ಸನ್ಮಾರ್ಗ ವಾರ್ತೆ
ಕೇರಳ, ಏಪ್ರಿಲ್ 6: ಜಮಾಅತೆ ಇಸ್ಲಾಮಿ ಹಿಂದ್ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷ, ಜಮಾಅತ್ ನ ಕೇರಳದ ಮಾಜಿ ಅಧ್ಯಕ್ಷ ಮತ್ತು ವಿಝನ್ 2016 ಎಂಬ ಕ್ರಾಂತಿಕಾರಿ ಯೋಜನೆಯ ರೂವಾರಿಯಾಗಿದ್ದ ಪ್ರೊಫೆಸರ್ ಕೆ ಎ ಸಿದ್ದೀಕ್ ಹಸನ್ ನಿಧನರಾಗಿದ್ದಾರೆ. ವಯೋಸಹಜ ಅಸೌಖ್ಯದಿಂದ ಕೋಝಿಕೋಡ್ ನ ಕೋವೂರಿನಲ್ಲಿರುವ ಮಗನ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದ ಅವರಿಗೆ 76 ವರ್ಷ ವಯಸ್ಸಾಗಿತ್ತು. ಇಂದು ಸಂಜೆ 4 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ವೆಳ್ಳಿಮಾಡುಕುನ್ನು ಜೆಡಿಟಿಯಲ್ಲಿ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದೆ. ನಾಳೆ, ಏಪ್ರಿಲ್ ಏಳರಂದು ಬೆಳಿಗ್ಗೆ 8;30ಕ್ಕೆ ಕಲ್ಲಿಕೋಟೆಯ ಜುಮಾ ಮಸೀದಿಯ ಕಬರ ಸ್ಥಾನದಲ್ಲಿ ಮೃತದೇಹದ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ವರದಿ ತಿಳಿಸಿದೆ.
ಬರಹಗಾರ, ಇಸ್ಲಾಮಿ ವಿದ್ವಾಂಸ, ವಾಗ್ಮಿ ಸಾಮಾಜಿಕ ಕಾರ್ಯಕರ್ತ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ದುಡಿಸಿಕೊಂಡಿದ್ದ ಸಿದ್ದೀಕ್ ಹಸನ್ ಅವರು ಕೇರಳದ ಪ್ರಸಿದ್ಧ ಮಧ್ಯಮಮ್ ದಿನಪತ್ರಿಕೆ ಮತ್ತು ಮಾಧ್ಯಮಮ್ ವೀಕ್ಲಿ ಗಳನ್ನು ಪ್ರಕಟಿಸುತ್ತಿರುವ ಐಡಿಯಲ್ ಪಬ್ಲಿಕೇಶನ್ ಟ್ರಸ್ಟ್ ನ ಸ್ಥಾಪಕ ಕಾರ್ಯದರ್ಶಿಯಾಗಿದ್ದರು.
ಕೆ ಎಂ ಅಬ್ದುಲ್ಲಾ ಮೌಲವಿ ಮತ್ತು ಖದೀಜಾ ಎಂಬವರ ಪುತ್ರನಾಗಿ 1945 ಮೇ ಐದಕ್ಕೆ ತ್ರಿಶೂರ್ ಜಿಲ್ಲೆಯ ಕೊಡುಂಗಲ್ಲೂರ್ ಏರಿಯಾಟ್ ಎಂಬಲ್ಲಿ ಜನಿಸಿದರು. ಫಾರೂಕ್ ರೌಲತುಲ್ ಉಲೂಮ್ ಅರೇಬಿಕ್ ಕಾಲೇಜ್, ಶಾಂತಪುರಂ ಇಸ್ಲಾಮಿಯಾ ಕಾಲೇಜ್ ಗಳಿಂದ ಆಫ್ಝಲುಲ್ ಉಲಮಾ ಮತ್ತು ಅರೇಬಿಕ್ ನಲ್ಲಿ ಎಂ ಎ ಪದವಿಯನ್ನು ಪಡೆದಿದ್ದರು. ತಿರುವನಂತಪುರಂ ಯುನಿವರ್ಸಿಟಿ ಕಾಲೇಜ್, ಎರ್ನಾಕುಲಂ ಮಹಾರಾಜ ಕಾಲೇಜ್, ಕೊಯಿಲಂಡಿ, ಕೊಡನ್ ಚೆರಿ, ಕಾಸರಗೋಡು ಸರಕಾರೀ ಕಾಲೇಜುಗಳಲ್ಲಿ ಅಧ್ಯಾಪಕರಾಗಿಯೂ ಅವರು ಸೇವೆ ಸಲ್ಲಿಸಿದ್ದರು
