ಸನ್ಮಾರ್ಗ ವಾರ್ತೆ
ನವದೆಹಲಿ: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಕುರಿತು ಪ್ರಚೋದನಕಾರಿ ಹಾಗೂ ದಾರಿತಪ್ಪಿಸುವ ರೀತಿಯಲ್ಲಿ ವರದಿ ಮಾಡಿದ್ದ ಝೀ ನ್ಯೂಸ್ ವಿರುದ್ಧ SIO ರಾಷ್ಟ್ರೀಯ ಕಾರ್ಯದರ್ಶಿ ತಲ್ಹಾ ಮನ್ನಾನ್ ಅವರು ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ, ನ್ಯೂಸ್ ಬ್ರಾಡ್ಕಾಸ್ಟಿಂಗ್ & ಡಿಜಿಟಲ್ ಸ್ಟ್ಯಾಂಡರ್ಡ್ಸ್ ಅಥಾರಿಟಿ (NBDSA) ನೀಡಿರುವ ಮಹತ್ವದ ಆದೇಶವನ್ನು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (SIO) ಸ್ವಾಗತಿಸಿದೆ.
ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ಪ್ಯಾಲೆಸ್ತೀನ್ಗೆ ಬೆಂಬಲ ಸೂಚಿಸಿ ಕೂಗಲಾದ ಘೋಷಣೆಗಳನ್ನು ಝೀ ನ್ಯೂಸ್ ತನ್ನ ಪ್ರಸಾರದಲ್ಲಿ ಅಪರಾಧ ಹಾಗೂ ಉಗ್ರವಾದದೊಂದಿಗೆ ಸಂಬಂಧ ಕಲ್ಪಿಸುವ ರೀತಿಯಲ್ಲಿ ಬಿಂಬಿಸಿತ್ತು. ಅಲ್ಲದೆ, ಈ ಅಭಿವ್ಯಕ್ತಿಗೆ ಕೋಮು ಹಾಗೂ ಪ್ರಚೋದನಕಾರಿ ಸ್ವರೂಪ ನೀಡಲು ಪ್ರಯತ್ನಿಸಿತ್ತು.
ಪ್ರಸಾರವನ್ನು ಹಾಗೂ ಎರಡೂ ಪಕ್ಷಗಳ ವಾದಗಳನ್ನು ಪರಿಶೀಲಿಸಿದ NBDSA, AMUನಲ್ಲಿ ನಡೆದ ಪ್ರತಿಭಟನೆಯು ಶುಲ್ಕ ಹೆಚ್ಚಳದ ವಿರೋಧ ಸೇರಿದಂತೆ ಹಲವು ವಿಷಯಗಳನ್ನು ಒಳಗೊಂಡಿತ್ತು ಎಂದು ಗಮನಿಸಿದೆ. ಆದರೆ, ಪ್ರತಿಭಟನೆಯ ಪ್ರಮುಖ ಉದ್ದೇಶವಾಗಿದ್ದ ಶುಲ್ಕ ಹೆಚ್ಚಳದ ವಿಷಯವನ್ನು ಸಂಪೂರ್ಣವಾಗಿ ಕಡೆಗಣಿಸಿ, ಪ್ಯಾಲೆಸ್ತೀನ್ಗೆ ಸಂಬಂಧಿಸಿದ ಘೋಷಣೆಗಳ ಮೇಲಷ್ಟೇ ಗಮನ ಕೇಂದ್ರೀಕರಿಸುವ ಮೂಲಕ ಘಟನೆಗೆ ವಿಕೃತ ರೂಪ ನೀಡಲಾಗಿದೆ ಎಂದು ಪ್ರಾಧಿಕಾರ ಅಭಿಪ್ರಾಯಪಟ್ಟಿದೆ. ಇದರಿಂದಾಗಿ ಪ್ರತಿಭಟನೆಯೇ ಪ್ಯಾಲೆಸ್ತೀನ್ ವಿಷಯಕ್ಕೆ ಸಂಬಂಧಿಸಿದ್ದೆಂಬ ತಪ್ಪು ಅಭಿಪ್ರಾಯ ಮೂಡಿದೆ ಎಂದು ಅದು ತಿಳಿಸಿದೆ.
ಘೋಷಣೆಗಳನ್ನು ಪ್ರಸಾರ ಮಾಡಿರುವ ರೀತಿಯೂ ಸಮಸ್ಯಾತ್ಮಕವಾಗಿದ್ದು, ಬಳಸಲಾದ ಪದಪ್ರಯೋಗಗಳು ಪ್ರಚೋದನಕಾರಿಯಾಗಿವೆ ಎಂದು NBDSA ಗಮನಿಸಿದೆ. ಅಲ್ಲದೆ, ಅದು ತಟಸ್ಥ ವರದಿಗಾರಿಕೆಯ ಬದಲು ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವ ರೀತಿಯಲ್ಲಿ ಕಂಡುಬಂದಿದೆ ಎಂದು ಪ್ರಾಧಿಕಾರ ಹೇಳಿದೆ.
