ವಿವಾಹಿತರಾಗಲು ಬೇಕಾದ ಅರ್ಹತೆಗಳು

0
394

ಖದೀಜ ನುಸ್ರತ್

ಅಲ್ಲಾಹನು ಭೂಮಿಯ ಮೇಲೆ ಪ್ರತಿಯೊಂದು ಜೀವಿಯನ್ನು ಜೋಡಿಗಳಾಗಿ ಸೃಷ್ಟಿಸಿದ್ದಾನೆ. ನೈಸರ್ಗಿಕವಾಗಿ ಮನುಷ್ಯನು ಒಂಟಿಯಾಗಿ ನೆಮ್ಮದಿಯಿಂದ ಜೀವಿಸಲು ಸಾಧ್ಯವಿಲ್ಲ. ಮನುಷ್ಯರ ದೈಹಿಕ ಮತ್ತು ಮಾನಸಿಕ ಬೇಡಿಕೆಗಳನ್ನು ಈಡೇರಿಸಲು ವಿವಾಹದ ಮೂಲಕ ಹೊಸ ಜೀವನವನ್ನು ಆರಂಭಿಸುತ್ತಾರೆ. ವಿವಾಹ ಎಂಬುದು ಗಂಡು ಹೆಣ್ಣಿನ ಪರಸ್ಪರ ಜವಾಬ್ದಾರಿ, ಹಕ್ಕು ಬಾಧ್ಯತೆಗಳನ್ನು ಗೌರವಿಸುವ ಮತ್ತು ಪೂರೈಸುವ ಲಿಖಿತ ಒಪ್ಪಂದವಾಗಿದೆ. ಅದು ಮನುಷ್ಯನ ಮನಸ್ಸಿಗೆ ಸುರಕ್ಷತೆ, ಭದ್ರತೆ ಮತ್ತು ನೆಮ್ಮದಿಯನ್ನು ನೀಡುವ ಮಹಾ ಅನುಗ್ರಹವಾಗಿದೆ. ಅದು ಗಂಡು ಹೆಣ್ಣಿನ ಸಂಪೂರ್ಣ ಒಪ್ಪಿಗೆ ಮತ್ತು ಎರಡೂ ಕುಟುಂಬದವರ ಪರಸ್ಪರ ಸಮಾಲೋಚನೆ ಮತ್ತು ಮಾರ್ಗದರ್ಶನದಿಂದಲೇ ನಡೆಯಬೇಕು.

ಗಂಡು ಹೆಣ್ಣು ತಮಗೆ ಇಷ್ಟವಿಲ್ಲದವರೊಂದಿಗೆ ವಿವಾಹವಾಗಲು ಇಸ್ಲಾಮ್ ಅನುಮತಿಸುವುದಿಲ್ಲ. ವಿವಾಹವಾಗುವವರು ಹೆತ್ತವರನ್ನು ತಾತ್ಕಾಲಿಕವಾಗಿ ಸಂತೃಪ್ತಿ ಪಡಿಸಲು ಮಾತ್ರ ಒಪ್ಪಿಗೆ ನೀಡಬಾರದು ಮತ್ತು ಹೆತ್ತವರು ಇಷ್ಟವಿಲ್ಲದವರೊಂದಿಗೆ ವಿವಾಹವಾಗಲು ಮಕ್ಕಳನ್ನು ಬಲಾತ್ಕಾರ ಮಾಡಬಾರದು. ಭಾವೀ ಸಂಗಾತಿಗಳು ಸ್ವಃಇಚ್ಛೆ ಮತ್ತು ನಿಶ್ಕಕಳಂಕ ಮಸಸ್ಸಿನಿಂದ ಮಾತ್ರ ಒಪ್ಪಿಗೆ ನೀಡಬೇಕು ಏಕೆಂದರೆ ವಿವಾಹವೆಂಬುದು ಕೆಲವು ದಿನ ವರ್ಷಗಳಿಗೆ ಸೀಮಿತವಾಗಿರದೆ ನಮ್ಮ ಇಹ ಪರ ಜೀವನದ ಯಶಸ್ಸು ಮತ್ತು ಮನಃಸ್ಸಮಾಧಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

