ಕುರ್ ಆನನ್ನು ಓದಬಹುದಾದ ಮೂರು ರೀತಿಗಳು ಭಾಗ- 02

0
844

✒ ಟಿ.ಕೆ. ಉಬೈದ್

ಕುರ್‍ಆನನ್ನು ಜನರಿಗೆ ವಿವರಿಸಿಕೊಡುವ ಹೊಣೆಗಾರಿಕೆಯನ್ನು ಅಲ್ಲಾಹನು ಪ್ರವಾದಿವರ್ಯ ರಿಗೆ ನೀಡಿದ್ದನೆಂದು ಪವಿತ್ರ ಕುರ್‍ಆನ್ ಹೇಳುತ್ತದೆ, “ಇದನ್ನು ನಿಮಗೆ ಅವತೀರ್ಣಗೊಳಿಸಿ, ನೀವು ಜನತೆಯ ಮುಂದೆ ಅವರಿಗಾಗಿ ಅವತೀರ್ಣವಾಗಿ ರುವ ಬೋಧನೆಯನ್ನು ವಿವರಿಸುವಂತೆಯೂ ಸ್ಪಷ್ಟೀಕರಿಸುವಂತೆಯೂ ಜನರು (ಸ್ವಯಂ) ವಿವೇಚಿ ಸುವಂತೆಯೂ ಮಾಡಿದೆವು.”(16:44) ಪ್ರವಾದಿ ವರ್ಯರ(ಸ)  ಮಾದರಿಯನ್ನು ಕಡ್ಡಾಯವಾಗಿ ಅನುಸರಿಸಬೇಕೆಂದು ಅಲ್ಲಾಹನು ಆದೇಶಿಸಿದ್ದಾನೆ, “ನಾವು ಪ್ರತಿಯೊಬ್ಬ ಸಂದೇಶವಾಹಕನನ್ನೂ ಅಲ್ಲಾಹನ  ಆಜ್ಞೆಯ ಪ್ರಕಾರ ಅನುಸರಿಸಲ್ಪಡಲಿ ಕ್ಕಾಗಿಯೇ ಕಳುಹಿಸಿರುತ್ತೇವೆ.” (4:64) ಕುರ್‍ಆನನ್ನು ತನಗೆ ತೋಚಿದಂತೆ ಓದುವುದಲ್ಲ. ಬದಲಾಗಿ  ಪ್ರವಾದಿವರ್ಯರು ಕಲಿಸಿದ ರೀತಿಯಲ್ಲಿ ಕುರ್‍ಆನನ್ನು ಕಲಿಯಬೇಕೆಂದು, ಪ್ರಚಾರ ಮಾಡ ಬೇಕೆಂದು ತಿಳಿಸಲಾಗಿದೆ.

ಕುರ್‍ಆನ್‍ನ ಪ್ರಾಯೋಗಿಕ ರೂಪದಲ್ಲಿ ಕುರ್‍ಆನ್ ಮತ್ತು ಅಲ್ಲಾಹನನ್ನು ಅನುಸರಿಸಬೇಕು ಎಂದರೆ ಪ್ರವಾದಿ(ಸ)ರನ್ನು ಅನುಸರಿಸುವುದಾಗಿದೆ. “ಸಂದೇಶವಾಹಕರನ್ನು ಅನುಸರಿಸಿದವನು ವಾಸ್ತವದಲ್ಲಿ ಅಲ್ಲಾಹನನ್ನು ಅನುಸರಿಸಿದನು.” (4:80) ಎಲ್ಲಾ ಸಂದೇಶವಾಹ ಕರೂ ಸಹ ‘ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ’ ಎಂಬ ಉಪದೇಶ ವನ್ನೇ ನೀಡಿದ್ದರು ಎಂದು ಪವಿತ್ರ ಕುರ್‍ಆನ್ ಹೇಳುತ್ತದೆ. ಅಲ್ಲಾಹನೊಂದಿಗಿನ ಭಯಭಕ್ತಿ ಎಂದರೆ ಅವನಿಗೆ ವಿಧೇಯತೆಯಾಗಿದೆ. ಪ್ರವಾದಿಯವರನ್ನು ಅನುಸರಿಸುವಾಗ ಅದು ಪ್ರಾಯೋಗಿಕ ರೂಪ  ಪಡೆಯುತ್ತದೆ.

