ಬಿಜೆಪಿ ತಂತ್ರಕ್ಕೆ ನ್ಯಾಯ್ ಯಾತ್ರೆ ಮೂಲಕ ರಾಹುಲ್ ಪ್ರತಿತಂತ್ರ

0
123

ಸನ್ಮಾರ್ಗ ವಾರ್ತೆ

✍️ ಅರಫಾ ಮಂಚಿ

ನೋಡಿ,
ಜನವರಿ 22ಕ್ಕೆ ರಾಮ ಮಂದಿರ ಉದ್ಘಾಟನೆ, ಜನವರಿ 14ಕ್ಕೆ ರಾಹುಲ್ ಗಾಂಧಿಯವರ ನ್ಯಾಯ ಯಾತ್ರೆ, ಇದರ ನಡುವೆ ನಿತೀಶ್ ಕುಮಾರ್ ಜೆಡಿಯು ಅಧ್ಯಕ್ಷರಾಗಿದ್ದು ಕೂಡ ಒಟ್ಟೊಟ್ಟಿಗೆ ದೇಶೀಯವಾಗಿ ಚರ್ಚೆಯಾಗುತ್ತಿದೆ. ಬಹುಶಃ ನಿತೀಶ್ 2024ರ ಚುನಾವಣೆಯಲ್ಲಿ ಪ್ರಧಾನಿ ಸ್ಥಾನಕ್ಕೆ ಉಮೇದುವಾರಿಕೆಯನ್ನು ಹೀಗೆ ಪ್ರಸ್ತುತ ಪಡಿಸುತ್ತಿದ್ದಾರೆ ಎಂಬ ಚರ್ಚೆ ರಾಜಕೀಯ ಗರಡಿಯಲ್ಲಿ ಜಂಗಿ ಕುಸ್ತಿಗಿಳಿದಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 2014 ಜನವರಿ 14ಕ್ಕೆ ಮಣಿಪುರದಿಂದ ಹೊರಟು ಈಶಾನ್ಯ ಭಾರತವಾಗಿ ಮಧ್ಯ ಭಾರತ ಸುತ್ತಿ ಮುಂಬಯಿಗೆ ಅವರ ನ್ಯಾಯ್ ಯಾತ್ರೆ ತಲುಪಲಿದೆ. ಹಾಗೆ ಹೇಳುವುದಾದರೆ ಇದರ ಹಿಂದೆ ನಿತೀಶ್‌ರ ಹಸ್ತ ಇದೆ ಮತ್ತು ರಾಮ ಮಂದಿರ ಪ್ರಾಣ ಪ್ರತಿಷ್ಠೆಯು 22ಕ್ಕೆ ಆಗುತ್ತದೆ. ಇಡೀ ದೇಶದಲ್ಲಿ ಭಕ್ತಿಯ ವಾತಾವರಣ ಅಂದಿನಿಂದ ಶುರುವಾಗುತ್ತದೆ. ಇದಕ್ಕೆ ಅಡಚಣೆ ತರುವ ಉದ್ದೇಶ ರಾಹುಲ್ ಗಾಂಧಿಯ ನ್ಯಾಯ ಯಾತ್ರೆಯದ್ದು ಎಂದು ಚರ್ಚಿಸಲಾಗುತ್ತಿದೆ. ಇರಬಹುದಾ? ಇದ್ದರೂ ಇರಬಹುದು.

ಬಹುಶಃ ಮುಖ್ಯವಾಗಿ ಕಾಂಗ್ರೆಸ್ಸಿಗರ ಭಯ ಭಕ್ತಿಯನ್ನು ವಿಭಜಿಸುವುದು ರಾಹುಲ್‌ರ ಯಾತ್ರೆ ಮೂಲಕ ನಡೆಯುತ್ತದೆ ಎಂಬ ಬಲವಾದ ಆರೋಪ ಕೇಳಿ ಬರುತ್ತಿದೆ. ಯಾಕೆಂದರೆ ಕಾಂಗ್ರೆಸ್ಸಿಗರೆಂಬುದು ಅರ್ಧ ಬಲಪಂಥೀಯವಾದಿಗಳು, ಅವರು ಅಪ್ಪಟ ಸಮಾಜವಾದಿಗಳಲ್ಲ ಎಂಬಾರೋಪ ಕಾಂಗ್ರೆಸ್ಸಿಗರ ಮೇಲೆ ಇದ್ದೇ ಇದೆ.