“ನಿಮ್ಮಲ್ಲಿ ಒಂಟಿಯಾಗಿರುವವರ ಮತ್ತು ನಿಮ್ಮ ದಾಸ-ದಾಸಿಯರಲ್ಲಿ ಸಜ್ಜನರಾಗಿರುವವರ ವಿವಾಹ ಮಾಡಿ ಬಿಡಿರಿ. ಅವರು ಬಡವರಾಗಿದ್ದರೆ ಅಲ್ಲಾಹ್ ತನ್ನ ಅನುಗ್ರಹದಿಂದ ಅವರನ್ನು ಸಂಪನ್ನಗೊಳಿಸುವನು. ಅಲ್ಲಾಹ್ ಅತಿ ವಿಶಾಲನೂ ಸರ್ವಜ್ಞನೂ ಆಗಿರುತ್ತಾನೆ.” (ಪವಿತ್ರ ಕುರ್ ಆನ್ 24: 32)

ಇಸ್ಲಾಮ್ ಧರ್ಮದಲ್ಲಿ ವಿವಾಹದ ಪ್ರಾಯವು ನಿಗದಿತವಾಗಿಲ್ಲ ಆದರೆ ಪ್ರವಾದಿ ಮುಹಮ್ಮದ್(ಸ) ಸಾಧ್ಯವಾದಷ್ಟು ಬೇಗ ವಿವಾಹವಾಗುವುದನ್ನು ಪ್ರೋತ್ಸಾಹಿಸಿರುವರು. ವಿವಾಹ ಪ್ರಾಯವು ನಾವು ವಾಸಿಸುವ ದೇಶ, ಕಾಲಘಟ್ಟ ಹಾಗೂ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ವಿವಾಹಿತರಾಗುವವರು ಮಾನಸಿಕವಾಗಿ, ಶಾರೀರಿಕವಾಗಿ ಪ್ರಬುದ್ಧರಾಗಿರಬೇಕು. ಪ್ರತಿಯೊಬ್ಬರೂ ತಮ್ಮ ದೇಶದ ಕಾನೂನಿನಲ್ಲಿ ನಿಗದಿಪಡಿಸಿರುವ ವಿವಾಹದ ಪ್ರಾಯವನ್ನು ಗೌರವಿಸಬೇಕು.

