ವಿಷ ಬೆರೆಸಿದ ಒಂದು ತುಂಡು ರೊಟ್ಟಿ

0
1174

ಅನು:ಅಕ್ಬರ್ ಅಲಿ. ಬಜ್ಪೆ

ಒಂದು ಊರಿನಲ್ಲಿ ಒಬ್ಬಳು ಮಹಿಳೆ ಇದ್ದಳು. ಅವಳು ಒಂದು ಉತ್ತಮ ನಡತೆಯ ಮಹಿಳೆಯಾಗಿದ್ದಳು. ಎಲ್ಲರನ್ನೂ ಚೆನ್ನಾಗಿ ನೋಡುತಿದ್ದಳು.ಅವಳು ಮನೆಯಲ್ಲಿ ರೊಟ್ಟಿ ತಯಾರಿಸುತ್ತಿದ್ದಾಗ ಒಂದು ರೊಟ್ಟಿ ಜಾಸ್ತಿಯಾಗಿ ಮಾಡುತ್ತಿದ್ದಳು. ಅದನ್ನು ತನ್ನ ಮನೆಯ ಕಿಟಕಿಯಲ್ಲಿ ಇಡುತ್ತಿದ್ದಳು. ಆ ರೊಟ್ಟಿಯನ್ನು ಒಬ್ಬರು ವಯಸ್ಸಾದ ವ್ಯಕ್ತಿಯೊಬ್ಬರು ಬಂದು ಕೊಂಡುಹೋಗುತ್ತಿದ್ದರು. ಮತ್ತು ಆ ಮಹಿಳೆಯಲ್ಲಿ ಒಂದು ಮಾತು ಹೇಳುತ್ತಿದ್ದರು ”ನೀನು ಮಾಡುವ ಒಳ್ಳೆಯ ಕೆಲಸ ನಿನ್ನನ್ನು ಹುಡುಕಿಕೊಂಡು ಬರುತ್ತದೆ ಮತ್ತು ನೀನು ಮಾಡುವ ಕೆಟ್ಟ ಕೆಲಸವು ನಿನ್ನ ಬಳಿಯೇ ಇರುತ್ತದೆ.” ಹೀಗೆ ಮಹಿಳೆಯು ದಿನಾಲು ಒಂದು ರೊಟ್ಟಿಯನ್ನು ಜಾಸ್ತಿಯಾಗಿ ಮಾಡುತ್ತಿದ್ದಳು. ದಿನಾಲೂ ಆ ವಯಸ್ಸಾದ ವ್ಯಕ್ತಿ ಬಂದು ರೊಟ್ಟಿಯನ್ನು ತೆಗೆದು ಕೊಂಡು ಹೋಗುತ್ತಿದ್ದರು. ಅದೇ ಮಾತನ್ನು ಹೇಳುತ್ತಿದ್ದರು. ಮಹಿಳೆ ಅವರ ಮಾತನ್ನು ಅಷ್ಟಾಗಿ ಗಮನಕ್ಕೆ ತೆಗೆದು ಕೊಳ್ಳುತ್ತಿರಲಿಲ್ಲ.

ಒಂದು ದಿನ ಮಹಿಳೆಗೆ ಆ ವ್ಯಕ್ತಿ ಹೇಳಿದ ಮಾತು ಸ್ವಲ್ಪ ಕಹಿಯಾಗಿ ಕಂಡಿತು. ನಾನು ಈ ಮುದುಕನಿಗೆ ದಿನಾಲು ಒಂದು ರೊಟ್ಟಿಯನ್ನು ಕೊಡುತ್ತಿದ್ದೇನೆ. ಆದರೆ ನನಗೆ ಒಂದು ಧನ್ಯವಾದ ಕೂಡ ಇವರ ಬಾಯಿಯಿಂದ ಬರುವುದಿಲ್ಲ. ಅದಕ್ಕೆ ಬದಲಾಗಿ ನಾನು ಮಾಡುವ ಕೆಟ್ಟ ಕೆಲಸ ನನ್ನ ಬಳಿಯೇ ಇರುತ್ತದೆ ಎಂದು ಹೇಳುತ್ತಿದ್ದಾರೆ‌. ಇವರಿಗೆ ಒಂದು ಪಾಠ ಕಳಿಸಬೇಕು ಎಂದು ಯೋಚನೆ ಮಾಡಿ ಮರು ದಿವಸ ರೊಟ್ಟಿಯಲ್ಲಿ ವಿಷವನ್ನು ಬೆರೆಸುತ್ತಾಳೆ. ಮತ್ತು ಅದನ್ನು ಕಿಟಕಿಯಲ್ಲಿ ಇಡುತ್ತಾಳೆ.