ಅಂದರೆ ಕಾಂಗ್ರೆಸ್ಸಿಗರು ಭಕ್ತಿಯಲ್ಲಿ ಲೀನವಾಗದೆ ನ್ಯಾಯವಾದದಲ್ಲಿ, ಜನರಪರತೆಯಲ್ಲಿ ವಾಸ್ತವದಲ್ಲಿ ಜೀವಿಸುವ ವ್ಯವಸ್ಥೆಯಾಗಿಯೂ ರಾಹುಲ್‌ರ ನ್ಯಾಯ ಯಾತ್ರೆ ಕೆಲಸ ಮಾಡಬಹುದು. ಇದಕ್ಕೆ ಒಂದು ಪೂರ್ವ ತಯಾರಿ ಕಾಂಗ್ರೆಸ್ಸಿನ ಸ್ಥಾಪನಾ ದಿವಸ ನಾಗಪುರದಲ್ಲಿ ಅದ್ದೂರಿಯಾಗಿ ಕಾಂಗ್ರೆಸ್ ಆಚರಿಸಿದೆ. ಸುಮಾರು ಐದು ಲಕ್ಷ ಮಂದಿ ಸೇರಿದ್ದರು ಎಂಬ ವರದಿಗಳಿವೆ. ಆರೆಸ್ಸೆಸ್ ಹೃದಯ ಭೂಮಿಯಿಂದಲೇ ಕಾಂಗ್ರೆಸ್ ವಾತಾವರಣ ಹುಟ್ಟುಹಾಕಿದಂತಾಗಿದೆ.

ಇದಕ್ಕಿಂತ ಮೊದಲೇ ಕಾಂಗ್ರೆಸ್ ನಾಯಕರಿಗೆ ರಾಮಮಂದಿರಕ್ಕೆ ಆಹ್ವಾನಿಸಿ ಕಾಂಗ್ರೆಸ್ಸಿಗರಲ್ಲೂ ಹಬ್ಬವನ್ನಾಗಿ ಮಾಡಲು ನೋಡಿದ್ದು ಸುಳ್ಳಲ್ಲ. ತಕ್ಷಣ ಕಾಂಗ್ರೆಸ್ಸಿಗರು ಇಂಡಿಯ ಕೂಟಕ್ಕೆ ವಿರುದ್ಧವಾಗುವಂತೆ ಮತ್ತು ಬಿಜೆಪಿಗೆ ಪೂರಕವಾಗುವಂತೆ ಹೇಳಿಕೆಯನ್ನೂ ಕೊಟ್ಟರು. ಕಾಂಗ್ರೆಸ್ ಹೈಕಮಾಂಡ್ ಇದನ್ನು ತುರ್ತಾಗಿ ರಿಪೇರಿ ಮಾಡಿತು. ರಾಮಮಂದಿರ ವಿಷಯದಲ್ಲಿ ಕಾಂಗ್ರೆಸ್ಸಿಗರು ಹೊರಗೆ ಎಲ್ಲೂ ಹೇಳಿಕೆ ನೀಡಬಾರದು ಎಂಬ ಆದೇಶ ಹೊರಡಿಸಿತು. ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರ್ಧಾರವನ್ನು ಉದ್ದೇಶಪೂರ್ವಕವಾಗಿ ಕಾಯ್ದಿರಿಸಿತು. ಅಂತಿಮವಾಗಿ ಜನವರಿ 14ಕ್ಕೆ ರಾಹುಲ್ ಗಾಂಧಿಯವರ ಯಾತ್ರೆ ಆರಂಭವಾಗುವುದಾಗಿ ಘೋಷಿಸಿತು. ರಾಮಮಂದಿರ ಉದ್ಘಾಟನೆಯನ್ನು ಬಿಜೆಪಿಯವರು ಹಬ್ಬವಾಗಿ ಆಚರಿಸುವಾಗ ಅತ್ತ ಕಾಂಗ್ರೆಸ್ಸಿಗರು ನ್ಯಾಯ ಯಾತ್ರೆಯ ಹಬ್ಬವನ್ನು ಮುಂದುವರಿಸುತ್ತಿರುತ್ತಾರೆ. ಈ ಗೇಮ್ ಪ್ಲಾನ್‌ನಲ್ಲಿ ನಿತೀಶ್ ಪಾತ್ರವೂ ಇದೆ ಎಂದು ಚರ್ಚೆಯಾಗುತ್ತಿದೆ.