ಪ್ರಸಕ್ತ ಕಾಲದಲ್ಲಿ ಹೆಣ್ಣು ಮಕ್ಕಳು ಪದವೀಧರರಾದ ತಕ್ಷಣ ತಮ್ಮ ಜವಾಬ್ದಾರಿಗಳನ್ನು ಸ್ವತಃ ನಿರ್ವಹಿಸುವಂತಹ ಸಮಯದಲ್ಲಿ ಮತ್ತು ಗಂಡು ಮಕ್ಕಳಿಗೆ ಪದವೀಧರರಾಗಿ ಉದ್ಯೋಗ ಲಭಿಸಿ ಒಂದೆರಡು ವರ್ಷದ ನಂತರ ಸ್ವತಂತ್ರವಾಗಿ ನಿರ್ಧಾರಗಳನ್ನು ಕೈಗೊಳ್ಳುವಂತಹ ಹಾಗೂ ಆರ್ಥಿಕವಾಗಿ ಸಬಲರಾದ ಸಮಯದಲ್ಲಿ ವಿವಾಹ ಮಾಡುವುದು ಉತ್ತಮವಾಗಿರುತ್ತದೆ. ಉದ್ಯೋಗದ ವಿಷಯದಲ್ಲಿ ಅತ್ಯಂತ ಪೈಪೋಟಿಯಿರುವ ಈ ಕಾಲದಲ್ಲಿ ತಮ್ಮ ವೃತ್ತಿ ಮತ್ತು ವರಮಾನಕ್ಕೆ ಸರಿಹೊಂದುವ ಸಂಗಾತಿಯನ್ನು ಆಯ್ಕಮಾಡುವಂತೆ ಜಾಗರೂಕತೆ ವಹಿಸಬೇಕು. ನೀವು ಹೆಣ್ಣು ಮಕ್ಕಳ ವಿವಾಹಕ್ಕೆ ಸಹಾಯ ಮಾಡುವಂತೆ ನಿಮ್ಮ ಕುಟುಂಬದಲ್ಲಿ ಅಗತ್ಯವಿದ್ದಾಗ ಗಂಡು ಮಕ್ಕಳಿಗೂ ವಿವಾಹವಾಗಲು ಆರ್ಥಿಕ ಸಹಾಯ ಮಾಡಿರಿ. ವಿವಾಹಗಳಲ್ಲಿ ದುಂದುವೆಚ್ಚವಾಗದಂತೆ ಜಾಗರೂಕತೆ ವಹಿಸಬೇಕು. ವಿದೇಶದಲ್ಲಿ ದುಡಿಯುವವರಾಗಿದ್ದರೆ ಸಂಗಾತಿಯನ್ನು ಕರೆದುಕೊಂಡು ಹೋಗುತ್ತಾರೆಯೇ ಇಲ್ಲವೋ ಎಂಬುದರ ಬಗ್ಗೆ ಸ್ಪಷ್ಟವಾದ ನಿಲುವನ್ನು ಹೊಂದಿರಬೇಕು.

ಎರಡು ವ್ಯತ್ಯಸ್ಥ ಕುಟುಂಬದಿಂದ ಬಂದವರಲ್ಲಿ ಬೇರೆ ಬೇರೆ ರೀತಿಯ ಸ್ವಭಾವ, ನಡವಳಿಕೆ, ಗುಣ, ವ್ಯಕ್ತಿತ್ವ, ಧಾರ್ಮಿಕ, ಆರ್ಥಿಕ, ಸಾಮಾಜಿಕ, ವಸ್ತ್ರಧಾರಣೆ, ಆಹಾರಗಳ ಅಭಿರುಚಿ ಹಾಗೂ ಇನ್ನಿತರ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಇರುವುದು ಸಹಜ. ಆದರೆ ಈ ಭಿನ್ನಾಭಿಪ್ರಾಯಗಳನ್ನು ಗೌರವಿಸಿ ಯಾವ ರೀತಿ ವರ್ತಿಸುತ್ತೇವೆಂಬುದು ಮುಖ್ಯ ವಿಷಯವಾಗಿರುತ್ತದೆ. ವಿವಾಹ ಹಾಗೂ ಕೌಟುಂಬಿಕ ಜೀವನದ ವಿಷಯದ ಬಗ್ಗೆ ಇರುವ ಪವಿತ್ರ ಕುರ್ ಆನ್ ನ ಸೂಕ್ತ ಹಾಗೂ ಪ್ರವಾದಿ ವಚನಗಳು ಮತ್ತು ಆಧುನಿಕ ಕಾಲದಲ್ಲಿ ಲಭ್ಯವಿರುವ ಪುಸ್ತಕಗಳನ್ನು ಅಧ್ಯಯನ ನಡೆಸುವುದು ಅನಿವಾರ್ಯವಾಗಿದೆ. ನಾವು ಎದುರಿಸುವ ಎಲ್ಲಾ ಕೌಟುಂಬಿಕ ಸಮಸ್ಯೆಗಳಿಗೆ ಅದರಲ್ಲಿ ಪರಿಹಾರವಿರುತ್ತದೆ. ಸಮಸ್ಯೆಗಳನ್ನು ಪರಿಹರಿಸುವಂತಹ, ಉತ್ತಮ ಮಾತುಗಾರಿಕೆಯ, ಸಂವಹನದ ಹಾಗೂ ಅಗತ್ಯವಿರುವಾಗ ಮೌನವಹಿಸುವಂತಹ ಮತ್ತು ಪರಸ್ಪರ ಸಂಧಾನಮಾಡುವ ಕೌಶಲ್ಯತೆಯನ್ನು ಬೆಳೆಸಿಕೊಳ್ಳಬೇಕು.