ಅಂತ್ಯ ಪ್ರವಾದಿಯವರು(ಸ) ಕುರ್‍ಆನ್‍ಗೆ ನೀಡಿದ ವ್ಯಾಖ್ಯಾನವು ಅಧಿಕೃತವೂ ಮಾದರೀ ಯೋಗ್ಯವೆಂದೂ ಯಾವ ಕಾಲದಲ್ಲೂ ರದ್ದುಗೊಳಿ ಸಲ್ಪಡದಂತಹದ್ದು ಎಂಬ ವಿಷಯದಲ್ಲಿ ಸಂಶಯವಿಲ್ಲ. ಆದರೆ ಇದರಲ್ಲಿ ಪ್ರವಾದಿಯವರ ಕ್ರಮಗಳ ಬಾಹ್ಯರೂಪಗಳು ಸಂರಕ್ಷಿಸಲ್ಪಡಬೇಕೋ  ಅಥವಾ ಆಂತರಿಕ ಉದ್ದೇಶವೋ ಎಂಬ ವಿಷಯದಲ್ಲಿ ತರ್ಕವಿದೆ. ಕುರ್‍ಆನ್‍ನ ಕುರಿತ ಸಮಕಾಲೀನ ಅಧ್ಯಯನಗಳಲ್ಲಿ ಅತ್ಯಂತ ಪ್ರಸ್ತುತವಾದ ಪ್ರಶ್ನೆಯಿದು. ಒಂದು ಉದಾಹರಣೆ: ಝಕಾತ್‍ನ ಹಕ್ಕುದಾರರಲ್ಲಿ ಕುರ್‍ಆನ್ ಮುಅಲ್ಲಫತುಲ್ ಖುಲೂಬ್- ಎಂಬ ವಿಭಾಗವನ್ನು  ಸೂಚಿಸಿದೆ.

ಮುಸ್ಲಿಮರೊಂದಿಗೆ ಶತ್ರುತ್ವವಿಲ್ಲದ, ಮುಸ್ಲಿಮೇತರ ಸಹೋದರರೊಂದಿಗೆ ಪ್ರೀತಿ-ಭ್ರಾತೃತ್ವ ಸಂಬಂಧವನ್ನು ಬೆಳೆಸಲು ಝಕಾತ್‍ನ  ಹಣದಲ್ಲಿ ಅವರನ್ನೂ ಪಾಲುದಾರ ರಾಗಿಸಬೇಕು ಎಂಬ ಉದಾತ್ತವಾದ ಮೌಲ್ಯ ಅದರಲ್ಲಿದೆ. ಪ್ರವಾದಿಯವರ ಕಾಲದಲ್ಲಿ ಈ ಪಾಲನ್ನು ಇ ಸ್ಲಾಮೀ ಸಾಮ್ರಾಜ್ಯದ ಗಡಿಪ್ರದೇಶ ಗಳಲ್ಲಿ ವಾಸವಾಗಿದ್ದ ಮುಸ್ಲಿಮೇತರ ಬಾಂಧವರಿಗೆ ನೀಡಲಾಗುತ್ತಿತ್ತು. ಇಸ್ಲಾಮೀ ಸಾಮ್ರಾಜ್ಯದೊಂದಿಗಿನ  ಅವರ ಬಾಂಧವ್ಯ ದೃಢವಾಗಲು ಹಾಗೂ ಅವರು ಗಡಿಯಾಚೆಗಿನ ಶತ್ರುಗಳಿಂದ ಆಕರ್ಷಿತ ರಾಗದಿರಲೆಂಬುದು ಅದರ ಉದ್ದೇಶವಾಗಿತ್ತು.  ಎರಡನೇ ಖಲೀಫ ಉಮರ್(ರ)ರ ಕಾಲದಲ್ಲಿ ಇಸ್ಲಾಮೀ ಸಾಮ್ರಾಜ್ಯವು ವಿಶಾಲವಾಯಿತು. ಪ್ರವಾದಿಯವರು(ಸ) ಝಕಾತ್ ನೀಡುತ್ತಿದ್ದ  ಪ್ರದೇಶಗಳ ನಿವಾಸಿಗಳ ಸಹಾಯ ಅಪ್ರಸ್ತುತ ವಾಯಿತು. ಈ ಪರಿಸ್ಥಿತಿಯಲ್ಲಿ ಉಮರ್(ರ) ಅವರಿಗೆ ನೀಡುತ್ತಿದ್ದ ಝಕಾತನ್ನು ನಿಲ್ಲಿಸಿದರು. ಅದನ್ನು ನವಮುಸ್ಲಿಮರಿಗೆ ನೀಡಲು ಆದೇಶಿಸಿ ದರು. ಅವರನ್ನು ಮುಸ್ಲಿಮ್ ಸಮುದಾಯಕ್ಕೆ ಇನ್ನಷ್ಟು ನಿಕಟಗೊಳಿಸಬೇಕೆಂದು ಬಯಸಿದರು.  ಕಾಲಕ್ರಮೇಣ ಮುಅಲ್ಲಫತುಲ್ ಖುಲೂಬ್ ಎಂದರೆ ನವಮುಸ್ಲಿಮರು ಎಂಬ ನಿಲುವು ಬೆಳೆದು ಬಂತು.