ಅತ್ತ ನಿತೀಶ್ ಜೆಡಿಯುವಿನ ನೇತೃತ್ವವನ್ನು ತನ್ನ ಕೈಗೇ ತೆಗೆದು ಕೊಂಡಿದ್ದಾರೆ. ಇಡಿ ಮುಟ್ಟದ ಸಿಬಿಐ ದಾಟದ, ಐಟಿಗೆ ಅವಕಾಶವೇ ಕೊಡದ ನಾಯಕನಾಗಿ ಇಂಡಿಯನ್ ಪಾಲಿಟಿಕ್ಸ್ ನಲ್ಲಿ ನಿತೀಶ್ ಗಣನೆಗೆ ಬರುತ್ತಾರೆ. ಅವರು ಹಾಕಿದ ಲೆಕ್ಕ ಮತ್ತು ಅದರ ಹಿಂದಿರುವ ಪ್ಲಾನ್‌ನ ಹಿಂದೆ ಇಂಡಿಯವನ್ನು ಗೆಲ್ಲಿಸುವುದು ಮಾತ್ರ ಅಲ್ಲ, ಜೊತೆ ಜೊತೆಗೆ ಎಲ್ಲರನ್ನೂ ಹಿಂದಿಕ್ಕಿ ಮಾಡಿ ಪ್ರಧಾನಿ ಹುರಿಯಾಳುವಾಗುವುದೂ ಇದೆ.

ಹೇಗೂ ಪ್ರಧಾನಿ ಸ್ಥಾನಕ್ಕೆ ರಾಹುಲ್ ಆಸಕ್ತರಲ್ಲ. ಈಗ ಪ್ರಿಯಾಂಕಾರನ್ನು ಕೂಡ ಇಡಿ ಆರೋಪ ಪಟ್ಟಿಯಲ್ಲಿ ಸೇರಿಸಿದೆ. ಮತ್ತೆ ಮಿಸ್ಟರ್ ಕ್ಲೀನ್ ಅಗಿರುವ ಖರ್ಗೆ ಮತ್ತು ನಿತೀಶ್ ನಡುವೆ ಪ್ರಧಾನಿ ಸ್ಥಾನಕ್ಕೆ ಪೈಪೋಟಿ ಇರಬಹುದು. ಸರ್ವಾನುಮತದ ಹೊರತು ಖರ್ಗೆ ಒಂದು ಜವಾಬುದಾರಿ ವಹಿಸುವವರಲ್ಲ. ಹೀಗಾಗಿ ಜೆಡಿಯು ಅಧ್ಯಕ್ಷ ನಿತೀಶ್‌ರನ್ನು ಆರ್‌ಜೆಡಿ ಅಧ್ಯಕ್ಷ ಲಾಲು ಮುಂದೆ ತಂದೇ ತರುತ್ತಾರೆ. ಗೇಮ್ ಪ್ಲಾನ್‌ನಂತೆ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟು ನಿತೀಶ್ ದಿಲ್ಲಿ ಗಾದಿ ಹತ್ತಲಿದ್ದಾರೆ. ಈ ಪ್ಲಾನ್‌ನಲ್ಲಿ ಜೆಡಿಯುನಲ್ಲಿ ಅಪಸ್ವರ ಎತ್ತುವವರು ಯಾರೂ ಇಲ್ಲ.

