ಅಜ್ಜಿಯ ಕಿವಿಯೋಲೆ ಕದ್ದು ಪರಾರಿಯಾಗುತ್ತಿದ್ದ ಇಬ್ಬರು ಸರಗಳ್ಳರ ವಿರುದ್ಧ ಹೋರಾಡಿದ ಮೊಮ್ಮಗಳು: ವಿಡಿಯೋ ವೈರಲ್

0
408

ಸನ್ಮಾರ್ಗ ವಾರ್ತೆ

ಮೀರತ್: ಮೀರತ್‌ನ ಲಾಲ್ ಕುರ್ತಿ ಪ್ರದೇಶದಲ್ಲಿ ಶನಿವಾರ ಸಂಜೆ 20 ವರ್ಷದ ಯುವತಿಯೊಬ್ಬಳು ತನ್ನ 80 ವರ್ಷದ ಅಜ್ಜಿಯ ಕಿವಿಯೋಲೆಗಳನ್ನು ದೋಚಿ ಪರಾರಿಯಾಗಲು ಯತ್ನಿಸಿದ ಇಬ್ಬರು ಸರಗಳ್ಳರ ವಿರುದ್ಧ ಹೋರಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೋದಿಪುರಂ ನಿವಾಸಿ ಸಂತೋಷ್ ಅಗರ್ವಾಲ್(80) ತನ್ನ ಮೊಮ್ಮಗಳು ರಿಯಾ ಅಗರ್ವಾಲ್(20) ಜೊತೆಗೆ ಲಾಲ್ ಕುರ್ತಿಯ ಛೋಟಾ ಬಜಾರಾ ಪ್ರದೇಶದಲ್ಲಿ ಸಂಬಂಧಿಕರ ಮನೆಗೆ ಹೋಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ದರೋಡೆಕೋರರು ಸಂತೋಷ್ ಅವರ ಒಂದು ಕಿವಿಯೋಲೆ ದೋಚಿದ್ದಾರೆ. ಆದರೆ, ರಿಯಾ ಬೈಕ್ ಹಿಡಿದು ತಳ್ಳಿ ದರೋಡೆಕೋರರೊಂದಿಗೆ ಕಾದಾಡಿದ್ದರು. ಆದರೂ ಕಳ್ಳರು ಅಲ್ಲಿಂದ ಪಲಾಯನಗೈಯ್ಯುವಲ್ಲಿ ಯಶಸ್ವಿಯಾಗಿದ್ದರು.

ಅಜ್ಜಿಯ ಕಿವಿಯೋಲೆ ಕದ್ದು ಬೈಕ್‌ನಲ್ಲಿ ಪರಾರಿಯಾಗಲು ಯತ್ನಿಸಿದ ಸರಗಳ್ಳರನ್ನು ತಡೆಯಲು ಯುವತಿ ಮತ್ತು ಆಕೆಯ ಅಜ್ಜಿ ಪ್ರಯತ್ನಿಸಿದ್ದು, ಬರಿಗೈಯಲ್ಲಿ ಹೋರಾಡುವ ದೃಶ್ಯ ಅದೇ ರಸ್ತೆಯ ಮನೆಯೊಂದರಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಘಟನೆ ಡಿ.10ರಂದು ನಡೆದಿದ್ದು, ಟ್ವಿಟರ್ ಬಳಕೆದಾರರೊಬ್ಬರು ಡಿ. 11 ರಂದು ಹಂಚಿಕೊಂಡಿದ್ದಾರೆ. ಜೊತೆಗೆ ಉತ್ತರ ಪ್ರದೇಶದ ಪೊಲೀಸರನ್ನೂ ಟ್ಯಾಗ್ ಮಾಡಿದ್ದರು. ಬಳಿಕ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು.

ವಿಡಿಯೋ ವೈರಲಾಗುತ್ತಿದಂತೆಯೇ ಎಚ್ಚೆತ್ತುಕೊಂಡ ಪೊಲೀಸರು, ಆರೋಪಿಗಳನ್ನು ತಡರಾತ್ರಿ ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ. ಬಂಧನದ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರು ಆರೋಪಿಯ ಪೈಕಿ ಒಬ್ಬನ ಬಲಗಾಲಿಗೆ ಗುಂಡು ಹಾರಿಸಿ, ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂಬುದಾಗಿ ವರದಿಯಾಗಿದೆ.

ಆ ಬಳಿಕ ವಿಡಿಯೋ ಬಿಡುಗಡೆ ಮಾಡಿರುವ ಮೀರತ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಲಾಲ್ಕುರ್ತಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಿವಿಯೋಲೆ ಲೂಟಿ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳ ವಿವರಗಳನ್ನು ಸಿಸಿಟಿವಿ ದೃಶ್ಯ ಆಧರಿಸಿ, ಪತ್ತೆ ಹಚ್ಚಿದ್ದರು. ಬಳಿಕ ಬಂಧನ ನಡೆಸಲು ತೆರಳಿದ್ದ ವೇಳೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ, ಪರಾರಿಯಾಗಲೆತ್ನಿಸಿದರು. ಈ ಹಿನ್ನೆಲೆಯಲ್ಲಿ ಕಾಲಿಗೆ ಗುಂಡು ಹಾರಿಸಿ, ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಕೌಶಿಕ್ ಕುಮಾರ್ ಹಾಗೂ ಸಚಿನ್ ಎಂದು ಗುರುತಿಸಲಾಗಿದೆ. ಘಟನೆ ನಡೆದು ಕೇವಲ ಆರು ಗಂಟೆಯೊಳಗೆ ಇಬ್ಬರನ್ನೂ ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ.