ರಾಜ್ಯ ಬರದಿಂದ ತತ್ತರಿಸುತ್ತಿರುವಾಗ ಶಾಸಕರ ರೆಸಾರ್ಟ್ ರಾಜಕೀಯ!

0
717

✒ಸಲೀಮ್ ಬೋಳಂಗಡಿ

ರಾಜ್ಯ ಬರದಿಂದ ತತ್ತರಿಸುತ್ತಿದೆ. ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ಶಾಸಕರು ರೆಸಾರ್ಟ್‍ನಲ್ಲಿ ಕಾಲ ಕಳೆಯುತ್ತಿದ್ದಾರೆ. ಜನರ ಕ್ಷೇಮಾಭಿವೃದ್ಧಿಗಿಂತ ತಮ್ಮ ಹಿತದ ಬಗ್ಗೆಯೇ ಚಿಂತಿಸುತ್ತಿದ್ದಾರೆ. ಈ ಶಾಸಕರನ್ನು ಚುನಾಯಿತಗೊಳಿಸಿದ್ದರ ಮರ್ಮ ವೇನು? ಎಲ್ಲೆಡೆ ಕೋಟಿ ಕೋಟಿ  ರೂಪಾಯಿಯ ಆಮಿಷದ ಮಾತು ಕೇಳಿ ಬರುತ್ತಿದೆ. ಇದೆಂಥಾ ರಾಜಕೀಯ? ಹೇಸಿಗೆ ಎನಿಸುವಷ್ಟು ರಾಜಕೀಯ ಹದೆಗೆಟ್ಟಿದೆ. ಜನಸಾಮಾನ್ಯರು ಕೂಡಾ ಉಗಿಯು ವಷ್ಟು ತಳಮಟ್ಟಕ್ಕೆ ತಲುಪಿದೆಯೇ?

ಕಳೆದ ವಾರ ಕರ್ನಾಟಕದ ರಾಜಕೀಯ ರಾಜ್ಯದಾಧ್ಯಂತ ಕುತೂಹಲ ಕೆರಳಿಸಿತ್ತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಆಪರೇಶನ್  ಕಮಲ ನಡೆಸಿ ಸಂಕ್ರಾಂತಿಯಂದು ಕ್ರಾಂತಿ ಮಾಡುವ ಸಿದ್ಧತೆಯಲ್ಲಿದ್ದರು. ಆದರೆ ಅದು ಠುಸ್ಸಾಯಿತು. ಈಗ ಕಾಂಗ್ರೆಸ್ ಶಾಸಕಾಂಗ ಸಭೆ  ಯಲ್ಲಿ ನಾಲ್ವರು ಅತೃಪ್ತ ಶಾಸಕರು ಭಾಗವಹಿಸ ಲಿಲ್ಲವಾದ್ದರಿಂದ ಮತ್ತೆ ಯಡಿಯೂರಪ್ಪರ ಆಸೆ ಚಿಗುರುವಂತೆ ಮಾಡಿದೆ, ಇದರಿಂದ  ರಾಜಕೀಯ ದಲ್ಲಿ ಅವರ ಮಾನ ಹರಾಜಾಗುತ್ತಿದೆಯೆಂಬ ಸಾಮಾನ್ಯ ಪ್ರಜ್ಞೆ ಈ ಅನುಭವಿ ರಾಜಕಾರಣಿಗೆ ಹೊಳೆಯದಿದ್ದುದು ದುರಂತ.  ಇಂತಹ ನಡೆಯಿಂದ ಹೇಗಾದರೂ ಮಾಡಿ ಅಧಿಕಾರದ ಗದ್ದುಗೆ ಹಿಡಿಯಬೇಕೆಂಬ ಅವರ ಅಧಿಕಾರದ ವ್ಯಾಮೋಹ ಬಹಿರಂಗವಾಗುತ್ತಿದೆ.