ಬಹುಭಾಷಾ ವಿದ್ವಾಂಸ, ಪ್ರಬೋಧನಂ ವೀಕ್ಲಿಯ ಬರಹಗಾರರಾಗಿ, ಕೇರಳ ಭಾಷಾ ಇನ್ಸ್ಟಿಟ್ಯೂಟ್ ಪ್ರಕಟಿಸುತ್ತಿರುವ ಇಸ್ಲಾಂ ದರ್ಶನದ ಅಸಿಸ್ಟೆಂಟ್ ಎಡಿಟರ್ ಮುಂತಾದ ಹೊಣೆಗಾರಿಕೆಯನ್ನು ಅವರು ನಿಭಾಯಿಸಿದ್ದರು. ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನಿಯುಕ್ತರಾಗುವುದಕ್ಕಿಂತ ಮೊದಲು 1990ರಿಂದ 2005ರವರೆಗೆ ನಾಲ್ಕು ಬಾರಿ ಜಮಾಅತೆ ಇಸ್ಲಾಮಿ ಹಿಂದ್ ಕೇರಳದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ನವದೆಹಲಿ ಕೇಂದ್ರೀಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಹ್ಯೂಮನ್ ಡೆವಲಪ್ಮೆಂಟ್ ಫೌಂಡೇಶನ್ ನ ವಿಝನ್ 2016 ಯೋಜನೆಯ ನಿರ್ದೇಶಕ ಎಂಬ ನೆಲೆಯಲ್ಲಿ ಅದ್ಭುತ ಸೇವೆಯನ್ನು ಸಲ್ಲಿಸಿದ್ದರು. ಶೈಕ್ಷಣಿಕ ಕ್ಷೇತ್ರದಲ್ಲಿ ಹಿಂದುಳಿದಿರುವ ಜನಸಮೂಹದ ಅಭಿವೃದ್ಧಿಗಾಗಿ ದುಡಿಯುತ್ತಿರುವ ಅನೇಕ ಪ್ರಾಜೆಕ್ಟ್ ಗಳಿಗೆ ಅವರು ನೇತೃತ್ವ ನೀಡಿದರು. ಹ್ಯೂಮನ್ ವೆಲ್ಫೇರ್ ಫೌಂಡೇಶನ್, ಹ್ಯೂಮನ್ ವೆಲ್ಫೇರ್ ಟ್ರಸ್ಟ್, ಏಪಿಸಿಆರ್, ಸೊಸೈಟಿ ಫಾರ್ ಬ್ರೈಟ್ ಫ್ಯೂಚರ್, ಮೆಡಿಕಲ್ ಸರ್ವಿಸ್ ಸೊಸೈಟಿ ಮುಂತಾದುವುಗಳ ಪ್ರಧಾನ ಕಾರ್ಯದರ್ಶಿಯಾಗಿ ಅವರು ಸೇವೆ ಸಲ್ಲಿಸಿದರು.
ಆಲ್ಟರ್ನೇಟಿವ್ ಇನ್ವೆಸ್ಟ್ ಮೆಂಟ್ ಅಂಡ್ ಕ್ರೆಡಿಟ್ ಲಿಮಿಟೆಡ್ ನ ಅಧ್ಯಕ್ಷರಾಗಿ, ಬೈತು ಝಕಾತ್ ಕೇರಳದ ಸ್ಥಾಪಕ ಅಧ್ಯಕ್ಷರಾಗಿಯೂ ಅವರು ದುಡಿದಿದ್ದರು. ಸೆಂಟರ್ ಫಾರ್ ಇಇನ್ಫಾರ್ಮಶನ್ ಅಂಡ್ ಗೈಡೆನ್ಸ್ ಇಂಡಿಯಾ, ಶಾಫಿ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಮುಂತಾದುವುಗಳ ಸ್ಥಾಪನೆಯಲ್ಲಿ ಅವರು ಮುಂಚೂಣಿಯಲ್ಲಿದ್ದರು.
ಅವರು ಪತ್ನಿ ಮತ್ತು ನಾಲ್ವರು ಮಕ್ಕಳು ಸಹಿತ ಅನೇಕ ಮಂದಿಯನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷ ಸೈಯದ್ ಸಆದತುಲ್ಲಾ ಹುಸೇನಿ, ಜಮಾಅತ್ ಕೇರಳ ಅಧ್ಯಕ್ಷ ಎಂ ಐ ಅಬ್ದುಲ್ ಅಜೀಜ್, ಕರ್ನಾಟಕದ ಅಧ್ಯಕ್ಷ ಬೆಳಗಾಮಿ ಮುಹಮ್ಮದ್ ಸಾದ್ ಸಹಿತ ಅನೇಕ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.