ಆದರೆ ಆಧುನಿಕ ಬಹುಸಂಸ್ಕೃತಿಯ ದೇಶಗಳನ್ನು ದೃಷ್ಟಿಯಲ್ಲಿರಿಸಿ, ಸಮಕಾಲೀನ ಕುರ್‍ಆನ್ ವಿದ್ವಾಂಸರು ಮುಅಲ್ಲಫತುಲ್ ಖುಲೂಬ್ ಅನ್ನು ಮುಸ್ಲಿಮ್ ಸಮೂಹದೊಂದಿಗೆ ಸೌಹಾರ್ದತೆಯನ್ನು ಬೆಳೆಸಬೇಕಾದ ವಿಭಾಗ ಎಂದು ಪುನರ್‍ ವ್ಯಾಖ್ಯಾನಿಸಿದೆ. ಮುಸ್ಲಿಮ್ ಸಮುದಾಯದೊಂದಿಗೆ ಶಾಂತಿ -ಸಹಬಾಳ್ವೆಯನ್ನು ಬಯಸುವ ಎಲ್ಲ ಮುಸ್ಲಿಮೇತರ ಬಾಂಧವರೂ ಮುಅಲ್ಲಫತುಲ್ ಖುಲೂಬ್ ವ್ಯಾಪ್ತಿಗೆ ಬರುತ್ತಾ ರೆಂಬುದು ಅವರ ನಿಲುವು. ಭಾರತದಂತಹ ದೇಶದಲ್ಲಿ ಇದೆಷ್ಟು ಪ್ರಸಕ್ತ ಎಂಬುದನ್ನು ವಿವರಿಸ ಬೇಕಾಗಿಲ್ಲ. ಮುಅಲ್ಲಫತುಲ್ ಖುಲೂಬ್‍ಗೆ ಝಕಾತ್ ನೀಡಬೇಕೆಂಬ ಕುರ್‍ಆನ್‍ನ ಆದೇಶ ಪ್ರವಾದಿಯವರು(ಸ) ಜಾರಿಗೊಳಿಸಿದ ರೂಪದಲ್ಲಿ ಪರಿಗಣಿಸಿದೆ. ಮುಅಲ್ಲಫತುಲ್ ಖುಲೂಬ್ ಎಂಬ  ವರ್ಗವೇ ಅಪ್ರಸ್ತುತವೆನಿಸುತ್ತದೆ. ವಿದ್ವಾಂಸರು ಮುಅಲ್ಲಫತುಲ್ ಖುಲೂಬ್ ಅನ್ನು ನಿರ್ಣಯಿಸಿ ದಾಗ ಒಂದು ದೊಡ್ಡ ವಿಭಾಗವೇ ಹೊರ  ನಡೆಯಿತು. ಸುನ್ನತ್‍ನ ರೂಪಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿ, ವಾಸ್ತವಿಕತೆಯನ್ನು ಅವಗಣಿಸಿದ ಫಲವಿದು. ಹೀಗೆ ಪ್ರವಾದಿಚರ್ಯೆಯ  ಪ್ರಾಯೋಗಿಕತೆಯಲ್ಲಿ ಮಾರ್ಪಾಡು ತಂದ ಹಾಗೂ ಬದಲಾವಣೆಯ
ಅಗತ್ಯವಿರುವ ಧಾರಾಳ ವಿಷಯಗಳಿವೆ.