ಆಪರೇಶನ್ ಕಮಲವೆಂಬ ಪದ ಕನ್ನಡಿಗರು ನಿರಂತರ ಕೇಳಿ ಬರುವಂತಹ ಪದವಾಗಿ ಮಾರ್ಪಟ್ಟಿದೆ. 2008ರಲ್ಲಿ ಸರಕಾರ ರಚಿಸಲು  ಯಡಿಯೂರಪ್ಪರು ಬಿಜೆಪಿಯ ಜೊತೆ ಸೇರಿ ನಡೆಸಿದ ಅಕ್ರಮ ವ್ಯವಹಾರವಾಗಿದೆ ಇದು. ಈ ವ್ಯವಹಾರದ ಮೂಲಕ ಶಾಸಕರನ್ನು ಸೆಳೆದು ಸರಕಾರ ರಚಿಸಿದ್ದರು. ಈ ರೀತಿ ರಾಜ್ಯಕ್ಕೆ ಮೊದಲ ಬಾರಿಗೆ ಆಪರೇಶನ್ ಕಮಲ ಕಾಲಿಟ್ಟಿತು. ಆದರೆ ಆಪರೇಶನ್ ಕಮಲದ ಮೂಲಕ ಅಧಿ  ಕಾರ ಪಡೆದು ಮುಖ್ಯಮಂತ್ರಿ ಹುದ್ದೆ ಅಲಂಕರಿ ಸಿದ ಯಡಿಯೂರಪ್ಪರಿಗೆ ತನ್ನ ಅವಧಿ ಪೂರ್ಣಗೊಳಿಸಲಾಗಲಿಲ್ಲ. ಸ್ವಪಕ್ಷೀಯರ ಕಾಲೆಳೆ  ಯುವಿಕೆಯ ಮಧ್ಯೆಯೇ ಎರಡೂವರೆ ವರ್ಷ ಗದ್ದುಗೆಯಲ್ಲಿದ್ದು ಬಳಿಕ ಭ್ರಷ್ಟಾಚಾರದ ಆರೋಪಕ್ಕೆ ಸಿಲುಕಿ ಜೈಲು ಸೇರಿದರು. ಆ ಬಳಿಕ  ಒಂದಿಬ್ಬರು ಮುಖ್ಯಮಂತ್ರಿಗಳಾದರು.

ನಿಜವಾಗಿ ಕಳೆದ ಬಾರಿಯ ವಿಧಾನಸಭಾ ಚುನಾವಣೆಯ ಫಲಿತಾಂಶ ಬಿಜೆಪಿಯ ಪಾಲಿಗೆ ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ ಎಂಬಂಥ  ಸ್ಥಿತಿಯಲ್ಲಿತ್ತು. ಕಾಂಗ್ರೆಸ್-ಜೆಡಿಎಸ್ ನಡುವೆ ಅನಿರೀಕ್ಷಿತ ಮೈತ್ರಿ ನಡೆದು ಯಡಿಯೂರಪ್ಪರ ಸರಕಾರ ಕೆಲವೇ ದಿನಗಳಲ್ಲಿ ಉರುಳಿದ್ದರಿಂದ  ಯಡಿಯೂರಪ್ಪ ಕೆರಳಿದ್ದರು ಎಂಬುದು ರಾಜೀ ನಾಮೆ ನೀಡುವಾಗ ಮಾಡಿದ ಭಾಷಣ ಸ್ಪಷ್ಟ ಪಡಿಸುವಂತಿತ್ತು.

