ಲೋಕಸಭಾ ಚುನಾವಣೆ ಹಿನ್ನೆಲೆ: ಉಮ್ರಾ ಯಾತ್ರೆಗಳನ್ನು ಮುಂದೂಡುವಂತೆ ದ.ಕ. ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಮನವಿ

0
190

ಸನ್ಮಾರ್ಗ ವಾರ್ತೆ

ಮಂಗಳೂರು, ಎ.16: ಸಾರ್ವತ್ರಿಕ ಚುನಾವಣೆಯ ದಿನವಾದ ಎ.26ಕ್ಕಿಂತ ಮುಂಚೆ ನಿಗದಿಯಾಗಿರುವ ಎಲ್ಲ ಉಮ್ರಾ ಯಾತ್ರೆಗಳನ್ನು ಮುಂದೂಡುವಂತೆ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಬಿ.ಎ.ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಮನವಿ ಮಾಡಿದ್ದಾರೆ.

ಲೋಕಸಭಾ ಚುನಾವಣೆಯು ಎ.26ರಂದು ನಡೆಯಲಿದೆ. ಈ ಸಂದರ್ಭ ಹಲವು ಟೂರಿಸ್ಟ್ ಸಂಸ್ಥೆಗಳು ಉಮ್ರಾ ಯಾತ್ರೆ ನಿಗದಿಪಡಿಸಿರುವುದರಿಂದ ಹಲವು ಮಂದಿ ಮತದಾನದಿಂದ ವಂಚಿತರಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಹಲವು ಮನವಿ/ದೂರುಗಳು ಬಂದಿವೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಹಲವು ಚಿಂತಕರು, ಸಮಾಜ ಸೇವಕರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಚುನಾವಣಾ ಆಯೋಗವು ಹೆಚ್ಚಿನ ಮತದಾನ ನಡೆಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಅತ್ಯಧಿಕ ಮತದಾನ ನಡೆಯಲು ನಾವೆಲ್ಲರೂ ಪ್ರಯತ್ನಿಸಬೇಕಿದೆ. ಮತದಾನವು ಭಾರತ ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದ್ದು, ದೇಶಕ್ಕೆ ಸುಭದ್ರ ಸರಕಾರ ಮತ್ತು ಉತ್ತಮ ಆಡಳಿತ ಸಿಗಲು ಪ್ರತಿಯೊಬ್ಬರು ಮತದಾನ ಮಾಡಬೇಕಿದೆ ಎಂದು ಅವರು ಮನವಿ ಮಾಡಿದ್ದಾರೆ.

ಈ ನಿಟ್ಟಿನಲ್ಲಿ ಎಲ್ಲಾ ಉಮ್ರಾ ಸಂಸ್ಥೆಗಳು, ಏಜೆಂಟರು ಎ.26ಕ್ಕಿಂತ ಮುಂಚೆ ನಿಗದಿಪಡಿಸಿರುವ ಉಮ್ರಾ ಯಾತ್ರೆಗಳನ್ನು ರದ್ದುಪಡಿಸಿ, ಎ.27ರ ನಂತರ ತೆರಳಬೇಕು. ಈಗಾಗಲೇ ವಿಮಾನ ಟಿಕೆಟ್ ಬುಕ್ ಮಾಡಿದ್ದರೆ ಅದನ್ನು ಮುಂದೂಡಬೇಕು. ಯಾತ್ರಿಗಳು ಯಾವುದೇ ಕಾರಣಕ್ಕೂ ಮತದಾನ ಮಾಡದೆ ಉಮ್ರಾ ತೆರಳಬಾರದು. ಈ ಬಗ್ಗೆ ಎಲ್ಲರೂ ಸಹಕರಿಸಬೇಕು ಎಂದು ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here