✍️ ಅಬ್ದುಲ್ ಹಕೀಮ್ ನದ್ವಿ
ರಾಜ್ಯ ಕಾರ್ಯದರ್ಶಿ, ಜಮಾಅತೆ ಇಸ್ಲಾಮಿ ಹಿಂದ್ ಕೇರಳಂ
ನಮಗೆ ಅಲ್ಲಾಹನು ವೈಯಕ್ತಿಕವಾಗಿ ನಿರ್ವಹಿಸಲು ಹಲವಾರು ಹೊಣೆಗಾರಿಕೆಗಳನ್ನು ವಹಿಸಿಕೊಟ್ಟಿದ್ದಾನೆ. ನಾಳೆ ಪರಲೋಕದಲ್ಲಿ ವಿಚಾರಣೆಯ ಸಂದರ್ಭದಲ್ಲಿ ನಾವು ಒಬ್ಬಂಟಿಯಾಗಿ ಅಲ್ಲಾಹನ ಮುಂದೆ ನಿಲ್ಲಬೇಕು. ಆಗ ನಮ್ಮ ಜೊತೆ ಸಹಾಯಕರಾಗಿ, ನಮ್ಮ ಆಪ್ತರು, ಕುಟುಂಬಸ್ಥರು, ಯಾರೂ ಇರಲಾರರು. ಇದನ್ನು ಪವಿತ್ರ ಕುರ್ಆನ್ ಬಹಳ ಸ್ಪಷ್ಟವಾಗಿ ಹೇಳಿದೆ. ನಿಮ್ಮನ್ನು ಅಲ್ಲಾಹನು ಹೇಗೆ ಒಂಟಿಯಾಗಿ ಸೃಷ್ಟಿಸಿರುವನೋ ಅದೇ ರೀತಿ ನಿಮ್ಮನ್ನು ಒಂಟಿಯಾಗಿ ಅಲ್ಲಾಹನ ಮುಂದೆ ನಿಲ್ಲಿಸುವ ಒಂದು ದಿನವಿದೆ (ಪವಿತ್ರ ಕುರ್ಆನ್ 6:94). ಆ ದಿನ ಅಲ್ಲಾಹನ ನ್ಯಾಯಾಲಯದಲ್ಲಿ ಅಲ್ಲಾಹನ ಪ್ರಶ್ನೆಗಳಿಗೆ ವೈಯಕ್ತಿಕವಾಗಿ ನಾವು ಉತ್ತರಿಸಬೇಕು.
ಈ ವಾಸ್ತವ ಇರುವಂತೆಯೇ ಅಲ್ಲಾಹನು ನಮಗೆ ಕೆಲವು ಜವಾಬ್ದಾರಿಗಳನ್ನು ನಿರ್ವಹಿಸಲು ಆದೇಶಿಸಿದ್ದಾನೆ. ನಮಾಝ್, ಉಪವಾಸ, ಝಕಾತ್, ಪ್ರಾರ್ಥನೆಗಳು, ದಿಕ್ರ್ ಮುಂತಾದ ಆರಾಧನಾ ಕರ್ಮಗಳು ಆದೇಶಿಸಿರುವಂತೆಯೇ ಕೆಲವು ಹೊಣೆಗಾರಿಕೆಗಳನ್ನೂ ನೀಡಿದ್ದಾನೆ. ಈ ಎಲ್ಲಾ ಕರ್ಮಗಳನ್ನು ಸಮಾಜದಿಂದ ದೂರವಿದ್ದುಕೊಂಡು ಒಬ್ಬಂಟಿಯಾಗಿ ನಿರ್ವಹಿಸಿ ಏಕಾಂಗಿಯಾಗಿಯೇ ಜೀವಿಸಿ ಅಲ್ಲಾಹನ ಮುಂದೆ ಹಾಜರಾಗುವೆನು ಅಂದುಕೊಂಡರೆ; ಅಂದರೆ ವೈಯಕ್ತಿಕ ಆರಾಧನೆಗಳಿಗೆ ಮಾತ್ರ ಸೀಮಿತಗೊಳಿಸಿ ನಾನು ನೆಮ್ಮದಿಯಾಗಿ ಅಲ್ಲಾಹನ ಮುಂದೆ ಹಾಜರಾಗುವೆನು ಎಂದುಕೊಂಡಿದ್ದರೆ ಅದು ಇಸ್ಲಾಮಿನ ತಳಹದಿಯ ಆಶಯದೊಂದಿಗೆ ಸರಿ ಹೊಂದುವುದಿಲ್ಲ. ಯಾಕೆಂದರೆ ಮನುಷ್ಯನು ಸಮೂಹ ಜೀವಿಯಾಗಿದ್ದಾನೆ.