“ಮತ್ತು ಸರಿಯಾದ ಮಾತನ್ನೇ ಹೇಳಿರಿ.” (ಪವಿತ್ರ ಕುರ್ ಆನ್ 33: 70)

ತಮ್ಮ ಸಂಗಾತಿಯ ಶಾರೀರಿಕ ಹಾಗೂ ಭಾವನಾತ್ಮಕ ವಿಷಯಗಳನ್ನು ಸೂಕ್ಷ್ಮವಾಗಿ ಅರಿತಿರಬೇಕು. ಮನಸ್ಸಿನ ಆಗ್ರಹಗಳನ್ನು ಮತ್ತು ಇಷ್ಟಾನಿಷ್ಟಗಳನ್ನು ಅರ್ಥಮಾಡಿಕೊಳ್ಳಬೇಕು. ತಮ್ಮ ಸಂಗಾತಿಯು ಸುರಕ್ಷತೆ, ಪ್ರೀತಿ, ಆರೈಕೆ, ಆನಂದ, ಗೌರವ ಮತ್ತು ಮನಃಸ್ಸಮಾಧಾನವನ್ನು ಅನುಭವಿಸಬೇಕು. ಪರಸ್ಪರರ ಅಗತ್ಯಗಳನ್ನು ಪೂರೈಸಿಕೊಡಬೇಕು. ಉದಾರತೆ, ಕರುಣೆ, ಪ್ರಾಮಾಣಿಕತೆ, ವಿಶ್ವಾಸಾರ್ಹತೆ, ನಮ್ರತೆ, ಸಹಕಾರ ಮತ್ತು ನಗುಮುಖದಿಂದ ಪರಸ್ಪರ ಸಂಧಾನ ಮಾಡಿಕೊಳ್ಳುವ ಗುಣದಿಂದ ಉತ್ತಮ ಸಂಬಂಧ ನಿರ್ಮಿಸಲು ಸಾಧ್ಯ. ನಿಮ್ಮ ಸಂಗಾತಿಯ ಸೌಂದರ್ಯ, ಗುಣ, ವೃತ್ತಿ, ಉದ್ಯೋಗ, ಸಂಪತ್ತು, ಪ್ರತಿಭೆ ಹಾಗೂ ಮತ್ತಿತರ ವಿಷಯಗಳಲ್ಲಿ ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಬೇಡಿರಿ.

