ಭಾರತೀಯ ಮುಸ್ಲಿಮರು ಸ್ವಾತಂತ್ರ್ಯಕ್ಕಾಗಿ ಹೋರಾಡುವಾಗ ಆರ್ ಎಸ್ ಎಸ್ ಕಾರ್ಯಕರ್ತರು ಬ್ರಿಟಿಷರಿಗೆ ಕ್ಷಮಾಯಾಚನೆ ಪತ್ರವನ್ನು ಬರೆಯುತ್ತಿದ್ದರು: ಗೊಗೋಯ್

0
913

ಸನ್ಮಾರ್ಗ ವಾರ್ತೆ

ವಿಭಜಿಸಿ ಆಳು ಎನ್ನುವ ನೀತಿಯ ಭಾಗವಾಗಿ ಕೇಂದ್ರ ಸರಕಾರ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲು ಯತ್ನಿಸುತ್ತಿದೆ. ಮುಸ್ಲಿಂ ಸಮುದಾಯವನ್ನು ನಿಂದನೆಗೆ ಒಳಪಡಿಸುವುದೇ ಈ ಕಾಯ್ದೆಯ ಉದ್ದೇಶ. ಆರ್ ಎಸ್ ಎಸ್ ಕಾರ್ಯಕರ್ತರು ಕ್ವಿಟ್ ಇಂಡಿಯಾ ಚಳವಳಿಯನ್ನು ವಿರೋಧಿಸಿದ್ದರಲ್ಲದೆ ಬ್ರಿಟಿಷರಿಗೆ ಕ್ಷಮೆಯಾಚನೆಯ ಪತ್ರವನ್ನು ರವಾನಿಸುತ್ತಿದ್ದಾಗ ಮುಸ್ಲಿಂ ಸಮುದಾಯ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿತ್ತು ಎಂದು ಕಾಂಗ್ರೆಸ್ ಮುಖಂಡ ಗೌರವ ಗೊಗೋಯ್ ಹೇಳಿದ್ದಾರೆ. ಪಾರ್ಲಿಮೆಂಟ್ ನಲ್ಲಿ ನಡೆಯುತ್ತಿದ್ದ ವಕ್ಫ್ ತಿದ್ದುಪಡಿ ಕಾಯ್ದೆ ಚರ್ಚೆಯ ವೇಳೆ ಅವರು ಈ ಮಾತನ್ನು ಹೇಳಿದ್ದಾರೆ.

ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಂಗಲ್ ಪಾಂಡೆಯ ಜೊತೆ 2 ಲಕ್ಷಕ್ಕಿಂತಲೂ ಹೆಚ್ಚು ಮುಸ್ಲಿಂ ವಿದ್ವಾಂಸರು ಹುತಾತ್ಮರಾಗಿದ್ದಾರೆ. ದಾಂಡಿಯಾತ್ರೆಯಲ್ಲಿ ಮುಸ್ಲಿಮರು ಗಾಂಧೀಜಿಯ ಜೊತೆ ನಿಂತರು. ವಿಭಜಿಸಿ ಆಳುವ ಬ್ರಿಟಿಷ್ ಆಡಳಿತದ ವಿರುದ್ಧ ನಿಂತ ಒಂದು ಸಮುದಾಯವನ್ನು ಇದೀಗ ಕೇಂದ್ರ ಸರಕಾರ ನಿಂದನೆಗೆ ಗುರಿ ಪಡಿಸುತ್ತಿದೆ ಎಂದು ಗೊಗೊಯ್ ಹೇಳಿದ್ದಾರೆ.

ಕೇಂದ್ರ ಅಲ್ಪಸಂಖ್ಯಾತ ಖಾತೆಯ ಸಚಿವ ಕಿರಣ್ ರಿಜಿಜು ಅವರು ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಿದರು.

ಈ ಕಾಯ್ದೆಯ ಬಗ್ಗೆ ತಪ್ಪಾದ ಪ್ರಚಾರ ನಡೆಯುತ್ತಿದೆ. ಜನರನ್ನು ತಪ್ಪು ಗ್ರಹಿಕೆಗೆ ಒಳಪಡಿಸುವುದೇ ಇದರ ಉದ್ದೇಶ. ಈ ಮಸೂದೆಯು ಬದಲಾವಣೆಯನ್ನು ತರಲಿದೆ ಇದಕ್ಕಿಂತ ಮೊದಲೂ ಕಾಯ್ದೆಗೆ ತಿದ್ದುಪಡಿಯನ್ನು ಮಾಡಲಾಗಿದೆ. ಆ ಸಂದರ್ಭದಲ್ಲಿ ಯಾರೂ ವಿರೋಧ ವ್ಯಕ್ತಪಡಿಸಿರಲಿಲ್ಲ ಎಂದು ಕಿರಣ್ ರಿಜಿಜು ಹೇಳಿದ್ದಾರೆ.