ಇಂದಿನ ವಿವಾದ ವಿಷಯಗಳು ಮತ್ತು ಕುರ್‍ಆನ್

ಎಲ್ಲ ಕಾಲಗಳಲ್ಲೂ ಕುರ್‍ಆನ್ ಓದುವಾಗ ಬಹಳ ಜಾಗ್ರತೆ ಪಾಲಿಸಬೇಕಾದ ವಿಷಯವೆಂದರೆ, ಪ್ರವಾದಿ(ಸ)ರ ಹೆಸರಿನಲ್ಲಿ ಪ್ರಚಾರವಾದ ಸುಳ್ಳು ಹದೀಸ್‍ಗಳು. ಮುಸ್ಲಿಮ್ ಸಮುದಾಯದಲ್ಲಿ ಅಂಧ ವಿಶ್ವಾಸಗಳೂ ಅನಾಚಾರಗಳೂ ನುಸುಳಲು ಇಂತಹ ಹದೀಸ್‍ಗಳೇ ಮುಖ್ಯ  ಪಾತ್ರವನ್ನು ವಹಿಸಿದೆ. ಸಿಹ್ರ್ ಅಥವಾ ಮಾಟದಂತಹ ಕ್ರಿಯೆಗಳಿಗೆ ನೈಜತೆಯಿಲ್ಲವೆಂದು ಪವಿತ್ರ ಕುರ್‍ಆನ್ ಯಾವುದೇ ಅನರ್ಥಕ್ಕೆ ಎಡೆ ಮಾಡದಂತೆ ವಿವರಿಸಿದೆ, “ವಸ್ತುತಃ ಮಾಟಗಾರರು ಯಶಸ್ವಿ ಯಾಗುವುದಿಲ್ಲ.” (10:77) “ಜಾದೂಗಾರನು ಅದೆಷ್ಟೇ ಠೀವಿಯೊಂದಿಗೆ ಬರಲಿ  ಅವನೆಂದಿಗೂ ಯಶಸ್ವಿಯಾಗಲಾರ.” (20:29)

ಪ್ರವಾದಿ(ಸ)ರ ವಿರೋಧಿಗಳು ಸದಾ ಆರೋಪಿ ಸುತ್ತಿದ್ದ ಹಾಗೂ ಕುರ್‍ಆನ್ ಬಲವಾಗಿ ವಿರೋಧಿ ಸಿದ ಒಂದು ಆರೋಪವೇ ಅವರು  ಮಾಟಬಾಧಿತ ವ್ಯಕ್ತಿಯಾಗಿದ್ದರು ಎಂಬುದು ಸತ್ಯವಿಶ್ವಾಸಿಗಳನ್ನು ಪರಿಹಾಸ್ಯಮಾಡಿಕೊಂಡು ಅವರು ಹೇಳುತ್ತಿದ್ದರು: “ನೀವು ಹಿಂಬಾಲಿಸುತ್ತಿರುವ ಈ ವ್ಯಕ್ತಿಯು ಓರ್ವ ಮಾಟಬಾಧಿತ ವ್ಯಕ್ತಿಯೆಂದು ಅಕ್ರಮಿಗಳು ಹೇಳಿಕೊಳ್ಳುತ್ತಾರೆ.” (17:47) ಹೀಗೆಲ್ಲಾ ಸ್ಪಷ್ಟವಾಗಿ ದ್ದರೂ  ಪೂರ್ವಕಾಲದ ವಿದ್ವಾಂಸರು ಸಿಹ್ರ್‍ಗೆ ಪ್ರಾಧಾನ್ಯತೆಯನ್ನು ಕಲ್ಪಿಸಿದ್ದು ಮಾತ್ರವಲ್ಲ ಪ್ರವಾದಿಯವರೂ ಸಿಹ್‍ರ್‍ನ ಬಾಧೆಗೆ ಒಳಗಾಗಿ ದ್ದಾರೆಂದು  ವಾದಿಸಿದ್ದಾರೆ. ಆ ಮಹಾನುಭಾವರು ಸುಮ್ಮನೆ ವಾದಿಸಿದ್ದಲ್ಲ. ಹದೀಸ್‍ಗಳು ಎಂಬ ಹೆಸರಿನಲ್ಲಿ ಉದ್ದರಿಸಲಾದ ಹಲವಾರು ಕಟ್ಟು ಕಥೆಗಳು  ಅವರಿಗೆ ಪ್ರೇರಕವಾಗಿತ್ತು. ಹೀಗೆ ಸಿಹ್ರ್-ಸಿಹ್ರ್ ಬಿಡಿಸುವುದು ಎಂಬಂತಹ ಮೂಡ ನಂಬಿಕೆಗಳು ಬೃಹತ್ ಉದ್ಯಮವಾಗಿ ಬೆಳೆದು ಬಂತು.  ಈಗ ಅದು ಧಾರ್ಮಿಕ ರಂಗದ ಅವಿ ಭಾಜ್ಯ ಭಾಗವಾಗಿ ಮಾರ್ಪಟ್ಟಿದೆ. ಧರ್ಮಭ್ರಷ್ಟರಿಗೆ ನೀಡುವ ಶಿಕ್ಷೆಯು ಇನ್ನೊಂದು ವಿವಾದ ವಿಷಯ. ಧರ್ಮಭ್ರಷ್ಟರು ಕೊಲ್ಲಬೇಕು ಎಂಬುದು ಕರ್ಮಶಾಸ್ತ್ರಜ್ಞರ ಅಭಿಪ್ರಾಯ.  ಆದರೆ ಪವಿತ್ರ ಕುರ್‍ಆನ್ ಇಂಥ ಕ್ರಿಮಿನಲ್ ಶಿಕ್ಷೆಯನ್ನು ಆದೇಶಿಸುವು ದಿಲ್ಲ. ಧರ್ಮದ ಮೇಲೆ ವಿಶ್ವಾಸವಿರಿಸು ವುದು ಮತ್ತು ವಿಶ್ವಾಸವನ್ನು  ಕೈ ಬಿಡುವುದು ಒಂದು ಕ್ರಿಮಿನಲ್ ಅಪರಾಧವಾಗಲು ನೈತಿಕ ಹಾಗೂ ನ್ಯಾಯಯುತವಾದ ಕಾರಣವಿಲ್ಲ. `ಧರ್ಮದಲ್ಲಿ ಬಲಾತ್ಕಾರವಿಲ್ಲ’  ಎಂಬುದು ಕುರ್‍ಆನ್‍ನ ಸ್ಪಷ್ಟ ನುಡಿ.