ರಾಹುಲ್ ಗಾಂಧಿ ತನ್ನ ಭಾರತ್ ನ್ಯಾಯ್ ಯಾತ್ರೆಯಲ್ಲಿ ಆರ್ಥಿಕ ನ್ಯಾಯ, ಸಾಮಾಜಿಕ ನ್ಯಾಯ ಮತ್ತು ರಾಜಕೀಯ ನ್ಯಾಯವನ್ನು ಚರ್ಚಿಸಲಿದ್ದಾರೆ. ಈ ಚರ್ಚೆಯಲ್ಲಿ ಎಲ್ಲಿಯೂ ಭಕ್ತಿಯ ಪ್ರವೇಶವಾಗಿಲ್ಲ. ಬದುಕಿಗೆ ಸಂಬಂಧಿಸಿದ ಕಟು ಸತ್ಯ ಇಲ್ಲಿ ಹೊಳೆದು ಕಾಣಿಸುತ್ತಿದೆ. ಹಿಂದಿನ ರಾಹುಲ್ ಗಾಂಧಿಯ ಭಾರತ್ ಜೋಡೊ ಯಾತ್ರೆಯಲ್ಲಿ ನಿಮಗೂ ಗೊತ್ತಿದ್ದಂತೆ ಆರ್ಥಿಕ, ಸಾಮಾಜಿಕ ಅಸಮಾನತೆಯ ವಿರುದ್ಧ, ಸಾಮಾಜಿಕ ಧ್ರುವೀಕರಣದ ವಿರುದ್ಧ ಮತ್ತು ರಾಜಕೀಯ ಸರ್ವಾಧಿಕಾರದ ವಿರುದ್ಧ ರಣಕಹಳೆ ಇತ್ತು. ಪರಿಣಾಮವಾಗಿ ಕಾಂಗ್ರೆಸ್ ಹಿಮಾಚಲ ಪ್ರದೇಶ, ಕರ್ನಾಟಕದ ವಿಧಾನ ಸಭೆಯನ್ನು ಗೆದ್ದಿತ್ತು.

ಅಂದರೆ ರಾಹುಲ್ ನ್ಯಾಯ ಯಾತ್ರೆ ಭಕ್ತಿರಸದಿಂದ ಜನರನ್ನು ಈ ದಡಕ್ಕೆ ತರಲು ಯಶಸ್ವಿಯಾದರೆ ಮೋದಿ, ಶಾರ ಹಿಂದುತ್ವದ ಪ್ಲಾನ್ ಪ್ಲಾಪ್ ಆದಂತೆ ಇದಕ್ಕೆ ಪೂರಕವಾಗಿ ರಾಹುಲ್ ಗಾಂಧಿ ಡಿಸೆಂಬರ್ 17ಕ್ಕೆ ಕುಸ್ತಿಪಟುಗಳನ್ನು ಹರ್ಯಾಣದ ಜಜ್ಜಾರ್‌ಗೆ ಹೋಗಿ ಬೆಳ್ಳಂಬೆಳಗ್ಗೆ ಭೇಟಿಯಾದರು ಮತ್ತು ಪೂನಿಯಾ, ಸಾಕ್ಷಿ ಮಲಿಕ್, ವಿನೇಶ್ ಪೊಗಟ್‌ರನ್ನು ಕುಸ್ತಿ ಆಖಾಡದಲ್ಲಿಯೇ ಭೇಟಿಯಾಗಿ ನ್ಯಾಯ ಕೊಡಿ ಎಂದು ಘೋಷಣೆ ಹೊರಡಿಸುವ ಮೂಲಕ ಒಂದೆಡೆ ಮೋದಿ ಸರಕಾರಕ್ಕೆ ಎಚ್ಚರಿಕೆಯ ಕರೆಗಂಟೆ ಒತ್ತಿ ಜೊತೆಗೆ ತನ್ನ ನ್ಯಾಯ ಯಾತ್ರೆಯನ್ನು ಅನೌಪಚಾರಿಕವಾಗಿ ಉದ್ಘಾಟಿಸಿದರು.