ಹೇಗಾದರೂ ಮಾಡಿ ಈ ಸರಕಾರ ಕ್ಕೊಂದು ಶಾಸ್ತಿ ಮಾಡುವ ಯೋಜನೆ ಯನ್ನು ಬಿಜೆಪಿ ಆಗಲೇ ಹಾಕಿ ಕೊಂಡಿತ್ತು ಎಂಬುದಕ್ಕೆ ಆ  ನಂತರ ಬಿಜೆಪಿ ನಡೆಸಿದ ಕೆಲ ವ್ಯರ್ಥ ಪ್ರಯತ್ನ ಗಳು ಸಾರಿ ಹೇಳುತ್ತಿವೆ. ಮೈತ್ರಿ ಸರ ಕಾರಕ್ಕೆ ಸಂಪುಟ ಪುನಾರಚನೆಯೆಂದರೆ ಕಬ್ಬಿಣದ  ಕಡಲೆಯಾಗಿದೆ. ಅದು ಕಳೆದ ಏಳು ತಿಂಗಳಿಂದ ಮಂತ್ರಿ ಮಂಡಲ ವಿಸ್ತರಣೆಗೆ ಮೀನ ಮೇಷ ಎಣಿಸುತ್ತಲೇ ಬರುತ್ತಿದೆ. ಯಾವ ಪಕ್ಷಕ್ಕೂ  ತಮ್ಮ ಶಾಸಕರ ಮೇಲೆ ನಂಬಿಕೆ ಇಲ್ಲದಂತಹ ಸ್ಥಿತಿ. ಕಾಂಗ್ರೆಸ್ ಆಗಲೀ ಜೆಡಿಎಸ್ ಅಥವಾ ಬಿಜೆಪಿಯಾಗಲೀ ಮೂರೂ ಪಕ್ಷಗಳು ತಮ್ಮ ಶಾಸಕರನ್ನು ಹಿಡಿದಿಟ್ಟು ಕೊಳ್ಳಲು ಹರಸಾಹಸ ಪಡುತ್ತಿದೆ. ಸಚಿವ ಪಟ್ಟದಿಂದ ವಂಚಿತರಾದ ರಮೇಶ್ ಜಾರಕಿ ಹೊಳಿ ಮತ್ತು ಬಿಜೆಪಿಯ  ಸಿ.ಟಿ. ರವಿಯ ದಿನಕ್ಕೊಂದು ತರದ ಗೊಂದಲದ ಹೇಳಿಕೆ ಆಪರೇಶನ್ ಕಮಲದ ಕರಿಮೋಡದ ಛಾಯೆ ಸ್ವಲ್ಪ ಮಟ್ಟಿಗೆ ಗೋಚರಿಸಿತ್ತು.  ಅದಕ್ಕೆ ಇಂಬು ಕೊಡುವಂತೆ ದೃಶ್ಯ ಮಾಧ್ಯಮಗಳ ಸದ್ದು ಗದ್ದಲ.

ಕನ್ನಡಿಗರಂತೂ ಎಲ್ಲವನ್ನೂ ತೆಪ್ಪಗಿದ್ದು ನೋಡುವ ದುರಂತ ಸ್ಥಿತಿ ನಿ ರ್ಮಾಣ ವಾಗಿತ್ತು. ಆದರೆ ಕನ್ನಡಿಗರ ಪಾಲಿಗೆ ನಿಜಕ್ಕೂ ಇಂತಹ ಪೃವೃತ್ತಿ ನಾಚಿಕೆಗೇಡಿ ನದ್ದೆಂದರೆ ತಪ್ಪಾಗಲಾರದು. ರೆಸಾರ್ಟ್  ರಾಜಕಾರಣ ಪ್ರಜಾಪ್ರಭುತ್ವದ ಪಾಲಿಗೆ ಅವಮಾನಕಾರೀ ಪ್ರವೃತ್ತಿಯಾಗಿದೆ. ಪಕ್ಷಗಳಿಗೆ ಶಾಸಕರ ಮೇಲೆಯೇ ನಂಬಿಕೆ ಇಲ್ಲ ಎಂದ ಮೇಲೆ  ಜನರು ನಂಬು ತ್ತಾರೆಯೇ? ಜನರಿಂದ ಓಟು ಪಡೆದು ಸೂಟ್‍ಕೇಸ್‍ಗಾಗಿ ಮರಕೋತಿಯಾಟ ವಾಡುವ ರಾಜಕಾರಣಿಗಳಿಗೆ ಜನರಿಂದ  ಪ್ರಜಾಪ್ರತಿನಿಧಿ ಎನಿಸಿಕೊಳ್ಳಲು ಯಾವ ಅರ್ಹತೆಯಿದೆ? ಬಿಜೆಪಿ ಯಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಖರೀದಿಸಿದರೂ ಅದು  ಅಕ್ರಮವೇ? ಅದು ಕುದುರೆ ವ್ಯಾಪಾರವಲ್ಲ ಕತ್ತೆ ವ್ಯಾಪಾರ. ಯಾವ ಪಕ್ಷವೇ ಆಗಲಿ ಇನ್ನೊಂದು ಪಕ್ಷದ ಶಾಸಕರಿಗೆ ಹಣ ಮತ್ತು ಅಧಿಕಾರದ ಆಮಿಶದಿಂದ ಸೆಳೆಯುವುದು ಆಯಾ ಕ್ಷೇತ್ರದ ಮತದಾ ರರಿಗೆ ಬಗೆಯುವ ದ್ರೋಹವಾಗಿದೆ.

