ಅಮೆರಿಕದ ಗಾಝಾ ನಿಶ್ಯಸ್ತ್ರೀಕರಣ ಒಪ್ಪಂದಕ್ಕೆ ಸೌದಿ ಅರೇಬಿಯಾ ಸ್ವಾಗತ

0
234

ಸನ್ಮಾರ್ಗ ವಾರ್ತೆ

ರಿಯಾದ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಗಾಝಾ ನಿಶ್ಯಸ್ತ್ರೀಕರಣ ಒಪ್ಪಂದವನ್ನು ಸೌದಿ ಅರೇಬಿಯಾ ಸ್ವಾಗತಿಸಿದೆ. ಈ ಒಪ್ಪಂದ ಸಾಕಾರಗೊಳ್ಳಲು ಟ್ರಂಪ್ ಅವರ ನೇತೃತ್ವವನ್ನು ಶ್ಲಾಘಿಸಿ ಸೌದಿ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ. ಈ ಒಪ್ಪಂದಕ್ಕೆ ತಲುಪಲು ನಿರಂತರ ಪ್ರಯತ್ನಗಳನ್ನು ಮಾಡಿದ್ದಕ್ಕಾಗಿ ಈಜಿಪ್ಟ್, ಕತಾರ್, ಟರ್ಕಿ, ಅಮೆರಿಕ ಹಾಗೂ ಇತರ ಪಾಲುದಾರ ರಾಷ್ಟ್ರಗಳಿಗೆ ಸೌದಿ ಅರೇಬಿಯಾ ಧನ್ಯವಾದ ಅರ್ಪಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದಿಂದ ಅನುಮೋದಿಸಲ್ಪಟ್ಟ ಸಮಗ್ರ ಶಾಂತಿ ಯೋಜನೆಗೆ ತನ್ನ ಸಂಪೂರ್ಣ ಬದ್ಧತೆಯನ್ನು ಸೌದಿ ಅರೇಬಿಯಾ ಪುನರುಚ್ಚರಿಸಿದೆ. ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯ ಪಾಲುದಾರರ ಸಹಕಾರದೊಂದಿಗೆ ಒಪ್ಪಂದದ ಎಲ್ಲಾ ಹಂತಗಳನ್ನು ವಿಶ್ವಾಸಾರ್ಹ ರೀತಿಯಲ್ಲಿ ಮತ್ತು ನಿರ್ದಿಷ್ಟ ಕಾಲಮಿತಿಯೊಳಗೆ ಸಂಪೂರ್ಣವಾಗಿ ಅನುಷ್ಠಾನಗೊಳಿಸುವಂತೆ ಸೌದಿ ಅರೇಬಿಯಾ ಕರೆ ನೀಡಿದೆ.

ಗಾಝಾದಿಂದ ಇಸ್ರೇಲ್ ಪಡೆಗಳು ಸಂಪೂರ್ಣವಾಗಿ ಹಿಂತೆಗೆಯಲ್ಪಡಬೇಕು, ಪ್ರದೇಶದಲ್ಲಿ ಅಂತರರಾಷ್ಟ್ರೀಯ ಸ್ಥಿರೀಕರಣ ಪಡೆ ನಿಯೋಜನೆಯಾಗಬೇಕು ಮತ್ತು ಫೆಲೆಸ್ತೀನ್ ಜನತೆಗೆ ಯಾವುದೇ ತಡೆಯಿಲ್ಲದೆ ಮಾನವೀಯ ಹಾಗೂ ಪುನರ್ನಿರ್ಮಾಣ ನೆರವು ತಲುಪಬೇಕು ಎಂದು ಸೌದಿ ಸಚಿವಾಲಯ ಒತ್ತಾಯಿಸಿದೆ. ಶಾಂತಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಹಾಗೂ ದೀರ್ಘಕಾಲೀನ ಶಾಂತಿ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಗಾಝಾಗೆ ಫೆಲೆಸ್ತೀನ್ ಪ್ರಾಧಿಕಾರದ ಮರಳುವಿಕೆ ಮತ್ತು ಫೆಲೆಸ್ತೀನ್ ಪ್ರದೇಶಗಳ ಐಕ್ಯತೆಯ ಸಂರಕ್ಷಣೆ ನಿರ್ಣಾಯಕವಾಗಿದೆ ಎಂದು ಸೌದಿ ಅರೇಬಿಯಾ ಒತ್ತಿಹೇಳಿದೆ. ನಿಶ್ಯಸ್ತ್ರೀಕರಣ ಒಪ್ಪಂದವು ಒಂದು ಆರಂಭಿಕ ಬಿಂದುವಾಗಿರಬೇಕು ಮತ್ತು ಇದರ ನಂತರ ಸಮಗ್ರ ರಾಜಕೀಯ ಪ್ರಕ್ರಿಯೆಯು ನಡೆಯಬೇಕು. ಇದು ಫೆಲೆಸ್ತೀನ್ ಜನರ ಸ್ವಯಂನಿರ್ಣಯದ ಹಕ್ಕನ್ನು ಹಾಗೂ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರದ ಸ್ಥಾಪನೆಯನ್ನು ಖಚಿತಪಡಿಸುತ್ತದೆ ಎಂದು ಸೌದಿ ಅರೇಬಿಯಾ ಕರೆ ನೀಡಿದೆ.