ವಿವಾಹಿರತಾಗುವವರಲ್ಲಿ ಜವಾಬ್ದಾರಿಯ ಪ್ರಜ್ಞೆ ಇರಬೇಕು. ಏನಾದರೂ ಸರಿಯಾಗಿ ನಡೆಯದಿರುವಾಗ ಪರಸ್ಪರ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಬೇಕು. ಕೋಪವನ್ನು ನಿಯಂತ್ರಿಸಲು ಕಲಿಯಬೇಕು. ದಂಪತಿಗಳು ಪರಸ್ಪರರನ್ನು ನಿರ್ಲಕ್ಷಿಸಿಸುವುದೇ ಕೋಪ ಬರಲು ಮತ್ತು ಜಗಳ ಉಂಟಾಗಲು ಒಂದು ಮುಖ್ಯ ಕಾರಣ. ನೀವು ವಿವಾಹವಾಗುತ್ತಿರುವುದು ಮಾನವ ಸಹಜ ದೌರ್ಬಲ್ಯಗಳಿರುವ ಸಾಮಾನ್ಯ ಮನುಷ್ಯನನ್ನು ಎಂದು ನೆನಪಿರಬೇಕು. ಸಮಸ್ಯೆಗಳನ್ನು ಪರಿಹರಿಸುವಾಗ ಇತರರಿಗೆ ಅವಕಾಶ ಕಲ್ಪಿಸಿ ಕೊಡುವ, ನಿಸ್ವಾರ್ಥ ಮನೋಭಾವವನ್ನು ಹೊಂದಿರಬೇಕು. ಯಾವುದೇ ಸಮಸ್ಯೆ ಬಂದಾಗ ರಾತ್ರಿಯಾಗುವುದರೊಳಗೆ ಪರಸ್ಪರ ಚರ್ಚಿಸಿ ಪರಿಹರಿಸಬೇಕು. ಅಗತ್ಯವಿದ್ದಲ್ಲಿ ಹೆತ್ತವರ ಸಲಹೆಗಳನ್ನು ಪಡೆಯಬೇಕು. ತಡವಾದಾಗ ಶೈತಾನನು ಇಬ್ಬರ ತಲೆಯಲ್ಲೂ ಹಲವಾರು ಅನಗತ್ಯ ಯೋಚನೆಗಳನ್ನು ತುಂಬುತ್ತಾನೆ. ದಿನಕಳೆದಂತೆ ಸಮಸ್ಯೆಗಳು ಜಟಿಲವಾಗುತ್ತಾ ಹೋಗುತ್ತದೆ. ನಿಮ್ಮ ವಿಶ್ರಾಂತಿ ಕೋಣೆಯ ಹೊರಗಡೆ ಜಗಳಾಡಬಾರದು. ಮಾತನಾಡುವಾಗ ಆಲೋಚಿಸಬೇಕು. ನಿಮ್ಮ ಪ್ರೀತಿ ಪಾತ್ರರಿಗಾಗಿ ಕೆಲವೊಮ್ಮೆ ನಿಮಗಿಷ್ಟವಿಲ್ಲದ ಕೆಲವು ಕೆಲಸಗಳನ್ನು ಮಾಡಬೇಕಾದಾದ ಅವಕಾಶಗಳೂ ಬರಬಹುದು.

ನಿಮ್ಮ ಪತಿಗೆ ಅವರ ಕುಟುಂಬದಲ್ಲಿ ಹಲವಾರು ಜವಾಬ್ದಾರಿಗಳು ಇರುತ್ತದೆ. ಅವರ ಮಾತಾಪಿತರಿಗೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ ಮತ್ತು ಅವರೊಂದಿಗೆ ಸಮಯ ಕಳೆಯಬೇಕಾಗುತ್ತದೆ. ಕೆಲವೊಮ್ಮೆ ಅವರು ಪತ್ನಿಯ ಮಾತಿಗಿಂತಲೂ ಮಾತಾಪಿತರಿಗೆ ಹೆಚ್ಚು ಆದ್ಯತೆ ನೀಡಬೇಕಾದ ಸಂದರ್ಭ ಬರಬಹುದು. ಪತ್ನಿ ಮತ್ತು ಮಾತಾಪಿತರ ಮಧ್ಯೆ ಸಮತೋಲವನ್ನು ಕಾಪಾಡಲು ನೀವು ಸಹಕರಿಸಬೇಕು. ವಿವಾಹದ ನಂತರ ವಸತಿ ಒದಗಿಸುವುದು ಪತಿಯ ಜವಾಬ್ದಾರಿ. ಆದರೆ ಎಲ್ಲರಿಗೂ ವಿವಾಹವಾದ ತಕ್ಷಣ ಬೇರೆ ಮನೆ ಮಾಡಲು ಅಸಾಧ್ಯ. ವಿವಾಹದ ನಂತರ ಪತಿ ಪತ್ನಿಯರು ಆರ್ಥಿಕ ಪರಿಸ್ಥಿತಿ, ವಿದ್ಯಾಭ್ಯಾಸ, ಉದ್ಯೋಗ, ಅನಾರೋಗ್ಯ ಹಾಗೂ ಮತ್ತಿತರ ಪರಿಸ್ಥಿತಿಗೆ ಅನುಸಾರವಾಗಿ ಪತಿಯ ಮನೆಯಲ್ಲಿ, ಪತ್ನಿಯ ಮನೆಯಲ್ಲಿ ಅಥವಾ ಬೇರೆ ಮನೆ ಮಾಡಿ ವಾಸಿಸಬಹುದು. ಅತ್ತೆ ಮಾವಂದಿರ ಸೇವೆಯ ಬಗ್ಗೆ ಪ್ರವಾದಿ ವಚನಗಳಲ್ಲಿ ಪ್ರಸ್ತಾಪಿಸಿಲ್ಲವಾದರೂ ಒಂದೇ ಮನೆಯಲ್ಲಿ ವಾಸಿಸುತ್ತಿರುವಾಗ ಅವರ ಕೆಲಸ ಕಾರ್ಯಗಳನ್ನು ನಿಷ್ಕಳಂಕ ಹೃದಯದಿಂದ ನಿರ್ವಹಿಸಿ ಕೊಡುವುದು ಬಹಳ ಪುಣ್ಯದಾಯಕವಾಗಿದೆ.