ಒಂದು ಕ್ಷಣ ದಂಗಾಗಿ ನಿಲ್ಲುತ್ತಾಳೆ ಮತ್ತು ಯೋಚನೆಯನ್ನು ಮಾಡುತ್ತಾಳೆ ಛೆ ನಾನು ಎಂತಹ ಕೆಲಸವನ್ನು ಮಾಡುತ್ತಿದ್ದೇನೆ. ನಾನು ಒಬ್ಬರ ಜೀವವನ್ನು ತೆಗೆಯುವ ಕೆಲಸವನ್ನು ಮಾಡುತ್ತಿದ್ದೇನೆ ಇದು ಮಾಡಬಾರದು ಎಂದು ಮನಸ್ಸಿನಲ್ಲಿಯೇ ಹೇಳಿ ತಟ್ಟನೆ ವಿಷ ಹಾಕಿದ ರೊಟ್ಟಿಯನ್ನು ಕಿಟಕಿಯಿಂದ ತೆಗೆದು ಒಳ್ಳೆಯ ರೊಟ್ಟಿಯನ್ನು ಇಡುತ್ತಾಳೆ. ಹಾಗೆಯೇ ಸ್ವಲ್ಪ ಹೊತ್ತಿನಲ್ಲಿ ಆ ವ್ಯಕ್ತಿ ಬರುತ್ತಾರೆ ರೊಟ್ಟಿಯನ್ನು ತೆಗೆಯುತ್ತಾರೆ ಮತ್ತು ಹೇಳುತ್ತಾರೆ ನೀನು ಮಾಡುವ ಕೆಟ್ಟ ಕೆಲಸ ನಿನ್ನ ಬಳಿಯೇ ಇರುತ್ತದೆ ಮತ್ತು ನೀನು ಮಾಡುವ ಒಳ್ಳೆಯ ಕೆಲಸ ನಿನ್ನನ್ನು ಹುಡುಕಿಕೊಂಡು ಬರುತ್ತದೆ. ಎಂದು ಹೇಳಿ ಹೋಗುತ್ತಾರೆ.

ಒಂದು ಅರ್ದ ಗಂಟೆಯ ಬಳಿಕ ತನ್ನ ಮನೆಯ ಕಾಲಿಂಗ್ ಬೆಲ್ ಬಾರಿಸಿದ ಶಬ್ದವು ಮಹಿಳೆಗೆ ಕೇಳುತ್ತದೆ. ಹೋಗಿ ಮನೆಯ ಬಾಗಿಲು ತೆರೆದಾಗ ತನ್ನ ಮಗ ಎಷ್ಟೋ ಸಮಯದ ಬಳಿಕ ತನ್ನ ಮುಂದೆ ನಿಂತ್ತಿದ್ದಾನೆ. ತುಂಬಾ ಕೃಶವಾಗಿದ್ದಾನೆ. ಮಹಿಳೆಗೆ ತನ್ನ ಮಗನ ಸ್ಥಿತಿಯನ್ನು ನೋಡಿ ದುಃಖವಾಗುತ್ತದೆ. ಮಗ ತಾಯಿಯ ಮುಖವನ್ನು ನೋಡಿ ಹೇಳುತ್ತಾನೆ. ”ಅಮ್ಮ ನಾನು ಒಂದು ಊರಿನಲ್ಲಿ ಯುದ್ದಪೀಡಿತ ಪ್ರದೇಶದಲ್ಲಿ ಬಂದಿಯಾಗಿ ಇದ್ದೆ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದೆ ತುಂಬಾ ದಿನಗಳಿಂದ ಏನೂ ತಿನ್ನದೆ ಹಸಿವಿನಲ್ಲಿ ಇದ್ದ ನನಗೆ ರಸ್ತೆಯಲ್ಲಿ ಬರುವಾಗ ಒಬ್ಬ ವಯಸ್ಸಾದ ವ್ಯಕ್ತಿಯೊಬ್ಬರು ಸಿಕ್ಕಿದರು ಅವರ ಕೈಯಲ್ಲಿ ಇದ್ದ ರೊಟ್ಟಿಯನ್ನು ಬೇಡಿ ತಿಂದು ಇಲ್ಲಿ ಮನೆಯವರೆಗೂ ತಲುಪಿದೆ”ಅನ್ನುತ್ತಾನೆ.