ಜಗತ್ತಿನ ಮಾರ್ಗದರ್ಶಕ ಪ್ರವಾದಿ ಮುಹಮ್ಮದ್(ಸ) ರವರು ತನ್ನ ದೌತ್ಯವನ್ನು ಹೇಗೆ ನಿರ್ವಹಿಸಿದ್ದರು ಎಂಬುದನ್ನು ಸೂರಾಃ ತೌಬಾದಲ್ಲಿ ಅಲ್ಲಾಹನು ಹೀಗೆ ವಿವರಿಸಿದ್ದಾನೆ: “ನೋಡಿರಿ ನಿಮ್ಮ ಬಳಿಗೆ ಓರ್ವ ಸಂದೇಶವಾಹಕರು ಬಂದಿದ್ದಾರೆ. ಅವರು ನಿಮ್ಮವರಿಂದಲೇ ಆಗಿರುತ್ತಾರೆ. ನೀವು ನಷ್ಟ ಹೊಂದುವುದು ಅವರಿಗೆ ಅಸಹನೀಯವಾಗಿದೆ. ಅವರು ನಿಮ್ಮ ಯಶಸ್ಸಿಗೆ ಹಂಬಲಿಸುವವರಾಗಿದ್ದಾರೆ. ಅವರು ಸತ್ಯವಿಶ್ವಾಸಿಗಳಿಗೆ ವತ್ಸಲರೂ, ಕರುಣಾಳುವೂ ಆಗಿದ್ದಾರೆ”(9:128). ಅಂದರೆ ಪ್ರವಾದಿವರ್ಯರು(ಸ) ಜನರ ಮಧ್ಯೆ ಇದ್ದುಕೊಂಡೇ ಅವರ ಎಲ್ಲ ಸಮಸ್ಯೆಗಳ ಬಗ್ಗೆ ಕಳವಳಗೊಂಡು ಅದನ್ನು ಪರಿಹರಿಸಿಕೊಂಡೇ ತನ್ನ ದೌತ್ಯವನ್ನು ನಿರ್ವಹಿಸಿದರು. ಎಲ್ಲ ಜನರೊಂದಿಗೆ ಅವರು ಕರುಣೆಯಲ್ಲಿಯೂ ವತ್ಸಲರಾಗಿಯೂ ಜೀವಿಸಿದರು.
ವಾಸ್ತವದಲ್ಲಿ ಓರ್ವನು ಜನರೊಂದಿಗೆ ಬೆರೆತುಕೊಂಡಾಗ, ಜನರ ಸಮಸ್ಯೆಗಳಿಗೆ ಸ್ಪಂದಿಸುವಾಗ ಉತ್ತಮ ಸತ್ಯವಿಶ್ವಾಸಿಯಾಗಿ ಬದಲಾಗುತ್ತಾನೆ. ಹೀಗಿರುವಾಗ ಆತ ಹಲವು ಸವಾಲು, ಸತ್ವಪರೀಕ್ಷೆಗಳನ್ನು ಎದುರಿಸಬೇಕಾಗಿ ಬರಬಹುದು. ಅದನ್ನೆಲ್ಲಾ ಎದುರಿಸದೆ ಈ ಹೊಣೆಗಾರಿಕೆಗಳನ್ನು ನಿರ್ವಹಿಸಲಾಗದು. ಆ ವಿಷಮ ಸಂದರ್ಭವನ್ನು ಸಹನೆಯಿಂದ ಎದುರಿಸಬೇಕಿದೆ. ಜನರ ಜೊತೆ ಯಾವುದೇ ರೀತಿಯಲ್ಲಿ ಸಂಪರ್ಕವಿಲ್ಲದೆ ತಮ್ಮದೇ ಆದ ಒಂದು ಲೋಕಕ್ಕೆ ಸೀಮಿತಗೊಳಿಸಿರುವಾಗ ಯಾವುದೇ ರೀತಿಯ ಸವಾಲುಗಳನ್ನು ಎದುರಿಸಬೇಕಾಗಿ ಬರುವುದಿಲ್ಲ. ಹೀಗೆ ಬದುಕುವುದಕ್ಕಿಂತ ಶ್ರೇಷ್ಠನು ಜನರೊಂದಿಗೆ ಬೆರೆತು ನಿರಂತರ ಸಂಪರ್ಕದಲ್ಲಿದ್ದುಕೊಂಡು ಬದುಕುವವನಾಗಿದ್ದಾನೆ ಎಂದು ಪ್ರವಾದಿ ಮುಹಮ್ಮದ್(ಸ) ರವರು ನಮಗೆ ಕಲಿಸಿರುತ್ತಾರೆ.