ತಮ್ಮ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಮಾಯಾ ಲೋಕವನ್ನು ಬದಿಗಿಟ್ಟು ಸಂಗಾತಿಯೊಂದಿಗೆ ಸಮಯ ಕಳೆಯಲು, ಮುಖ ನೋಡಿ ಮಾತನಾಡಲು ತಯಾರಿರಬೇಕು. ತಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಬೇಕೆಂಬುದು ವೈವಾಹಿಕ ಜೀವನದ ಅತ್ಯಂತ ಪ್ರಾಮುಖ್ಯ ವಿಷಯವಾಗಿದೆ. ರಹಸ್ಯವಾದ ದಾಂಪತ್ಯ ಜೀವನವನ್ನು ನಡೆಸಲು ಪ್ರಯತ್ನಿಸಬೇಕು. ನೀವು ತಿನ್ನುವ, ಕುಡಿಯುವ, ಯಾತ್ರೆಮಾಡುವಂತಹ ಎಲ್ಲಾ ವೈಯಕ್ತಿಕ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಶೇರ್ ಮಾಡಬೇಡಿರಿ. ನೀವು ಏನು ಮಾಡುತ್ತೀರೆಂದು ಜಗತ್ತಿಗೆ ತಿಳಿಯಬೇಕಾಗಿಲ್ಲ. ಎಂಟು ಗಂಟೆ ನಿದ್ರೆ, ಎಂಟು ಗಂಟೆ ಆರಾಧನೆ, ಅಧ್ಯಯನ, ತಿನ್ನುವ, ಕುಡಿಯುವ, ವಿಶ್ರಾಂತಿ ಪಡೆಯಲು ಹಾಗೂ ಎಂಟು ಗಂಟೆಯ ಕೆಲಸ ಕಾರ್ಯಗಳನ್ನು ಮಾಡುವುದು ಉತ್ತಮವಾಗಿದೆ. ಹಣವಿರುವಾಗ ಮತ್ತು ಹಣವಿಲ್ಲದಿರುವಾಗಲೂ ಕಡಿಮೆ ಬಜೆಟ್‌ನಲ್ಲಿ ಕುಟುಂಬ ನಿರ್ವಹಣೆ ಮಾಡುವಂತಹ ಕೌಶಲ್ಯವಿರಬೇಕು. ವಿದೇಶದಲ್ಲಿರುವವರು ಒಂದು ದೊಡ್ಡ ಮೊತ್ತವನ್ನು ವಧುವಿಗೆ ದುಬಾರಿ ಫೋನ್, ಚಿನ್ನ ಉಡುಗೂರೆಯಾಗಿ ನೀಡುವ ಮತ್ತು ಐಷಾರಾಮದ ಮದುವೆಗೆ ಖರ್ಚು ಮಾಡುವುದಕ್ಕಿಂತಲೂ ವಿವಾಹದ ಆರಂಭದ ಅಮೂಲ್ಯವಾದ ದಿನಗಳಲ್ಲಿ ಕೆಲವು ತಿಂಗಳುಗಳ ಮಟ್ಟಿಗೆಯಾದರೂ ಜೊತೆಯಾಗಿ ವಾಸಿಸುವುದರ ಬಗ್ಗೆ ಆಲೋಚಿಸಬೇಕು. ನೀವು ವಿವಾಹದ ದಿನ ಯಾವ ರೀತಿಯ ವಸ್ತ್ರ ಧರಿಸುತ್ತೀರಿ, ವಿವಾಹದ ಫೋಟೋ, ವಿಡಿಯೋ, ಎಲ್ಲಿಗೆ ಹನಿಮೂನ್ ಹೋಗುತ್ತೀರಿ, ಯಾವ ಫೋನ್ ಉಪಯೋಗಿಸುತ್ತೀರಿ, ಮದುವೆಗೆ ಎಷ್ಟು ಜನರನ್ನು ಸೇರಿಸಿದ್ದೀರಿ, ಔತಣಕೂಟಕ್ಕೆ ಎಂತಹ ಊಟೋಪಚಾರಗಳನ್ನು ಮಾಡಿದ್ದೀರಿ ಇದು ಯಾವುದೂ ಮುಖ್ಯ ವಿಷಯವಲ್ಲ. ಬದಲಾಗಿ ತಮ್ಮ ಸಂಗಾತಿಯನ್ನು ಪರಸ್ಪರ ಅರ್ಥ ಮಾಡಿಕೊಂಡು ಹೊಂದಾಣಿಕೆಯಿಂದ ಜೀವಿಸುವುದು ಮುಖ್ಯವಾಗಿದೆ.