ಇದನ್ನು ‌ಕೇಳಿದ ಮಹಿಳೆಯು ಕುಸಿದು ಕುಳಿತು ಜಗದೊಡಯನನ್ನು ಸ್ಮರಿಸುತ್ತಾಳೆ. ಮತ್ತು ಆ ವ್ಯಕ್ತಿಯ ಮಾತು ತಟ್ಟನೆ ಅವಳ ಕಿವಿಯಲ್ಲಿ ಕೇಳಿದಂತಾಗುತ್ತದೆ . ತಾನು ಮಾಡಿದ ಕೆಟ್ಟ ಕೆಲಸವು ತಮ್ಮ ಬಳಿಯೇ ಇರುತ್ತದೆ. ಮತ್ತು ನಾವು ಮಾಡಿದ ಒಳ್ಳೆಯ ಕೆಲಸವು ನಮ್ಮನ್ನು ಹುಡುಕಿಕೊಂಡು ಬರುತ್ತದೆ.ಯಾರು ನಮಗೆ ಮೆಚ್ಚುಗೆ ವ್ಯಕ್ತಪಡಿಸಲಿ ಬಿಡಲಿ,ಇಷ್ಟಪಡಲಿ ಇಲ್ಲವೇ ನಿರ್ಲಕ್ಷಿಸಿಸಲಿ. ಆದರೆ ನಾವು ಮಾಡುವ ಒಳ್ಳೆಯ ಕೆಲಸಗಳನ್ನು ಬಿಡಲೇ ಬಾರದು. ಅದು ನಮಗೆ ಒಂದಲ್ಲ ಒಂದು ರೀತಿಯಿಂದ ಉಪಕಾರವನ್ನು ಮಾಡಿಯೇ ತೀರುತ್ತದೆ.ನಾವು ಮಾಡುವ ಒಳ್ಳೆಯ ಕೆಲಸಗಳು ಜನರ ಮೆಚ್ಚುಗೆಗಾಗಿ ಆಗಬಾರದು. ಒಳ್ಳೆಯ ನಿಯ್ಯತ್ ನಿಂದ ಮಾಡಿದ ಒಳ್ಳೆಯ ಕೆಲಸಕ್ಕೆ ಜಗದೊಡೆಯನು ಅದರ ಪ್ರತಿಫಲವನ್ನು ನಮಗೆ ಕೊಟ್ಟೇಕೊಡುತ್ತಾನೆ. ನಾವು ಮಾಡುವ ಕೆಟ್ಟ ಕೆಲಸಗಳು ನಮ್ಮ ಬಳಿಯೇ ಇರುತ್ತದೆ. ಒಳ್ಳೆಯ ಕೆಲಸಗಳು ಅದು ನಮಗೆ ಒಳ್ಳೆಯದನ್ನು ಕೊಡುತ್ತದೆ.