ಈ ಒಂದು ಸಾಮಾನ್ಯ ಜ್ಞಾನ ಕೂಡಾ  ನಮ್ಮ ರಾಜಕಾರಣಿಗಳಿಗೆ ಹೊಳೆಯದಿರು ವುದು ಶೋಚನೀಯವೇ ಸರಿ. ಆಡಳಿತ ಪಕ್ಷ ಕೂಡಾ ಕೇವಲ ತಮ್ಮ ಶಾಸಕರ ಪಕ್ಷದ ಅಧಿಕಾರದ  ಹಿತದೃಷ್ಟಿ ನೋಡಿ ದರೆ ಸಾಲದು. ರಾಜ್ಯದ ಜನರ ಸಮಗ್ರ ಅಭಿವೃದ್ದಿಯತ್ತ ಗಮನ ಹರಿಸ ಬೇಕಾಗಿದೆ. ಜನರ ಆಯ್ಕೆಗೆ ನ್ಯಾಯ  ದೊರಕಿಸಿಕೊಡಬೇಕು. ಅದೇ ರೀತಿ ಪ್ರತಿಪಕ್ಷಗಳು ಕೂಡಾ ಸರಕಾರ ಉರುಳಿ ಸಲು ಅಡ್ಡದಾರಿ ಹಿಡಿಯುವ ಬದಲು ಸಂವಿಧಾನಬದ್ಧವಾಗಿ  ರಚನಾತ್ಮಕವಾಗಿ ತನ್ನ ವಿರೋಧ ಪಕ್ಷದ ಜವಾಬ್ದಾರಿಕೆಯನ್ನು ನಿಭಾಯಿಸಬೇಕು. ಸರಕಾರದ ಬೇಜವಾಬ್ದಾರಿತನವನ್ನು ಪ್ರಶ್ನಿಸಬೇಕು. ಸರಕಾರದ ಲೋಪ ದೋಷಗಳನ್ನು ಬೊಟ್ಟು ಮಾಡಿ ಜನರ ಗಮನಸೆಳೆದು ಮರಳಿ ಅಧಿಕಾರಗಳಿಸಲು ಪ್ರಯತ್ನಿಸಬೇಕೇ ಹೊರತು ಇಂತಹ ಅನಾಗರಿಕ ರಾಜಕಾರಣಕ್ಕೆ ಇಳಿಯಬಾರದು. ಅದು ಜನತೆಗೂ, ರಾಜ್ಯಕ್ಕೂ ಹಿತಕಾರಿಯೆನಿ ಸದು. ಆದರೆ ಬಿಜೆಪಿಯ ವರ್ತನೆ ನೋಡಿದರೆ  ಅದಕ್ಕೆ ವಿರೋಧ ಪಕ್ಷದಲ್ಲಿ ಕೂರಲು ಮನಸ್ಸಿಲ್ಲವೆಂಬಂತೆ ಕಾಣು ತ್ತಿದೆ. ಆಡಳಿತ ಪಕ್ಷಕ್ಕೆ ಯಾವ ರೀತಿ ಅಧಿಕಾರದ ಜವಾಬ್ದಾರಿಕೆ ಇದೆಯೋ  ಅದೇ ರೀತಿ ಪ್ರತಿಪಕ್ಷಗಳಿಗೆ ಕೂಡಾ ಜವಾಬ್ದಾರಿಕೆಯಿದೆ. ಜನರು ಚುನಾಯಿತ ಗೊಳಿಸಿದ್ದಕ್ಕೆ ನ್ಯಾಯ ಸಲ್ಲಿಸಬೇಕಾಗಿದೆ. ಅದರ ಬದಲು ಸೂಟ್‍ಕೇಸ್ ರಾಜಕೀಯದ ದಾಳವಾಗಬಾರದು.

