ಕೇಂದ್ರದ ಕೃಷಿ ಮಸೂದೆಯನ್ನು ತಿರಸ್ಕರಿಸಿದ ಪಂಜಾಬ್ ಸರಕಾರ: ವಿಧಾನಸಭೆಯಲ್ಲಿ ನಿರ್ಣಯ ಮಂಡನೆ

0
331

ಸನ್ಮಾರ್ಗ ವಾರ್ತೆ

ಪಂಜಾಬ್: ದೇಶಾದ್ಯಂತ ರೈತರ ಹೋರಾಟಕ್ಕೆ ಸಾಕ್ಷಿಯಾದ ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನು ಪಂಜಾಬ್ ಸರಕಾರವು ಸಂಪೂರ್ಣವಾಗಿ ತಿರಸ್ಕರಿಸಿದ್ದು, ಕೇಂದ್ರ ಸರ್ಕಾರದ ಕೃಷಿ ಮಸೂದೆಗೆ ವಿರೋಧವಾಗಿ ಪಂಜಾಬ್‌ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕ್ಯಾ. ಅಮರೀಂದರ್‌ ಸಿಂಗ್ ನಿರ್ಣಯ ಮಂಡಿಸಿದ್ದಾರೆ.

ಈ ಸಂಬಂಧ ಮೂರು ಹೊಸ ಮಸೂದೆಗಳನ್ನು ಮುಖ್ಯಮಂತ್ರಿ ಸಿಂಗ್‌ ಮಂಡಿಸಿದರು. ವ್ಯಾಪಾರ ಮತ್ತು ವಾಣಿಜ್ಯ ವಿಶೇಷ ನಿಬಂಧನೆ ತಿದ್ದುಪಡಿ 2020, ಅಗತ್ಯ ಸರಕುಗಳ ವಿಶೇಷ ನಿಬಂಧನೆ, ರೈತ ಒಪ್ಪಂದ ಮತ್ತು ಕೃಷಿ ಸೇವೆಗಳ ವಿಶೇಷ ತಿದ್ದುಪಡಿ ಮಸೂದೆಯನ್ನು ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಕಲಾಪದಲ್ಲಿ ಮಂಡಿಸಿದರು.

ಬಳಿಕ ಮಾತನಾಡಿದ ಅಮರೀಂದರ್ ಸಿಂಗ್,‌ ಕೇಂದ್ರ ಸರಕಾರದ ನಡೆಯೇ ಅಸಂಬದ್ಧ. ರಾಜ್ಯದ ಕೃಷಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ನಿರ್ಲಕ್ಷ್ಯ ಧೋರಣೆ ತೋರುತ್ತಿದೆ. ಹೀಗಾಗಿ ನಮ್ಮ ರಾಜ್ಯಕ್ಕೆ ಹಾಗೂ ನಮ್ಮ ರೈತರಿಗೆ ಅನುಕೂಲವಾಗುವ ರೀತಿಯ ಕಾನೂನು ಜಾರಿಗೆ ತರಲು ಪ್ರಯತ್ನಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ನಮ್ಮ ರೈತರು ಮತ್ತು ಪಂಜಾಬ್ ಜನರ ಹಿತಾಸಕ್ತಿಗಳನ್ನು ಕಾಪಾಡುವುದು ಅತ್ಯಗತ್ಯ. ಅದು ಎಲ್ಲಕ್ಕಿಂತ ಮೊದಲ ಆದ್ಯತೆ. ಯಾವುದೇ ಅನ್ಯಾಯಕ್ಕೆ ನಾವು ತಲೆಬಾಗುವುದಿಲ್ಲ ಎಂದು ಇದೆ ವೇಳೆ ತಿಳಿಸಿದ್ದಾರೆ.