ಶಿರೂರು ಟೋಲ್ ಗೇಟ್ ಬಳಿಯ ಅಪಘಾತ ಪ್ರಕರಣ: ಆ್ಯಂಬುಲೆನ್ಸ್ ಚಾಲಕನ ವಿರುದ್ಧ ಪ್ರಕರಣ ದಾಖಲು

0
235

ಸನ್ಮಾರ್ಗ ವಾರ್ತೆ

ಉಡುಪಿ: ಶಿರೂರು ಟೋಲ್ ಗೇಟ್ ನಲ್ಲಿ ಬುಧವಾರ ಸಂಜೆ ನಡೆದಿದ್ದ ಭೀಕರ ಅಪಘಾತದಲ್ಲಿ ನಾಲ್ವರನ್ನು ಬಲಿ ಪಡೆದಿದ್ದ ಆ್ಯಂಬುಲೆನ್ಸ್ ಚಾಲಕನ ವಿರುದ್ಧ ಕೇಸು ದಾಖಲಾಗಿದೆ.

ಆಂಬುಲೆನ್ಸ್ ಚಾಲಕ ರೋಷನ್ ವಿರುದ್ಧ ಐಪಿಸಿ ಸೆಕ್ಷನ್ 304(ಎ) ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗಿದ್ದಕ್ಕೆ ಶಿಕ್ಷೆ) ಮತ್ತು 279 ( ವೇಗದ ಚಾಲನೆಗಾಗಿ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸೆಕ್ಷನ್ 304 (ಎ) ಪ್ರಕಾರ ಒಂದು ವೇಳೆ ಕೋರ್ಟ್ ನಿಂದ ಆರೋಪಿ ತಪಿತಸ್ಥ ಎಂದು ಸಾಬೀತಾದರೆ, ಕನಿಷ್ಠ ಮೂರು ತಿಂಗಳು, ಗರಿಷ್ಠ ಆರು ವರ್ಷಗಳವರೆಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಅಪಘಾತದ ವೀಡಿಯೋ ವೈರಲ್ ಆಗಿದ್ದು, ಆಂಬ್ಯುಲೆನ್ಸ್ ಶಿರೂರು ಟೋಲ್ ಗೇಟ್ ಗೆ ಬರುತ್ತಿದ್ದಾಗ ದಾರಿಯಲ್ಲಿ ಆಕಳು ವೊಂದು ಮಲಗಿರುವುದು ಕಂಡುಬಂದಿದೆ. ಈ ಸಂದರ್ಭದಲ್ಲಿ ಗೊಂದಲಕ್ಕೊಳಗಾಗಿರುವ ಡ್ರೈವರ್, ಬ್ರೇಕ್ ಹೊಡೆದಿದ್ದಾನೆ. ಇದರಿಂದ ಆಂಬುಲೆನ್ಸ್ ಸ್ಲಿಪ್ ಆಗಿ ಟೋಲ್ ಗೇಟ್ ಗೆ ಬಡಿದಿದೆ. ಆದಾಗ್ಯೂ, ಟೋಲ್ ಗೇಟ್ ಸಿಬ್ಬಂದಿ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ.

ಈ ಅಪಘಾತದಲ್ಲಿ ಟೋಲ್ ಸಿಬ್ಬಂದಿಯ ನಿರ್ಲಕ್ಷ್ಯವೂ ಕಂಡುಬಂದಿದ್ದು, ಐಆರ್ ಬಿ ಇನ್ಫ್ರಾಸ್ಟ್ರಕ್ಚರ್ ಡೆವಲಪರ್ಸ್ ಲಿಮಿಟೆಡ್ ವಿರುದ್ಧ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಅಹ್ಮದ್ ಹೇಳಿದ್ದಾರೆ.

ಟೋಲ್ ಗೇಟ್ ನಲ್ಲಿನ ಸಿಬ್ಬಂದಿ ದೀಪಕ್ ಶೆಟ್ಟಿ ನೀಡಿರುವ ದೂರಿನ ಆಧಾರದ ಮೇಲೆ ಬೈಂದೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇವರೇ ಈ ಘಟನೆಯೇ ಪ್ರಮುಖ ಸಾಕ್ಷಿದಾರರಾಗಿದ್ದಾರೆ. ಬುಧವಾರ ಸಂಜೆ 4.05ರಲ್ಲಿ ಈ ಅಪಘಾತ ಸಂಭವಿಸಿದ್ದು, ಆಂಬ್ಯುಲೆನ್ಸ್ ಟೋಲ್ ಗೇಟ್ ಗೆ ಗುದ್ದಿ ಪಲ್ಟಿಯಾದರಿಂದ ನಾಲ್ವರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದರು.

ಆ್ಯಂಬುಲೆನ್ಸ್ ಚಾಲಕ‌ ರೋಷನ್‌ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ದನ ಅಡ್ಡ ಇದ್ದಿದ್ದರಿಂದ ಬ್ರೇಕ್ ಹಾಕಿದ ಪರಿಣಾಮ ಹೀಗಾಯಿತು ಎಂದು ಹೇಳಿಕೆ ನೀಡಿದ್ದರೆ, ಆ್ಯಂಬುಲೆನ್ಸ್ ಚಾಲಕ ಮದ್ಯ ಸೇವಿಸಿದ್ದ ಎಂದು ಟೋಲ್ ಗೇಟ್ ಸಿಬ್ಬಂದಿಗಳು ಆರೋಪಿಸಿದ್ದಾರೆ.