ಲೋಕಸಭಾ ಅಖಾಡಕ್ಕೆ ಧುಮು ಕುವ ಮೊದಲು ಸರಕಾರ ಉರುಳಿಸ ಬೇಕೆಂಬ ಹಠಕ್ಕೆ ಬಿಜೆಪಿ ಬಿದ್ದಂತಿದೆ. ಉತ್ತರ ಭಾರತದ ಐದು  ರಾಜ್ಯಗಳ ಚುನಾವಣೆ ಸೋಲಿನಿಂದ ಬಿಜೆಪಿ ಹತಾಶ ಸ್ಥಿತಿಯಲ್ಲಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿನ ಗೆಲುವು ಅಷ್ಟು ಸುಲಭವಲ್ಲವೆಂಬುದು ಮನವರಿಕೆಯಾಗಿದೆ, ಸರಕಾರ ಉರು ಳಿಸಿ ಬಿಜೆಪಿ ಅಧಿಕಾರಕ್ಕೇರಿದರೆ ಲೋಕ ಸಭಾ ಚುನಾವಣೆಗೆ ಸಹಕಾರಿಯಾಗ ಬ ಹುದು. ಈ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರಕಾರ ಅಸ್ತಿತ್ವದಲ್ಲಿ ದ್ದರೆ ಲೋಕಸಭಾ ಚುನಾವಣೆಯ ಮೇಲೆ ಪ್ರಭಾವ ಬೀರುವುದು  ಖಚಿತ. ಕನಿಷ್ಠ ಪಕ್ಷ ಇಪ್ಪತ್ತು ಸಂಸದರನ್ನಾದರೂ ಗೆಲ್ಲಿಸಬೇಕೆಂಬ ತಾಲೀಮಿನಲ್ಲಿ ಬಿಜೆಪಿ ತೊಡಗಿಸಿಕೊಂಡಿದೆ. ಐಟಿ ದಾಳಿಯ ಬೆದರಿಕೆ, ಆಪರೇಶನ್ ಕಮಲ ಇವೆಲ್ಲ ಅದರ ಬೇರೆ ಬೇರೆ ತಂತ್ರಗಳು ಅಷ್ಟೆ. ಅದು ಸರಕಾರ ಉರುಳಿಸಲು ಇನ್ನಷ್ಟು ದಾಳ ಉರುಳಿಸುವ ಸಾಧ್ಯತೆಯಿದೆ.

ಸಮ್ಮಿಶ್ರ ಸರಕಾರಕ್ಕೆ ಸಿದ್ದರಾಮಯ್ಯ ಮತ್ತು ದೇವೇಗೌಡರ ಮುತ್ಸದ್ದಿತನವು ವರವಾಗುತ್ತಿದೆ. ಆದರೆ ಬಿಜೆಪಿಯ ರೆಸಾರ್ಟ್  ರಾಜಕಾರಣವನ್ನು ಟೀಕಿಸು ತ್ತಿದ್ದ ಕಾಂಗ್ರೆಸ್ ಕೂಡಾ ಅದೇ ರಾಜ ಕಾರಣದ ಮೊರೆ ಹೋಗುತ್ತಿರುವುದು ಮಾತ್ರ ಅದರ  ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತಿದೆ. ನಮ್ಮ ರಾಜ್ಯದ ಶಾಸ ಕರ ಮೇಲೆ ಆಯಾ ಪಕ್ಷಗಳಿಗೆ ಎಷ್ಟು ನಂಬಿಕೆ ಇದೆ ಎಂಬುದು ಇದರಿಂದ  ವೇದ್ಯವಾಗುತ್ತಿದೆ. ಹಣದ ರಾಜಕೀಯದ ಮುಂದೆ ಸಿದ್ಧಾಂತ, ಪ್ರಾಮಾಣಿಕತೆ ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಇದು ಯಾವ ಹಂತಕ್ಕೆ  ತಲುಪುತ್ತದೋ ಕಾಲವೇ ನಿರ್ಣಯಿಸಬೇಕಾಗಿದೆ.