ಪ್ರವಾದಿವರ್ಯರು ಕಲಿಸುತ್ತಾರೆ: ನೀವು ಮೂವರು ಒಂದು ಕಡೆ ಸೇರಿದರೆ ಅಥವಾ ಪ್ರಯಾಣ ಹೊರಟರೆ ಅವರಲ್ಲಿ ಓರ್ವರನ್ನು ನಾಯಕನನ್ನಾಗಿ ಮಾಡಿರಿ. ಆ ನಾಯಕನ ಆದೇಶಗಳನ್ನು ಅನುಸರಿಸಿ ನಿಮ್ಮ ಪ್ರಯಾಣ ಮುಂದುವರಿಸಬೇಕು. ನಾವು ಏಕಾಂಗಿಯಾಗಿ ನಮಾಝ್ ನಿರ್ವಹಿಸುವಾಗ ನಮಗೆ ಅಲ್ಲಾಹನನ್ನು ಆಳವಾಗಿ ಸ್ಮರಿಸಲು ಸಾಧ್ಯವಾಗಬಹುದು. ಆದರೆ ಐದು ಹೊತ್ತಿನ ನಮಾಝ್ ಸಾಮೂಹಿಕವಾಗಿ ನಿರ್ವಹಿಸಿರಿ ಎಂದು ಅಲ್ಲಾಹನು ಕಲಿಸಿದ್ದಾನೆ. ಸಾಮೂಹಿಕತೆಗೆ ಹೆಚ್ಚು ಪುಣ್ಯವಿದೆ. ಯಾಕೆಂದರೆ ನಮ್ಮ ಒಗ್ಗಟ್ಟಿಗೆ ಹೆಚ್ಚು ಪ್ರಾಧಾನ್ಯತೆಯನ್ನು ಇಸ್ಲಾಮ್ ನೀಡಿದೆ. ಹಜ್ ಕರ್ಮದಲ್ಲಿ ಜಗತ್ತಿನ ಎಲ್ಲಾ ಕಡೆಗಳಿಂದಲೂ ಬಂದ ಜನರು ಮಕ್ಕಾದಲ್ಲಿ ಒಟ್ಟು ಸೇರುತ್ತಾರೆ. ಜಗತ್ತಿನ ಎಲ್ಲಾ ಜನರು ಒಂದೇ ಸಮಯದಲ್ಲಿ ಉಪವಾಸ ನಿರ್ವಹಿಸುತ್ತಾರೆ. ಝಕಾತ್ ಕೂಡಾ ಸಾಮೂಹಿಕವಾಗಿ ನಿರ್ವಹಿಸಿದರೆ ಹೆಚ್ಚು ಫಲಪ್ರಧ. ಅದು ವೈಯಕ್ತಿಕವಾಗಿ ವ್ಯಕ್ತಿಗೆ ಸೀಮಿತಗೊಳಿಸಿ ನಿರ್ವಹಿಸಿದರೆ ಪರಿಪೂರ್ಣವಾಗದು. ಇದು ಇಸ್ಲಾಮಿನ ವಿಶೇಷತೆಯಾಗಿದೆ. ಒಗ್ಗಟ್ಟು, ಐಕ್ಯತೆಯಿಂದ ಒಂದಾಗಿದ್ದುಕೊಂಡು ತಮ್ಮ ಹೊಣೆಗಾರಿಕೆಗಳನ್ನು ನಿಭಾಯಿಸಬೇಕಿದೆ.