ಗಾಝಾದಲ್ಲಿ ಹಮಾಸ್ ಅನ್ನು ನಿಶ್ಯಸ್ತ್ರಗೊಳಿಸಲು ಒಪ್ಪಂದಕ್ಕೆ ಬಂದಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಗಾಝಾದಲ್ಲಿ ಹಮಾಸ್ ಸೇರಿದಂತೆ ಸಶಸ್ತ್ರ ಗುಂಪುಗಳನ್ನು ಸಂಪೂರ್ಣವಾಗಿ ನಿಶ್ಯಸ್ತ್ರಗೊಳಿಸಲಾಗುವುದು ಎಂದು ಟ್ರಂಪ್ ಪ್ರಕಟಿಸಿದರು. ಈ ಹಿಂದೆ ಕದನ ವಿರಾಮ ಒಪ್ಪಂದದ ಭಾಗವಾಗಿ ಅಮೆರಿಕವು ಈ ಪ್ರಸ್ತಾಪವನ್ನು ಮುಂದಿಟ್ಟಿದ್ದರೂ, ಹಮಾಸ್ ಇದನ್ನು ಬೆಂಬಲಿಸಿರಲಿಲ್ಲ. ಆದಾಗ್ಯೂ, ಹಮಾಸ್ ನಿಶ್ಯಸ್ತ್ರೀಕರಣಕ್ಕಾಗಿ ಐತಿಹಾಸಿಕ ಒಪ್ಪಂದಕ್ಕೆ ಬಂದಿದೆ ಎಂದು ಜಗತ್ತಿಗೆ ಮೊದಲು ತಿಳಿಸಿದವರು ಟ್ರಂಪ್. ಇದು ಶಾಂತಿ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ವೇದಿಕೆಯ ಮೂಲಕ ತಿಳಿಸಿದ್ದಾರೆ.

ನಿಶ್ಯಸ್ತ್ರೀಕರಣ ಪ್ರಕ್ರಿಯೆಯು ಹಂತ ಹಂತವಾಗಿ ಪೂರ್ಣಗೊಳ್ಳಲಿದೆ. ಈ ಪ್ರಕ್ರಿಯೆ ಪೂರ್ಣಗೊಂಡಂತೆ ಇಸ್ರೇಲ್ ಪಡೆಗಳು ಗಾಝಾದಿಂದ ಹಿಂದೆ ಸರಿಯಲಿವೆ. ನಂತರ ಹೊಸ ಫೆಲೆಸ್ತೀನ್ ಪೊಲೀಸ್ ಪಡೆಯೊಂದಿಗೆ ಅಂತರರಾಷ್ಟ್ರೀಯ ಸ್ಥಿರೀಕರಣ ಪಡೆ (ಐಎಸ್‌ಎಫ್) ಗಾಝಾದ ಭದ್ರತೆಯನ್ನು ವಹಿಸಿಕೊಳ್ಳಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಇದಕ್ಕಾಗಿ ಮಧ್ಯಸ್ಥಿಕೆ ವಹಿಸಿದ್ದಕ್ಕಾಗಿ ಈಜಿಪ್ಟ್, ಕತಾರ್ ಮತ್ತು ಟರ್ಕಿಗೆ ಟ್ರಂಪ್ ಧನ್ಯವಾದ ಅರ್ಪಿಸಿದ್ದಾರೆ.