ಪ್ರವಾದಿಗಳೊಡನೆ ಅಲ್ಲಾಹನು ಆದೇಶಿಸುತ್ತಾನೆ: “ಸ್ಪಷ್ಟವಾಗಿ ಹೀಗೆ ಹೇಳಿ ಬಿಡಿರಿ: ಇದು ನಿಮ್ಮ ಪ್ರಭುವಿನ ಕಡೆಯಿಂದ ಬಂದ ಸತ್ಯ. ಇಷ್ಟವಿದ್ದವರು ಸ್ವೀಕರಿಸಿಕೊಳ್ಳಲಿ, ಇಷ್ಟವಿದ್ದವರು ನಿರಾಕರಿಸಲಿ.” (18:29) “ಸಂದೇಶವಾಹಕರ ಮೇಲೆ ಸಂದೇಶವನ್ನು ತಲುಪಿಸುವ ಹೊಣೆ ಮಾತ್ರ ಇದೆ.” (5:99)

ಸಮಾಜದ ಬಹುಸಂಖ್ಯೆಯ ಜನರು ಪ್ರವಾದಿ ಯವರನ್ನು ವಿರೋಧಿಸಿ, ಅವರ ಸಂದೇಶವನ್ನು ಅಪಹಾಸ್ಯ ಮಾಡುತ್ತಿದ್ದ ಸಂದರ್ಭದಲ್ಲಿ ದುಃಖತಪ್ತರಾದ ಪ್ರವಾದಿವರ್ಯರು(ಸ) ಯೋಚಿಸಿದರು.ಈ ಜನರನ್ನು ವಿಶ್ವಾಸಿ ಗಳನ್ನಾಗಿಸುವಂತಹ ಸಾಮಥ್ರ್ಯ ಹಾಗೂ ಅಧಿಕಾರವನ್ನು ತನ್ನಲ್ಲಿದ್ದಿದ್ದರೆ ಎಂದು ಈ ಸಂದರ್ಭದಲ್ಲಿ ಅಲ್ಲಾಹನು ಅವರೊಡನೆ ಹೇಳುತ್ತಾನೆ; (ಭೂಮಿಯಲ್ಲಿರುವವರೆಲ್ಲರೂ ಸತ್ಯವಿಶ್ವಾಸಿ ಮತ್ತು  ಆಜ್ಞಾಪಾಲಕರಾಗಿರಬೇಕೆಂದು) ನಿಮ್ಮ ಪ್ರಭುವಿನ ವಿಧಿ ನಿಯಮವಿರುತ್ತಿದ್ದರೆ, ಭೂ ವಾಸಿಗಳೆಲ್ಲರೂ ವಿಶ್ವಾಸವಿಟ್ಟೇ ತೀರುತ್ತಿದ್ದರು. ಹೀಗಿರು  ವಾಗ ಜನರೆಲ್ಲರೂ ಸತ್ಯವಿಶ್ವಾಸಿಗಳಾಗಬೇಕೆಂದು ನೀವು ಒತ್ತಾಯ ಪಡಿಸುವಿರಾ?” (10:99)