ಇಮಾಮ್ ಹಸನುಲ್ ಬಸರಿಯವರು ಹೀಗೆ ಹೇಳಿದ್ದಾರೆ: ವೈಯಕ್ತಿಕವಾಗಿ ಓರ್ವ ವ್ಯಕ್ತಿಯಲ್ಲಿರುವ ತಕ್ವಾದ ಪ್ರಜ್ಞೆಯು ಆತನ ದೃಢತೆಯಾಗಿದೆ, ಆದ್ದರಿಂದ ನೀವು ತಕ್ವಾ ಉಳ್ಳವರಾಗಿರಿ. ನೀವು ನಾಳೆ ಅಲ್ಲಾಹನ ಮುಂದೆ ವಿಚಾರಣೆಗೆ ಗುರಿಪಡಿಸಿದಾಗ ಅಲ್ಲಾಹನು ನಮ್ಮ ತಕ್ವಾವನ್ನು ಪ್ರಮುಖ ಮಾನದಂಡವಾಗಿ ನಿಶ್ಚಯಿಸುವನು. ತಕ್ವಾ ಎಂಬುದು ನಮ್ಮ ಪ್ರಯಾಣದ ಮಾರ್ಗದೀಪವಾಗಿದೆ. ವೈಯಕ್ತಿಕವಾಗಿ ನಮ್ಮ ಪ್ರಯಾಣದ ಅಗತ್ಯ ಸಿದ್ಧತೆಯು ತಕ್ವಾ ಆಗಿದೆ.
“ನೀವು ಈ ಭೂಮಿಯಲ್ಲಿ ನಿಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿ ಅಲ್ಲಾಹನ ಮುಂದೆ ಹಾಜರಾಗುವಾಗ ನೀವು ಸಾಮೂಹಿಕವಾಗಿ ನಿರ್ವಹಿಸಿದ ಕರ್ಮಗಳು ನಿಮಗೆ ಆಯುಧವಾಗಿ ಪರಿಣಮಿಸಲಿದೆ” ಎಂದು ಶಹೀದ್ ಹಸನುಲ್ ಬನ್ನಾ ಹೇಳಿರುತ್ತಾರೆ. ಅಂದರೆ ಮುಸ್ಲಿಮ್ ಸಮುದಾಯದ ಮುಂದೆ ಸವಾಲುಗಳು, ಸಂಕಷ್ಟಗಳು ಎದುರಾಗುವಾಗ ಅದನ್ನು ನಿಭಾಯಿಸಲು ಸಂಘಟಿತರಾಗಿ ಮಾಡುವ ಚಟುವಟಿಕೆಗಳು ಆಯುಧವಾಗಲಿದೆ. ಮನುಷ್ಯರನ್ನು ಅಲ್ಲಾಹನು ಒಂದು ನಾಗರಿಕತೆಯ ವಕ್ತಾರರಾಗಿ, ಒಂದು ಸಮಾಜದ ಭಾಗವಾಗಿ ಬದುಕುವ ಜೀವಿಯಾಗಿ ಸೃಷ್ಟಿಸಿದ್ದಾನೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿಕೊಂಡು ಜೀವಿಸುವುದು ಆ ಜನರ ಕರ್ತವ್ಯವಾಗಿದೆ.
