸೈನರ್ ಬಟ್ಟೆಗಳಿಗೆ, ಅವರ ಸಂಪತ್ತಿನ ಅಬ್ಬರಕ್ಕೆ, 35ರ ವಧುವಿಗೆ 25 ರ ವರನೆಂದು ಪ್ರಿಯಾಂಕಾ ನಿಕ್ ಜೋನ್ಸ್ ನಡುವಿನ ವಯಸ್ಸಿನ ಅಂತರಕ್ಕೆ ….

ವಿಮರ್ಶಾತ್ಮಕವಾಗಿ ನೋಡಬೇಕಾದ ಮಾಧ್ಯಮಗಳು ಸಹ ಮನರಂಜನೆಯ ಹೆಸರಿನಲ್ಲಿ ಇವೆಲ್ಲವನ್ನು ಬಿತ್ತರಿಸಿ, ಸಂವೇದನೆಯನ್ನು ಕಳೆದುಕೊಂಡು ವಾಸ್ತವವನ್ನು ಬಿಟ್ಟು ಪೊಳ್ಳುತನಕ್ಕೆ ಒಗ್ಗಿ ಕೊಳ್ಳುವಂತಹ ಮನಸ್ಥಿತಿಯನ್ನು ನಮ್ಮಲ್ಲಿ ಬೆಳೆಸುತ್ತಿದೆ. ವಿಮರ್ಶಾತೀತರಾಗಿ ಬದುಕುವುದೆಂದರೆ ಜೀವವಿದ್ದು ಸತ್ತಂತೆ. ಇದು ಅತ್ಯಂತ ಅಪಾಯಕಾರಿ. ಸಂಪತ್ತಾಗಲಿ ವಯಸ್ಸಿನ ಅಂತರವಾಗಲಿ ದಾಂಪತ್ಯಕ್ಕೆ ಸಾಧಕವೂ ಅಲ್ಲ ಬಾಧಕವೂ ಅಲ್ಲ. ಶತಕೋಟಿ ವೆಚ್ಚದಲ್ಲಿ ನಡೆಸಿರುವ ಮದುವೆಗಳು ಸಹ ಮುರಿದು ಬಿದ್ದಿರುವ ಉದಾಹರಣೆಗಳಿವೆ.

ವಿವಾಹದಲ್ಲಿ ಅನುಗ್ರಹವಿದೆಯೆಂದು ಪ್ರವಾದಿಯವರು ಹೇಳಿದ್ದಾರೆ. ಆ ಅನುಗ್ರಹವು ಲಭ್ಯವಾಗಬೇಕಾದರೆ ದುಂದುವೆಚ್ಚವನ್ನು ಖಂಡಿತವಾಗಿಯೂ ತಡೆಯಬೇಕು. ಏಕೆಂದರೆ ದುಂದುವೆಚ್ಚಗಾರರು ಸೈತಾನನ ನಿಕಟವರ್ತಿಗಳು.

ಪ್ರವಾದಿಯವರು ಮೊಟ್ಟಮೊದಲು ವಿವಾಹವಾದಾಗ ಅವರ ಪ್ರಾಯ ಇಪ್ಪತೈದು, ಇಪ್ಪತೈದರ ಈ ವರ ವರಿಸಿದ ವಧು ಯವ್ವನ ತುಂಬಿ ತುಳುಕುತ್ತಿರುವ ಯುವತಿಯಲ್ಲ, ಬದಲಾಗಿ ತನಗಿಂತಲೂ ಹದಿನೈದು ವರ್ಷ ಹಿರಿಯರಾದ, ಎರಡು ಬಾರಿ ವಿವಾಹವಾಗಿ ಮಕ್ಕಳನ್ನು ಹೊಂದಿರುವ ನಲ್ವತ್ತರ ಪ್ರಾಯದ ವಿಧವೆ ಖತೀಜಾ (ರ)ರನ್ನು. ಆದರೆ ಖತೀಜಾ (ರ)ರು ವ್ಯಾಪಾರಿ ಸ್ತ್ರೀಯಾಗಿದ್ದರು. ಅಪಾರ ಸಂಪತ್ತನ್ನು ಹೊಂದಿದ್ದರೆಂದು ಅಪಸ್ವರವೆತ್ತಬಹುದು. ಉಟ್ಟ ಬಟ್ಟೆಯನ್ನು ಬದಲಾಯಿಸುವಷ್ಟು ಸಹಜವಾಗಿ ಪತ್ನಿಯರನ್ನು ಬದಲಾಯಿಸುತ್ತಿದ್ದ ಆ ಕಾಲ ಘಟ್ಟದಲ್ಲಿ, ಪ್ರವಾದಿ (ಸ) ರು ಸಂಪತ್ತನ್ನೆಲ್ಲ ಪಡೆದು ಖತೀಜಾ (ರ)ರನ್ನು ತ್ಯಜಿಸಲು ಯಾವ ಅಡ್ಡಿಯೂ ಇರಲಿಲ್ಲ. ಅನಾಗರಿಕ ಅರಬಿಗಳ ಸಂಸ್ಕೃತಿಯು ಸಹ ಹಾಗೆ ಇತ್ತು. ಆದರೆ ಪ್ರವಾದಿ (ಸ) ಯವರು ಹಾಗೆ ಮಾಡದೆ ಖತೀಜಾ (ರ)ರು ಮರಣ ಹೊಂದುವವರೆಗೆ ತಮ್ಮ 53 ವರ್ಷದವೆರೆಗೆ ಎಲ್ಲ ಸಂಪತ್ತನ್ನು ಇಸ್ಲಾಂಗಾಗಿ ಧಾರೆ ಎರೆದು ದಂಪತಿಗಳು ಅನೇಕ ಕಷ್ಟ ನಷ್ಟಗಳನ್ನೂ ಸಹಿಸಿ ಸುಮಧುರ ಯಶಸ್ವಿ ದಾಂಪತ್ಯವನ್ನು ನಡೆಸಿ ತಮ್ಮ ದಾಂಪತ್ಯದ ಆದರ್ಶಗಳು ಮನುಕುಲಕ್ಕೆ ಮಾದರಿಯಾಗಿಸಿದರು.