ವಿಷಯ ಬದಲಿಸೋಣ:
ಈಗ ದೇಶಿಯವಾಗಿ ಚರ್ಚೆಸಲ್ಪಡುವ ವಿಷಯ ಇವಿಎಂ ದುರುಪಯೋಗ. ವಕೀಲ ಪ್ರಶಾಂತ್ ಭೂಷಣ್ ಡೆಮೊ ಒಂದನ್ನು ಪೋಸ್ಟ್ ಮಾಡಿ ಇವಿಎಂ ಹ್ಯಾಕಿಂಗ್ ಆಗುತ್ತದೆ ಎಂಬ ಚರ್ಚೆಗೆ ಗ್ರಾಸ ಕೊಟ್ಟರು. ಇತ್ತ ಬಿಜೆಪಿಯವರೇ ಆದ ಮತ್ತು ಮೋದಿ ವಿರುದ್ಧ ಬಣದಲ್ಲಿರುವ ಸತ್‌ಪಾಲ್ ಮಲಿಕ್ ಕೂಡ ವೀಡಿಯೊ ಒಂದನ್ನು ಟ್ವೀಟ್ ಮಾಡುವುದರ ಜೊತೆಗೆ ಸೋರ್ಸ್ ಕೋಡ್‌ಗಳನ್ನು ಸ್ವತಂತ್ರವಾಗಿ ಅಡಿಟ್ ಮಾಡಿದರೆ ಪಾನಿಕಾ ಪಾನಿ ದೂದ್‌ಕಾ ದೂದ್ ಹೋತಾ ಹೈ ಎಂದು ಪೋಸ್ಟ್ ಹಾಕಿ ಸವಾಲು ಎಸೆದರು. ದಿಲ್ಲಿಯಲ್ಲಿ ನಡೆದ ಇಂಡಿಯ ಕೂಟದ ಸಭೆಯಲ್ಲಿ ಇವಿಎಂ ವಿರುದ್ಧ ಠರಾವು ಪಾಸು ಮಾಡಲಾಯಿತು. ಇದೇ ಮಾತನ್ನು ಕಾಂಗ್ರೆಸ್‌ನ ಸ್ಯಾಮ್ ಪಿತ್ರೊಡ ಪಿಟಿಐಗೆ ಹೇಳಿದರು. ಸುಪ್ರೀಂಕೋರ್ಟಿನ ಮಾಜಿ ನ್ಯಾಯಾಧೀಶರ ನೇತೃತ್ವದ ಎನ್‌ಜಿಒ ಇವಿಎಂ ಕುರಿತು ನೀಡಿದ ಶಿಫಾರಸ್ಸನ್ನು ಚುನಾವಣಾ ಆಯೋಗ ಪರಿಗಣಿಸಬಹುದು ಎಂದು ತಿಳಿದಿದ್ದೆ, ಆದರೆ ಹಾಗೆ ಆಗಲಿಲ್ಲ, ಆದ್ದರಿಂದ ಇವಿಎಂ ಚಿಪ್ ಅನ್ನು ಕೂಡ ಹ್ಯಾಕ್ ಮಾಡಬಹುದು ಎಂದರು. ಅವರ ಪ್ರಕಾರ ಚುನಾವಣೆ ಪಾರದರ್ಶಕವಾಗಬೇಕಿದ್ದರೆ ಇವಿ ಪ್ಯಾಟ್‌ನ ಚೀಟಿ ಮತದಾರರಿಗೆ ಕೊಡಬೇಕು. ಅದನ್ನು ಒಂದು ಬಾಕ್ಸ್ಗೆ ಹಾಕಬೇಕು. ಚೀಟಿಯನ್ನು ಎಣಿಸಬೇಕು. ವೋಟಿಂಗ್ ಮೆಶಿನ್ನಿನ ಕೌಂಟ್ ಮಾಡಬೇಕು. ಆಗ ದೂದ್‌ಕಿ ದೂದ್ ಪಾನಿಕಾ ಪಾನಿ ಹೋಜಾಯೇಗಾ? ಅಂದರೆ ನಿಜವಾದ ಲೆಕ್ಕ ಸಿಗುತ್ತದೆ.