ಅಲ್ಲಾಹನ ಮಾರ್ಗದಲ್ಲಿ ಮುಂದೆ ಸಾಗುವಾಗ ಬರುವ ಎಲ್ಲಾ ಸವಾಲುಗಳನ್ನು ನಿಭಾಯಿಸಿಕೊಂಡು ಮುಂದೆ ಹೋಗಬೇಕಾದಲ್ಲಿ (ಅಹ್ಲುಲ್ ಖೈರ್) ಒಳಿತು ಮಾಡುವವರೊಂದಿಗೆ ಸೇರಿಕೊಳ್ಳಬೇಕು. ಅವರೊಂದಿಗೆ ಓರ್ವನಾಗಿದ್ದುಕೊಂಡು ಜೀವಿಸಬೇಕಿದೆ. ಇಮಾಮ್ ಇಬ್ನು ಖಲ್ದೂನ್ ರವರ ಬಹಳ ಪ್ರಸಿದ್ಧವಾದ ಮುಖದ್ದಿಮ ಎಂಬ ಗ್ರಂಥದಲ್ಲಿ “ಓರ್ವ ವ್ಯಕ್ತಿ ಎಂಬ ನೆಲೆಯಲ್ಲಿ ನಮಗೆ ಏನೇ ಅರ್ಹತೆಯಿದ್ದರೂ ನಮ್ಮಲ್ಲಿರುವ ಸಂಪತ್ತು, ನಮ್ಮ ಪ್ರತಿಭೆ ಮುಂತಾದ ಸಾಮರ್ಥ್ಯವನ್ನು ಸಾಮೂಹಿಕವಾಗಿ ಸಮಾಜದಲ್ಲಿ ಬಳಸಲು ಒಂದು ಸಂಘಟನೆಯ ಭಾಗವಾಗಲು ಸಾಧ್ಯವಿಲ್ಲ ಎಂದಾದರೆ ಅದು ಫಲಪ್ರದವಾಗಲು ಸಾಧ್ಯವಿಲ್ಲ” ಎಂದಿದ್ದಾರೆ. ಸಂಘಟಿತರಾಗಿ ನಿಮ್ಮ ಜವಾಬ್ದಾರಿಕೆಯನ್ನು ನಿರ್ವಹಿಸಿರಿ ಎಂಬುದು ಅಲ್ಲಾಹನು ನಮಗೆ ನೀಡಿದ ಮಹತ್ತರವಾದ ಹೊಣೆಗಾರಿಕೆಯಾಗಿದೆ. ಇದು ಅಲ್ಲಾಹನು ನಮಗೆ ನೀಡಿದ ಅನುಗ್ರಹವಾಗಿದೆ.
ಇಸ್ಲಾಮಿನೊಂದಿಗೆ ಶತ್ರುಗಳು ತೀವ್ರ ಶತ್ರುತ್ವ, ಹಗೆತನ ಸಾಧಿಸುತ್ತಿದ್ದ ಸಂದರ್ಭದಲ್ಲಿ ಪ್ರವಾದಿವರ್ಯರ(ಸ) ಅನುಯಾಯಿಗಳ ನಡುವೆ ಅಮೋಘ ಬಾಂಧವ್ಯವನ್ನು ಅಲ್ಲಾಹನು ನಿಕ್ಷೇಪಿಸಿದ್ದನು. ಪವಿತ್ರ ಕುರ್ಆನಿನಲ್ಲಿ ಹೇಳಲಾಗಿದೆ: “ನೀವು ಅಲ್ಲಾಹನ ಪಾಶವನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ. ಭಿನ್ನ ಭಿನ್ನರಾಗದಿರಿ.”(3:103) ನೀವು ಒಂದು ಘನ ಉದ್ದೇಶದೊಂದಿಗೆ ಐಕ್ಯದಿಂದ ಮುಂದೆ ಸಾಗಿರಿ. ನೀವು ವೈಯಕ್ತಿಕವಾಗಿ ಶತ್ರುತ್ವ ಮನೋಭಾವದಿಂದ ಮುಂದುವರಿಯ ಬೇಡಿರಿ. ಗುಂಪು ಗುಂಪುಗಳಾಗಿ ಹಂಚಿ ಹೋಗಬೇಡಿರಿ. ಅಲ್ಲಾಹನು ನಮಗೆ ಅನುಗ್ರಹಿಸಿರುವ ಮಧುರ ಬಾಂಧವ್ಯವನ್ನು ಗಮನದಲ್ಲಿಟ್ಟುಕೊಂಡು ಜವಾಬ್ದಾರಿಗಳನ್ನು ನಿಭಾಯಿಸಿ ಅಲ್ಲಾಹನ ಆದೇಶಗಳನ್ನು ಪಾಲಿಸಿ ನಿರ್ವಹಿಸಬೇಕಾಗಿದೆ.