ಅವರ ದಾಂಪತ್ಯವು ಎಷ್ಟು ಚೇತೋಹಾರಿಯಾಗಿತ್ತೆಂದರೆ ಅದರ ಕುರಿತು ಪ್ರವಾದಿಯವರು ಪ್ರಸ್ತಾಪಿಸಿದಾಗಲೆಲ್ಲ ನಮಗೆ ಅಸೂಯೆವುಂಟಾಗುತ್ತಿತ್ತೆಂದು ಆಯಿಶ(ರ)ರವರು ಹೇಳಿದ್ದರು. ಆರೋಗ್ಯಪೂರ್ಣ ದಾಂಪತ್ಯಕ್ಕೆ ಪ್ರವಾದಿಯವರ ದಾಂಪತ್ಯಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ.

ಆಡಂಬರದ ಮದುವೆಗಳು ತಮ್ಮ ಸಂಪತ್ತನ್ನು ಬಿಂಬಿಸುತ್ತದೆಯೇ ಹೊರತು ಆರೋಗ್ಯಪೂರ್ಣ ದಾಂಪತ್ಯವನ್ನಲ್ಲ. ಆದರ, ಅರ್ಥೈಸುವಿಕೆ, ಪ್ರೇಮ, ಸಹನೆ, ಸಹಕಾರ, ಸಂಧಾನಗಳು ಉತ್ತಮ ದಾಂಪತ್ಯದ ಅಡಿಗಲ್ಲಾಗಿವೆ. ಪತಿಪತ್ನಿಯರು ಪರಸ್ಪರ ಉಡುಪಾಗಿರುತ್ತಾರೆಂಬ ಪವಿತ್ರ ಕುರಾನಿನ ವಚನವನ್ನು ಅರಿತು ಬಾಳಬೇಕಾಗಿದೆ. ಉಡುಪು ನಮ್ಮ ಮೂಲಭೂತ ಅವಶ್ಯಕತೆಗಳಲ್ಲೊಂದು. ನಾವು ತೊಡುವ ಉಡುಪಿಗೆ ಅದರದೇ ಆದ ಗುಣಗಳಿವೆ. ಅವು ದೇಹಕ್ಕೆ ನಿಕಟವಾಗಿದ್ದು ನಮ್ಮನ್ನು ಬೆಚ್ಚಗಿರಿಸುತ್ತದೆ, ವಾತಾವರಣ ವೈಪರೀತ್ಯದಿಂದ ನಮ್ಮನ್ನು ರಕ್ಷಿಸುತ್ತದೆ, ಗುಪ್ತಾಗಗಳನ್ನು, ದೇಹದ ಕುಂದುಕೊರತೆಗಳನ್ನು ಮರೆಮಾಚಿ ಸೌಂದರ್ಯವನ್ನು ವೃದ್ಧಿಸುತ್ತದೆ. ಹಾಗೆ ಸಂಗಾತಿಗಳಿಗೆ ಪರಸ್ಪರರ ಸಾಂಗತ್ಯವು ಅತೀ ನಿಕಟವಾಗಿದ್ದು ಬೆಚ್ಚಗಿನ ರಕ್ಷಣೆಯ ಭಾವವನ್ನು ಒದಗಿಸಿ, ಪರಸ್ಪರರ ಅಪರಿಪೂರ್ಣತೆಯನ್ನು ಮರೆಮಾಚಿ ದಾಂಪತ್ಯದ ಸೌಂದರ್ಯವನ್ನು ವೃದ್ಧಿಸುವಂತಿರಬೇಕು.