ಸನ್ಮಾರ್ಗ ವಾರ್ತೆ
ಲೋಕಸಭಾ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಸಿದ್ದತೆ ಆರಂಭಿಸಿದೆ. ರಾಜ್ಯದ 224 ಕ್ಷೇತ್ರಗಳಲ್ಲಿನ ಮತದಾರರ ಪಟ್ಟಿ ಪರಿಷ್ಕರಣೆಗೆ ಮುಂದಾಗಿದೆ. ಸದ್ಯ ಸಿದ್ಧವಾಗಿರುವ ‘ಕರಡು ಮತದಾರರ ಪಟ್ಟಿ’ಯಂತೆ ರಾಜ್ಯದಲ್ಲಿ ಒಟ್ಟು 5,33,77,162 ಮತದಾರರು ಇದ್ದಾರೆ ಎಂಬ ಮಾಹಿತಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ನೀಡಿದ್ದಾರೆ.
ಕಳೆದ ಜನೆವರಿ 01 ರಂತೆ ಮತದಾರರ ಪಟ್ಟಿ ಪರಿಷ್ಕರಿಸಲಾಗಿದೆ. ಅದರಂತೆ ರಾಜ್ಯದಲ್ಲಿ ಒಟ್ಟು 5,33,77,162 ಮತದಾರರು ಇದ್ದಾರೆ. ಆ ಪೈಕಿ ಪುರುಷ ಮತದಾರರು 2,68,02,838 ಮತ್ತು ಮಹಿಳಾ ಮತದಾರರು 2,65,69,428 ಹಾಗೂ ಇತರೆ 4896 ಮತದಾರರಿದ್ದಾರೆ. ಈ ಮೂಲಕ ಕಳೆದ ವರ್ಷ 2023 ಕ್ಕಿಂತಲೂ ಸುಮಾರು 3 ಲಕ್ಷ ಮತದಾರರು ಹೊಸದಾಗಿ ಸೇರ್ಪಡೆ ಆಗಿದ್ದಾರೆ.
ಈಗ ಬಿಡುಗಡೆಗೊಂಡಿರುವ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಅಕ್ಟೋಬರ್ 27 ರಿಂದ ಡಿಸೆಂಬರ್ 09 ರವರೆಗೆ ಅವಕಾಶ ನೀಡಲಾಗಿದೆ. ಅಲ್ಲಿಯವರೆಗೆ ಕೆಲವು ದಿನಗಳ ಕಾಲ ವಿಶೇಷ ಅಭಿಯಾನಗಳು ಆಯೋಗದಿಂದ ಜರಗಲಿವೆ.
ಬಿಡುಗಡೆ ಆಗಿರುವ ಕರಡು ಮತದಾರರ ಪಟ್ಟಿಯಲ್ಲಿ ಸಾರ್ವಜನಿಕರು ತಮ್ಮ ಹೆಸರು, ವಿಳಾಸ ಇನ್ನಿತರ ಮಾಹಿತಿಗಳು ಸರಿಯಾಗಿದೆಯೇ, ಹೆಸರುಗಳು ಬಿಟ್ಟು ಹೋಗಿವೆಯೇ ಎಂಬುದನ್ನು ಅಧಿಕೃತ ಜಾಲತಾಣ http://eco.karnataka.gov.in/en ಗೆ ತೆರಳಿ ಪರಿಶೀಲಿಸಿಕೊಂಡು ತಪ್ಪಿದ್ದಲ್ಲಿ ಆಕ್ಷೇಪಣೆ ಸಲ್ಲಿಸಬಹುದು ಎಂದು ರಾಜ್ಯ ಚುನಾವಣೆ ಆಯೋಗ ತಿಳಿಸಿದೆ.