ಇಷ್ಟೆಲ್ಲ ಆದ ಮೇಲೆ ಆಯೋಗ ತನ್ನ 6 ಲಕ್ಷ ವೋಟಿಂಗ್ ಮೆಶಿನ್ ಬೆಂಗಳೂರಿಗೆ ರಿಪೇರಿಗೆ ಕಳುಹಿಸಿದ ವರದಿಯೂ ಬಂದಿದೆ. ಸುಪ್ರೀಂ ಕೋರ್ಟಿನ ವಕೀಲ ನರೇಂದ್ರ ಮಿಶ್ರಾ ಅವರು, ಇದುವೇ ವೋಟಿಂಗ್ ಮಿಶನ್ ಹ್ಯಾಕಿಂಗ್ ಆಗುತ್ತಿದೆ ಎಂಬುದಕ್ಕೆ ಪುರಾವೆ ಎಂದು ಹೇಳುತ್ತಿದ್ದಾರೆ. ಅವರು ಡಿಸೆಂಬರ್ ಮೂರರಂದು ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಮಧ್ಯಾಹ್ನ ಹೊತ್ತಿಗೆ ಇವಿಎಂ ಕುರಿತ ದೂರನ್ನು ಸಿಜೆಐ ಮನೆಗೆ ಹೋಗಿ ದಾಖಲಿಸಿದ್ದರು. ಮಧ್ಯಪ್ರದೇಶ ಚುನಾವಣೆಯ ಕುರಿತು 15,000 ದೂರುಗಳು ಚುನಾವಣಾ ಆಯೋಗದ ಪೋರ್ಟಲ್ ನಲ್ಲಿ ದಾಖಲಾಗಿದ್ದು ಅದಕ್ಕೆ ಇದೂ ಒಂದು ಕಾರಣ ಆಗಿತ್ತು. ಇಷ್ಟೆಲ್ಲ ದೂರುಗಳಿದ್ದಂತೆ ಬೇರೆ ಒಂದು ದೇಶದಲ್ಲಾಗಿರುತ್ತಿದ್ದರೆ ಮಧ್ಯಪ್ರದೇಶ ಚುನಾವಣೆ ರದ್ದಾಗುತ್ತಿತ್ತು.

ಅತ್ತ ಅಮಿತ್ ಶಾ ಮುಸ್ಲಿಂ ಲೀಗ್ ಕಾಶ್ಮೀರ್ ನಿಷೇಧಿಸಿದ್ದಾರೆ. ಜಮ್ಮು ಕಾಶ್ಮೀರದ ಮುಸ್ಲಿಂ ಲೀಗ್‌ನ ಒಂದು ಬಣವನ್ನು ನಿಷೇಧಿಸಿ ಇದು ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಕ್ಕೆ ನೀರೆರೆಯುತ್ತಿದೆ ಎಂದು ಆರೋಪಿಸಿ ದ್ದಾರೆ. ಬಹುಶಃ 2024 ಲೋಕಸಭಾ ಚುನಾವಣೆಗೆ ವೋಟು ಧ್ರುವೀಕರಣಕ್ಕೆ ಇದು ತಂತ್ರವಾಗಿದೆ. ಆಗ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿದ್ದು ನಾವೇ, ಈಗ ಮುಸ್ಲಿಂ ಲೀಗ್ ನಿಷೇಧಿಸಿದ್ದು ನಾವೇ, ಕಿಸ್‌ಕೊಬಿ ನಹಿ ಬಕ್ಷಾ ಜಾಯೇಗಾ ಎಂದು ಹೇಳಿದ್ದಾರೆ. ಹೀಗೆ ಬಿಜೆಪಿ ಹಿಂದುತ್ವವಾದಿ ವಾತಾವರಣಕ್ಕೆ ಶತಾಯ ಗತಾಯ ಪ್ರಯತ್ನಿಸುತ್ತಿದೆ.

