ಸೇಂಟ್ ಜೆರೋಸಾ ಶಾಲೆ ಪ್ರಕರಣ; ಬಿಜೆಪಿ ಶಾಸಕರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು

0
100

ಸನ್ಮಾರ್ಗ ವಾರ್ತೆ

ಮಂಗಳೂರಿನ ಸೇಂಟ್ ಜೆರೋಸಾ ಶಾಲೆಯಲ್ಲಿ ಶಿಕ್ಷಕಿ ಪಾಠ ಮಾಡಿದ್ದ ವಿಚಾರದಲ್ಲಿ ಜನರನ್ನು ಗುಂಪುಗೂಡಿಸಿ, ಪ್ರಚೋದಿಸಿ, ಶಾಲೆಯ ಎದುರು ಪ್ರತಿಭಟನೆ ನಡೆಸಿದ್ದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಮತ್ತು ವೈ ಭರತ್ ಶೆಟ್ಟಿ ಬಂಧನ ಸಾಧ್ಯತೆಯ ಹಿನ್ನೆಲೆಯಲ್ಲಿ ಇಬ್ಬರೂ ನಿರೀಕ್ಷಣಾ ಜಾಮೀನಿಗಾಗಿ ಕೋರಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ.

ಫೆಬ್ರವರಿ 14ರಂದು ಶಾಲೆಯ ಮುಖ್ಯಸ್ಥ ಅನಿಲ್ ಜೆರಾಲ್ಡ್ ಲೋಬೋ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ, ವಿಎಚ್‌ಪಿ ಮುಖಂಡ ಶರಣ್ ಕುಮಾರ್ ಅಲಿಯಾಸ್ ಶರಣ್ ಪಂಪ್‌ವೆಲ್ ಮತ್ತು ಮಂಗಳೂರು ಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರಾದ ಸಂದೀಪ್ ಮತ್ತು ಭರತ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

ಸೇಂಟ್ ಜೆರೋಸಾ ಹೈಸ್ಕೂಲ್ ಬಳಿ ಜನರನ್ನು ಪ್ರಚೋದಿಸಿ ಗುಂಪುಗೂಡಿಸಿದ ಆರೋಪದ ಮೇಲೆ ಈ ಐವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ವಿಶೇಷ ನ್ಯಾಯಾಲಯದಲ್ಲಿ ಆರೋಪಿಗಳ ಪರವಾದ ಮಂಡಿಸಿದ ಹಿರಿಯ ವಕೀಲರು, “ಶಾಸಕರು ಜನರನ್ನು ಹಿಂಸಾಚಾರಕ್ಕೆ ಪ್ರೇರೇಪಿಸುತ್ತಿದ್ದಾರೆ ಎಂಬ ಆರೋಪಗಳು ಇಡೀ ದೂರಿನಲ್ಲಿ ಇಲ್ಲ. ಅಂತಹ ಯಾವುದೇ ಘಟನೆ ನಡೆದಿಲ್ಲ. ಶಾಲೆಯ ಶಿಕ್ಷಕಿ ಪ್ರಭಾ ಅವರ ಕೃತ್ಯಗಳನ್ನು ಮುಚ್ಚಿ ಹಾಕಲು, ಘಟನೆ ನಡೆದ ಎರಡು ದಿನಗಳ ನಂತರ ದೂರು ದಾಖಲಿಸಲಾಗಿದೆ” ಎಂದು ವಾದಿಸಿದರು.

ಅರ್ಜಿದಾರ ಆರೋಪಿ ಶಾಸಕರು ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ಹಾಳು ಮಾಡಬಾರದು ಅಥವಾ ಬೆದರಿಕೆ ಹಾಕಬಾರದು ಮತ್ತು ಇದೇ ರೀತಿಯ ಅಪರಾಧಗಳಲ್ಲಿ ಪಾಲ್ಗೊಳ್ಳಬಾರದು” ಎಂದು ನ್ಯಾಯಾಲಯವು ತಾಕೀತು ಮಾಡಿದೆ.