ಇಸ್ಲಾಮ್ ಧರ್ಮದಲ್ಲಿ ವಿವಾಹವು ಅತ್ಯಂತ ಸರಳವೂ ಸುಲಭವೂ ಆಗಿದೆ. ವಿವಾಹ ವಿಚ್ಛೇದನೆಯು ಕಷ್ಟವೂ ಹಲವು ಘಟ್ಟಗಳನ್ನೂ ದಾಟಿ ಹೋಗಬೇಕಾಗಿದೆ. ಆದರೆ ನಮ್ಮ ಸಮಾಜವು ವಿವಾಹವನ್ನು ಕಷ್ಟ ಹಾಗೂ ವಿಚ್ಛೇದನೆಯನ್ನು ಸುಲಭವನ್ನಾಗಿ ಮಾಡಿದೆ. ವಿವಾಹ ವಿಚ್ಛೇದನೆಗಳು ಹೆಚ್ಚುತ್ತಿರುವ ಒಂದು ಕಾಲಘಟ್ಟದಲ್ಲಿ ನಾವು ವಾಸಿಸುತ್ತಿದ್ದೇವೆ. ಅದರ ಕಾರಣಗಳೇನು ಮತ್ತು ಅದನ್ನು ತಡೆಯುವಂತಹ ಮಾರ್ಗಗಳೇನೆಂಬುದನ್ನು ಸದಾ ಅಧ್ಯಯನ ಮಾಡುತ್ತಾ ನಮ್ಮ ವಿವಾಹವು ಅತ್ಯಂತ ಕ್ಷುಲ್ಲಕ್ಕ ಕಾರಣಗಳಿಗೆ ಕೊನೆಗೊಳ್ಳದಂತೆ ಸದಾ ಜಾಗರೂಕತೆ ವಹಿಸಬೇಕು.