ಮುಸ್ಲಿಮ್ ಸಮುದಾಯಕ್ಕೆ ಆಯಾ ಕಾಲಘಟ್ಟದಲ್ಲಿ ಈ ದೌತ್ಯವನ್ನು ನಿರ್ವಹಿಸುವ ಸಂಘಟನೆ ಅಗತ್ಯವಾಗಿದೆ. ಜನರನ್ನು ಅಲ್ಲಾಹನತ್ತ, ಒಳಿತಿನತ್ತ ಆಹ್ವಾನಿಸುವ ಒಂದು ಸಂಘವು ಎಲ್ಲಾ ಕಾಲದಲ್ಲಿ ಇರಬೇಕು. ಒಳಿತನ್ನು ಸಂಸ್ಥಾಪಿಸಿ ಕೆಡುಕನ್ನು ವಿರೋಧಿಸುವವರಾಗಬೇಕು. ವಾಸ್ತವದಲ್ಲಿ ಅವರೇ ವಿಜಯಿಗಳು, ಯಶಸ್ಸು ಸಾಧಿಸಿದವರು. ಸ್ಪಷ್ಟವಾದ ನಿದರ್ಶನಗಳು ಮುಂದೆ ಬಂದ ಬಳಿಕವೂ ನೀವು ಭಿನ್ನ ಭಿನ್ನರಾಗದಿರಿ. ಒಂದು ವೇಳೆ ನಾವು ಭಿನ್ನ ಭಿನ್ನರಾದರೆ ಕಠಿಣ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಅಲ್ಲಾಹನು ನಮ್ಮನ್ನು ಎಚ್ಚರಿಸುವುದನ್ನು ಕುರ್ಆನಿನಲ್ಲಿ ಕಾಣಬಹುದು.
ನಮ್ಮ ತನು ಮನ ಧನವನ್ನು, ನಮ್ಮ ಸಾಮರ್ಥ್ಯವನ್ನು ಅಲ್ಲಾಹನ ಧರ್ಮಕ್ಕಾಗಿ ಬಳಸಿಕೊಂಡು ನಾಳೆ ಅಲ್ಲಾಹನ ನ್ಯಾಯಾಲಯದಲ್ಲಿ ನಿಂತುಕೊಳ್ಳಲು ನಮಗೆ ಸಾಧ್ಯವಾಗಬೇಕು. ಹೀಗಿರುವಾಗ ಕೆಲವರು ವೈಯಕ್ತಿಕ ಕಾರ್ಯಚಟುವಟಿಕೆಗಳಿಗೆ ಸೀಮಿತರಾಗಿ, “ನಾನೇಕೆ ಒಂದು ಸಂಘಟನೆಯ ಭಾಗವಾಗಬೇಕು? ನಾನು ವೈಯಕ್ತಿಕವಾಗಿ ನಮಾಝ್, ಉಪವಾಸ ವ್ರತ, ಝಕಾತ್ ನೀಡುವುದರ ಜೊತೆಗೆ ಐಚ್ಛಿಕ ಕರ್ಮಗಳನ್ನು ಯಥಾವತ್ತಾಗಿ ನಿರ್ವಹಿಸುತ್ತಿದ್ದೇನೆ, ನಾನು ಏಕೆ ಒಂದು ಸಂಘಟನೆಯ ಭಾಗವಾಗಬೇಕು?” ಎಂದು ಚಿಂತಿಸುವವರಿದ್ದಾರೆ. ಒಂದು ಸೇಫ್ ಝೋನ್ನಲ್ಲಿ ಉಳಿದುಕೊಂಡು ಇಸ್ಲಾಮನ್ನು ಪ್ರತಿನಿಧಿಸುವವರಿದ್ದಾರೆ. ನಾವು ಫೆಲೆಸ್ತೀನಿಯನ್ ಘಟನೆಗಳನ್ನು ನೋಡಿದ ಮೇಲೆ ಸೇಫ್ ಝೋನ್ಗೆ ಸೀಮಿತವಾಗಿರುವುದು ಮೂರ್ಖತನವಾಗಿದೆ. ಈ ನಿಟ್ಟಿನಲ್ಲಿ ನಾವು ಒಂದಾಗಿಕೊಂಡು ಒಂದು ಘನ ಉದ್ದೇಶದೊಂದಿಗೆ ಮುಂದುವರಿಯಲು ಶ್ರಮಿಸಬೇಕಾಗಿದೆ. ಅಲ್ಲಾಹನು ಅನುಗ್ರಹಿಸಲಿ.
ನಿರೂಪಣೆ: ಸಲೀಮ್ ಬೋಳಂಗಡಿ