ವಿಷಯಕ್ಕೆ ಬರೋಣ:
ನಿತೀಶ್ ಕುಮಾರ್ ಜೆಡಿಯು ಅಧ್ಯಕ್ಷರಾಗುವ ಮೊದಲು ಜೆಡಿಯು ಅಧ್ಯಕ್ಷರಾಗಿದ್ದ ಲಲನ್ ಸಿಂಗ್ ರಾಜೀನಾಮೆ ನೀಡುವ ಗುಸುಗುಸು ಇತ್ತು. ನಿತೀಶ್ ವಿರುದ್ಧ ಲಲನ್ ಬಂಡೆದ್ದಿದ್ದಾರೆ. ಅವರು ಜೆಡಿಯು ಮತ್ತು ಆರ್‌ಜೆಡಿ ಒಡೆದು ಬಿಹಾರದಲ್ಲಿ ಸರಕಾರ ರಚಿಸುತ್ತಾರೆ. ಥೇಟ್ ಮಹಾರಾಷ್ಟ್ರದಲ್ಲಿ ಶಿಂಧೆ ಮತ್ತು ಅಜಿತ್ ಪವಾರ್ ಮಾಡಿದ ತರ ಎಂಬುದು ಚರ್ಚೆಯಲ್ಲಿತ್ತು. ಆದರೆ ಅದಕ್ಕೆ ಅವಕಾಶ ಕೊಡದೆ ದಿಲ್ಲಿಯ ಕಾರ್ಯಕಾರಿಣಿಗೆ ಮೊದಲು ಜೆಡಿಯು ಅಧ್ಯಕ್ಷ ಪದಕ್ಕೆ ಅವರು ರಾಜೀನಾಮೆ ಕೊಟ್ಟರು. ಕಾರ್ಯಕಾರಿಣಿ ಸರ್ವಾನು ಮತದಿಂದ ನಿತೀಶ್‌ರನ್ನು ಅಧ್ಯಕ್ಷರನ್ನು ಆಯ್ಕೆ ಮಾಡಿತು. ಕೊನೆಗೂ ಬಂಡೇಳುವ ಸುದ್ದಿಯನ್ನೇ ಸ್ವತಃ ಲಲನ್ ಸಿಂಗ್‌ರೇ ನಿರಾಕರಿಸಿದರು. ಇದು ಬಿಜೆಪಿಗೆ ನಿರಾಶೆ ತಂದಿರಬಹುದು. ಆದರೆ ಇದು ನಿತೀಶ್ ತಂತ್ರವಾಗಿತ್ತು. ಕ್ಲೂ ಕೊಡದೆ ಅವರು ಸರಕಾರವನ್ನೇ ಬದಲಿಸಿದ ನಿಪುಣ. ಇಂಡಿಯ ಕೂಟಕ್ಕೆ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ತಾಕತ್ತು ಪ್ರದರ್ಶಿಸಿದ್ದು ಅವರು ಕಾಂಗ್ರೆಸ್ಸಲ್ಲ. ಕೊಲ್ಕತಾಕ್ಕೆ ಹೋಗಿ ಮಮತಾರನ್ನು, ದಿಲ್ಲಿಗೆ ಹೋಗಿ ಕೇಜ್ರಿವಾಲ್‌ರನ್ನು. ಮುಂಬಯಿಗೆ ಬಂದು ಉದ್ಧವ್ ಠಾಕರೆಯವರನ್ನು. ಶರದ್ ಪವಾರ್‌ರನ್ನು ಒಟ್ಟಿಗೆ ಇಂಡಿಯಾ ಕೂಟಕ್ಕೆ ತಂದದ್ದು ಈ ನಿತೀಶ್ ಕುಮಾರ್.

ಒಟ್ಟಿನಲ್ಲಿ ಇಂಡಿಯ ಕೂಟದ ಗೆಲುವಿಗೆ ನಿತೀಶ್ ಹಲವು ದಾಳಗಳನ್ನು ಉರುಳಿಸಿದ್ದಾರೆ. ಕಾಂಗ್ರೆಸ್ಸಿನ ಭಾರತ್ ನ್ಯಾಯ್ ಯಾತ್ರ ಅದರಲ್ಲೊಂದು. ರಾಹುಲ್ ಕನಿಷ್ಠ ಕಾಂಗ್ರೆಸ್ಸಿಗರಲ್ಲಿ ಸತ್ಯ ದರ್ಶನ ಮಾಡುತ್ತ ತಿರುಗುವಾಗ ಗೆಹ್ಲೋಟ್, ಖರ್ಗೆ ನಿತೀಶ್ ಇಂಡಿಯ ಕೂಟ ಬಲಿಷ್ಠಗೊಳಿಸಲು ಪರಿಶ್ರಮಿಸುತ್ತಿದ್ದಾರೆ. ಒಟ್ಟಿನಲ್ಲಿ ಇವಿಎಂ ಕಸರತ್ತು ನಡೆಸುತ್ತಾ? 2024ರಲ್ಲಿ ಮೂರನೇ ಬಾರಿಗೂ ಮೋದಿ ಪ್ರಧಾನಿ ಆಗುತ್ತಾರಾ? ಇಂಡಿಯ ಕೂಟಕ್ಕೆ ಈ ಎಲ್ಲ ಹೋರಾಟಗಳಿಂದ ಗೆಲುವು ಸಿಗುತ್ತಾ? ಕಾಲವೇ ಉತ್ತರಿಸಬೇಕು.