ಇಲ್ಲಿ ಧರ್ಮದಲ್ಲಿ ವಿಶ್ವಾಸವಿರಿಸದವರ ಮತ್ತು ಸತ್ಯ ಧರ್ಮವನ್ನು ಸ್ವೀಕರಿಸಲು ನಿರಾಕರಿಸುವವರ ಕುರಿತು ಹೇಳಲಾಗಿದೆ. ಒಮ್ಮೆ ಸತ್ಯವನ್ನು  ಸ್ವೀಕರಿಸಿದ ಬಳಿಕ ಅದನ್ನು ಉಪೇಕ್ಷಿಸುವುದು ವಧಾರ್ಹ ಅಪ ರಾಧವೆಂಬುದು ಒಂದು ವಾದ. ಆದರೆ ಧರ್ಮವನ್ನು ತ್ಯಜಿಸಿ ಮರಳುವವರ  ಕುರಿತು ಕುರ್‍ಆನ್ ಸ್ಪಷ್ಟವಾಗಿ ವಿವರಿಸಿದೆ. “ನಿಮ್ಮಲ್ಲಿ ಯಾವನಾದರೂ ಧರ್ಮದಿಂದ ವಿಮುಖನಾದರೆ, ಅವಿಶ್ವಾಸವಸ್ಥೆಯಲ್ಲಿ ಪ್ರಾಣಬಿಟ್ಟರೆ,  ಅವನ ಕರ್ಮಗಳು ಇಹಪರಗಳೆರಡರಲ್ಲೂ ವ್ಯರ್ಥ ವಾಗಿ ಹೋಗುವುವು.” (2:217)

ಅಂದರೆ ಅವರು ಮೊದಲು ಸ್ವೀಕರಿಸಿದ್ದ ಸತ್ಯವಿಶ್ವಾಸ  ಹಾಗೂ ಸತ್ಕರ್ಮಗಳು ನಷ್ಟವಾಗುವುದು ಎಂದರ್ಥ. ದೇವನಲ್ಲಿ ವಿಶ್ವಾಸ ಹಾಗೂ ಪ್ರೀತಿ ಇಲ್ಲದವರು ಅವನ ಧರ್ಮ ವನ್ನು ತ್ಯಜಿಸಿ ಹೋಗುವ ವಿಷಯದಲ್ಲಿ ಸತ್ಯವಿಶ್ವಾಸಿಗಳು ದುಃಖಿಸುವ ಅಥವಾ  ಕೋಪಗೊಳ್ಳುವ ಅಗತ್ಯವೇ ಇಲ್ಲ. “ಓ ಸತ್ಯವಿಶ್ವಾಸಿಗಳೇ, ನಿಮ್ಮಲ್ಲಾರಾದರೂ ಧರ್ಮದಿಂದ ವಿಮುಖನಾಗುತ್ತಿದ್ದರೆ (ಆಗಲಿ). ಅಲ್ಲಾಹನ  ಪ್ರೀತಿಗೆ ಪಾತ್ರರಾದ ಹಾಗೂ ಅಲ್ಲಾಹನನ್ನು ಪ್ರೀತಿಸುವ ಇನ್ನೊಂದು ಜನವಿಭಾಗವನ್ನು ಅಲ್ಲಾಹನು ಸೃಷ್ಟಿಸುವನು.” (5:54)

[ಮುಂದುವರಿಯುವುದು]