ಈ ಹಿನ್ನೆಲೆಯಲ್ಲಿ NBDSA, ಪ್ರಸಾರ ಸಂಸ್ಥೆಗೆ ₹2 ಲಕ್ಷ ದಂಡ ವಿಧಿಸಿದೆ. ಜೊತೆಗೆ, ಆಕ್ಷೇಪಾರ್ಹ ಪ್ರಸಾರದ ದೃಶ್ಯಗಳನ್ನು ಅದರ ವೆಬ್ಸೈಟ್ ಮತ್ತು ಯೂಟ್ಯೂಬ್ನಿಂದ, ಲಭ್ಯವಿರುವಲ್ಲಿ, ಸಂಬಂಧಿತ ಹೈಪರ್ಲಿಂಕ್ಗಳು ಹಾಗೂ ಪ್ರವೇಶದೊಂದಿಗೆ ತೆಗೆದುಹಾಕುವಂತೆ ನಿರ್ದೇಶಿಸಿದೆ. ಕೈಗೊಂಡ ಕ್ರಮದ ಕುರಿತು ಏಳು ದಿನಗಳೊಳಗೆ ಅನುಸರಣೆ ವರದಿ ಸಲ್ಲಿಸುವಂತೆಯೂ ಸೂಚಿಸಿದೆ.
ಜವಾಬ್ದಾರಿಯುತ ಪತ್ರಿಕೋದ್ಯಮ, ಸಂದರ್ಭಾಧಾರಿತ ವರದಿಗಾರಿಕೆ ಹಾಗೂ ಪ್ರಜಾಸತ್ತಾತ್ಮಕ ಅಭಿವ್ಯಕ್ತಿಯ ತತ್ವಗಳನ್ನು ಈ ಆದೇಶವು ಮತ್ತೊಮ್ಮೆ ದೃಢಪಡಿಸಿದೆ ಎಂದು SIO ಆಫ್ ಇಂಡಿಯಾ ಹೇಳಿದೆ.
ಪ್ಯಾಲೆಸ್ತೀನ್ ಜನರೊಂದಿಗೆ ಶಾಂತಿಯುತವಾಗಿ ಐಕ್ಯತೆ ವ್ಯಕ್ತಪಡಿಸುವುದನ್ನು ಸಂಚಲನಕಾರಿಯಾಗಿ, ಕೋಮು ದೃಷ್ಟಿಕೋನದಿಂದ ಅಥವಾ ಪ್ರಚೋದನಕಾರಿ ರೀತಿಯಲ್ಲಿ ಬಿಂಬಿಸಿ, ಅದನ್ನು ಅಪರಾಧ ಅಥವಾ ಉಗ್ರವಾದದೊಂದಿಗೆ ಜೋಡಿಸುವ ಪ್ರಯತ್ನ ಮಾಡಬಾರದು ಎಂದು SIO ಒತ್ತಿಹೇಳಿದೆ.
ಇದು ಕೇವಲ ಒಬ್ಬ ವ್ಯಕ್ತಿಯ ಗೆಲುವಲ್ಲ. ಭಿನ್ನಮತವನ್ನು ಅಪರಾಧವೆಂದು ಬಿಂಬಿಸಲು ಸಾಧ್ಯವಿಲ್ಲ ಮತ್ತು ದಮನಕ್ಕೊಳಗಾದ ಜನರೊಂದಿಗೆ ವ್ಯಕ್ತಪಡಿಸುವ ಐಕ್ಯತೆಯನ್ನು ಯಾವುದೇ ಆಧಾರವಿಲ್ಲದೆ ಉಗ್ರವಾದಕ್ಕೆ ಸಮೀಕರಿಸಲು ಸಾಧ್ಯವಿಲ್ಲ ಎಂಬ ತತ್ವದ ಗೆಲುವಾಗಿದೆ ಎಂದು SIO ತಿಳಿಸಿದೆ.
ಸತ್ಯ, ಜವಾಬ್ದಾರಿಯುತ ಪತ್ರಿಕೋದ್ಯಮ, ಪ್ರಜಾಸತ್ತಾತ್ಮಕ ಅಭಿವ್ಯಕ್ತಿ ಹಾಗೂ ನ್ಯಾಯ ಮತ್ತು ಮಾನವ ಘನತೆಗಾಗಿ ಧ್ವನಿ ಎತ್ತುವ ವಿದ್ಯಾರ್ಥಿಗಳು ಮತ್ತು ನಾಗರಿಕರ ಹಕ್ಕುಗಳ ಪರವಾಗಿ SIO ಆಫ್ ಇಂಡಿಯಾ ನಿರಂತರವಾಗಿ ನಿಲ್ಲಲಿದೆ.












